ಸುಸಂಸ್ಕಾರವನ್ನು ನೀಡುವ ಬೋಧಕಥೆ !

ಕಲಿಯುಗದಲ್ಲಾದ ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳ ದಯನೀಯ ಸ್ಥಿತಿ !
ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ನಮ್ಮ ಸಂಪೂರ್ಣ ಗಮನ ಗುರಿಯ ಮೇಲಿದ್ದರೆ ಮಾತ್ರ ಹೇಗೆ ಯಶಸ್ವಿಯಾಗುತ್ತೇವೆ, ಎಂಬುದು ತಿಳಿಯುತ್ತದೆ.
೧. ತೀರ್ಥಕ್ಷೇತ್ರಗಳ ಸ್ಥಿತಿ
‘ನಾರದಮುನಿಗಳು ಸನಕಾದಿ ಋಷಿಗಳಿಗೆ ಖಿನ್ನಮನಸ್ಸಿನಿಂದ ನುಡಿದರು, ‘ಪೃಥ್ವಿಯು (ಮನುಷ್ಯಲೋಕ) ಎಲ್ಲಕ್ಕಿಂತ ಉತ್ತಮ ಸ್ಥಾನವಾಗಿದೆ’, ಎಂದು ತಿಳಿದು ನಾನು ಪುಷ್ಕರ, ಪ್ರಯಾಗ, ಕಾಶಿ, ಗೋದಾವರಿ, ಹರಿಕ್ಷೇತ್ರ, ಕುರುಕ್ಷೇತ್ರ, ಶ್ರೀರಂಗ, ಸೇತುಬಂಧ ಮುಂತಾದ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಟೆನು; ಆದರೆ ಈ ಎಲ್ಲ  ಪವಿತ್ರ ಸ್ಥಳಗಳಲ್ಲಿ ವ್ಯಭಿಚಾರ, ದುರಾಚಾರ ಮುಂತಾದ ಕಲಿಯುಗದ ದೋಷಗಳು ಅಧಿಕವಾಗಿ ಪ್ರಕಟಗೊಂಡಿರುವುದನ್ನು ನೋಡಿದೆನು.

ಬೇಸರಗೊಂಡು ಕೊನೆಗೆ ನಾನು ಮನಃಶಾಂತಿ ಪಡೆಯಲು ಶ್ರೀಕೃಷ್ಣನು ಲೀಲೆ ರಚಿಸಿದ ಯಮುನೆಯ ತೀರದಲ್ಲಿರುವ ವೃಂದಾವನಕ್ಕೆ ಹೋದೆನು ಮತ್ತು ಅಲ್ಲಿ ನಾನು ಒಂದು ವಿಚಿತ್ರವಾದ ಸಂಗತಿಯನ್ನು ಕಂಡೆನು.
೨. ಶೋಕದಿಂದ ಆಲಾಪಿಸುತ್ತಿರುವ ತರುಣ ಸ್ತ್ರೀ ಮತ್ತು  ಅಕಾಲಿಕವಾಗಿ ವೃದ್ಧರಾಗಿರುವ ಅವಳ ಇಬ್ಬರು ಪುತ್ರರು
 ಅಲ್ಲಿ ಒಬ್ಬ ತರುಣ ಸ್ತ್ರೀ ಕುಳಿತಿದ್ದಳು, ಅವಳ ಎರಡೂ ಕೈಗಳ ಪಕ್ಕದಲ್ಲಿ ಅಕಾಲಿಕವಾಗಿ ವೃದ್ಧರಾಗಿರುವ ಅವಳ ಇಬ್ಬರು ಪುತ್ರರು ನಿದ್ರಾವಸ್ಥೆಯಲ್ಲಿ ಬಿದ್ದಿದ್ದರು. ಆ ಸ್ತ್ರೀ ತನ್ನಿಬ್ಬರು ಮಕ್ಕಳ ಸೇವೆಯನ್ನು ಮಾಡುತ್ತಾ ಅಳುತ್ತ ಅವರನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಳು. ಆ ಸ್ತ್ರೀಯ ಸುತ್ತಲೂ ಇದ್ದ ನೂರಾರು ಸ್ತ್ರೀಯರು ಅವಳಿಗೆ ಗಾಳಿಯನ್ನು ಬೀಸುತ್ತಾ ಅವಳನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು; ಆದರೆ ಆ ಸ್ತ್ರೀ ಅತ್ಯಂತ ವ್ಯಾಕುಲತೆಯಿಂದ ಹತ್ತೂ ದಿಕ್ಕುಗಳಿಂದ ತನ್ನ ದೇಹರಕ್ಷಣೆಗಾಗಿ ದೇವರಿಗೆ ಮೊರೆಯಿಡುತ್ತಿದ್ದಳು. ನನ್ನನ್ನು ನೋಡಿ ಅವಳು ಕೂಡಲೇ ಎದ್ದು ನಿಂತಳು ಮತ್ತು ದೀನಳಾಗಿ ‘ಹೇ ಸತ್ಪುರುಷಾ, ತಮ್ಮ ಶುಭದರ್ಶನದಿಂದ ಜನರ ಪಾಪಗಳು ನಾಶಗೊಳ್ಳುತ್ತವೆ ಮತ್ತು ದುಃಖದ ಸಂದರ್ಭದಲ್ಲಿ ಮನಸ್ಸಿಗೆ ಶಾಂತಿ ದೊರೆಯುತ್ತದೆ. ತಮ್ಮಂತಹ ಪವಿತ್ರ ಸಂತರ ದರ್ಶನ ನನಗಾಗಿದೆ. ಇದು ನನ್ನ ಪರಮಭಾಗ್ಯವಾಗಿದೆ’ ಎಂದು ನುಡಿದಳು.
೩. ತರುಣ ಸ್ತ್ರೀ ಎಂದರೆ ಭಕ್ತಿ ಮತ್ತು ಇಬ್ಬರು ಪುತ್ರರೆಂದರೆ ಜ್ಞಾನ ಮತ್ತು ವೈರಾಗ್ಯ
ಆಗ ನಾರದರು ಆ ಸ್ತ್ರೀಯನ್ನು ಉದ್ದೇಶಿಸಿ, ‘ಹೇ ದೇವಿ, ನೀನ್ಯಾರು ? ಈ ಇಬ್ಬರು ಮಕ್ಕಳು ಯಾರು ? ಮತ್ತು ನಿನ್ನ ಸುತ್ತಲಿರುವ ನೂರಾರು ಕಮಲನೇತ್ರಗಳುಳ್ಳ ಸ್ತ್ರೀಯರು ಯಾರು ? ನಿನ್ನ ದುಃಖಕ್ಕೆ ಕಾರಣವೇನು ? ಇದನ್ನೆಲ್ಲ ನನಗೆ ಸವಿಸ್ತಾರವಾಗಿ ಹೇಳು ಎಂದು ಹೇಳಿದರು. ಆಗ ಆ ತರುಣ ಸ್ತ್ರೀ ‘‘ಹೇ ಸತ್ಪುರುಷರೇ, ನನ್ನನ್ನು ಭಕ್ತಿ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ ಮತ್ತು ಇವರಿಬ್ಬರೂ ನನ್ನ ಪುತ್ರರಾಗಿದ್ದು ಜ್ಞಾನ ಮತ್ತು ವೈರಾಗ್ಯವಾಗಿದ್ದಾರೆ. ನನ್ನ ಸೇವೆ ಮಾಡುವ ಈ ಸ್ತ್ರೀಯರೆಂದರೆ, ಗಂಗಾ, ಗೋದಾವರಿ ಮುಂತಾದ ಪವಿತ್ರ ನದಿಗಳಾಗಿವೆ. ದೇವರು ಮತ್ತು ಋಷಿಮುನಿಗಳು ಸಹ ನನ್ನ ಸೇವೆಯನ್ನು ಮಾಡುತ್ತಾರೆ; ಆದರೂ ನನ್ನ ಹೃದಯದಲ್ಲಿ ಸುಖ ಮತ್ತು ಶಾಂತಿ ನೆಲೆಸುತ್ತಿಲ್ಲ; ಏಕೆಂದರೆ ನಾನು (ಭಕ್ತಿ) ಮತ್ತು ನನ್ನ ಇಬ್ಬರು ಪುತ್ರರು (ಜ್ಞಾನ ಮತ್ತು ವೈರಾಗ್ಯ) ಒಂದಾಗಿ  ಈ ಭೂಮಿಯ ಮೇಲೆ ಕಾರ್ಯನಿರತರಾಗಿದ್ದರೂ, ನಾನು ತರುಣಿಯಾಗಿಯೇ ಉಳಿದೆನು; ಆದರೆ ನನ್ನ ಈ ಇಬ್ಬರೂ ಮಕ್ಕಳು ಮಾತ್ರ ಅಕಾಲಿಕವಾಗಿ ವೃದ್ಧರಾದರು. ಈ ಅನಾಹುತ ಹೇಗಾಯಿತು ಎಂಬುದು ನನಗೆ ಬಹಳ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ ಮತ್ತು ನನ್ನ ಹೃದಯ ದುಃಖಿತವಾಗಿದೆ. ಆದ್ದರಿಂದ ಹೇ ಋಷಿಯೇ, ಹೇ ಬುದ್ಧಿವಂತ ಸತ್ಪುರುಷರೇ, ನೀವೇ ನನಗೆ ಇದರ ಕಾರಣವನ್ನು ತಿಳಿಸಿ ಹೇಳಿ’’ ಎಂದು ಕೇಳಿದಳು.
೪. ಕಲಿಯುಗದ ಪ್ರಭಾವದಿಂದ ಜ್ಞಾನ ಮತ್ತು ವೈರಾಗ್ಯ ಅಶಕ್ತರು ಮತ್ತು ನಿಷ್ಕ್ರಿಯರಾಗುವುದು
ಆಗ ನಾರದರು, ‘ಹೇ ನಿರ್ದೋಷಿ ಭಕ್ತಿ, ಶ್ರೀಕೃಷ್ಣನು ಪ್ರಸನ್ನನಾಗಿ ನಿನಗೆ ಮುಕ್ತಿರೂಪದ ದಾಸಿ, ಜ್ಞಾನ ಹಾಗೂ ವೈರಾಗ್ಯರೂಪದ ಇಬ್ಬರು ಪುತ್ರರಾಗುವರೆಂದು ವರವನ್ನು ನೀಡಿದ್ದನು. ಈ ಪರಿವಾರದೊಂದಿಗೆ ನೀನು ಸತ್ಯಯುಗದಿಂದ ದ್ವಾಪರಯುಗದವರೆಗೆ ಬಹಳ ಸುಖಸಮಾಧಾನದಲ್ಲಿ ಬಾಳಿರುವೆ; ಆದರೆ ಕಲಿಯುಗದ ಪ್ರಭಾವದಿಂದ ಈ ನಿನ್ನ ಇಬ್ಬರೂ ಪುತ್ರರು (ಜ್ಞಾನ ಮತ್ತು ವೈರಾಗ್ಯ) ಅಶಕ್ತರು ಮತ್ತು ವೃದ್ಧರಾಗಿ ನಿಷ್ಕ್ರಿಯರಾಗಿದ್ದಾರೆ’ ಎಂದು ಹೇಳಿದರು.
೫. ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳ ಸ್ಥಿತಿಯನ್ನು ನೋಡಿ ನಾರದಮುನಿಗಳು ಚಿಂತಾಕ್ರಾಂತರಾಗುವುದು
ಭಕ್ತಿಯ ಈ ಉದ್ವಿಗ್ನಾವಸ್ಥೆಯನ್ನು ನೋಡಿ ನಾರದರಿಗೆ ಅವಳ ಮೇಲೆ ದಯೆಯುಂಟಾಯಿತು. ವೇದವೇದಾಂತಗಳನ್ನು ಉಚ್ಚ ಸ್ವರದಲ್ಲಿ ಉಚ್ಛರಿಸುತ್ತಾ ನಾರದಮುನಿಗಳು ಆ ಇಬ್ಬರು ಪುತ್ರರನ್ನು ನಿದ್ರೆಯಿಂದ ಎಚ್ಚರಗೊಳಿಸುವ ಪ್ರಯತ್ನ ಮಾಡತೊಡಗಿದರು; ಆದರೆ ಹಸಿವಿನಿಂದ ಅಶಕ್ತ ಮತ್ತು ಒಣಗಿದ ಕಡ್ಡಿಯಂತಾಗಿದ್ದ ಆ ಇಬ್ಬರೂ ಮಕ್ಕಳು ಸೋಮಾರಿತನದಿಂದ ಆಕಳಿಸುತ್ತಾ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದರು ಮತ್ತು ಪದೇಪದೇ ಕುಸಿದು ಕೆಳಗೆ ಬೀಳುತ್ತಿದ್ದರು. ಜ್ಞಾನ ಮತ್ತು ವೈರಾಗ್ಯಗಳ ಈ ಸ್ಥಿತಿಯನ್ನು ನೋಡಿ ನಾರದಮುನಿಗಳು ಚಿಂತಾಕ್ರಾಂತರಾದರು.
೬. ಭಗವಂತನ ಲೀಲೆಯ ಚರಿತ್ರೆಯ ಕಥೆಯನ್ನು ಶ್ರವಣ ಮಾಡುವುದರಿಂದ ಜ್ಞಾನ ಮತ್ತು ವೈರಾಗ್ಯಗಳು ಎದ್ದೇಳುವುದು
ಅಷ್ಟರಲ್ಲಿಯೇ ಅಕಸ್ಮಿಕವಾಗಿ ಆಕಾಶವಾಣಿಯಾಯಿತು, ‘ಅನೇಕ ಜನ್ಮಗಳ ಪುಣ್ಯ ಒಂದುಗೂಡಿದರೆ ಸತ್ಪುರುಷರ ಸಹವಾಸ ಲಭಿಸುತ್ತದೆ. ಸತ್ಪುರುಷರ ಆಧಾರದಿಂದ ಪ್ರಕಟಗೊಳ್ಳುವ ಭಗವಂತನ ಲೀಲೆಯ ಚರಿತ್ರೆಯ ಕಥೆಯನ್ನು ಶ್ರವಣ ಮಾಡುವುದರಿಂದ ಜ್ಞಾನ ಮತ್ತು ವೈರಾಗ್ಯಗಳ ಉದಯವಾಗುತ್ತದೆ. ಭಕ್ತಿ ಸಹ ಜ್ಞಾನ ಮತ್ತು ವೈರಾಗ್ಯಗಳೊಂದಿಗೆ ಸತ್ಪುರುಷರ ಆಧಾರದಿಂದ ವಿಕಸಿತಗೊಳ್ಳುತ್ತದೆ.’ ಇದು  ಭಾಗವತ ಗ್ರಂಥರಚನೆಯ  ರೂಪಕ ಕಥೆಯಾಗಿದೆ.
೭. ನಿಷ್ಕಾಮ ವ್ರತದ ಆಚರಣೆಯನ್ನು ಮಾಡುವ ಸಂತಪುರುಷರ
ಸಾನ್ನಿಧ್ಯದಿಂದ ಜ್ಞಾನ ಮತ್ತು ವೈರಾಗ್ಯದಿಂದ ಕೂಡಿದ ಭಕ್ತಿಯ ಮೂಲಕ ಮೋಕ್ಷ ದೊರೆಯುವುದು
ಈ ಕಥೆಯಿಂದ ಸ್ಪಷ್ಟವಾಗುವ ಒಂದು ವಿಷಯವೆಂದರೆ, ಜ್ಞಾನ ಮತ್ತು ವೈರಾಗ್ಯದ ಅಭಾವದಿಂದ ಭಕ್ತಿಮಾರ್ಗವು ಕಲುಷಿತಗೊಳ್ಳುತ್ತದೆ. ಅದನ್ನು ನಷ್ಟ ಗೊಳಿಸಲು ಮತ್ತು ಜ್ಞಾನ ಹಾಗೂ ವೈರಾಗ್ಯದಿಂದ ಕೂಡಿದ ಭಕ್ತಿಯ ಮೂಲಕ ಮೋಕ್ಷವನ್ನು ದೊರಕಿಸಿಕೊಳ್ಳಲು ನಿಷ್ಕಾಮ ವ್ರತದ ಆಚರಣೆಯನ್ನು ಮಾಡುವ ಸಂತಪುರುಷರ ಸಾನ್ನಿಧ್ಯವು ಅನಿವಾರ್ಯವಾಗಿ ಆವಶ್ಯಕವಾಗಿದೆ.
- ಪೂರ್ಣಿಮಾ ದವೆ (ಮಹಾರಾಷ್ಟ್ರ ಟೈಮ್ಸ್, ೬.೧೨.೧೯೯೫)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆ !