ಮೋದಿ ಸರಕಾರದ ವಿರುದ್ಧ ಕೋಲಾಹಲವೆಬ್ಬಿಸುವ ಎಲ್ಲ ಮಾಧ್ಯಮಗಳ ವಿಶ್ವಾಸಾರ್ಹತೆ ಎಷ್ಟು ?

ಶ್ರೀ. ಭಾವೂ ತೋರ್ಸೆಕರ್
ಇತ್ತೀಚೆಗೆ ಟೈಮ್ಸ್ ನೌ ಎಂಬ ಆಂಗ್ಲ ವಾರ್ತಾವಾಹಿನಿಯ ಅರ್ಣಬ್ ಗೋಸ್ವಾಮಿ ಎಂಬವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೀರ್ಘ ಸಂದರ್ಶನ ನೀಡಿದರು. ಅಧಿಕಾರ ಸ್ವೀಕರಿಸಿದ ೨೫ ತಿಂಗಳು ಗಳ ನಂತರ ಮೋದಿಯವರು ಯಾವುದಾದರೊಂದು ಮಾಧ್ಯಮ ಅಥವಾ ಪತ್ರಕರ್ತನಿಗೆ ಬಹಿರಂಗ ಸಂದರ್ಶನ ನೀಡಿದ್ದಾರೆ. ಇದರಿಂದ ಅನೇಕ ಹೆಸರಾಂತ ಸಂಪಾದಕ ಪತ್ರಕರ್ತರು ಅಸ್ಥಿರವಾಗುವುದರಲ್ಲಿ ಆಶ್ಚರ್ಯವೇನಿಲ್ಲ; ಆದರೆ ಅದಕ್ಕಿಂತಲೂ ಆಶ್ಚರ್ಯದ ವಿಷಯವೆಂದರೆ, ಈ ಸಂದರ್ಶನವು ಆಧುನಿಕ ಪ್ರಸಿದ್ಧಿಮಾಧ್ಯಮಗಳಲ್ಲಿ ಒಂದು ಹೊಸ ವಿಕ್ರಮವನ್ನು ಸ್ಥಾಪಿಸಿದೆ. ಟೈಮ್ಸ್ ನೌ ವಾಹಿನಿಯು ಕಳೆದ ಹಲವು ತಿಂಗಳಲ್ಲಿ ಉಳಿದ ಆಂಗ್ಲ ವಾರ್ತಾವಾಹಿನಿಗಳನ್ನು ಗಣನೆಗೆ ಇಲ್ಲವೆಂಬಂತೆ ಮಾಡಿಯೇ ಇತ್ತು. ಈಗ ಮೋದಿಯವರ ಈ ಸಂದರ್ಶನವು ಅವರನ್ನು ಇನ್ನಷ್ಟು ಅವಮಾನಿಸಿದೆ. ಈ ನಿಮಿತ್ತದಿಂದ ತನ್ನನ್ನು ತಾನೇ ಹೊಗಳಿಕೊಳ್ಳುತ್ತಾ, ಟೈಮ್ಸ್ ನೌ, ಈ ವಾಹಿನಿಯು ಈಗ ಮಾಧ್ಯಮಗಳ ಮತ್ತು ವಾರ್ತೆಗಳ ಅಜೆಂಡಾವನ್ನು ನಿರ್ಧರಿಸುತ್ತಿದೆ ಎಂದು ಹೇಳಿದೆ; ಆದರೆ ಇದೇ ವಾಹಿನಿಯು ಕಳೆದ ಕೆಲವು ತಿಂಗಳುಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಎಬ್ಬಿಸಿದ ಕೋಲಾಹಲವನ್ನು ನೋಡಿದರೆ, ಅದರ ಯಶಸ್ಸಿನ ಕಾರಣಗಳು ನಮಗೆ ಮನವರಿಕೆಯಾಗಬಹುದು. ಮೋದಿಯವರು ನಿರ್ಧಿಷ್ಟವಾಗಿ ಇಂತಹ ವಾಹಿನಿ ಮತ್ತು ಪತ್ರಕರ್ತನಿಗೆ ದೀರ್ಘ ಸಂದರ್ಶನ ನೀಡಿ ಉಳಿದ ವಾಹಿನಿಗಳ ಮತ್ತು ಮಾಧ್ಯಮಗಳ ಮಹತ್ವವನ್ನು ಕಡಿಮೆ ಮಾಡಿದ್ದಾರೆ.

