ಪೆಲೆಟ್ ಗನ್ ಎಷ್ಟು ಅಪಾಯಕಾರಿ ?

ಬ್ರಿಗೇಡಿಯರ್ (ನಿವೃತ್ತ) ಹೇಮಂತ ಮಹಾಜನ್
ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಅಝಾದ್ ಇವರು ಕಾಶ್ಮೀರದಲ್ಲಿ ಉಪದ್ರವಕಾರಿ ಗುಂಪು ಗಳನ್ನು ಚದುರಿಸಲು ಪೆಲೆಟ್ ಗನ್ ಉಪಯೋಗಿಸುವುದನ್ನು ತಕ್ಷಣ ನಿಲ್ಲಿಸ ಬೇಕೆಂದು ಇತ್ತೀಚೆಗೆ ಆಗ್ರಹಿಸಿದ್ದರು. ಪೆಲೆಟ್ ಗನ್‌ನಿಂದಾಗಿ ಮಾನವಾಧಿಕಾರ ಸಂಘಟನೆಗಳು ಆಕಾಶಪಾತಾಳ ಒಂದು ಮಾಡುತ್ತಿವೆ; ಆದರೆ ನಾವು ಪರೋಕ್ಷವಾಗಿ ಹಿಂಸಾತ್ಮಕ ಬೆಂಬಲಿಸುತ್ತಿದ್ದೇವೆ ಹಾಗೂ ಸುರಕ್ಷಾ ದಳಗಳ ಮಾನವಾಧಿಕಾರವನ್ನು ಮರೆಯುತ್ತಿದ್ದೇವೆ, ಎಂಬುದು ಈ ಸಂಘಟನೆಗಳ ಮುಖಂಡರಿಗೆ ಗಮನಕ್ಕೆ ಬರುವುದಿಲ್ಲ.
೧. ಕಾಶ್ಮೀರದಲ್ಲಿ ಹಿಂಸಾತ್ಮಕ ಗುಂಪುಗಳು
ಭದ್ರತಾ ದಳದ ಅಧಿಕಾರಿಯ ಕಣ್ಣನ್ನು ಒಡೆಯುವುದು !
ಕಾಶ್ಮೀರ ಕಣಿವೆಯ ಹಿಜಬುಲ್ ಮುಜಾಹಿದ್ದೀನ್‌ನ ಉಗ್ರ ಬುರ್ಹಾನ ವಾನಿಯನ್ನು ಹತ್ಯೆಗೈದ ನಂತರ ಇದುವರೆಗೆ ಭದ್ರತಾ ದಳಗಳು ಮತ್ತು ಸಮಾಜಕಂಟಕರ ನಡುವೆ ೪೦೦ ಕ್ಕೂ ಹೆಚ್ಚು ಘರ್ಷಣೆಗಳಾಗಿವೆ.
ಇದರಲ್ಲಿ ಈ ಗುಂಪಿನವರು ಶಫಾಕತ್ ಅಹಮ್ಮದ ಹೆಸರಿನ ಭದ್ರತಾ ದಳದ ಅಧಿಕಾರಿಯ ಕಣ್ಣನ್ನು ಒಡೆದ ಘಟನೆ ಬೆಳಕಿಗೆ ಬಂದಿದೆ. ಸೇನಾ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ನಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಇಷ್ಟು ಮಾತ್ರವಲ್ಲ, ಆಂದೋಲನಕಾರರು ಭದ್ರತಾ ಅಧಿಕಾರಿ ಅಹಮ್ಮದ ಇವರಿಗೆ ಜುಲೈ ೧೪ ರಂದು ಯದ್ವಾತದ್ವ ಹೊಡೆದು ಅವರ ಕಣ್ಣನ್ನು ಒಡೆದರು. ಅನಂತರ ಅಲ್ಲಿನ ವಾಹನಗಳನ್ನು ಸಹ ಸುಟ್ಟು ಹಾಕಿದರು. ಸರಕಾರದ ಅಂಕಿಅಂಶಕ್ಕನುಸಾರ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು ೨ ಸಾವಿರ ನಾಗರಿಕರು ಮತ್ತು ೧ ಸಾವಿರದ ೫೦೦ ಪೊಲೀಸರು ಮತ್ತು ಭದ್ರತಾ ದಳದ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಕುಲಗಾಮದ ದಮಹಲ ಹಾಂಜೀ ಪೋರಾ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಆಂದೋಲನಕಾರರು ೭೦ ರೈಫಲ್‌ಗಳನ್ನು ಅಪಹರಿಸಿದ್ದಾರೆಂದು ಪ್ರಸಾರ ಮಾಧ್ಯಮಗಳು ಹೇಳಿವೆ.
೨. ಸೇನೆ ಮತ್ತು ಭದ್ರತಾ ಪಡೆಯವರಿಗೆ ಮಣಿಯದ ಗುಂಪು !
ಸೇನೆ ಮತ್ತು ಭದ್ರತಾ ಪಡೆಯವರ ಮೇಲೆ ಕಲ್ಲು ತೂರಾಟ ಮಾಡು ವುದು ಕಾಶ್ಮೀರದ ಸಮಾಜಕಂಟಕರ ನಿತ್ಯದ ಆಯುಧವಾಗಿದೆ. ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆಯುವುದರಲ್ಲಿ ಅಲ್ಲಿನ ಯುವಕರು ನಿಪುಣರಾಗಿ ದ್ದಾರೆ. ಅವರು ಸೇನೆ ಮತ್ತು ಭದ್ರತಾ ದಳದವರಿಗೂ ಹೆದರುವುದಿಲ್ಲ. ಆದರೂ ಸೇನೆ ಮತ್ತು ಭದ್ರತಾ ದಳದವರು ಅವರ ವಿರುದ್ಧ ಜೀವಹಾನಿ ಯಾಗದಂತಹ ಆಯುಧಗಳನ್ನು ಉಪಯೋಗಿಸುತ್ತಾರೆ. ಅವುಗಳಲ್ಲಿ ಪೆಲೆಟ್ ಗನ್ ಮುಖ್ಯವಾಗಿದ್ದು ಈಗ ಅದರ ಮೇಲೆ ಸಹ ಪ್ರಶ್ನೆ ಚಿಹ್ನೆ ಮೂಡಿದೆ.
೩. ಕಾಶ್ಮೀರದಲ್ಲಿ ೨೦೧೦ ರಲ್ಲಿ ಮೊತ್ತಮೊದಲು ಪೆಲೆಟ್ ಗನ್ ಉಪಯೋಗಿಸಲಾಯಿತು !
೨೦೧೦ ರಲ್ಲಿ ಸಮಾಜಕಂಟಕರೊಂದಿಗೆ ನಡೆದ ಘರ್ಷಣೆಯ ನಂತರ ಪೆಲೆಟ್ ಗನ್ ಉಪಯೋಗಿಸಲು ಆರಂಭವಾಯಿತು. ಅಂದಿನ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇವರು ಜೀವಹಾನಿಯಾಗುವಂತಹ ಆಯುಧಗಳನ್ನು ಉಪಯೋಗಿಸದೆ ಇಂತಹ ಬಂದೂಕುಗಳನ್ನು ಉಪಯೋಗಿಸ ಬೇಕೆಂದು ಪೊಲೀಸರಿಗೆ ಪತ್ರ ಬರೆದಿದ್ದರು. ಈ ಮನವಿ ಪತ್ರದ ನಂತರ ಜಬಲ್‌ಪುರದಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಯು ಜಮ್ಮು-ಕಾಶ್ಮೀರ ರಾಜ್ಯದ ಪೊಲೀಸರಿಗೆ ಇಂತಹ ರೈಫಲ್‌ಗಳನ್ನು ಪೂರೈಸಲು ಆರಂಭಿಸಿತು. ಈ ಬಂದೂಕುಗಳು ಜನಸಮೂಹವನ್ನು ಚದುರಿಸಲು ಸಕ್ಷಮವಾಗಿವೆ; ಆದರೂ ಪ್ರಾಣಘಾತಕವಲ್ಲ. ಭದ್ರತಾ ದಳದ ಮೇಲೆ ನೇರವಾಗಿ ಆಕ್ರಮಣ ಮಾಡುವ ಗುಂಪನ್ನು ಚದುರಿಸಲು ಅವರು ಪೆಲೆಟ್ ಗನ್ ಬಳಸಲೇ ಬೇಕಾಗುತ್ತದೆ. ಅದನ್ನು ಆಕ್ಷೇಪಿಸುವುದು ಸಂಪೂರ್ಣ ತಪ್ಪಾಗುತ್ತದೆ. ಒಬ್ಬ ಉಗ್ರವಾದಿಯನ್ನು ಬೆಂಬಲಿಸಿ ಜನರು ಒಟ್ಟಾಗುತ್ತಾರೆ, ಭದ್ರತಾ ದಳದ ಮೇಲೆ ದಾಳಿ ಮಾಡುತ್ತಾರೆ ಹಾಗೂ ಕಲ್ಲು ತೂರಾಟ ಮಾಡುತ್ತಾರೆ, ಅದನ್ನು ನೋಡುವಾಗ ಭದ್ರತಾ ದಳದ ಬಳಿ ಬೇರೆ ಪರ್ಯಾಯವೇ ಉಳಿದಿಲ್ಲ.
