ತ್ರಿಗುಣಗಳ ಕಾರ್ಯ

ಸುಸಂಸ್ಕಾರವನ್ನು ನೀಡುವ ಬೋಧಕಥೆ !
ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಇಲ್ಲಿ ನೀಡಿದ ಕಥೆಯಿಂದ ಜೀವನದಲ್ಲಿ ದರೋಡೆಕೋರರಂತೆ ಬರುವ ತ್ರಿಗುಣಗಳು ಎಂದರೆ ಸತ್ತ್ವ, ರಜ, ತಮ ಇವುಗಳ ಗುಣಧರ್ಮಗಳು ಹೇಗಿ ರುತ್ತವೆ ಮತ್ತು ಅವು ಹೇಗೆ ಕಾರ್ಯ ಮಾಡುತ್ತವೆ ಎಂಬುದನ್ನು ನೋಡೋಣ.

‘ಒಬ್ಬ ಮನುಷ್ಯನು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದನು. ದಾರಿಯಲ್ಲಿ ಅವನನ್ನು ಮೂವರು ದರೋಡೆಕೋರರು ಹಿಡಿದುಕೊಂಡರು. ಅವರು ಅವನ ಬಳಿಯಿದ್ದ ಎಲ್ಲ ವಸ್ತುಗಳನ್ನು ಕಸಿದುಕೊಂಡರು. ಒಬ್ಬ ದರೋಡೆಖೋರನು ‘ಈಗ ಇವನನ್ನು ಜೀವಂತವೇಕೆ ಇಡಬೇಕು ? ಎನ್ನುತ್ತಾ ತಲವಾರನ್ನು ಹೊರತೆಗೆದು ಆ ಮನುಷ್ಯನ ಬಳಿಗೆ ಬಂದನು. ಆಗ ಎರಡನೇ ದರೋಡೆಕೋರನು ‘ಇವನನ್ನು ಕೊಂದರೆ ನಮಗೇನು ಲಾಭವಿದೆ ? ಅದಕ್ಕಿಂತ ಇವನ ಕೈ-ಕಾಲನ್ನು ಕಟ್ಟಿ  ಇವನನ್ನು ಇಲ್ಲಿಯೇ ಬಿಟ್ಟು ನಾವು ಮುಂದೆ ಹೋಗೋಣ ಎಂದನು. ಅದರಂತೆ ಅವನ ಕೈಕಾಲನ್ನು ಕಟ್ಟಿ ಅವನನ್ನು ಅಲ್ಲಿಯೇ ಎಸೆದು ಅವರು ಹೊರಟುಹೋದರು. ಸ್ವಲ್ಪ ಸಮಯದ ಬಳಿಕ ಅವರಲ್ಲಿ ಒಬ್ಬನು ಮರಳಿ ಬಂದು ‘ಅರೆ, ನಿನಗೆ ಬಹಳ ತೊಂದರೆಯಾಯಿತು. ಕಟ್ಟಿರುವ ನಿನ್ನ ಕೈಕಾಲನ್ನು ಬಿಡಿಸುತ್ತೇನೆ’ ಎಂದು ಹೇಳುತ್ತಾ, ಅವನನ್ನು ಬಿಡಿಸಿ, ‘ನಡೆ ನನ್ನೊಂದಿಗೆ, ನಾನು ನಿನ್ನನ್ನು ರಸ್ತೆಯವರೆಗೆ ಬಿಡುತ್ತೇನೆ ಎಂದನು. ಸಾಕಷ್ಟು ದೂರ ನಡೆದು, ಅವರಿಬ್ಬರೂ ರಸ್ತೆಯ ವರೆಗೆ ಬಂದು ತಲುಪಿದಾಗ ಆ ದರೋಡೆಕೋರನು, ‘ಈ ರಸ್ತೆಯಿಂದ ನೇರವಾಗಿ ಹೋಗು. ಅಲ್ಲಿ ನೋಡು, ನಿನ್ನ ಮನೆ ಕಾಣಿಸುತ್ತಿದೆ’ ಎಂದನು. ಆಗ ಆ ಮನುಷ್ಯನು ಆ ದರೋಡೆಕೋರನಿಗೆ ‘ಅಣ್ಣಾ, ನೀವು ನನಗೆ ಬಹಳ ದೊಡ್ಡ ಉಪಕಾರವನ್ನು ಮಾಡಿದ್ದೀರಿ. ಈಗ ನೀವು ಸಹ ನನ್ನ ಮನೆಗೆ ಬನ್ನಿರಿ’ ಎಂದನು. ಆಗ ದರೋಡೆಕೋರನು ‘ಇಲ್ಲ. ನಾನು ಅಲ್ಲಿಯವರೆಗೆ ಬರುವುದಿಲ್ಲ. ರಾಜಭಟರಿಗೆ ತಿಳಿದರೆ, ನನಗೆ ತೊಂದರೆಯಾಗುವುದು’ ಎಂದನು.
ಈ ಸಂಸಾರವೆಂದರೆ ಅರಣ್ಯವಾಗಿದೆ. ಈ ಅರಣ್ಯದಲ್ಲಿ ಸತ್ತ್ವ, ರಜ ಮತ್ತು ತಮ ಈ ಮೂರು ಗುಣಗಳೆಂದರೆ ದರೋಡೆಕೋರರಾಗಿದ್ದಾರೆ. ಅವರು ಜೀವಕ್ಕೆ ಸಮೀಪವಾಗಿರುವ ತತ್ತ್ವಜ್ಞಾನವನ್ನು ಕಸಿದುಕೊಳ್ಳುತ್ತಾರೆ. ತಮೋಗುಣ ವಿನಾಶ ಮಾಡಲಿಚ್ಛಿಸುತ್ತದೆ. ರಜೋಗುಣ ಅವನನ್ನು ಸಾಂಸಾರಿಕ ಮೋಹದಿಂದ ಕಟ್ಟಿ ಹಾಕುತ್ತದೆ; ಆದರೆ ಸತ್ತ್ವಗುಣ ಈ ರಜ-ತಮಗಳಿಂದ ಅವನನ್ನು ಸಂರಕ್ಷಿಸುತ್ತದೆ. ಸತ್ತ್ವಗುಣದ ಆಶ್ರಯ ದೊರೆತ ಬಳಿಕ ಕಾಮ-ಕ್ರೋಧಗಳ ವಿಕಾರಗಳಿಂದ ತಾನಾಗಿಯೇ ಜೀವದ ಸಂರಕ್ಷಣೆಯಾಗುತ್ತದೆ. ಸತ್ತ್ವಗುಣವು ಜೀವದ ಸಾಂಸಾರಿಕ ಬಂಧನವನ್ನು ಮುರಿಯುತ್ತದೆ; ಆದರೆ ಸತ್ತ್ವಗುಣವೂ ದರೋಡೆಕೋರನೇ ಆಗಿದೆ. ಆದ್ದರಿಂದ ಅದು ತತ್ತ್ವಜ್ಞಾನವನ್ನು ಕೊಡುವುದಿಲ್ಲ; ಆದರೆ ಅದು ಒಂದು ಕೆಲಸವನ್ನು ಮಾಡುತ್ತದೆ. ಅದೆಂದರೆ ಜೀವವನ್ನು ಪರಮಧಾಮಕ್ಕೆ ಕರೆದೊಯ್ಯುವ ಮಾರ್ಗದ ವರೆಗೆ ತಂದು ಬಿಡುತ್ತದೆ ಮತ್ತು ‘ಅದೋ ನೋಡು, ಅಲ್ಲಿ ನಿನ್ನ ಮನೆ ಕಾಣಿಸುತ್ತಿದೆ’ ಎಂದು ಹೇಳುತ್ತದೆ. ಬ್ರಹ್ಮಜ್ಞಾನದಿಂದ ಸತ್ತ್ವಗುಣ ದೂರವೇ ಉಳಿಯುತ್ತದೆ. -(ಪೂ.) ಡಾ. ವಸಂತ ಬಾಳಾಜಿ ಆಠವಲೆ (ವರ್ಷ ೧೯೯೦)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ತ್ರಿಗುಣಗಳ ಕಾರ್ಯ