ಕನ್ಹಯ್ಯ ಅಥವಾ ವೆಮುಲಾ ಪ್ರಕರಣವಿರಲಿ, ಪ್ರಶಸ್ತಿ ವಾಪಸಿಯಿರಲಿ; ಮೋದಿಯವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಮಾಧ್ಯಮಗಳಲ್ಲಿನ ಪುರೋಗಾಮಿ ಮುಖಂಡರು ಏನೆಲ್ಲ ಷಡ್ಯಂತ್ರಗಳನ್ನು ರಚಿಸಿದ್ದರೋ, ಅವೆಲ್ಲವನ್ನು ಪ್ರಧಾನಮಂತ್ರಿಗಳು ಒಂದು ವಾಹಿನಿಯ ಸಹಾಯದಿಂದ ನಿಷ್ಕ್ರಿಯಗೊಳಿಸಿದ್ದಾರೆ. ಕಳೆದ ಸಂಸತ್ ಚುನಾವಣೆಯ ಪ್ರಚಾರದ ಕೊನೆಯ ಹಂತದಲ್ಲಿ ಮೋದಿಯವರು ಹೀಗೆಯೇ ಮೆರೆಯುವ ಎಲ್ಲ ಪತ್ರಕರ್ತರ ದುರಾವಸ್ಥೆ ಮಾಡಿದ್ದರು. ಕಳೆದ ವರ್ಷವಿಡೀ ಮೋದಿ ಸರಕಾರದ ವಿರುದ್ಧ ಕೋಲಾಹಲವೆಬ್ಬಿಸಿದ ಎಲ್ಲ ಮಾಧ್ಯಮಗಳ ಇಂದಿನ ವಿಶ್ವಾಸಾರ್ಹತೆ ಎಷ್ಟು? ಎಂಬ ಪ್ರಶ್ನೆ ಪುನಃ ಮುಂದೆ ಬಂದಿದೆ. ಇಂತಹ ಸಂದರ್ಶನಕ್ಕಿಂತ ಪ್ರಧಾನಮಂತ್ರಿಗಳು ಪತ್ರಕರ್ತರ ಸಭೆಯನ್ನು ಏಕೆ ತೆಗೆದುಕೊಳ್ಳುವುದಿಲ್ಲ? ಪತ್ರಕರ್ತರ ಸಮೂಹಕ್ಕೆ ಮೋದಿ ಹೆದರುತ್ತಾರೆ, ಇಂತಹ ವಾಕ್ಯಗಳನ್ನು ಹೇಳುವುದರಲ್ಲಿ ಕಾಂಗ್ರೆಸ್ ಪಕ್ಷದ ರಾಜಕಾರಣವಿದೆ; ಆದರೆ ಹೆಸರಾಂತ ಪತ್ರಕರ್ತರು ಮೋದಿಯವರೊಂದಿಗೆ ಮಾತನಾಡಲು ಏಕೆ ಇಷ್ಟೊಂದು ಹಾತೊರೆಯುತ್ತಿದ್ದಾರೆ? ನಿಜ ಹೇಳಬೇಕೆಂದರೆ, ಮಾಧ್ಯಮಗಳು ಮತ್ತು ಅವುಗಳ ಮುಖಂಡರು ತಮ್ಮ ಅವಸ್ಥೆ ಹೀಗೇಕಾಯಿತು ? ಎಂದು ತಾವೇ ವಿಚಾರ ಮಾಡುವುದು ಆವಶ್ಯಕವಾಗಿದೆ.
೧. ಪ್ರಧಾನಮಂತ್ರಿ ಮೋದಿಯವರು ವಿದೇಶಗಳ
ಪ್ರವಾಸದ ಸಮಯದಲ್ಲಿ ಪತ್ರಕರ್ತರ ತಂಡವನ್ನು ಕರೆದುಕೊಂಡು ಹೋಗುವ ಪರಂಪರೆಯನ್ನು ನಿಲ್ಲಿಸಿದರು !
ಎರಡು ವಾರದ ಹಿಂದೆ ಒಂದು ಆಂಗ್ಲ ವಾರ್ತಾವಾಹಿನಿಯಲ್ಲಿ ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಎರಡು ವರ್ಷಗಳು’, ಎಂಬ ವಿಷಯದ ಚರ್ಚೆ ಕೇಳಲು ಸಿಕ್ಕಿತು. ಅದರಲ್ಲಿ ಅತ್ಯಂತ ಹಿರಿಯ ದೆಹಲಿಯ ಅನುಭವಿ ಪತ್ರಕರ್ತರು ಸಹಭಾಗಿಯಾಗಿದ್ದರು ಹಾಗೂ ಅದರಲ್ಲಿ ಓರ್ವ ಮಾಜಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಇವರ ಮಾಧ್ಯಮ ಸಲಹೆಗಾರರಿದ್ದರು. ಆ ಚರ್ಚೆಯಿಂದ ಒಂದು ಮಹತ್ವದ ವಿಷಯ ಬೆಳಕಿಗೆ ಬಂದಿತು. ಎರಡು