ರಾಷ್ಟ್ರೀಯ ಶಿಕ್ಷಣದ ಪುನರ್‌ರಚನೆ ಆವಶ್ಯಕ !

ಪಾ. ರಾಮೇಶ್ವರ ಮಿಶ್ರ
೧೯ ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಶಿಕ್ಷಣದ ಸ್ಥಿತಿ ಹೇಗಿತ್ತು ? ಶಿಕ್ಷಣ ನೀಡುವ ಪ್ರಕ್ರಿಯೆ ಹೇಗಿತ್ತು ? ಹಾಗೂ ಶಿಕ್ಷಣದ ತಂತ್ರ ಯಾವುದಿತ್ತು ?ಇವುಗಳ ಬಗ್ಗೆ ಲಂಡನ್ನಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಜೋಪಾನ ಮಾಡಿರುವ ಕಾಗದಪತ್ರಗಳ ಆಧಾರದಲ್ಲಿ ಆಂಗ್ಲರ ಸಾಕ್ಷಿಯಿಂದಲೇ  ಶ್ರೀ. ಧರ್ಮಪಾಲರು ಸವಿಸ್ತಾರವಾದ ಕಾಗದಪತ್ರಗಳನ್ನು ಮಂಡಿಸಿದ್ದಾರೆ. ಈ ಕಾಗದಪತ್ರಗಳನ್ನು ಶ್ರೀ. ಸೀತಾರಾಮ ಗೋಯಲ್ ಇವರು ೧೯೮೩ ರಲ್ಲಿ ಪುಸ್ತಕರೂಪದಲ್ಲಿ ಮೊಟ್ಟ ಮೊದಲು ಪ್ರಕಾಶನ ಮಾಡಿದ್ದರು; ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯು ಆ ಪುಸ್ತಕದಲ್ಲಿನ ಸತ್ಯವನ್ನು ಅವಲೋಕಿಸಲಿಲ್ಲ ಹಾಗೂ ಬಳಕೆಯಲ್ಲಿದ್ದ ಬ್ರಿಟೀಷ್ ಕಾಲದ ಸತ್ಯವನ್ನು ಅಡಗಿಸಿಟ್ಟು ಕಾಂಗ್ರೆಸ್-ಸಾಮ್ಯ ವಾದಿ ಶಿಕ್ಷಣತಜ್ಞರು ಮೊದಲಿಗಿಂತಲೂ ಅನೇಕ ಪಟ್ಟು ಅಪಪ್ರಚಾರ ಮಾಡಲಾರಂಭಿಸಿದರು, ಅದರಿಂದ ಪಾರಂಪರಿಕ ಭಾರತೀಯ ಶಿಕ್ಷಣಪದ್ಧತಿಯು ಕೇವಲ ದ್ವಿಜರಿಗಾಗಿ ಮಾತ್ರ (ದ್ವಿಜ ಅಂದರೆ ಉಪನಯನದ ಅಧಿಕಾರವಿರುವ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ) ಸೀಮಿತವಾಯಿತು. 
ತದ್ವಿರುದ್ಧ ೧೮ ನೇ ಶತಮಾನದ ಕೊನೆಯ ವರೆಗೆ ಭಾರತದಲ್ಲಿದ್ದ ಶಿಕ್ಷಣಪದ್ಧತಿಯು ಆ ಕಾಲದ ಬ್ರಿಟೀಷ್ ಶಿಕ್ಷಣಪದ್ಧತಿಗಿಂತಲೂ ಅತ್ಯಂತ ಪ್ರಗತಿ ಹೊಂದಿತ್ತು ಹಾಗೂ ಆ ಕಾಲದಲ್ಲಿ ಭಾರತದ ಪ್ರತಿಯೊಂದು ಗ್ರಾಮದಲ್ಲಿ ಒಂದರಂತೆ ಪಾಠಶಾಲೆ ಇತ್ತು, ಎಂಬುದಕ್ಕೆ ಆ ಬ್ರಿಟೀಷ್  ಕಾಗದಪತ್ರಗಳು ಸಾಕ್ಷಿಯಾಗಿವೆ. ಅದರಲ್ಲಿ ಪಾಠಶಾಲೆಗಳಲ್ಲಿ ಎಲ್ಲ ಜಾತಿ ವರ್ಗದ ವಿದ್ಯಾರ್ಥಿಗಳು ಕಲಿಯುತ್ತಿದ್ದರು ಹಾಗೂ ಅವುಗಳಲ್ಲಿ ಕಲಿಸುವ ಶಿಕ್ಷಕರೂ ಎಲ್ಲ ಜಾತಿಯವರಾಗಿದ್ದರು. ಅದೇ ರೀತಿ ಉನ್ನತ ಶಿಕ್ಷಣದ  ವೈಶಿಷ್ಯವೆಂದರೆ, ಅದು ಸಾಮೂಹಿಕವಾಗಿತ್ತು. ದೊಡ್ಡ ಊರಿನಲ್ಲಿ ಒಂದಕ್ಕಿಂತ ಹೆಚ್ಚು ಪಾಠಶಾಲೆ ಮತ್ತು ನಗರಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪಾಠಶಾಲೆಗಳಿದ್ದವು.

೧. ಹಿಂದಿನ ಕಾಲದ ಪಾಠಶಾಲೆಗಳಲ್ಲಿ ಕೊಡುತ್ತಿದ್ದ ಶಿಕ್ಷಣ ! 
 ಪಾಠಶಾಲೆಗಳಲ್ಲಿ ಉನ್ನತ ಶಿಕ್ಷಣಕ್ಷೇತ್ರದಲ್ಲಿ ವೇದ, ಶಾಸ್ತ್ರಗಳು ಮತ್ತು ಮಹಾಕಾವ್ಯಗಳ ಸಹಿತ ಯಾವೆಲ್ಲ ಗ್ರಂಥಗಳ ಅಧ್ಯಯನ ಮತ್ತು ಅಧ್ಯಾಪನ ಮಾಡಲಾಗುತ್ತಿತ್ತು ಎಂಬುದರ ವಿವರಣೆ ಬ್ರಿಟೀಷ್ ಕಾಲದ ಕಾಗದಪತ್ರಗಳಲ್ಲಿ ನೀಡಲಾಗಿದೆ. ಲೆಕ್ಕಪತ, ಗಣಿತ, ಖಗೋಲಶಾಸ್ತ್ರ ಮತ್ತು ಅನೇಕ ಪ್ರಕಾರದ ಶಿಲ್ಪಗಳು, ಚಿಕಿತ್ಸೆ ಮತ್ತು ಆಯುರ್ವೇದ ಇವುಗಳಲ್ಲಿನ ಉನ್ನತ ಮಟ್ಟದ ಜ್ಞಾನವು ಅಲ್ಲಿ ಸ್ವದೇಶಿ ಪದ್ಧತಿಯಲ್ಲಿ ಸಹಜವಾಗಿ ಕೊಡುಕೊಳ್ಳುವಿಕೆಯಾಗುತ್ತಿತ್ತು. 
೨. ಪಾರಂಪರಿಕ ಶಿಕ್ಷಣದ ತ್ಯಾಗ ಮತ್ತು ನಾಗರಿಕರೊಂದಿಗೆ ಭೇದಭಾವ ! 
೧೯೪೭ ರಲ್ಲಿ ನಾಸ್ತಿಕರ ಒಂದು ಸಮೂಹವು ಸಂಪೂರ್ಣ ದೇಶದಲ್ಲಿ ಪಾರಂಪರಿಕ ಶಿಕ್ಷಣವನ್ನು ನಾಶಗೊಳಿಸಲು ಪ್ರಯತ್ನಿಸಿತು. ಇದರ ಹಿಂದಿನ ಉದ್ದೇಶ ಹಿಂದೂಗಳನ್ನು ಒಂದು ನಾಸ್ತಿಕ ಭೌತಿಕವಾದಿ ಸಂಪ್ರದಾಯದ ಅಧೀನದಲ್ಲಿಟ್ಟು ಅವರನ್ನು ನಿಯಂತ್ರಿ ಸುವುದು, ಪರಿವರ್ತನೆ ಮಾಡುವುದು ಹಾಗೂ ಮತಾಂತರಿಸುವುದು, ಇದೇ ಆಗಿತ್ತು. ಇದೊಂದು ಹುಕುಂಶಾಹಿ ಪ್ರವೃತ್ತಿಯಾಗಿದೆ ಹಾಗೂ ಅದು ಬಹುಸಂಖ್ಯಾತರ ಮಾನವಾಧಿಕಾರಗಳ ಉಲ್ಲಂಘನೆ ಮಾಡುತ್ತದೆ. ಇನ್ನೊಂದೆಡೆ ಇಸ್ಲಾಮ್, ಕ್ರೈಸ್ತ ಮತ್ತು ಬೌದ್ಧ ಮುಂತಾದ ಅಲ್ಪಸಂಖ್ಯಾತರ ವಿಶೇಷವಾಗಿ ರಕ್ಷಣೆಯ ಹೆಸರಿನಲ್ಲಿ ಅವರವರ ಪಂಥದ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಆಡಳಿತದ ರಾಜಕೋಶದ ಮೂಲಕ ಪೋಷಿಸಲಾಗುತ್ತದೆ. ಈ ರೀತಿಯಲ್ಲಿ ರಾಜಕಾರಣಿಗಳು ಶಿಕ್ಷಣ ಕ್ಷೇತ್ರದಲ್ಲಿ ನಾಗರಿಕರೊಂದಿಗೆ ಭೇದಭಾವ ಮಾಡಿದ್ದಾರೆ. ಇದು ಭಾರತೀಯ ಸಂವಿಧಾನದ ಮೂಲ ತತ್ತ್ವದ ವಿರುದ್ಧವಾಗಿದೆ. ಬಹುಸಂಖ್ಯಾತರನ್ನು ಅವರ ಧರ್ಮದ ಜ್ಞಾನದಿಂದ ಬಲವಂತವಾಗಿ ವಂಚಿಸುವುದು ಹಾಗೂ ಅದಕ್ಕಾಗಿ ರಾಜಕೀಯ ವ್ಯವಸ್ಥೆಯ ಆಧಾರ ಪಡೆಯುವುದು, ಅಲ್ಪಸಂಖ್ಯಾತರಿಗೆ ಅವರ ಧರ್ಮ ಮತ್ತು ಜಾತಿಯ ಜ್ಞಾನ ನೀಡಲು ಭಾರತೀಯ ರಾಜಕೋಶದಿಂದ ಆರ್ಥಿಕ ಸಹಾಯ ನೀಡುವುದು, ವಿಶೇಷ ಸೌಲಭ್ಯಗಳನ್ನು ನೀಡುವುದು, ಇದು ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ಅಸಂಬದ್ಧವಾಗಿದೆ. ಇದರ ಪರಿಣಾಮದಿಂದ ಬಹುಸಂಖ್ಯಾತರನ್ನು ಭಾರತೀಯರ ದರ್ಶನಶಾಸ್ತ್ರ, ಧರ್ಮ ಶಾಸ್ತ್ರ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರ, ಭೂಗೋಲ, ಸಾಹಿತ್ಯ ಮತ್ತು ಕಲೆ ಇತ್ಯಾದಿ ಜ್ಞಾನಗಳಿಂದ ಸಂಪೂರ್ಣ ವಂಚಿತಗೊಳಿಸಲಾಯಿತು. ಯಾವುದೇ ದೇಶದ ಶಿಕ್ಷಣಪದ್ಧತಿಗೆ ಇದು ವಿರುದ್ಧವಾಗಿದೆ. ಆದ್ದರಿಂದ ಈ ಸ್ಥಿತಿಯನ್ನು ಬದಲಾಯಿಸುವುದು ಅತ್ಯಂತ ಆವಶ್ಯಕವಾಗಿದೆ. ಇದನ್ನು ಬದಲಾಯಿಸುವುದು ಅತ್ಯಂತ ಸುಲಭವೂ ಆಗಿದೆ; ಏಕೆಂದರೆ ೧೯೪೭ ರ ವರೆಗೆ ಭಾರತೀಯ ಶಿಕ್ಷಣಪದ್ಧತಿಯು ಸಾಕಷ್ಟು ಗತಿಶೀಲವಾಗಿತ್ತು ಹಾಗೂ ಗುರುಕುಲಗಳು ಮತ್ತು ಸನಾತನ ಧರ್ಮದ ವಿವಿಧ ಕೇಂದ್ರಗಳ ಮೂಲಕ ಇಂದು ಸಹ ಈ ಜ್ಞಾನವನ್ನು ಸಾಕಷ್ಟು ಪ್ರಮಾಣದಲ್ಲಿ ಸಕ್ಷಮವಾಗಿ ನೀಡಲಾಗುತ್ತಿದೆ.  ಈಗಿರುವ ಅವಶ್ಯಕತೆಯೆಂದರೆ, ಸಮಾಜವಿಜ್ಞಾನ ಮತ್ತು ಸಾಹಿತ್ಯ ಇವುಗಳಲ್ಲಿ ನಾಸ್ತಿಕ ಪಂಥದವರ ಜ್ಞಾನಕ್ಕೆ ಎಷ್ಟು ಮಹತ್ವ ನೀಡಲಾಗುತ್ತದೆಯೋ, ಅಷ್ಟು ಮಹತ್ವವನ್ನಾದರೂ ಈ ಪ್ರಾಚೀನ ಜ್ಞಾನಕ್ಕೆ ನೀಡಬೇಕು. 
೩. ಪ್ರಜಾಪ್ರಭುತ್ವದ ಅಪೇಕ್ಷೆ !
ಪ್ರಜಾಪ್ರಭುತ್ವದ ಆವಶ್ಯಕ ಅಂಗವೆಂದರೆ, ಇದರಲ್ಲಿ ಯಾವುದೇ ಒಂದು ಅಥವಾ ಅನೇಕ ಸಂಪ್ರದಾಯಗಳು ಇತರ ಸಮಾಜದ ಜ್ಞಾನಪರಂಪರೆಯನ್ನು ನಾಶಳಿಸಲು ಪ್ರಯತ್ನಿಸಬಾರದು. ನಮ್ಮ ಭಾರತದ ಶಾಲೆಗಳಲ್ಲಿ ಕಲಿಸಲ್ಪಡುವ ಇತಿಹಾಸದಲ್ಲಿ ಸುಳ್ಳಿನ ಕಂತೆಗಳೇ ಸೇರಿಕೊಂಡಿವೆ. ಅದರಲ್ಲಿ ಸಾವಿರಾರು ವರ್ಷ ನಿರಂತರವಾಗಿ ನಡೆಯುತ್ತಿದ್ದ ಶಿಕ್ಷಣ ಪರಂಪರೆಯನ್ನು ೧೫-೨೦ ಪುಟಗಳಲ್ಲಿ ತಪ್ಪು ತಪ್ಪಾಗಿ ಸೇರಿಸಿಕೊಂಡು ೪೦೦ ವರ್ಷಗಳ ವರೆಗೆ ಸುಮ್ಮನೆ ಅಲ್ಲಲ್ಲಿ ಅಲ್ಪಸ್ವಲ್ಪ ನಡೆಯುತ್ತಿದ್ದ ಇಸ್ಲಾಮೀ ಶಿಕ್ಷಣಕ್ಕೆ ಮತ್ತು ಹೆಚ್ಚು ಕಡಿಮೆ ೯೦ ವರ್ಷ ಭಾರತದಲ್ಲಿ ನಡೆಯುತ್ತಿದ್ದ ಆಂಗ್ಲೋ-ಇಂಡಿಯನ್ ಶಿಕ್ಷಣವನ್ನು ನೂರಾರು ಪುಟಗಳಲ್ಲಿ ಮಂಡಿಸುವುದು ಯಾವುದೇ ದೃಷ್ಟಿಯಿಂದ ನೋಡಿದರೂ ಅಸತ್ಯದ ಪ್ರಸಾರವೇ ಆಗಿದೆ. 
೪. ಸ್ವಾತಂತ್ರ್ಯದ ನಂತರ ನಾಸ್ತಿಕರು ಮತ್ತು ಭೌತಿಕವಾದಿ ಪ್ರತಿನಿಧಿಗಳನ್ನೇ
ಶಿಕ್ಷಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಅವರ ವಿಚಾರವನ್ನು ಮಂಡಿಸಲು ಆರಿಸುವುದು ! 
೧೯೪೭ ರ ನಂತರ ಸಂಪೂರ್ಣ ಶಿಕ್ಷಣವು ಭಾರತೀಯರ ವಶದಲ್ಲಿಯೇ ಇದೆ. ಅಷ್ಟು ಮಾತ್ರವಲ್ಲದೇ, ಅದರಲ್ಲಿನ ಹೆಚ್ಚಿನ ಸದಸ್ಯರು ಬಹುಸಂಖ್ಯಾತರೇ ಆಗಿದ್ದಾರೆ; ಆದರೂ ರಾಜಕಾರಣಿಗಳು ಒಂದೋ ಬಹುಸಂಖ್ಯಾತರಲ್ಲಿನ ಕೇವಲ ನಾಸ್ತಿಕರು ಮತ್ತು ಭೌತಿಕವಾದಿ ಪ್ರತಿನಿಧಿಗಳನ್ನೇ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಅವರ ವಿಚಾರವನ್ನು ಮಂಡಿಸಲು ಆಯ್ದುಕೊಂಡರು ಅಥವಾ ಕೆಲವೊಮ್ಮೆ ಇತರರನ್ನು ಆಯ್ದುಕೊಂಡರೂ ಅವರತ್ತ ದುರ್ಲಕ್ಷ ಮಾಡಿದರು. ಇದರ ಮುಖ್ಯ ಕಾರಣವೆಂದರೆ, ಭಾರತೀಯ ಜ್ಞಾನಪರಂಪರೆಯು ಪ್ರವಹಿಸುತ್ತಿರುವುದರಿಂದ ದಿನಕಳೆದಂತೆ ರಾಜಕಾರಣದಲ್ಲಿನ ಜನರನ್ನು ರಾಜಕೀಯ ನೇತಾರ ಅಥವಾ ರಾಜ ಪುರುಷರೆಂದು ಹೇಳಲಾಗುತ್ತಿತ್ತು, ವಿಚಾರವಂತರಲ್ಲ ! ಯಾವುದೋ ಕಾರಣದಿಂದ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ನೆಹರು ಹೆಚ್ಚಿನಾಂಶ ಅವರ ಸ್ವಂತದ ವಿಚಾರಸರಣಿಯನ್ನು ಮುಂದೆ ಒಯ್ಯುವ ಪ್ರೇರಣೆಯನ್ನು ಹೊಂದಿದ್ದರು ಹಾಗೂ ಅದಕ್ಕಾಗಿ ಅವರು ಸೋವಿಯತ್ ಸಂಘದ ಶೈಕ್ಷಣಿಕ ಪದ್ಧತಿಯನ್ನು ಆಧಾರವಾಗಿಸಿ ಭಾರತದ ಶಿಕ್ಷಣಪದ್ಧತಿಯನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಇದರ ಪರಿಣಾಮವೆಂದು ಜ್ಞಾನ ಮತ್ತು ಪ್ರತಿಭೆಗಳ ಕಗ್ಗೊಲೆಯಾಯಿತು ಹಾಗೂ ರಾಜಪುರುಷರ ಅನುಯಾಯಿಗಳನ್ನೇ ವಿದ್ವಾಂಸರೆಂದು ತಿಳಿಯುವ ಒಂದು ರೂಢಿಯಾಯಿತು. ಈ ಸ್ಥಿತಿ ಭಾರತದಂತಹ ಗೌರವಶಾಲಿ ರಾಷ್ಟ್ರಕ್ಕೆ ಒಳ್ಳೆಯದಲ್ಲ. ರಾಜಕಾರಣದಂತೆಯೇ ಶಿಕ್ಷಣಕ್ಷೇತ್ರದಲ್ಲಿಯೂ ಬದಲಾವಣೆಯಾಗುವ ಆವಶ್ಯಕತೆಯಿದೆ. 
೫. ೧೮೩೫ ರಲ್ಲಿ ಭಾರತದಲ್ಲಿ ಆಂಗ್ಲರ ರಾಜ್ಯವಿರಲಿಲ್ಲ, ಇಲ್ಲಿ ಬುದ್ಧಿಶಾಲಿಗಳಿದ್ದರು !
ಈಸ್ಟ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ವಿಲಿಯಮ್ ಬೆಂಟಿಕ್ ಇವರು ಅವರ ಅಧಿಕಾರಿ ಮೆಕಾಲೆಯ ಶಿಕ್ಷಣ ಪದ್ಧತಿಯ ಕಡತಕ್ಕೆ ಸಹಿ ಹಾಕುವ ವರೆಗೆ ಭಾರತದಲ್ಲಿ ಆಂಗ್ಲರ ರಾಜ್ಯ ಇರಲಿಲ್ಲ. ಈಸ್ಟ್ ಇಂಡಿಯಾ  ಕಂಪನಿ ೧೮೫೭ ರ ವರೆಗೆ ಭಾರತದಲ್ಲಿನ ವಿವಿಧ ರಾಜ್ಯಗಳು ಮತ್ತು ನವಾಬರಲ್ಲಿ ಕಚ್ಚಾಟವನ್ನುಂಟು ಮಾಡಿ ಕೇವಲ ಮಧ್ಯಸ್ತಿಕೆ ಮಾಡುತ್ತಿತ್ತು. ಅಷ್ಟರವರೆಗೆ ಬೆಂಟಿಕ್ ಮತ್ತು ಮೆಕಾಲೆ ಇವರಲ್ಲಿನ ಪತ್ರವ್ಯವಹಾರವು ಒಬ್ಬ ಗುಮಾಸ್ತ ಮತ್ತು ಒಬ್ಬ ವ್ಯವಸ್ಥಾಪಕರಲ್ಲಿನ ಪತ್ರವ್ಯವಹಾರವಾಗಿತ್ತು. ಅದರಿಂದಲೇ ಮುಂದೆ ೧೯೪೭ ನಂತರ ನಿರರ್ಥಕ ಹಾಹಾಕಾರ ಉಂಟಾಯಿತು. ಅದು ಏಕೆ ಎಂದು ಯಾರಿಗೂ ಗೊತ್ತಿಲ್ಲ. ಇಂದಿನ ಶಿಕ್ಷಣಪದ್ಧತಿ ಮತ್ತು ಅದಕ್ಕೆ ಯಾವುದೇ ವಾಸ್ತವಿಕ ಸಂಬಂಧವಿಲ್ಲ. ಕೊನೆಗೆ ೧೮೫೮ ರಲ್ಲಿ ಮೊತ್ತಮೊದಲು ಹೆಚ್ಚುಕಡಿಮೆ ಅರ್ಧಾಂಶ ಭಾರತೀಯರೊಂದಿಗೆ ಆತ್ಮೀಯತೆಯ ಘೋಷಣೆ ಮಾಡಿ ಆಂಗ್ಲರು ಆಡಳಿತವನ್ನು ಕೈಗೆತ್ತಿಕೊಂಡರು. ಅನಂತರವೇ ಭಾರತದಲ್ಲಿ ಬ್ರಿಟೀಷರನ್ನು ಅನುಸರಿಸುತ್ತಾ ಮದ್ರಾಸ್, ಮುಂಬಯಿ ಮತ್ತು ಕೋಲಕಾತಾದಲ್ಲಿ ತಥಾಕಥಿತ ವಿದ್ಯಾಪೀಠಗಳನ್ನು ಸ್ಥಾಪಿಸಲಾಯಿತು. ಅದರ ಪ್ರಭಾವವು ಭಾರತದ ಈ ವಿರಾಟ ಜ್ಞಾನ ಪದ್ಧತಿಯ ಮುಂದೆ ಒಂದು ಸಾಸಿವೆಯಷ್ಟಿತ್ತು. ಸರಕಾರ ಅದಕ್ಕೆ ಮಹತ್ವ ನೀಡಿತು. ಅಧಿಕಾರರೂಢರ ಪಕ್ಷಪಾತದ ಬಿಟ್ಟರೆ ಈ ಶಿಕ್ಷಣಪದ್ಧತಿಯು ಭಾರತದಲ್ಲಿ ಒಂದು ದಿನ ಸಹ ಉಳಿಯಲು  ಸಾಧ್ಯವಿರಲಿಲ್ಲ. 
೬. ಸ್ವಾತಂತ್ರ್ಯದ ನಂತರದ ಶೈಕ್ಷಣಿಕ ಸಮಿತಿಗಳು ಮತ್ತು ಆಯೋಗ ! 
೧೯೪೭ ರ ನಂತರ ಮಾಧ್ಯಮಿಕ ಶಿಕ್ಷಣದ ವಿಕಾಸಕ್ಕಾಗಿ ಕೆಲವು ಸಮಿತಿಗಳನ್ನು ಮತ್ತು ಆಯೋಗಗಳನ್ನು ನೇಮಿಸಲಾಯಿತು ಹಾಗೂ ವಿದ್ಯಾಪೀಠಗಳ ಶಿಕ್ಷಣಕ್ಕೂ ಆಯೋಗವನ್ನು ನೇಮಿಸಲಾಯಿತು. ಅವುಗಳಲ್ಲಿ ೧೯೬೪ ರಲ್ಲಿ ನೇಮಿಸಿದ ಡಾ. ದೌಲತಸಿಂಹ ಕೊಠಾರಿಯವರ ನೇತೃತ್ವದ ಆಯೋಗವು ಎಲ್ಲಕ್ಕಿಂತ ಮಹತ್ವದ ಆಯೋಗವಾಗಿತ್ತು. ಈ ಆಯೋಗವು ೨ ವರ್ಷ ಅಧ್ಯಯನ ಮಾಡಿ ಅದರ ವರದಿಯನ್ನು ಸಲ್ಲಿಸಿತು. ಈ ವರದಿಯಲ್ಲಿಯೂ ಮುಖ್ಯವಾಗಿ ಮಾಧ್ಯಮಿಕ ಶಿಕ್ಷಣದ ಸಂರಚನೆಯ ಮೇಲೆಯೇ ಒತ್ತುಕೊಡಲಾಗಿತ್ತು. ನಂತರ ಡಾ. ರಾಧಾಕೃಷ್ಣನ್ ಇವರ ಸಮಿತಿಯು ವಿದ್ಯಾಪೀಠಗಳ ಶಿಕ್ಷಣದ ಮೇಲೆಯೇ ಗಮನ ಹರಿಸಿತು. ಯಾವುದೇ ದೇಶದಲ್ಲಿ ಶಿಕ್ಷಣದ ಸ್ವರೂಪವು ಉನ್ನತ ಶಿಕ್ಷಣದ ಮೂಲಕವೇ ನಿಯಂತ್ರಿಸಲಾಗುತ್ತದೆಯೆಂಬುದು ಎಲ್ಲರಿಗೂ ತಿಳಿದಿದೆ. ಪ್ರತಿಯೊಂದು ದೇಶದಲ್ಲಿ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ತಮ್ಮದೇ ಜ್ಞಾನಪರಂಪರೆಯನ್ನು ಕಾಪಾಡಲಾಗುತ್ತದೆ ಮತ್ತು ಜಗತ್ತಿನಲ್ಲಿ ಯಾವುದು ಎಲ್ಲೆಡೆ ಉಪಯುಕ್ತವೆನಿಸುವುದೋ, ಅದನ್ನು ಅಲ್ಲಿ ಕಲಿಸಲಾಗುತ್ತದೆ; ಆದ್ದರಿಂದ ಕೇವಲ ಮಾಧ್ಯಮಿಕ ಶಿಕ್ಷಣದ ಮೇಲೆಯೇ ಹೆಚ್ಚು ಗಮನಹರಿಸಿ ಉನ್ನತ ಶಿಕ್ಷಣದ ವಿಷಯದಲ್ಲಿ ಉದಾಸೀನರಾಗಿರುವುದು ಅಥವಾ ಅದರ ಬಗ್ಗೆ ಹೆಚ್ಚು ವಿಚಾರ ಮಾಡದಿರುವುದು ಗಂಭೀರ ಅಪರಾಧವಾಗಿದೆ. 
 ೭. ಉನ್ನತ ಶಿಕ್ಷಣದ ವಿಷಯದಲ್ಲಿ ಎಂದಿಗೂ ವಿಚಾರ ಮಾಡದಿರುವುದು ! 
ಡಾ. ರಾಧಾಕೃಷ್ಣನ್ ಆಯೋಗವು ಉನ್ನತ ಶಿಕ್ಷಣದ ವಿಷಯದಲ್ಲಿ ಅನೇಕ ಸೂಚನೆಗಳನ್ನು ನೀಡಲು ಪ್ರಯತ್ನಿಸಿತ್ತು. ಕೊಠಾರಿ ಆಯೋಗವು ಸಹ ಅದನ್ನೇ ಮಾಡಿತ್ತು; ಆದರೆ ಯಾವುದೇ ಆಯೋಗವು ಶಿಕ್ಷಣದ ಆಂತರಿಕ ಸ್ವರೂಪದ ವಿಷಯದಲ್ಲಿ ವಿಚಾರ ಮಾಡಲೇ ಇಲ್ಲ. ಶಿಕ್ಷಣವೆಂದರೆ ಒಂದೇ ರೀತಿಯದ್ದಾಗಿರುತ್ತದೆ ಹಾಗೂ ಅದು ಭಾರತದಲ್ಲಿ ನಡೆಯುತ್ತಿರುವ ಆಂಗ್ಲೋ ಇಂಡಿಯನ್ ಶಿಕ್ಷಣವಾಗಿದೆ, ಎಂದು ತಿಳಿದು ಕೊಳ್ಳಲಾಯಿತು. ಇದೊಂದು ಆಶ್ಚರ್ಯಕರವಾದ ಸತ್ಯವಾಗಿದೆ. ಜಗತ್ತಿನಲ್ಲಿ ಎಲ್ಲೆಡೆ ವಿವಿಧ ರೀತಿಯ ಉನ್ನತ ಶಿಕ್ಷಣ ನಡೆಯುತ್ತಿದೆ ಹಾಗೂ ಎಲ್ಲಿಯೂ ಉನ್ನತ ಶಿಕ್ಷಣವನ್ನು ಮಾನವೀಕರಣ ಮತ್ತು ಸಮಾಜವಿಜ್ಞಾನದ ಕ್ಷೇತ್ರದಲ್ಲಿ ವಿದೇಶಿ ಜ್ಞಾನಪರಂಪರೆಗೆ ಪ್ರಮುಖ ಸ್ಥಾನವನ್ನು ನೀಡಲ್ಪಡುವುದಿಲ್ಲ.
ಮಹತ್ವಪೂರ್ಣ ಶಿಕ್ಷಣದಲ್ಲಿ ಆಕಾರವಲ್ಲ, ಅದರಲ್ಲಿ ತಿರುಳು ಇರುತ್ತದೆ. ಆಡಂಬರವಿರುವುದಿಲ್ಲ, ಅದಕ್ಕೆ ಪ್ರಾಣವಿರುತ್ತದೆ. ಶರೀರವಲ್ಲ, ಮೆದುಳು ಇರುತ್ತದೆ. ಯಾವುದೇ ರಾಜಕೀಯ ಆಯೋಗವು ಶಿಕ್ಷಣದ ಆಂತರಿಕ ಭಾಗದ ಬಗ್ಗೆ, ಅದರಲ್ಲಿನ ತಿರುಳಿನ ಬಗ್ಗೆ, ಮರ್ಮದ ಬಗ್ಗೆ ಮತ್ತು ಅದರಲ್ಲಿನ ಬೌದ್ಧಿಕ ಘಟಕಗಳ ವಿಷಯದಲ್ಲಿ ವಿಶ್ಲೇಷಣೆಯನ್ನು ಮಂಡಿಸಲಿಲ್ಲ. ಶಿಕ್ಷಣವು ಒಂದೇ ರೀತಿಯದ್ದಾಗಿರುತ್ತದೆ ಹಾಗೂ ಈಗಿನಂತೇ ಇರುತ್ತದೆ, ಎಂದು ಊಹಿಸಲಾಗಿದೆ. 
೮. ವಿದ್ಯಾಪೀಠಗಳ ಬೆಳವಣಿಗೆ ! 
 ೧೯೪೭ ರ ವರೆಗೆ ಅಖಂಡ ಭಾರತದಲ್ಲಿ ಒಟ್ಟು ೧೪ ಮಹಾವಿದ್ಯಾಲಯಗಳಿದ್ದವು. ಅವುಗಳಲ್ಲಿ ೨ ಲಕ್ಷಗಳಿಗಿಂತಲೂ ಕಡಿಮೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಅಂದರೆ ಪ್ರತಿಯೊಂದು ವಿದ್ಯಾಪೀಠದಲ್ಲಿ ಸರಾಸರಿ ೧೨ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಇಂದು ಭಾರತದ ವಿದ್ಯಾಪೀಠಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೨ ಕೋಟಿಯಷ್ಟಿದೆ. ಅದು ೧೯೪೭ ರ ತುಲನೆಯಲ್ಲಿ ೧೦೦ ಪಟ್ಟು ಹೆಚ್ಚಾಗಿದೆ. ಜನಸಂಖ್ಯೆ ನಾಲ್ಕುಪಟ್ಟು ಹೆಚ್ಚಾಗಿದೆ; ಆದರೆ ಅದರ ತುಲನೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೧೦೦ ಪಟ್ಟು ಹೆಚ್ಚಾಗಿದೆ. ಕೇಂದ್ರೀಯ ವಿದ್ಯಾಪೀಠಗಳ ಸಂಖ್ಯೆ ಕೇವಲ ೪೪, ರಾಜಕೀಯ ಪ್ರಾಂತೀಯ ವಿದ್ಯಾಪೀಠಗಳು ೩೦೬ ಮತ್ತು ಖಾಸಗಿ ವಿದ್ಯಾಪೀಠಗಳು ೧೫೪, ಮಾನ್ಯತೆ ಪಡೆದ ೧೨೯ ವಿದ್ಯಾಪೀಠಗಳಿವೆ ಮತ್ತು ರಾಷ್ಟ್ರೀಯ ಮಹತ್ವವಿರುವ ಇತರ ೬೭ ಶಿಕ್ಷಣಸಂಸ್ಥೆಗಳಿವೆ. ದೂರಶಿಕ್ಷಣ ಕೇಂದ್ರಗಳು ಈ ಕೇಂದ್ರಗಳಿಗಿಂತ ಬೇರೆಯೇ ಆಗಿವೆ. ಇದರಿಂದ ಇಂದಿನ ಶಿಕ್ಷಣಸಂಸ್ಥೆಗಳ ಸಂಖ್ಯೆಯು ೧೯೪೭ ರ ತುಲನೆಯಲ್ಲಿ ೫೦ ಪಟ್ಟು ಹೆಚ್ಚಾಗಿರುವುದು ಸ್ಪಷ್ಟ ವಾಗುತ್ತದೆ. ಆದ್ದರಿಂದ ಇಂದಿನ ಶಿಕ್ಷಣ ಪದ್ಧತಿ ಮತ್ತು ಬ್ರಿಟೀಷರ ಕಾಲದಲ್ಲಿನ ಮೆಕಾಲೆಯ ಶಿಕ್ಷಣ ಪದ್ಧತಿಯು ಸಮಾನವಾಗಿದೆಯೆಂದು ತಿಳಿಯುವುದು ತಪ್ಪಾಗುತ್ತದೆ. ಈ ಶಿಕ್ಷಣಪದ್ಧತಿಯನ್ನು ಭಾರತೀಯರು ತಂದಿದ್ದಾರೆ ಹಾಗೂ ಅದನ್ನು ಸ್ವೇಚ್ಛೆಯಿಂದ ತಂದಿದ್ದಾರೆ. ಈ ಶಿಕ್ಷಣವು ವಿದೇಶಿ ಆಡಳಿತ ಅಥವಾ ದಂಡನೀತಿಯ ಬಲದಿಂದ ರಚಿಸಿದ್ದಲ್ಲ. ಶಿಕ್ಷಣದ ತಿರುಳಿನಲ್ಲಿ ಭಾರತೀಯ ಜ್ಞಾನಪರಂಪರೆಗೆ ಕೇಂದ್ರಸ್ಥಾನವಿಲ್ಲದಿದ್ದರೂ ಅದಕ್ಕೆ ಹೆಚ್ಚುಕಡಿಮೆ ಎಲ್ಲ ಶಕ್ತಿಶಾಲಿ ಸಮೂಹಗಳ ಒಪ್ಪಿಗೆ ಇದೆ. ಕಾಶಿ ಹಿಂದೂ ವಿದ್ಯಾಪೀಠವು ಭಾರತೀಯ ವಿದ್ಯೆಯ ಸ್ಥಿತಿಯ ಒಂದು ದೃಷ್ಟಾಂತವಾಗಿದೆ. ಅದನ್ನು ಭಾರತೀಯ ವಿದ್ಯೆಯ ಜ್ಞಾನಪ್ರಸಾರಕ್ಕಾಗಿ ಸ್ಥಾಪಿಸಲಾಗಿತ್ತು; ಆದರೆ ದೇಶದ ಇಚ್ಛೆಯ ತೀರಾ ವಿರುದ್ಧ ನಾಸ್ತಿಕ ಹಾಗೂ ಭೌತಿಕವಾದಿಗಳು ಈ ವಿದ್ಯಾಪೀಠಗಳನ್ನು ಯುರೋ-ಭಾರತೀಯ ಪರಂಪರೆಯ ಶಾಖೆಯನ್ನಾಗಿಸಿದ್ದಾರೆ.
೯. ಈ ವಿದ್ಯಾಪೀಠಗಳು ಒಬ್ಬನಾದರೂ ದಾರ್ಶನಿಕ, ಸಮಾಜವೈಜ್ಞಾನಿಕ, ರಾಜನೀತಿಜ್ಞನನ್ನು ನಿರ್ಮಿಸದಿರುವುದು !  
ಈ ೭೦೦ ವಿದ್ಯಾಪೀಠಗಳು ಮತ್ತು  ಉನ್ನತ ಶಿಕ್ಷಣ ಕೇಂದ್ರಗಳಿಂದ ಕಳೆದ ೭೦ ವರ್ಷಗಳಲ್ಲಿ ಭಾರತೀಯ ದರ್ಶನಪರಂಪರೆಯ ಸರ್ವೋಚ್ಚ ಪ್ರತಿಭೆಯೆಂದು ಹೇಳುವ ಒಬ್ಬ ದಾರ್ಶನಿಕನೂ ನಿರ್ಮಾಣವಾಗಿಲ್ಲ. ರಾಮಾಯಣ-ಮಹಾಭಾರತ, ಶುಕನೀತಿ, ಕೌಟಿಲ್ಯ ಅರ್ಥಶಾಸ್ತ್ರ , ಕಾಮಂದಕ ನೀತಿ ಮುಂತಾದ ಭಾರತೀಯ ಸ್ರೋತಗಳ ಆಧಾರದಲ್ಲಿ ಯಾವುದೇ ರಾಜಶಾಸ್ತ್ರದಲ್ಲಿನ ಗ್ರಂಥ ಬರೆದಿರುವ ಒಬ್ಬ ರಾಜಶಾಸ್ತ್ರಿಯೂ ನಿರ್ಮಾಣವಾಗಿಲ್ಲ. ಹಿಂದೂ ಧರ್ಮಶಾಸ್ತ್ರವನ್ನು ಕೇಂದ್ರಸ್ಥಾನದಲ್ಲಿಟ್ಟು ಯಾವುದೇ ಸಮಾಜವಿಜ್ಞಾನದ ವಿಷಯದ ಗ್ರಂಥ ಬರೆದಿರುವ ಒಬ್ಬ ಸಹ ಸಮಾಜವೈಜ್ಞಾನಿಕ ಅಥವಾ ಸಮಾಜಶಾಸ್ತ್ರಿ ಮುಂದೆ ಬಂದಿಲ್ಲ, ಭಾರತೀಯ ಅರ್ಥಶಾಸ್ತ್ರವನ್ನು ಆಧಾರವಾಗಿಟ್ಟು ಯಾವುದೇ ಅರ್ಥಶಾಸ್ತ್ರವನ್ನು ವಿಶ್ಲೇಷಣೆ ಮಾಡಿರುವಂತಹ ಒಬ್ಬ ಅರ್ಥತಜ್ಞ ಸಹ ಮುಂದೆ ಬಂದಿಲ್ಲ. ಯೋಗಶಾಸ್ತ್ರದಂತಹ ಅದ್ವಿತೀಯ ಶಾಸ್ತ್ರವನ್ನು ಆಧಾರವಾಗಿಟ್ಟು ಯಾವುದೇ ಮನೋವೈಜ್ಞಾನಿಕ ಗ್ರಂಥವನ್ನು ರಚಿಸಿದ ಒಬ್ಬ ಮನೋವೈಜ್ಞಾನಿಕ ಆಚಾರ್ಯನೂ ನಿರ್ಮಾಣವಾಗಿಲ್ಲ. 
೧೦. ವಿಶ್ವವಿದ್ಯಾಲಯದ ಹೊರಗಿನ ಪ್ರಾಮಾಣಿಕ ವಿದ್ವಾಂಸರ ನೋಂದಣಿ ಮಾಡದಿರುವುದು ! 
ಭಾರತೀಯ ಸಂದರ್ಭಗಳ ಸಮಾನ ಮಹತ್ವವನ್ನು ಪ್ರಮಾಣವೆಂದು ತಿಳಿದು ಇತಿಹಾಸದ ಲೇಖನಗಳನ್ನು ಬರೆಯುವ ಅನೇಕ ಪ್ರತಿಭಾಶಾಲಿಗಳು ಭಾರತದಲ್ಲಿದ್ದಾರೆ. ಅವರಲ್ಲಿ ಶ್ರೀ. ಪುರುಷೋತ್ತಮ ನಾಗೇಶ ಓಕ್, ಶ್ರೀ. ವಿನಾಯಕ ದಾಮೋದರ ಸಾವರಕರ್, ಶ್ರೀ. ಭಗವದ್ದತ್ತ, ಶ್ರೀ. ಯುಧಿಷ್ಠಿರ ಮೀಮಾಂಸಕ, ಶ್ರೀ. ಗುರುದತ್ತ, ಶ್ರೀ. ಸೀತಾರಾಮ ಗೋಯಲ್, ಶ್ರೀ. ರಘುನಂದನ ಶರ್ಮಾ, ಶ್ರೀ. ಚಂದ್ರಗುಪ್ತ ವೇದಾಲಂಕಾರ, ಶ್ರೀ. ಚಿಂತಾಮಣಿ ವಿನಾಯಕ ವೈದ್ಯ, ಶ್ರೀ. ದಶರಥ ಶರ್ಮಾ, ಡಾ. ಬಲರಾಮ ಚಕ್ರವರ್ತಿ, ಶ್ರೀ. ಎ.ಎಸ್. ಆಳ್ತೆಕರ್, ಪಾ. ಜಯಚಂದ್ರ ವಿದ್ಯಾಲಂಕಾರ, ಪಾ. ಸತ್ಯಕೇತು ವಿದ್ಯಾಲಂಕಾರ, ಶ್ರೀ. ರಘುನಾಥ ಸಿಂಹ, ಶ್ರೀ. ವಾಸುದೇವ ಪೋದ್ದಾರ್, ಶ್ರೀ. ವಾಸುದೇವಶರಣ ಅಗ್ರವಾಲ, ಶ್ರೀ. ಗೌರೀಶಂಕರ ಓಝಾ, ಡಾ. ರಾಮಗೋಪಾಲ ಮಿಶ, ಡಾ. ಕಿಶೋರಿ ಶರಣಲಾಲ್ ಮುಂತಾದವರಿದ್ದಾರೆ; ಆದರೆ ಅವರಿಗೆ ಭಾರತೀಯ ವಿದ್ಯಾಪೀಠಗಳು ಮಹತ್ವ ನೀಡಿಲ್ಲ. 
೧೧. ಸತ್ಯನಿಷ್ಠ ಭಾರತೀಯರಲ್ಲಿಯೂ ತಪಶ್ಚರ್ಯದ ಅಭಾವ ! 
ಸತ್ಯನಿಷ್ಠ ಭಾರತೀಯರ ಪ್ರವಾಹದಲ್ಲಿಯೂ ಶೈಕ್ಷಣಿಕಕ್ಷೇತ್ರದಲ್ಲಿ ಪುರುಷಾರ್ಥವನ್ನು ಪ್ರದರ್ಶಿಸುವಹಾಗೂ ತಪಶ್ಚರ್ಯ ಮಾಡುವವರ ಅಭಾವವಿರುವುದೇ ಒಂದು ದೊಡ್ಡ ಕಾರಣವಾಗಿದೆ; ಆದರೆ ಭಾರತೀಯ ರಾಜಶಕ್ತಿಯು ಸೋವಿಯತ್ ಸಂಘದ ಸಹಾಯದಿಂದ ಭೌತಿಕವಾದಿ ಪಂಥದ ಸೇವಕರಿಂದ ಅಪಹರಿಸಲ್ಪಟ್ಟಿರುವುದು ಸಹ ಒಂದು ಮುಖ್ಯ ಕಾರಣವಾಗಿದೆ.  ಇದು ರಾಜಕಾರಣದಲ್ಲಿ ಕಾಂಗ್ರೆಸ್ ಮುಕ್ತ ಭಾರತವೆಂಬ ಘೋಷಣೆ ನೀಡಿದಂತಲ್ಲ; ಆದರೆ ಆಳವಾದ ವಿದ್ಯೆಯ ಸ್ತರದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವವರಿಂದ ಮುಕ್ತಗೊಳಿಸಿ ಸತ್ಯನಿಷ್ಠೆಯುಳ್ಳ ಇತಿಹಾಸ ಮತ್ತು ಭಾರತೀಯ ರಾಜಶಾಸ್ತ್ರ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಬರೆಯುವುದು ಅತ್ಯಂತ ಆವಶ್ಯಕ ವಾಗಿದೆ ಎಂಬುದು ನಿರ್ವಿವಾದಿತ ಸತ್ಯವಾಗಿದೆ. 
೧೨. ಭಾರತೀಯರ ಇಂದಿನ ಸ್ಥಿತಿಗೆ ಭಾರತೀಯರ ದುರ್ಬುದ್ಧಿಯೇ ಕಾರಣ !
  ಉಲ್ಲೇಖಿಸಿದಂತೆ ೧೯೪೭ ರ ನಂತರ ಆಗಿರುವ ಭಾರತೀಯ ಶಿಕ್ಷಣದ ವಿಸ್ತಾರ ಮತ್ತು ಅದಕ್ಕೆ ಸಿಕ್ಕಿರುವ ಸ್ವರೂಪವು ಸಂಪೂರ್ಣವಾಗಿ ಭಾರತೀಯರಿಂದಲೇ ಲಭಿಸಿದೆ ಹಾಗೂ ಅದರ ಹೊಣೆಯೂ ಅವರದ್ದೇ ಆಗಿದೆ. ಅದಕ್ಕಾಗಿ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಮೆಕಾಲೆಯನ್ನು ದೂಷಿಸುತ್ತಿರುವುದು ಅತ್ಯಂತ ಲಜ್ಜಾಸ್ಪದವಾಗಿದೆ. ಮೆಕಾಲೆ ಭಾರತ ಸರಕಾರದ ಪೂರ್ವಜನೂ ಅಲ್ಲ, ಅವನು ಶಾಸಕನೂ ಆಗಿರಲಿಲ್ಲ. ಬೆಟಿಂಗ್ ಸಹ ಒಂದು ದಿನವೂ ಭಾರತದ ಶಾಸಕನಾಗಿರಲಿಲ್ಲ. ೧೯೪೭ ರ ನಂತರ ಭಾರತದಲ್ಲಿ ಬ್ರಿಟೀಷರ ರಾಜ್ಯವಿರಲಿಲ್ಲ. ಹಿಂದೆಯೂ ಅವರ ಸರಕಾರ ಹೆಚ್ಚುಕಡಿಮೆ ಅರ್ಧ ಭಾರತದ ಮೇಲೆ, ಅದೂ ಕೇವಲ ೯೦ ವರ್ಷಗಳ ವರೆಗೆ ಮಾತ್ರ ಇತ್ತು. ಅದರಲ್ಲಿಯೂ ವಿದ್ಯಾಪೀಠಗಳ ಸ್ಥಾಪನೆಯೂ ೧೯೧೬ ರ ನಂತರವೇ ಆಗಿದೆ. ಅಂದರೆ ಕೇವಲ ೩೦ ವರ್ಷಗಳೇ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಕೆಲವೇ ಭಾಗದಲ್ಲಿ ಬ್ರಿಟೀಷರ ಪ್ರಭುತ್ವವಿತ್ತು. ಇದರಲ್ಲಿಯೂ ೧೯೩೭ ರ ನಂತರ ಭಾರತದ ಪ್ರಾಂತ ಗಳಲ್ಲಿ ಭಾರತೀಯ ಜನಪ್ರತಿನಿಧಿಗಳ ಸರಕಾರ ಸ್ಥಾಪನೆಯಾಗಲು ಆರಂಭವಾಗಿತ್ತು, ಅಂದರೆ ಹೆಚ್ಚಿನಂಶ ಎಲ್ಲವೂ ಭಾರತೀಯರ ಮನಸ್ಸಿನಂತೆಯೇ ಆಗಲು ಪ್ರಾರಂಭವಾಗಿತ್ತು. ೧೯೩೭ ರಲ್ಲಿ ಅನೇಕ ಪ್ರಾಂತಗಳಲ್ಲಿ ಕಾಂಗ್ರೆಸ್ಸಿನ ಸರಕಾರ ಸ್ಥಾಪನೆಯಾಗಲು ಆರಂಭವಾಗಿತ್ತು. ಈ ರೀತಿಯಲ್ಲಿ ನೋಡಿದರೆ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಆಂಗ್ಲರ ಮಾರ್ಗದರ್ಶನಕ್ಕನುಸಾರ ಕೇವಲ ೨೦ ವರ್ಷಗಳೇ ವ್ಯವಹಾರ ನಡೆದಿತ್ತು ಹಾಗೂ ಅದು ಸಹ ಕೇವಲ ಬನಾರಸ್, ಮುಂಬಯಿ, ಪಾಟ್ನಾ, ಭಾಗ್ಯನಗರ, ಮೈಸೂರು, ಕೋಲಕಾತಾ, ಢಾಕಾ, ರಂಗೂನ್, ಅಲೀಗಢ, ಲಖನೌ, ದೆಹಲಿ, ನಾಗಪುರ, ಆಗ್ರಾ ಮತ್ತು ಅಣ್ಣಾಮಲೈಗಳಲ್ಲಿ ಮಾತ್ರ !ಭಾರತದಂತಹ ವಿಶಾಲ ದೇಶದಲ್ಲಿ ಇವು ಸಣ್ಣ ಸಣ್ಣ ಅಂಶಗಳೇ ಆಗಿದ್ದವು. ಆದ್ದರಿಂದ ೧೯೪೭ ರ ನಂತರ ಭಾರತದಲ್ಲಿ ಏನೆಲ್ಲ ಆಗಿದೆಯೋ ಅದೆಲ್ಲವೂ ಭಾರತೀಯರ ಸಾಮೂಹಿಕ ಬುದ್ಧಿಯಿಂದಲೇ ಆಗಿದೆ. ೧೯೪೭ ರ ನಂತರ ಇಂದಿನವರೆಗೆ ಉನ್ನತಶಿಕ್ಷಣದ ಕ್ಷೇತ್ರ ದಲ್ಲಿ ಆಗಿರುವ ವಿಸ್ತಾರವು ನಾಸ್ತಿಕ ಭೌತಿಕವಾದಿಗಳ ಪಂಥದ ನಿಯಂತ್ರಣದಲ್ಲಿಯೇ ಆಗಿದೆ. ಈ ಅವಧಿಯಲ್ಲಿ ೧೯೪೭ ರ ಮೊದಲ ತುಲನೆಯಲ್ಲಿ ೫೦ ಪಟ್ಟು ಹೆಚ್ಚು ವಿದ್ಯಾಪೀಠಗಳು ಮತ್ತು ಉನ್ನತ ಶಿಕ್ಷಣದ ಕೇಂದ್ರಗಳು ಸ್ಥಾಪನೆಯಾಗಿವೆ ಮತ್ತು ಅವುಗಳಲ್ಲಿ ಇಂದು ಮೊದಲಿಗಿಂತಲೂ ೧೦೦ ಪಟ್ಟು ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತ್ಯಕ್ಷವಾಗಿ ನಾವು ಇಂಗ್ಲೆಂಡ್ ಮತ್ತು ಇತರ ಯುರೋಪ್ ದೇಶಗಳ ನಕಲು ಮಾಡಿ ಇಲ್ಲಿನ ಶಿಕ್ಷಣವನ್ನು ನಡೆಸುತ್ತೇವೆ, ಎಂಬಂತಹ ಯಾವುದೇ ಅನುಬಂಧವನ್ನು ಭಾರತ ಮಾಡಿಲ್ಲ ಅಥವಾ ಹಾಗೆ ಮಾಡಲು ಸಾಧ್ಯವೂ ಇಲ್ಲ; ಏಕೆಂದರೆ ಹಾಗೆ ಮಾಡಿದರೆ ಭಾರತವು ಸಾರ್ವಭೌಮ ರಾಷ್ಟ್ರವೆನ್ನಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಭಾರತವನ್ನು ಸಾರ್ವಭೌಮ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೇಳಲಾಗಿದೆ.
೧೩. ಇಂದಿನ ಸ್ಥಿತಿಗೆ ಸಮಾಜ ಹೊಣೆಯಲ್ಲ!
ತನ್ನ ಸಾಮರ್ಥ್ಯವನ್ನು ಮರೆತು ಯಾವುದೋ ಸಣ್ಣ ಒಂದು ಕಂಪನಿಯ ಒಬ್ಬ ಅಧಿಕಾರಿಯನ್ನು ತಮ್ಮ ಸ್ಥಿತಿಗೆ ಜವಾಬ್ದಾರನೆಂದು ದೋಷಾರೋಪ ಮಾಡುವುದು, ಈ ಸಾರ್ವಭೌಮ ಪ್ರಜಾಪ್ರಭುತ್ವದ ಬುದ್ಧಿವಾದಿಗಳಿಗೆ ಶೋಭಿಸುವುದಿಲ್ಲ. ನೈತಿಕತೆಯ ಯಾವುದೇ ಸತ್ತ್ವ ಪರೀಕ್ಷೆಯಲ್ಲಿ ಇದು ಯೋಗ್ಯವೆನಿಸುವುದಿಲ್ಲ. ಸ್ವತಂತ್ರಭಾರತದ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಅಪಾರ ಪಾಪಗಳಾಗಿವೆ ಮತ್ತು ನಿಂದನೀಯವೂ ಆಗಿದೆ. ಈ ಪಾಪ ಗಳ ಪೂರ್ಣ ಜವಾಬ್ದಾರಿ ಒಂದು ನಾಸ್ತಿಕ ಭೌತಿಕವಾದಿ ಪಂಥದ ಆಧೀನವಾಗಿ ಮೂಕ ಪ್ರಾಣಿಗಳ ಹಾಗೆ ಕೆಲಸ ಮಾಡುವವರದ್ದಾಗಿದೆ. ಅದಕ್ಕೆ ಸಮಾಜ ಹೊಣೆಯಲ್ಲ. 
೧೪. ಕೊಠಾರಿ ಆಯೋಗದ ಸೂಚನೆಯ ದುರ್ಲಕ್ಷ ! 
 ಕೊಠಾರಿ ಆಯೋಗವು ಸತ್ಯದ ದೃಷ್ಟಿಕೋನದಿಂದ ಜ್ಞಾನ ಪ್ರಾಪ್ತಿ ಮಾಡುವುದು ಮತ್ತು ಪರಂಪರಾಗತ ಜ್ಞಾನವನ್ನು ಸಂಪೂರ್ಣ ಉಪಯೋಗಿಸುವ ವಿಷಯವನ್ನು ಹೇಳಿತ್ತು. ಅದರೊಂದಿಗೆ ರಾಷ್ಟ್ರೀಯ ಚೇತನದ ವಿಕಾಸಕ್ಕಾಗಿ  ಕಾರ್ಯ ಮಾಡುವುದು ಸಹ ಉನ್ನತ ಶಿಕ್ಷಣದ ಧ್ಯೇಯವಾಗಿದೆಯೆಂದು ಆಯೋಗವು ಹೇಳಿತ್ತು. ಸದ್ಯ ನೀಡುತ್ತಿರುವ ಉನ್ನತ ಶಿಕ್ಷಣವು ಇವುಗಳಲ್ಲಿನ ಒಂದೂ ಕಾರ್ಯವನ್ನು ಮಾಡುತ್ತಿಲ್ಲ. ಭಾರತದಲ್ಲಿ ಮಾನವೀ ವಿದ್ಯೆ, ದರ್ಶನಶಾಸ್ತ್ರ, ಮನೋವಿಜ್ಞಾನ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ , ಅರ್ಥಶಾಸ್ತ್ರ  ಮತ್ತು ಭಾರತೀಯ ಸಾಹಿತ್ಯಕ್ಷೇತ್ರಗಳಲ್ಲಿ ಏನೆಲ್ಲ ಕಲಿಸಲಾಗುತ್ತದೆಯೋ, ಅದರಲ್ಲಿ ಸತ್ಯಾಂಶವು ಅತ್ಯಲ್ಪವಾಗಿರುತ್ತದೆ. ಭಾರತದ ಸಾವಿರಾರು ಅಥವಾ ಲಕ್ಷಗಟ್ಟಲೆ ವರ್ಷಗಳ ಅವಧಿಯಲ್ಲಿ ಆಗಿರುವ ಅದ್ವಿತೀಯ ಜ್ಞಾನಸಾಧನೆ, ವಿದ್ಯೆಯ ಈ ಕ್ಷೇತ್ರದಲ್ಲಿ ಆಗಿರುವ ವೈಭವಶಾಲಿ ಹಾಗೂ ಗೌರವಶಾಲಿ ಕಾರ್ಯಗಳು ಇತ್ಯಾದಿ, ಈ ವಿರಾಟ ಸತ್ಯದ ಒಂದು ಅಂಶವೂ ಈಗಿನ ಉನ್ನತ ಶಿಕ್ಷಣದ ಅಸ್ತಿತ್ವದಲ್ಲಿಲ್ಲ. ಇಂದಿನ ಉನ್ನತ ಶಿಕ್ಷಣದಲ್ಲಿ ಪಾರಂಪರಿಕ ಜ್ಞಾನದ ಉಪಯೋಗ ಏನೂ ಆಗುವುದಿಲ್ಲ. ಅಷ್ಟು ಮಾತ್ರವಲ್ಲ, ಹೊಸ ಜ್ಞಾನಪ್ರಾಪ್ತಿಗಾಗಿ ಯಾವುದೇ ಪ್ರಯತ್ನವೂ ವಿದ್ಯಾ ಪೀಠಗಳಿಂದ ಪ್ರಾಮಾಣಿಕವಾಗಿ ಆಗುವುದಿಲ್ಲ.  ಕೊಠಾರಿ ಆಯೋಗ ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಸಮಾಜವಿಜ್ಞಾನ ಮತ್ತು ಮಾನವವಿಜ್ಞಾನ ಇವುಗಳಿಗೆ ಸಾಕಷ್ಟು ಮಹತ್ವ ನೀಡಲು ಸೂಚನೆ ನೀಡಿತ್ತು; ಆದರೆ ಉನ್ನತ ಶಿಕ್ಷಣದಲ್ಲಿ ಭಾರತೀಯ ಸಮಾಜಶಾಸ್ತ್ರ ಮತ್ತು ದರ್ಶನಶಾಸ್ತ್ರ ಇವುಗಳ ಜೊತೆಗೆ ಯಾವುದೇ ಮಾನವವಿಜ್ಞಾನದ ಶಿಕ್ಷಣವು ನಗಣ್ಯವಾಗಿದೆ.   
೧೫. ಪಾರಂಪರಿಕ ಭಾರತೀಯ ಜ್ಞಾನವಿರುವ ಒಬ್ಬ ಕುಲಪತಿಯೂ ಆಗಿಲ್ಲ ! 
ಮಹಾವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಸಾರ್ವಭೌಮತ್ವದ ಕೃತಿಯಾಗಿದೆ ನಿಜ. ಅದೇ ದೃಷ್ಟಿಯಿಂದ ವಿದ್ಯಾಪೀಠಗಳನ್ನು ಸಮಾನ ಪಟ್ಟಿಯಲ್ಲಿಡಲಾಗಿದೆ; ಆದ್ದರಿಂದಲೇ ಕೇಂದ್ರೀಯ ವಿದ್ಯಾಪೀಠಗಳ ಕುಲಪತಿಗಳು ರಾಷ್ಟ್ರಪತಿ ಹಾಗೂ ರಾಜ್ಯಗಳಲ್ಲಿನ ವಿದ್ಯಾಪೀಠಗಳ ಕುಲಪತಿ ಆಯಾ ರಾಜ್ಯಗಳ ರಾಜ್ಯಪಾಲರಾಗಿರುತ್ತಾರೆ. ನಿಜವಾಗಿ ನೋಡಿದರೆ ವ್ಯವಹಾರದ ದೃಷ್ಟಿಯಲ್ಲಿ ಅದಕ್ಕೆ ಏನು ಅರ್ಥವಿದೆಯೆಂದು ತಿಳಿದುಕೊಳ್ಳುವುದು ಕಠಿಣವಾಗಿದೆ. ಇಲ್ಲಿ ಒಂದು ವಿಷಯ ಉಲ್ಲೇಖನೀಯವಾಗಿದೆ, ಅದೇನೆಂದರೆ, ಇಂದಿನ ರಾಷ್ಟ್ರೀಯ ಶಿಕ್ಷಣದ ಸಂರಚನೆಯಿರುವ ಎಲ್ಲ ಕೇಂದ್ರೀಯ ವಿದ್ಯಾಪೀಠಗಳ ನಿಯಂತ್ರಣವು ರಾಷ್ಟ್ರಪತಿಯವರಲ್ಲಿರುತ್ತದೆ; ಆದರೆ ಇಂದಿನವರೆಗೆ ಪಾರಂಪರಿಕ ಭಾರತೀಯ ಜ್ಞಾನದ ವಿದ್ವಾಂಸರಾಗಿರುವ ಅಥವಾ ಮಠ, ಆಶ್ರಮ ಅಥವಾ ಗುರುಕುಲದಂತಹ ಪಾರಂಪರಿಕ ವಿದ್ಯಾಕೇಂದ್ರಗಳಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿದ ಒಬ್ಬ ಕುಲಪತಿಯೂ ನಿರ್ಮಾಣವಾಗಿಲ್ಲ. ಈ ಸ್ಥಿತಿ ಯುರೋಪಿನ ವಿವಿಧ ದೇಶ ಅಥವಾ ಅಮೇರಿಕಾದಲ್ಲಿ ಪೂರ್ಣ ಭಿನ್ನವಾಗಿದೆ. 
೧೬. ಯುರೋಪ್ ಮತ್ತು ಅಮೇರಿಕಾದಲ್ಲಿ ಎಲ್ಲ ರಾಷ್ಟ್ರಪತಿಗಳು ನಿಷ್ಠಾವಂತ  ಕ್ರೈಸ್ತರು ! 
 ಸಂಯುಕ್ತ ರಾಜ್ಯ ಅಮೇರಿಕಾದ ಜಾರ್ಜ್ ವಾಶಿಂಗ್ಟನ್‌ನಿಂದ ಹಿಡಿದು ಬರಾಕ್ ಒಬಾಮಾ ವರೆಗೆ ಎಲ್ಲ ರಾಷ್ಟ್ರಪತಿಗಳು ಕ್ರೈಸ್ತ ಪಂಥದ ನಿಷ್ಠಾವಂತ ವಿದ್ಯಾರ್ಥಿಗಳಾಗಿದ್ದರು. ಇವರೆಲ್ಲರೂ ಒಂದಲ್ಲ ಒಂದು ಕ್ರೈಸ್ತ ಮಠದಲ್ಲಿ ಶಿಕ್ಷಣ ಪಡೆದಿದ್ದಾರೆ. ಮೊದಲ ರಾಷ್ಟ್ರಪತಿ ಜಾರ್ಜ್ ವಾಶಿಂಗ್ಟನ್ ಇವರು ಹೊಗೆಸೊಪ್ಪಿನ ಕೃಷಿ ಮಾಡುತ್ತಾ ಅವರ ಪರಿಸರದಲ್ಲಿದ್ದ ಒಂದು ಚರ್ಚ್‌ನಲ್ಲಿ ಶಿಕ್ಷಣ ಪಡೆದಿದ್ದರು. ಎರಡನೇ ರಾಷ್ಟ್ರಪತಿ ಜಾನ್ ಆಡಮ್ಸ್ ಸಹ ಚರ್ಚ್‌ನಲ್ಲಿಯೇ ಶಿಕ್ಷಣ ಪಡೆದು ಸ್ವಲ್ಪ ಸಮಯ ಪಾದ್ರಿಯೆಂದು ಕೆಲಸ ಮಾಡಿದ್ದರು. ಮೂರನೇ ರಾಷ್ಟ್ರಪತಿ ಥಾಮಸ್ ಜೆಫರ್‌ಸನ್ ಇವರು ಅಧಿಕೃತವಾಗಿ ಚರ್ಚ್‌ನಲ್ಲಿ ಶಿಕ್ಷಣ ಪಡೆದು ಅವರು ಚರ್ಚ್‌ನ ಒಂದು ಘಟಕವಾಗಿದ್ದರು. ಇನ್ನುಳಿದ ರಾಷ್ಟ್ರಪತಿಗಳ ವಿಷಯದಲ್ಲಿಯೂ ಹೀಗೆಯೇ ಇದೆ. ೧೯ ನೇ ರಾಷ್ಟ್ರಪತಿ ಅಬ್ರಾಹಮ್ ಲಿಂಕನ್ ಇವರಿಗೆ ಬಡತನದಿಂದ ಲೌಕಿಕ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ; ಆದರೆ ಚರ್ಚ್‌ನಲ್ಲಿ ಅನಿಯಮಿತವಾಗಿ ಶಿಕ್ಷಣ ಪಡೆದು ಅನಂತರ ೨೦ ವರ್ಷ ಅವರು ಮುಖ್ಯವಾಗಿ ಬೈಬಲ್ ಮತ್ತು ಅದಕ್ಕೆ ಸಂಬಂಧಿಸಿದ ಕಥೆ ಮತ್ತು ಪ್ರವಚನಗಳನ್ನು ಓದುತ್ತಿದ್ದರು. ಅಮೇರಿಕಾದಲ್ಲಿ ಇಷ್ಟರವರೆಗಿನ ರಾಷ್ಟ್ರಪತಿಗಳಲ್ಲಿ ಚರ್ಚ್‌ಗಳಲ್ಲಿ ಮೂಲ ಶಿಕ್ಷಣ ಪಡೆಯದಿರುವ ಒಬ್ಬರೂ ಇಲ್ಲ. ಈಗಿನ ರಾಷ್ಟ್ರಪತಿ  ಬರಾಕ್ ಒಬಾಮಾ ಸಹ ಚರ್ಚ್‌ನಲ್ಲಿ ಶಿಕ್ಷಣ ಪಡೆದು ಪಾದ್ರಿ ಮೂಲಕ ನಡೆಸಲ್ಪಡುತ್ತಿದ್ದ ಒಂದು ಸಂಸ್ಥೆಯಲ್ಲೇಮೊದಲ ನೌಕರಿ ಮಾಡಿದರು. ಇದೇ ರೀತಿ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಯುರೋಪ್ ದೇಶಗಳಲ್ಲಿ ರಾಷ್ಟ್ರಪತಿ, ರಾಜ-ರಾಣಿ ಇವರೆಲ್ಲ ಚರ್ಚ್‌ನಲ್ಲಿ ದೀಕ್ಷೆ ಪಡೆದವರಾಗಿದ್ದಾರೆ. ಅವರೆಲ್ಲರ ಶಿಕ್ಷಣ ಚರ್ಚ್‌ಗಳ ಮೂಲಕ ನಡೆಸಲ್ಪಡುವ ಶಾಲೆಗಳಲ್ಲಾಗಿದೆ. ಅವರೆಲ್ಲ ಬೈಬಲ್ ಮತ್ತು ಇತರ ಕ್ರೈಸ್ತ ಧರ್ಮಗ್ರಂಥಗಳ ಅಧ್ಯಯನ ಮಾಡಿದ್ದಾರೆ.  (ಮುಂದುವರಿಯವುದು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಷ್ಟ್ರೀಯ ಶಿಕ್ಷಣದ ಪುನರ್‌ರಚನೆ ಆವಶ್ಯಕ !