೪. ಪ್ರಾಣಾಪಾಯವಿಲ್ಲ!
ಹೆಚ್ಚುತ್ತಿರುವ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜನಸಮೂಹ ವನ್ನು ನಿಯಂತ್ರಿಸಲು ಜಮ್ಮು-ಕಾಶ್ಮೀರದಲ್ಲಿ ಅಘಾತಕ ಶಸ್ತ್ರಗಳನ್ನು ಆಧುನೀಕರಣಗೊಳಿಸಲಾಯಿತು. ಈ ಶಸ್ತ್ರಗಳ ಪಟ್ಟಿ ಬಹಳ ದೊಡ್ಡದಾಗಿದೆ. ಇದರಲ್ಲಿ ಅಶ್ರುವಾಯುವಿನ ಯಂತ್ರವಿರುವ ವಾಹನಗಳು, ಸ್ಫೋಟಕಗಳು, ಎಚ್ಚರ ತಪ್ಪಿಸುವ ಗ್ರೆನೇಡ್ ಇತ್ಯಾದಿಗಳಿವೆ. ಇದಲ್ಲದೆ ಪೊಲೀಸರ ದೇಹದ ರಕ್ಷಣೆ ಮಾಡುವ ಬಾಡಿ ಪ್ರೊಟೆಕ್ಟರ್, ಪಾಲಿಕಾರ್ಬೋನೇಟ್ ಶೀಟ್, ಪಾಲಿಕಾರ್ಬೋನೇಟ್ ಲಾಠಿಗಳು, ಹೆಲ್ಮೇಟ್, ಬುಲೆಟ್‌ಫ್ರೂಫ್ ಬಂಕರ್, ಪಂಪ್ ಏಕ್ಶನ್ ಬಂದೂಕುಗಳು, ವಾಟರ್ ಕೆನನ್, ಆ್ಯಂಟಿ ರಾಯ್‌ಟ್ ರೈಫಲ್‌ಗಳು ಹಾಗೂ ರಬ್ಬರ್ ಮತ್ತು ಪ್ಲಾಸ್ಟಿಕ್‌ನ ಗುಂಡುಗಳು ಮುಂತಾದವುಗಳನ್ನು ಪೂರೈಸಲಾಗಿದೆ. ಅಘಾತಕ ಶಸ್ತ್ರಗಳ ಈ ಪಟ್ಟಿಯಲ್ಲಿ ಈಗ ಡೈ-ಮೇಕರ್ ಗ್ರೆನೆಡ್ ಮತ್ತು ಬಣ್ಣದ ನೀರಿನ ಕೆನನ್ ಸಹ ಸಮಾವೇಶವಾಗಿದೆ. ಪೊಲೀಸರು ಪೆಲೆಟ್ ಗನ್ ಮತ್ತು ಪೆಪ್ಪರ್ ಸ್ಪ್ರೇಯನ್ನು ಹೆಚ್ಚು ಉಪಯೋಗಿಸುತ್ತಾರೆ. ಪೆಲೆಟ್ ಗನ್‌ನಲ್ಲಿ ಒಂದು ರೀತಿಯ ಸಣ್ಣ ಗುಂಡುಗಳಿರುತ್ತವೆ. ಅದನ್ನು ಗುಂಪಿನತ್ತ ಹಾರಿಸಲಾಗುತ್ತದೆ. ಈ ಸಣ್ಣ ಗುಂಡುಗಳು ಸಮಾಜಕಂಟಕರ ಶರೀರದೊಳಗೆ ಹೋಗುತ್ತವೆ. ಇದರಿಂದ ಯಾವುದೇ ಪ್ರಾಣಹಾನಿಯಾಗುವ ಅಪಾಯವಿಲ್ಲ. ಶರೀರ ದೊಳಗೆ ಹೋದ ಈ ಗುಂಡುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಮಾತ್ರ ತೆಗೆಯಬಹುದು. ಗುಂಡು ಶರೀರದೊಳಗೆ ನುಗ್ಗುವಾಗ ಆಗುವ ಗಾಯ ಒಣಗಲು ೨-೩ ವಾರ ಬೇಕಾಗುತ್ತದೆ. ಪೊಲೀಸರು ಮತ್ತು ಭದ್ರತಾ ದಳದ ಮೇಲೆ ಪೆಟ್ರೋಲ್ ಬಾಂಬ್ ಮತ್ತು ಕಲ್ಲು ತೂರುವವರು ಇಷ್ಟಾದರೂ ಸಹಿಸಿಕೊಳ್ಳಬೇಕಾಗುವುದು. ಪೆಲೆಟ್ ಗನ್ ಇದು ನಾನ್ ಲಿಥಲ್ ಅಂದರೆ ಪ್ರಾಣಘಾತಕವಾಗಿರದ ಆಯುಧವಾಗಿದೆ. ತಮ್ಮ ಜೀವಹೋಗುವ ಪ್ರಸಂಗ ನಿರ್ಮಾಣವಾಗಿರುವಾಗ ಹಲ್ಲೆಕೋರರ ವಿರುದ್ಧ ಇಂತಹ ಆಯುಧಗಳನ್ನು ಉಪಯೋಗಿಸದೆ, ಇನ್ನೇನು ಮಾಡಬೇಕು, ಎಂದು ಭದ್ರತಾ ದಳದ ಸೈನಿಕರು ಪ್ರಶ್ನಿಸುತ್ತಾರೆ. ಇಂತಹ ಉಗ್ರವಾದಿ ಗುಂಪುಗಳ ವಿರುದ್ಧ ಲಾಠಿ ಪ್ರಹಾರವಂತೂ ಆಗುವುದಿಲ್ಲ. ಇದರ ಹೊರತು ನಾನ್ ಲೆಥಲ್ ಆಯುಧಗಳ ಭತ್ತಳಿಕೆಯಲ್ಲಿ ಅಶ್ರುವಾಯು ಸಹ ಇದೆ; ಆದರೆ ಗಲಭೆಕೋರರು ಅದರ ವಿರುದ್ಧ ಉಪಾಯವನ್ನು ಕಂಡುಹಿಡಿದಿದ್ದಾರೆ. ಅಶ್ರುವಾಯುವಿನ ನಳಿಕೆ ಒಡೆಯುವ ಮೊದಲೇ ಅವರು ಅದರ ಮೇಲೆ ಒದ್ದೆ ಗೋಣಿಗಳನ್ನು ಹಾಕುತ್ತಾರೆ. ಅದರಿಂದ ಅಶ್ರುವಾಯುವಿನ ನಳಿಕೆಗಳು ನಿಷ್ಕ್ರಿಯವಾಗುತ್ತವೆ. ಇದಲ್ಲದೇ ಇನ್ನೊಂದು ಅಸ್ತ್ರವಿದೆ. ಅದಕ್ಕೆ ಮಿರ್ಚಿ ಬಾಂಬ್ ಎನ್ನುತ್ತಾರೆ. ಅದರ ಮೂಲ ಹೆಸರು ‘ಆಲಿಯೋರೇಜನ್’ ಎಂದಿದೆ. ಈ ಗೋಲವನ್ನು ಗುಂಪಿನ ಮೇಲೆ ಎಸೆದರೆ ಶರೀರವೆಲ್ಲ ಉರಿಯುತ್ತದೆ; ಆದರೆ ಜನಸಂದಣಿ ದೊಡ್ಡದಾಗಿದ್ದರೆ, ಸ್ವಲ್ಪ ಜನರ ಮೇಲೆಯೇ ಅದರ ಪರಿಣಾಮವಾಗುವುದರಿಂದ ಈ ಆಯುಧವೂ ನಿರುಪಯೋಗಿ ಎನಿಸುವುದು. ನೂರಾರು ಜನರು ಒಟ್ಟಾಗಿ ದಾಳಿ ಮಾಡುವಾಗ ಏನು ಮಾಡುವುದು ? ಪರ್ಯಾಯವಿಲ್ಲದೆ ಪೆಲೆಟ್ ಗನ್ ಉಪಯೋಗಿಸಬೇಕಾಗುತ್ತದೆ. ಪೆಲೆಟ್ ಗನ್‌ನಿಂದ ಒಮ್ಮೆ ಫೈಯರ್ ಮಾಡಿದಾಗ ಅದರಿಂದ ನೂರಾರು ಸಂಖ್ಯೆಯಲ್ಲಿ ಜನರು ಚದುರುತ್ತಾರೆ. ಅವುಗಳು ರಬ್ಬರ್ ಮತ್ತು ಪ್ಲಾಸ್ಟಿಕಿನದ್ದಾಗಿರುತ್ತದೆ. ಶರೀರದ ಯಾವ ಭಾಗಕ್ಕೆ ಅದು ನುಸುಳುವುದೋ, ಅಲ್ಲಿ ಗಾಯವಾಗುತ್ತದೆ. ಈ ಬಂದೂಕಿನ ಗುಂಡುಗಳ ದೂರ ೫೦ ರಿಂದ ೬೦ ಮೀಟರ್‌ನಷ್ಟಿರುತ್ತದೆ.
೫. ಸೊಂಟದ ಕೆಳಗೇ ಫೈಯರಿಂಗ್ !
ಗಲಭೆಕೋರರ ಮೇಲೆ ಆದಷ್ಟು ಮಟ್ಟಿಗೆ ಎದುರಿನಿಂದ ಫೈರಿಂಗ್ ಮಾಡಬಾರದೆಂಬುದು ಭದ್ರತಾ ದಳದವರ ಪ್ರಯತ್ನವಾಗಿರುತ್ತದೆ; ಆದರೆ ಘರ್ಷಣೆ ಹೆಚ್ಚಾಗಿ ಎದುರೆದುರೇ ನಡೆಯುತ್ತದೆ. ಆಗ ಸೊಂಟದ ಕೆಳಗೆ ಗುಂಡು ಹಾರಿಸುತ್ತೇವೆ, ಎಂದು ಭದ್ರತಾ ದಳದವರು ಹೇಳುತ್ತಾರೆ; ಆದರೆ ಗುಂಡುಗಳು ಹರಡುವುದರಿಂದ ಕೆಲವೊಮ್ಮೆ ಅದು ಸೊಂಟದ ಮೇಲೆ ಸಹ ತಗಲಬಹುದು. ಸದ್ಯ ಬಂದೂಕಿನಿಂದ ಹಾರಿಸಿದ ಗುಂಡು ನೇರವಾಗಿ ಹೋಗುತ್ತದೆ; ಆದರೆ ಇದರ ಗುಂಡು ಎಲ್ಲೆಡೆ ಚದುರುತ್ತದೆ ಮತ್ತು ಅದು ಎಲ್ಲಿಯೂ ತಗಲಬಹುದು. ಭದ್ರತಾ ದಳದ ಹೇಳಿಕೆ ನಿಜವೆಂದಾದರೆ ಅಂತಿಮ ಆಯುಧವೆಂದು ಪೆಲೆಟ್ ಗನ್‌ಅನ್ನೇ ಉಪಯೋಗಿಸಬೇಕಾಗುತ್ತದೆ.
ಇನ್ನೊಂದೆಡೆ ಜನಸಮೂಹವು ಭದ್ರತಾ ದಳದ ಮೇಲೆ ಗ್ರೆನೆಡ್‌ಗಳನ್ನು ಎಸೆಯುತ್ತದೆ. ಕಲ್ಲು ತೂರಾಟ ಮಾಡುತ್ತದೆ. ಇಷ್ಟರ ವರೆಗೆ ಕೇವಲ ಕೇಂದ್ರೀಯ ಮೀಸಲು ಪಡೆಯ ೩೦೦ ಕ್ಕಿಂತಲೂ ಹೆಚ್ಚು ಸೈನಿಕರು ಗಾಯ ಗೊಂಡಿದ್ದಾರೆ. ಅನೇಕ ಪೊಲೀಸರ ತಲೆ ಒಡೆದಿದೆ. ಒಮ್ಮೆ ಈ ಗುಂಪು ಪೊಲೀಸರ ಸಹಿತ ಜೀಪನ್ನೇ ನದಿಗೆ ತಳ್ಳಿತ್ತು. ಅದರಲ್ಲಿ ಆ ಪೊಲೀಸ್ ಮೃತಪಟ್ಟಿದ್ದನು. ಇಂತಹ ಸ್ಥಿತಿಯಲ್ಲಿಯೂ ಪೊಲೀಸರು ಪೆಲೆಟ್ ಗನ್ ಉಪಯೋಗಿಸಬಾರದೇ ?
೬. ಪೆಲೆಟ್ ಗನ್ ಜಗತ್ತಿನಾದ್ಯಂತ ಉಪಯೋಗವಾಗುತ್ತಿದೆ !
ಗುಂಪಿನ ಮೇಲೆ ನೇರವಾಗಿ ಗುಂಡು ಹಾರಿಸಲು ಸಾಧ್ಯವಿಲ್ಲ. ಜನಸಮೂಹವನ್ನು ಚದುರಿಸಲು ಪೆಲೆಟ್ ಗನ್‌ಅನ್ನು ಜಗತ್ತಿನಾದ್ಯಂತ ಬಳಸಲಾಗುತ್ತಿದೆ. ಆದರೆ ಅದರ ವಿರುದ್ಧ ಇಷ್ಟು ಧ್ವನಿ ಕೇಳಿ ಬರುತ್ತಿದ್ದರೆ, ಅದಕ್ಕೂ ಪರ್ಯಾಯ ಕಂಡು ಹಿಡಿಯಲಾಗುವುದು. ಜನಸಮೂಹವನ್ನೂ ನಿಯಂತ್ರಿಸಲಾಗುವುದು ಹಾಗೂ ಭದ್ರತಾ ದಳಕ್ಕೂ ನಷ್ಟ ಆಗಲಿಕ್ಕಿಲ್ಲ, ಅಂತಹ ಹೊಸ ಪರ್ಯಾಯವಿರಬಹುದು. ಅಮೇರಿಕಾದಲ್ಲಿ ಆಫ್ರಿಕಾ ವಂಶದ ನಾಗರಿಕರು ಉಗ್ರ ಆಂದೋಲನ ಮಾಡಿದಾಗ ಇದೇ ರೀತಿ ಪೆಲೆಟ್ ಗನ್ ಉಪಯೋಗಿಸಲಾಗಿತ್ತು. ಇಸ್ರೈಲ್‌ನಲ್ಲಿ ಪ್ಯಾಲಿಸ್ಟಿನಿ ಆಂದೋಲನಕಾರರ ವಿರುದ್ಧ ಇಂತಹ ಬಂದೂಕನ್ನೇ ಉಪಯೋಗಿಸ ಲಾಗುತ್ತದೆ. ಅಲ್ಲದೆ ಅರ್ಜೇಂಟಿನಾ, ಬೊಲಿವಿಯಾ, ಈಜಿಪ್ತ್ ಮತ್ತು ಕೆನಡಾದಲ್ಲಿಯೂ ಜನಸಮುದಾಯವನ್ನು ಚದುರಿಸಲು ಪೆಲೆಟ್ ಗನ್ ಉಪಯೋಗಿಸಲಾಗುತ್ತದೆ. ರಷ್ಯಾ ಮತ್ತು ಯುಕ್ರೇನ್‌ನಂತಹ ಕೆಲವು ದೇಶಗಳಲ್ಲಿ ಆತ್ಮರಕ್ಷಣೆಗಾಗಿ ಇಂತಹ ಆಯುಧಗಳನ್ನು ಉಪಯೋಗಿಸಲು ಅಲ್ಲಿನ ಜನಸಾಮಾನ್ಯರಿಗೂ ಅವಕಾಶವಿದೆ. ಇಂತಹ ಬಂದೂಕು ಉಪಯೋಗಿಸುವುದರ ಹಿಂದೆ ಯಾರ ಪ್ರಾಣವೂ ಹೋಗಬಾರದೆಂಬ ಸ್ವಚ್ಛ ಉದ್ದೇಶ ಕಾಣಿಸುವಾಗ ಇದರಿಂದ ಇಷ್ಟು ಕೋಲಾಹಲವೆಬ್ಬಿಸಲು ಕಾರಣವೇನು ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
೭. ಕಾನೂನಿನ ಅನುಮತಿ !
ಪೆಲೆಟ್ ಬಂದೂಕಿನಿಂದ ಗಾಯಗೊಂಡಿರುವ ಜನರ ಸಂಖ್ಯೆ ಹೆಚ್ಚಿರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಇಂತಹ ಬಂದೂಕುಗಳನ್ನು ಉಪಯೋಗಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆ ಆರಂಭವಾಗಿದೆ. ಹೀಗೆಯೇ ಚರ್ಚೆ ಜಗತ್ತಿನ ಅನೇಕ ದೇಶಗಳಲ್ಲಿ ನಡೆದಿದೆ. ಘಾತಕವಲ್ಲದ ಶಸ್ತ್ರವೆಂಬ ಶಬ್ದವನ್ನು ಉದ್ದೇಶಪೂರ್ವಕ ಉಪಯೋಗಿಸಿ ಇಂತಹ ಆಯುಧ ಗಳ ಜೀವತೆಗೆದುಕೊಳ್ಳುವ ಪರಿಣಾಮವನ್ನು ಅಡಗಿಸಲಾಗುತ್ತಿದೆ, ಎಂದು ಸಹ ಕೆಲವರು ಆರೋಪಿಸುತ್ತಿದ್ದಾರೆ. ಇನ್ನೊಂದೆಡೆ ಜಮ್ಮು-ಕಾಶ್ಮೀರ ಪೊಲೀಸರಲ್ಲಿ ಈ ಆಯುಧಗಳಷ್ಟು ಸಕ್ಷಮವಾದ ಬೇರೆ ಪರ್ಯಾಯವಿಲ್ಲ. ಇಂತಹ ಬಂದೂಕುಗಳ ಉಪಯೋಗವನ್ನು ನಿಲ್ಲಿಸಬೇಕೆಂದು ನವೆಂಬರ್ ೨೦೧೪ ರಲ್ಲಿ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುತ್ತಾ ನ್ಯಾಯಾಲಯವು ಪೊಲೀಸರ ಆತ್ಮರಕ್ಷಣೆಗಾಗಿ ಇರುವ ಹಕ್ಕನ್ನು ಮನ್ನಿಸಿ ಅದಕ್ಕಾಗಿ ಇಂತಹ ಬಂದೂಕುಗಳನ್ನು ಉಪಯೋಗಿಸಲು ಅನುಮತಿ ನೀಡಿತ್ತು.
- ಬ್ರಿಗೇಡಿಯರ್ (ನಿವೃತ್ತ) ಹೇಮಂತ ಮಹಾಜನ್
(ಆಧಾರ : http://brighemantmahajan.blogspot.in/)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೆಲೆಟ್ ಗನ್ ಎಷ್ಟು ಅಪಾಯಕಾರಿ ?