ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !

ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸು ತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ನಮ್ಮಲ್ಲಿ ಉದಾರತೆ ಹೇಗಿರಬೇಕು ಎಂಬುದು ತಿಳಿಯುತ್ತದೆ.
ಅತಿಥಿಗಳನ್ನು ಪರಾಙ್ಮುಖಗೊಳಿಸದಿರುವ ಕರ್ಣ !
ಒಂದು ದಿನ ಭಗವಾನ್ ಶ್ರೀಕೃಷ್ಣನು ಪಾಂಡವರೊಂದಿಗೆ ಮಾತನಾಡುವಾಗ ಕರ್ಣನ ಔದಾರ್ಯದ ಬಗ್ಗೆ ಪದೇಪದೇ ಪ್ರಶಂಸಿಸತೊಡಗಿದನು. ಅದು ಅರ್ಜುನನಿಗೆ ಹಿಡಿಸಲಿಲ್ಲ. ಆಗ ಅವನು ಶ್ರೀಕೃಷ್ಣನಿಗೆ, ‘ಹೇ ಶ್ರೀಕೃಷಾ, ನನ್ನ ಹಿರಿಯ ಅಣ್ಣ ಧರ್ಮರಾಜನಷ್ಟು ಔದಾರ್ಯವುಳ್ಳವರು ಯಾರೂ ಇಲ್ಲ. ಹಾಗಾದರೆ ನೀನು ಅವನ ಎದುರಿಗೆ ಕರ್ಣನ ಬಗ್ಗೆ ಇಷ್ಟೊಂದು ಪ್ರಶಂಸೆ ಏಕೆ ಮಾಡುತ್ತಿರುವೆ ?’ ಎಂದನು. ಆಗ ಶ್ರೀಕೃಷ್ಣನು ‘ಈ ಬಗ್ಗೆ ನಾನು ನಿನಗೆ ಮುಂದೆ ಎಂದಾದರೂ ತಿಳಿಸುತ್ತೇನೆ’ ಎಂದು ಹೇಳಿ ಭಗವಂತನು ಆ ವಿಷಯವನ್ನು ಅಲ್ಲಿಯೇ ನಿಲ್ಲಿಸಿದನು.

ಕೆಲವು ದಿನಗಳ ನಂತರ ಶ್ರೀಕೃಷ್ಣನು ಅರ್ಜುನನ್ನು ಜೊತೆಗೆ ಕರೆದುಕೊಂಡು ಬ್ರಾಹ್ಮಣನ ವೇಷ ಧರಿಸಿ ಧರ್ಮರಾಜ ಯುಧಿಷ್ಠಿರನ ಅರಮನೆಗೆ ಹೋದನು ಮತ್ತು ಅವನನ್ನು ಭೇಟಿಯಾಗಿ, ‘ನಮಗೆ ಒಂದು ಮಣ ಶ್ರೀಗಂಧದ ಒಣ ಕಟ್ಟಿಗೆ ಬೇಕಾಗಿತ್ತು. ದಯವಿಟ್ಟು ಅದನ್ನು ದೊರಕಿಸಿ ಕೊಡಬೇಕೆಂದು ಪ್ರಾರ್ಥನೆ’ ಎಂದನು. ಯುಧಿಷ್ಠಿರನು ಅವರನ್ನು ಗುರುತಿಸಲಿಲ್ಲ. ಅವನು ಆ ಬ್ರಾಹ್ಮಣರನ್ನು ಕುಳಿತುಕೊಳ್ಳಲು ಹೇಳಿದನು ಮತ್ತು ಸೇವಕರನ್ನು ಕರೆದು ಶ್ರೀಗಂಧದ ಒಣ ಕಟ್ಟಿಗೆ ತೆಗೆದುಕೊಂಡು ಬರಲು ಆಜ್ಞೆ ಮಾಡಿದನು.
ಆ ದಿನ ಹೊರಗಡೆ ಭಾರಿ ಮಳೆ ಬೀಳುತ್ತಿರುವುದರಿಂದ; ಯುಧಿಷ್ಠಿರನ ಸೇವಕರಿಗೆ ಶ್ರೀಗಂಧದ ಕೇವಲ ಒಂದು ಸೇರು ತೂಕದಷ್ಟು ಒಣ ಕಟ್ಟಿಗೆ ಸಿಕ್ಕಿದವು. ಆಗ ಯುಧಿಷ್ಠಿರನು ಆ ಬ್ರಾಹ್ಮಣರನ್ನು ಉದ್ದೇಶಿಸಿ ‘ಮಹಾಶಯರೇ, ಇಂದು ಸಾಕಷ್ಟು ಪ್ರಯತ್ನ ಪಟ್ಟರೂ ಒಣ ಶ್ರೀಗಂಧದ ಕಟ್ಟಿಗೆ ಸಿಗಲಿಲ್ಲ. ಸ್ವಲ್ಪ ಮಾತ್ರ ಸಿಕ್ಕಿವೆ ಅಷ್ಟು ತೆಗೆದುಕೊಂಡು ಹೋಗಿರಿ. ಮತ್ತೇನಾದರೂ ಬೇಕಿದ್ದರೆ, ಹೇಳಿರಿ’ ಎಂದು ಕೈಮುಗಿದು ಹೇಳಿದನು. ಆಗ ಭಗವಂತನು, ‘ಒಣ ಶ್ರೀಗಂಧದ ಕಟ್ಟಿಗೆ ಇಲ್ಲದಿದ್ದರೆ ನಮಗೆ ಬೇರೆ ಇನ್ನೇನೂ ಬೇಡ’ ಎಂದನು.
ಅನಂತರ ಅವರಿಬ್ಬರೂ ಕರ್ಣನ ಅರಮನೆಗೆ ಹೋದರು ಮತ್ತು ಅವನಲ್ಲಿಯೂ ಒಂದು ಮಣ ಶ್ರೀಗಂಧದ ಕಟ್ಟಿಗೆ ಬೇಡಿದರು. ಆಗ ಕರ್ಣನು, ‘ಬ್ರಾಹ್ಮಣರೇ, ಹೊರಗಡೆ ಭಾರಿ ಮಳೆ ಬೀಳುತ್ತಿರುವು ದರಿಂದ ಒಣಗಿದ ಶ್ರೀಗಂಧದ ಕಟ್ಟಿಗೆಗಾಗಿ ತುಂಬ ಹುಡುಕಬೇಕಾಗಬಹುದು ಮತ್ತು ಅದರಿಂದ ನೀವು ತುಂಬ ಸಮಯದ ವರೆಗೆ ಕಾಯಬೇಕಾಗಬಹುದು. ಅದಕ್ಕಿಂತ ನಾನು ನಿಮಗೆ ನನ್ನ ಮನೆಯಲ್ಲಿರುವ ಶ್ರೀಗಂಧದ ಕಟ್ಟಿಗೆ ನೀಡುತ್ತೇನೆ’ ಎಂದನು. ನಂತರ ಅವನು ಬತ್ತಳಿಕೆಯಲ್ಲಿನ ಬಾಣ ತೆಗೆದು ಅದನ್ನು ಧನುಷ್ಯದ ಮೇಲೆರಿಸಿ ತನ್ನ ಅರಮನೆಯಲ್ಲಿನ ಶ್ರೀಗಂಧದ ಮಂಚ, ಚೌಕಾಕಾರದ ಆಸನ, ಬಾಗಿಲು ಮತ್ತು ಅವುಗಳ ಚೌಕಟ್ಟು ಅದೇ ರೀತಿ ಗೋಡೆಯ ಮೇಲಿನ ಸುಂದರವಾದ ಕಮಾನುಗಳನ್ನು ಮತ್ತು ದೀಪಸ್ತಂಭಗಳನ್ನು ಮುರಿದು ಆ ಎಲ್ಲ ಶ್ರೀಗಂಧದ ಕಟ್ಟಿಗೆಗಳನ್ನು ಒಂದುಗೂಡಿಸಿ ಸರಿಯಾಗಿ ಕಟ್ಟಿ ಅವುಗಳನ್ನು ಬ್ರಾಹ್ಮಣರಿಗೆ ಕೊಟ್ಟನು.
ಆಗ ಭಗವಂತನು, ‘ತಾವು ನಮಗಾಗಿ ಇಷ್ಟೊಂದು ಬೆಲೆಬಾಳುವ ವಸ್ತುಗಳನ್ನು ಏಕೆ ನಷ್ಟಗೊಳಿಸಿದಿರಿ ?’ ಎಂದು ಕೇಳಿದಾಗ ಕರ್ಣನು, ‘ಈ ವಸ್ತುಗಳನ್ನು ಪುನಃ ಯಾವಾಗ ಬೇಕಾದರೂ ಮಾಡಬಹುದು; ಆದರೆ ನನ್ನ ಮನೆಯ ಬಾಗಿಲಿಗೆ ಬೇಡುವ ಉದ್ದೇಶದಿಂದ ಬಂದಿರುವ ಅತಿಥಿಯು ಖಾಲಿ ಕೈಗಳಿಂದ ನಿರಾಸೆಯಾಗಿ ಹಿಂತಿರುಗಿದರೆ, ಆ ದುಃಖವು ನನ್ನ ಹೃದಯದಿಂದ ಎಂದಿಗೂ ದೂರವಾಗಲಾರದು’ ಎಂದನು. ಭಗವಂತನು ಅವನಿಗೆ ಆಶೀರ್ವಾದಗಳನ್ನು ನೀಡಿ ಅವರಿಬ್ಬರೂ ಹೊರಟರು.
ದಾರಿಯಲ್ಲಿ ಹೋಗುವಾಗ ಭಗವಂತನು ಅರ್ಜುನ ನಿಗೆ, ‘ಕರ್ಣನ ಸ್ವಭಾವವೇ ಔದಾರ್ಯವಾಗಿದೆ, ಎನ್ನು ವುದು ಗಮನಕ್ಕೆ ಬಂದಿತಲ್ಲವೇ ?’ ಎಂದನು.
(ಸಾಪ್ತಾಹಿಕ ಜಯ ಹನುಮಾನ ೮..೨೦೧೦)
(ಟಿಪ್ಪಣಿ : ಇಲ್ಲಿ ಕರ್ಣ ಮತ್ತು ಯುಧಿಷ್ಠಿರನ ತುಲನೆ ಮಾಡುವ ಉದ್ದೇಶವಿರದೇ ‘ಔದಾರ್ಯವು ಹೇಗಿರಬೇಕು, ಎನ್ನುವುದನ್ನು ಹೇಳುವ ಉದ್ದೇಶವಿದೆ. - ಸಂಪಾದಕರು)
&..............................................................

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !