ಹಿಂದೂಗಳೇ, ಪ್ರಸ್ತಾವಿತ ಮೂಢನಂಬಿಕೆ ನಿರ್ಮೂಲನೆ ಕಾನೂನಿನ ಭೀಕರ ಸ್ವರೂಪವನ್ನು ಗಮನದಲ್ಲಿಡಿ ಮತ್ತು ಈ ಕಾನೂನು ಬರಬಾರದೆಂದು ಸಂಘಟಿತರಾಗಿ ಕಾನೂನುಮಾರ್ಗದಿಂದ ಪ್ರಯತ್ನಿಸಿ !

ಶ್ರೀ. ಹರ್ಷವರ್ಧನ ಶೆಟ್ಟಿ
ಮಹಾರಾಷ್ಟ್ರ ಸರಕಾರವು ಈಗಾಗಲೇ ಮೌಢ್ಯ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರವು ಈ ಕಾನೂನು ತರಲು ಪ್ರಯತ್ನಿಸಿತ್ತು. ಅದರೆ ಹಿಂದೂ ಸಂಘಟನೆ, ಕೆಲವು ರಾಜಕಾರಣಿಗಳ ವಿರೋಧದಿಂದ ಆ ಕಾನೂನು ಜಾರಿಗೆ ಬರಲಿಲ್ಲ. ಅದರೆ ರಾಜ್ಯದ ಮುಖ್ಯಮಂತ್ರಿಗಳು ನಾವು ಈ ಕಾನೂನನ್ನು ಮುಂದಿನ ಅಧಿವೇಶನದಲ್ಲಿ ತಂದೇ ತರುತ್ತೇವೆ ಎಂದು ಹೇಳಿದ್ದಾರೆ. ಅದುದರಿಂದ ಹಿಂದೂಗಳು ಈ ಕಾನೂನು ಬರದಂತೆ ರಾಜ್ಯದಲ್ಲಿ ಪ್ರಯತ್ನಿಸುವುದು ಅತ್ಯಂತ ಅವಶ್ಯಕವಿದೆ. ಅದಕ್ಕಾಗಿ ಕಾನೂನಿನ ಭೀಕರತೆಯನ್ನು ನಾವು ಅರಿತುಕೊಳ್ಳಬೇಕಾಗಿದೆ.

೧. ಅನೇಕ ಸಂಸ್ಕ್ರತಿಗಳು ಉದಯಿಸಿ ನಾಶವಾಗುವುದು; ಆದರೆ
ಕಾಲದ ಪ್ರವಾಹದಲ್ಲಿ ಅನೇಕ ದಾಳಿಗಳಾದರೂ ಪ್ರಾಚೀನ ಮತ್ತು ಮಹಾನ್ ಹಿಂದೂ ಸಂಸ್ಕೃತಿ ಉಳಿಯುವುದು
ಜಗತ್ತಿನಲ್ಲಿ ಅನೇಕ ಸಂಸ್ಕೃತಿಗಳು ಉದಯಿಸಿ ಅನಂತರ ಅವುಗಳು ನಾಶವಾದವು. ಅದರೆ ಪ್ರಾಚೀನ  ಮತ್ತು ಮಹಾನ್ ಹಿಂದೂ ಸಂಸ್ಕೃತಿಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಾಗಲಿಲ್ಲ. ಅದರೆ ನೂರಾರು ವರ್ಷಗಳಿಂದ ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನವು ಸತತವಾಗಿ ನಡೆದು ಬಂದಿದೆ. ಇಂದು ಸಹ ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಪಂಥದವರು ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿದರು ಅದರೆ ಅದನ್ನು ಆದಿ ಶಂಕರಾಚಾರ್ಯರು ವಿಫಲಗೊಳಿಸಿದರು.ತದನಂತರ ಮೊಘಲರಿಂದ, ಬ್ರಿಟೀಷರಿಂದ ತಮ್ಮೆಲ್ಲ ಪ್ರಯತ್ನವನ್ನು ಹಾಕಿ ‘ಹಿಂದೂ ಧರ್ಮ’ ನಾಶ ಮಾಡುವ ಪ್ರಯತ್ನವಾಯಿತು; ಅದರೆ ಅವರ ಪ್ರಯತ್ನ ವಿಫಲವಾಯಿತು, ಸ್ವಾತಂತ್ರ್ಯಾನಂತರ ನಮ್ಮ ರಾಜಕಾರಣಿಗಳು ಅಲ್ಪಸಂಖ್ಯಾತರನ್ನು ಅಪಾರವಾಗಿ ಓಲೈಸಿ ಹಿಂದೂ ಸಮಾಜ ಮತ್ತು ಸಂಸ್ಕೃತಿಯ ವಿನಾಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಎಡ ಪಂಥೀಯ ಪಕ್ಷವು ನಾಸ್ತಿಕವಾದವನ್ನು ಹರಡುತ್ತ ಆಸ್ತಿಕ ಹಿಂದೂಗಳನ್ನು ನಾಸ್ತಿಕರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ.
 ೨. ಪ್ರಾಚೀನ ಮತ್ತು ಮಹಾನ್ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ನಡೆಯುತ್ತಿರುವ ಪ್ರಯತ್ನ
೨ ಅ. ವಿರೋಧಕರು ಹಿಂದೂಗಳ ಭಾವನೆಗಳಿಗೆ ಬೆಲೆಕೊಡದಿರುವುದು ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವುದು : ಹಿಂದೂ ಧರ್ಮವನ್ನು ನಾಶ ಮಾಡಲು ಕಾಲ ಕಾಲಕ್ಕೆ ಬೇರೆ ವಿರೋಧಿಗಳು ಹುಟ್ಟಿಕೊಂಡು ಹಿಂದೂ ಧರ್ಮ ನಾಶ ಮಾಡುವ ಪ್ರಯತ್ನವಾಯಿತು. ಅದರೆ ಪ್ರಸ್ತುತ ಹಿಂದೂ ಧರ್ಮ ಮತ್ತು ಹಿಂದೂ ಸಮಾಜವನ್ನು ನಾಶ ಮಾಡಲು ಈ ಮೇಲಿನ ಎಲ್ಲ ವಿರೋಧಿಗಳು ಒಟ್ಟಾಗಿ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಲ್ಲ ಪಕ್ಷದ ರಾಜಕಾರಣಿಗಳು ಅಲ್ಪಸಂಖ್ಯಾತರನ್ನು ಓಲೈಸಿ ಹಿಂದೂಗಳ ಭಾವನೆಗೆ ಬೆಲೆ ನೀಡದಿರುವುದು, ಹಿಂದೂ ದೇವತೆಗಳನ್ನು ಅವಮಾನಿಸುವುದು ಮುಂತಾದ ಕೃತ್ಯಗಳನ್ನು ಮಾಡುತ್ತಿದ್ದಾರೆ.
೨ ಆ. ಕೋಮುಗಲಭೆ ನಿಯಂತ್ರಣ ಕಾನೂನು ಭೀಕರ ಸ್ವರೂಪದ್ದಾಗಿರುವುದು ಮತ್ತು ಹಿಂದೂ ಸಂಘಟನೆಗಳ ಸಂಘಟಿತ ಹೋರಾಟದಿಂದ ಆ ಕಾನೂನು ಅನುಮೋದನೆಯಾಗದಿರುವುದು : ಇಷ್ಟೆಲ್ಲ ಪ್ರಯತ್ನ ಮಾಡಿಯೂ ಹಿಂದೂ ಧರ್ಮವನ್ನು ನಾಶ ಮಾಡಲು ಯಶಸ್ವಿಯಾಗದಿರುವುದರಿಂದ ಸಂವಿಧಾನದ ಹೆಸರಿನಲ್ಲಿ ಕಾನೂನನ್ನು ರೂಪಿಸಿ, ಹಿಂದೂ ಸಮಾಜ ಮತ್ತು ಸಂಸ್ಕೃತಿಯ ನಾಶದ ಭೀಕರ ಮತ್ತು ಆಯೋಜನಾಬದ್ಧ ಸಂಚನ್ನು ರೂಪಿಸಲಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರಕಾರ ಕೋಮು ಗಲಭೆ ನಿಯಂತ್ರಣ ಕಾನೂನು ತರಲು ಪ್ರಯತ್ನಿಸಿತ್ತು. ಈ ಕಾನೂನಿನ ಭೀಕರತೆ ಎಷ್ಟಿತ್ತೆಂದರೆ ಅದು ಅನುಮೋದನೆ ಆದರೆ ಬಹುಸಂಖ್ಯಾತ ಹಿಂದೂ ಸಮಾಜವು ತನ್ನ ಮೇಲಾದ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಳ್ಳಬೇಕಾಗಿತ್ತು. ಅದರ ವಿರುದ್ಧ ಹೋರಾಡಿದರೆ ಬಹುಸಂಖ್ಯಾತ ಹಿಂದೂಗಳೇ ಜೈಲು ಅಥವಾ ಶಿಕ್ಷೆ ಅನುಭವಿಸಬೇಕಿತ್ತು. ಅದರೆ ಹಿಂದೂ ಸಂಘಟನೆಯ ಸಂಘಟಿತ ಹೋರಾಟದಿಂದಾಗಿ ಆ ಕಾನೂನಿಗೆ ಅನುಮೋದನೆ ದೊರೆಯಲಿಲ್ಲ. ಆದರೆ ಈ ಸರಕಾರವು ಏನಾದರೂ ಮಾಡಿ ನಮ್ಮ ಸಂಸ್ಕೃತಿಯನ್ನು ನಾಶ ಮಾಡುವ ಪಣ ತೊಟ್ಟಂತೆ ವರ್ತಿಸುತ್ತಿದೆ.
೩. ಮೌಢ್ಯನಿಷೇಧ ಕಾನೂನೆಂದರೆ ಹಿಂದೂ ಸಮಾಜದ ಆಚಾರವಿಚಾರವನ್ನು ನಿಷೇಧಿಸುವ ಸರಕಾರದ ಸಂಚು !
ಸರಕಾರ ಮತ್ತು ಅವರಿಗೆ ಬೆಂಬಲ ನೀಡುವ ವಿದೇಶಿ ವಿರೋಧಿಗಳು ಇವು ಸೇರಿಕೊಂಡು ಹಿಂದೂ ಸಮಾಜ ಮತ್ತು ಹಿಂದೂ ಸಂಘಟನೆಯನ್ನು ನಾಶ ಮಾಡುವ ಪ್ರಯತ್ನ ಮಾಡಿ ಅನಂತರ ಹಿಂದೂ ಸಮಾಜದ ಆಚಾರ-ವಿಚಾರಗಳನ್ನು ನಿರ್ಬಂಧಿಸುವ ವ್ಯವಸ್ಥಿತ ಷಡ್ಯಂತ್ರವನ್ನು ರಚಿಸಿವೆ. ಅದರ ಫಲಶ್ರುತಿಯೇ ಮೌಢ್ಯನಿಷೇಧ ಕಾನೂನಾಗಿದೆ. ಒಂದೊಂದೇ ರಾಜ್ಯಗಳಲ್ಲಿ ಈ ಕಾನೂನು ತರಲು ಪ್ರಯತ್ನವಾಗುತ್ತಿರುವುದು ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಕಾನೂನು ತಂದ ನಂತರ ಈಗ ಕರ್ನಾಟಕದಲ್ಲಿ ಪ್ರಯತ್ನವಾಗುತ್ತಿದೆ. ಮುಂದೆ ಇದು ಎಲ್ಲ ರಾಜ್ಯಗಳಲ್ಲಿ ಬರುವ ಸಾಧ್ಯತೆ ಇದೆ.
೩ ಅ. ಸರಕಾರವು ಸಮಾಜದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಉಳಿದಿರುವ ಶ್ರದ್ಧೆಯನ್ನು ನಾಶ ಮಾಡಲು ಕಾನೂನು ರೂಪಿಸಿ ಭಯ ಹುಟ್ಟಿಸುವುದು : ಸದ್ಯ ಹೆಚ್ಚಿನ ಹಿಂದೂಗಳು ತಮ್ಮ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತಕ್ಕೆ ಬಲಿಯಾಗಿ ಪಾಶ್ಚಾತ್ಯ ಸಂಸ್ಕೃತಿಗನುಸಾರ ವರ್ತಿಸುತ್ತಿದ್ದಾರೆ. ಇವರು ಹಿಂದೂಗಳು ಕೇವಲ ಜನ್ಮ ಹಿಂದೂಗಳಾಗಿದ್ದು, ಕರ್ಮ ಹಿಂದೂಗಳಾಗಿ ಉಳಿದಿಲ್ಲ, ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಕೃತ ಸಂಸ್ಕಾರವನ್ನು ತಮ್ಮಲ್ಲಿ ರೂಪಿಸಿಕೊಂಡು ಹೆಚ್ಚಿನ ಯುವ ಪೀಳಿಗೆ ಭೋಗವಾದಿ ಜೀವನ ನಡೆಸುತ್ತಿದ್ದು ಜೀವನ ವ್ಯರ್ಥಗೊಳಿಸುತ್ತಿದ್ದಾರೆ. ಈ ಸ್ಥಿತಿ ಇರುವಾಗಲೂ ಕೆಲವರು ಹಿಂದೂ ಸಂಸ್ಕೃತಿಯ ಅಭಿಮಾನವಿಟ್ಟುಕೊಂಡು ವ್ರತ ಮತ್ತು ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಸ್ವಲ್ಪವಾದರೂ ಆಸ್ತಿಕತೆ, ಶ್ರದ್ಧೆ, ಭಕ್ತಿ ಉಳಿದುಕೊಂಡಿದೆ. ಆದುದರಿಂದ ಈ ಧಾರ್ಮಿಕ ಆಚಾರ ವಿಚಾರಗಳನ್ನು ನಾಶ ಮಾಡಲು ಕಾನೂನಾತ್ಮಕ ಭಯವನ್ನು ನಿರ್ಮಿಸಿ ವ್ಯವಸ್ಥಿತವಾಗಿ ರೂಪಿಸಿದ ಷಡ್ಯಂತ್ರವೇ ಈ ಮೌಢ್ಯ ನಿಷೇಧ ಕಾನೂನು.
೩ ಆ. ಸಮಾಜವು ಈ ಕಾನೂನಿನ ಭೀಕರತೆಯನ್ನು ಅರಿತುಕೊಳ್ಳುವುದು ಆವಶ್ಯಕ ! : ಈ ಕಾನೂನಿನಲ್ಲಿ ಶ್ರದ್ಧೆ ಮತ್ತು ಅಂಧಶ್ರದ್ಧೆ ಎಂದರೇನು ? ಎಂಬುದರ ಉಲ್ಲೆೀಖವಿಲ್ಲ. ಈ ಕಾನೂನು ಬಂದ ನಂತರವೂ ಮೂಲ ನಿಯಮ ಬಿಟ್ಟು ಮುಂದೆ ಈ ಕಾನೂನಿನ ಪ್ರಾಧಿಕಾರಕ್ಕೆ ಹೊಸ ಹೊಸ ನಿಯಮವನ್ನು ಸೇರಿಸುವ ಅಧಿಕಾರ ನೀಡಿದೆ. ಇದರ ಪರಿಣಾಮದಿಂದ ಹಿಂದೂಗಳ ಅನೇಕ ವ್ರತ, ಉತ್ಸವ ಮತ್ತು ಆಚರಣೆಗಳನ್ನು ಅಂಧಶ್ರದ್ಧೆ ಎಂದು ನಿರ್ಧರಿಸುವ ಸಾಧ್ಯತೆ ಇದೆ. ಇದರಿಂದ ಹಿಂದೂಗಳಿಗೆ ಯಾವ ಆಚರಣೆ ಮಾಡ ಬೇಕೆಂಬ ಗೊಂದಲ ಮತ್ತು ಭಯದ ವಾತಾವರಣ ನಿರ್ಮಾಣವಾಗುತ್ತದೆ. ಭಕ್ತಿಗಿಂತ ಭಯ ಹೆಚ್ಚಾಗುತ್ತದೆ. ಈ ಭಯದಿಂದ ಹಿಂದೂ ಸಮಾಜ ತಮ್ಮ ಒಂದೊಂದೇ ಆಚರಣೆಯನ್ನು ನಿಲ್ಲಿಸುತ್ತ ಹೋಗುವುದರಲ್ಲಿ ಯಶಸ್ವಿಯಾಗುವರು. ಈ ರೀತಿಯಾಗಿ ಹಿಂದೂ ಸಂಸ್ಕೃತಿ ಯನ್ನು ನಾಶ ಮಾಡುವ ಷಡ್ಯಂತ್ರವು ಸಫಲವಾಗು ತ್ತದೆ. ಹೀಗಾಗಬಾರದೆಂದು ಈ ಕಾನೂನಿನ ಭಯಾನಕತೆಯನ್ನು ಸಮಾಜವು ಅರಿತುಕೊಳ್ಳಬೇಕು.
೩ ಇ. ಧಾರ್ಮಿಕ ವಿಧಿ ಮಾಡಲು ನಿಷೇಧಿಸಿ ಹಿಂದೂಗಳಿಗೆ ಭಗವಂತನಿಂದ ಸಿಗುವ ಚೈತನ್ಯದ ಸ್ರೋತವನ್ನು ನಾಶ ಮಾಡುವ ಸಂಚು : ಈ ಕಾನೂನಿನಿಂದ ಅನೇಕ ಹಿಂದೂಗಳು ಧರ್ಮಾಚರಣೆ ಮಾಡುವುದನ್ನು ನಿಲ್ಲಿಸುತ್ತಾರೆ. ಇದರಿಂದ ಅವರು ಭಗವಂತನಿಂದ ದೊರೆಯುವ ಚೈತನ್ಯದಿಂದ ವಂಚಿತರಾಗುತ್ತಾರೆ.
೩ ಉ. ಸಂತರನ್ನು ಅವಮಾನಿಸಿದ ಮಹಾಪಾಪ ವನ್ನು ಹಿಂದೂಗಳು ಭೋಗಿಸಬೇಕಾಗುವುದು !
ಅಧ್ಯಾತ್ಮವೆಂಬುವುದು ಸೂಕ್ಷ್ಮಸ್ತರದ ಶಾಸ್ತ್ರವಾಗಿದೆ. ಸಾಧನೆ ಮಾಡಿ ಅದರ ಪ್ರಸಾರ ಮಾಡುವುದು ಅಪರಾಧವಾಗಿದೆ, ಎಂಬ ಆಶಯದ ಉಲ್ಲೇಖ ಈ ಕಾನೂನಿನಲ್ಲಿದೆ. ಅಧ್ಯಾತ್ಮವು ಸೂಕ್ಷ್ಮವಾಗಿರುವುದರಿಂದ ಅನೇಕ ವಿಚಾರಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ. ಇದರಲ್ಲಿ ವಿಜ್ಞಾನ ಕಡಿಮೆ ಬೀಳುತ್ತದೆ. ಅನೇಕ ಸಂತ ಮಹಾತ್ಮರು ತಮ್ಮ ಅಧ್ಯಾತ್ಮಿಕ ಬಲದಿಂದ ಚಮತ್ಕಾರದ ಮೂಲಕ ಸಮಾಜದಲ್ಲಿ ಭಗವಂತನ ಅಸ್ತಿತ್ವವನ್ನು ಸಾಬೀತುಪಡಿಸಿ ಸಮಾಜದಲ್ಲಿ ಭಗವಂತನ ಅಸ್ತಿತ್ವವನ್ನು ಸಿದ್ಧಪಡಿಸಿ ತುಂಬಿಸಲಾಗದಷ್ಟು ಕೊಡುಗೆಯನ್ನು ನೀಡಿದ್ದಾರೆ. ಪ್ರಸ್ತುತ ಕಾನೂನಿನ ಪ್ರಕಾರ ಇಂತಹ ಚಮತ್ಕಾರವನ್ನು ಸಂತರು ಸಾಬೀತು ಪಡಿಸಬೇಕು ಎಂದು ಹೇಳಲಾಗುವುದು. ವಿಜ್ಞಾನವು ಕುಬ್ಜವಾಗಿರುವುದರಿಂದ ಇದನ್ನು ಸಾಬೀತು ಪಡಿಸಲು ಸಾಧ್ಯವಾಗದೆ ನಿಜವಾದ ಸಂತರು ಜೈಲಿಗೆ ಹೋಗಬೇಕಾಗಬಹುದು. ಇದರಿಂದ ಹಿಂದೂ ಸಮಾಜಕ್ಕೆ ಸಮಾಜಕ್ಕೆ ಅಪಾರ ಹಾನಿಯಾಗುತ್ತದೆ. ಅಲ್ಲದೇ ಸಂತರ ಮೇಲಾದ ಈ ಘೋರ ಅಪಮಾನದಿಂದಾಗಿ ಹಿಂದೂ ಸಮಾಜವು ಘೋರ ಪಾಪವನ್ನು ಅನುಭವಿಸಬೇಕಾಗುತ್ತದೆ.
೩ ಉ. ಮೌಢ್ಯ ನಿರ್ಮೂಲನೆಯ ಹೆಸರಿನಿಂದ ಆಸ್ತಿಕ ಸಮಾಜವನ್ನು ನಾಸ್ತಿಕತೆಯೆಡೆಗೆ ಹೊರಳಿಸು ವಲ್ಲಿ ಎಡಪಂಥೀಯರು ಸಫಲರಾಗುವುದು ! : ಈ ಕಾನೂನಿನ ಇನ್ನೊಂದು ಭೀಕರ ಪರಿಣಾಮವೆಂದರೆ, ಮೌಢ್ಯ ನಿಷೇಧ ಕಾನೂನಿನ ನೆಪದಲ್ಲಿ ಹಿಂದೂ ಧರ್ಮದ ಆಚರಣೆಯನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೌಢ್ಯವೆಂದು ಪ್ರಚಾರ ಮಾಡಿ ಹಿಂದೂ ಸಮಾಜದಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಕಡಿಮೆ ಮಾಡುವ ಷಡ್ಯಂತ್ರವು ನಡೆಯುತ್ತಿದೆ. ಇದರಿಂದ ಧರ್ಮಶಿಕ್ಷಣ ಸಿಗದೆ ನರಳುತ್ತಿರುವ ಹಿಂದೂ ಸಮಾಜಕ್ಕೆ ಇನ್ನಷ್ಟು ದೊಡ್ಡ ಹೊಡೆತ ಬೀಳುತ್ತದೆ ಮತ್ತು ಧರ್ಮದ ಬಗೆಗಿನ ಅಭಿಮಾನ ಕಳೆದುಕೊಂಡ ಹೆಚ್ಚಿನ ಹಿಂದೂಗಳು ನಾಸ್ತಿಕತೆಯೆಡೆಗೆ ಹೋಗುತ್ತಾರೆ. ಮೌಢ್ಯನಿಷೇಧ ಕಾನೂನಿನ ಹೆಸರಿನಲ್ಲಿ ಹಿಂದೂ ಧರ್ಮಾಚರಣೆಗಳ ಬಗ್ಗೆ ಅಪಪ್ರಚಾರ, ಕಾನೂನಿನ ಭಯ ಮತ್ತು ಧರ್ಮಾಚರಣೆಯನ್ನು ಮೌಢ್ಯವೆಂದು ನಿರ್ಬಂಧ ಹೇರುವುದು ಮತ್ತು ಇದರ ಫಲಶ್ರುತಿಯೆಂದು ಹಿಂದೂ ಸಮಾಜದಲ್ಲಿ ನಾಸ್ತಿಕವಾದ ಪ್ರಸಾರ ಮಾಡಲು ಎಡಪಂಥೀಯ ವಿಚಾರವಾದಿಗಳಿಗೆ ಸಾಧ್ಯ ವಾಗುತ್ತದೆ.
೩ ಊ. ಮೌಢ್ಯನಿಷೇಧ ಕಾನೂನಿನ ವ್ಯಾಪಕ ರೂಪ : ಆದುದರಿಂದ ಹಿಂದೂಗಳೇ, ಈ ಕಾನೂನಿನ ಭಯಾನಕತೆಯನ್ನು ಅರಿತುಕೊಳ್ಳಿ, ಕೇವಲ ೨-೩ ಕಲಂ ಪರಿಚ್ಛೇದದ ಬಗ್ಗೆ ಮಾತ್ರ ಇಲ್ಲಿ ಉಲ್ಲೆೀಖ ಮಾಡಿದ್ದು ಅದರ ಭೀಕರತೆಯನ್ನು ತಿಳಿಸಲಾಗಿದೆ. ಅದರಲ್ಲಿರುವ ಇತರ ಕಲಂಗಳಾದ ಮೌಢ್ಯನಿಷೇಧ ಕಾನೂನು ಪ್ರಾಧಿಕಾರಕ್ಕೆ ನೀಡಲಾದ ಅಧಿಕಾರ, ಜಾಮೀನುರಹಿತ ವಾರಂಟ್, ಪೀಡಿತನಿಗಲ್ಲ ೩ ನೇ ವ್ಯಕ್ತಿಗೆ ಕೇಸ್ ದಾಖಲಿಸುವ ಅಧಿಕಾರ ಮತ್ತು ನಷ್ಟಪರಿಹಾರದ ಹಕ್ಕು, ಅಪರಾಧ ಸಾಬೀತಾಗುವ ಮೊದಲೇ ನಷ್ಟಪರಿಹಾರ ಪಾವತಿ ಇಂತಹ ಅನೇೀಕ ಕಲಂಗಳು ಈ ಕಾನೂನಿನಲ್ಲಿದೆ. ಇದರಿಂದಾಗುವ ಹಾನಿಯ ವಿವರಣೆಯನ್ನು ಹೇಳುತ್ತ ಹೋದರೆ ಪುಟಗಟ್ಟಲೆ ತಿಳಿಸಬೇಕಾಗುವುದು. 
೪. ಎಲ್ಲ ಹಿಂದೂಗಳು ಈ ಕಾನೂನು ಬರದಂತೆ ಹೋರಾಡಿ ಧರ್ಮರಕ್ಷಣೆಯ ಕಾರ್ಯ ಮಾಡಬೇಕಾಗಿರುವುದು ಆವಶ್ಯಕ !
ಈ ಕಾನೂನು ಬರದಂತೆ ಎಲ್ಲ ಹಿಂದೂಗಳು ಪ್ರಯತ್ನಿಸಬೇಕು ಮತ್ತು ನ್ಯಾಯಸಮ್ಮತವಾಗಿ ಹಿಂದೂ ಧಾರ್ಮಿಕ ಕೃತಿಯನ್ನು ನಿಷೇಧಿಸುವ ಷಡ್ಯಂತ್ರ, ಭಗವಂತನಿಂದ ಸಿಗುವ ಚ್ಯೆತನ್ಯ ನಿಲ್ಲಿಸುವ ಪ್ರಯತ್ನ, ಸಂತರ ಮೇಲಾಗುವ ಘೋರ ಅಪಮಾನ ಮತ್ತು ನಮಗೆ ತಗಲುವ ಪಾಪ ಮತ್ತು ಸಮಾಜದಲ್ಲಿ ನಾಸ್ತಿಕವಾದವನ್ನು ಹರಡುವ ಪ್ರಯತ್ನ ಮುಂತಾದ ಷಡ್ಯಂತ್ರವನ್ನು ನ್ಯಾಯಸಮ್ಮತವಾಗಿ ವಿರೋಧಿಸಿ ಧರ್ಮರಕ್ಷಣೆ ಕಾರ್ಯದಲ್ಲಿ ಸಹಭಾಗಿಯಾಗುವುದು ಕಾಲದ ಆವಶ್ಯಕತೆಯಾಗಿದೆ. ಅದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ ಎಷ್ಟಿದೆ ಎಂಬುದನ್ನು ಹಿಂದೂ ಸಮಾಜವು ಅರಿತುಕೊಂಡು ಆ ದೃಷ್ಟಿಯಿಂದ ವೇಗವಾಗಿ ಪ್ರಯತ್ನಿಸ ಬೇಕಾಗಿದೆ. - ಶ್ರೀ. ಹರ್ಷವರ್ಧನ ಶೆಟ್ಟಿ, ಹಾಸನ (೨೧.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳೇ, ಪ್ರಸ್ತಾವಿತ ಮೂಢನಂಬಿಕೆ ನಿರ್ಮೂಲನೆ ಕಾನೂನಿನ ಭೀಕರ ಸ್ವರೂಪವನ್ನು ಗಮನದಲ್ಲಿಡಿ ಮತ್ತು ಈ ಕಾನೂನು ಬರಬಾರದೆಂದು ಸಂಘಟಿತರಾಗಿ ಕಾನೂನುಮಾರ್ಗದಿಂದ ಪ್ರಯತ್ನಿಸಿ !