ವರ್ಷ ಪ್ರಧಾನಮಂತ್ರಿ ಆಗಿರುವಾಗ ಹಾಗೂ ಅದೇ ಅಧಿಕಾರದಲ್ಲಿ ಅನೇಕ ವಿದೇಶಗಳ ಪ್ರವಾಸ ಮಾಡುವ ಪ್ರಧಾನಮಂತ್ರಿ ಮೋದಿಯವರು ಅವರೊಂದಿಗೆ ಭಾರತೀಯ ಪತ್ರಕರ್ತರ ತಂಡವನ್ನು ಕರೆದುಕೊಂಡು ಹೋಗುವ ಪರಂಪರೆಯನ್ನು ನಿಲ್ಲಿಸಿದರು ಮತ್ತು ಆ ಅವಧಿಯ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿಗಳು ಒಂದೇ ಒಂದು ಪತ್ರಕರ್ತರ ಪರಿಷತ್ತನ್ನು ತೆಗೆದುಕೊಳ್ಳಲಿಲ್ಲ. ಸರಕಾರಕ್ಕೆ ಎರಡು ವರ್ಷಗಳು ಪೂರ್ಣವಾದ ನಂತರ ಅವರ ಅನೇಕ ಹಿರಿಯ ಹಾಗೂ ಯುವ ಸಹಕಾರಿ ಮಂತ್ರಿಗಳು ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ; ಆದರೆ ಮೋದಿಯವರು ಅದಕ್ಕೆ ಅಪವಾದವಾಗಿದ್ದಾರೆ. ಪ್ರಧಾನಮಂತ್ರಿಗಳಾದ ನಂತರ ಒಮ್ಮೆ ಮಾತ್ರ ಅವರು ದೇಶದಲ್ಲಿನ ಕೆಲವು ಆಯ್ದ ಹಾಗೂ ಹಿರಿಯ ಸಂಪಾದಕ ಪತ್ರಕರ್ತರೊಂದಿಗೆ ವ್ಯಕ್ತಿಗತ ಸಂಭಾಷಣೆ ಮಾಡಿದ್ದರು; ಆದರೆ ಅದು ಪ್ರಸಿದ್ಧಿಗಾಗಿರಲಿಲ್ಲ. ಅದು ಕೇವಲ ಒಂದು ಔಪಚಾರಿಕತೆಗಾಗಿತ್ತು. ಅವರು ಪತ್ರಕರ್ತರ ಆ ಸಂವಾದದಲ್ಲಿನ ಎಲ್ಲ ಪ್ರಶ್ನೆಗಳಿಗೆ ಸಹಜವಾಗಿ ಉತ್ತರಗಳನ್ನು ನೀಡಿದ್ದರು ಮತ್ತು ಯಾವುದೇ ಪ್ರಶ್ನೆಯನ್ನು ಬದಿಗೊತ್ತಲಿಲ್ಲ; ಆದರೆ ಅದರಲ್ಲಿನ ಕೊಡುಕೊಳ್ಳುವಿಕೆ ಅಥವಾ ಚರ್ಚೆಯ ವಿಷಯ ಪ್ರಸಿದ್ಧವಾಗಲು ಸಾಧ್ಯವಾಗಲಿಲ್ಲ. ಹೀಗೆ ಮಾಹಿತಿಯನ್ನು ಅದೇ ವಾಹಿನಿಯ ಒಂದು ಚರ್ಚೆಯಲ್ಲಿ ಓರ್ವ ಹಿರಿಯ ಮಹಿಳಾ ಪತ್ರಕರ್ತರು ನೀಡಿದ್ದರು. ಹಾಗಾದರೆ ಪ್ರಧಾನಮಂತ್ರಿಗಳು ಪತ್ರಕರ್ತರ ಪರಿಷತ್ತನ್ನು ತೆಗೆದುಕೊಳ್ಳುವುದನ್ನು ಏಕೆ ತಪ್ಪಿಸುತ್ತಾರೆ? ಇನ್ನೊಂದು ಪ್ರಶ್ನೆಯೆಂದರೆ, ಎರಡು ವರ್ಷಗಳು ಕಳೆದರೂ ಪ್ರಧಾನಮಂತ್ರಿ ಮೋದಿಯವರು ತಮ್ಮ ಕಾರ್ಯಾಲಯದಲ್ಲಿ ಯಾರನ್ನೂ ಮಾಧ್ಯಮ ಸಲಹೆಗಾರರೆಂದು ನೇಮಿಸಿಲ್ಲ. ನಿಜ ಹೇಳಬೇಕಾದರೆ, ಈ ಸಂಗತಿಯು ಒಮ್ಮೆ ವಾಹಿನಿಯಲ್ಲಿ ಚರ್ಚೆಯಾಗಬೇಕು, ಎಂಬಷ್ಟು ಬಿಸಿ ಸುದ್ಧಿಯಾಗಿದೆ; ಆದರೆ ವಾಹಿನಿಯಲ್ಲಿ ಮಾಡಲಾದ ಈ ಚರ್ಚೆ ಅಪೂರ್ಣವಾಗಿತ್ತು. ಈ ಪ್ರಧಾನಮಂತ್ರಿಯು ಪತ್ರಕರ್ತರ ಮತ್ತು ಮಾಧ್ಯಮಗಳ ಬಗ್ಗೆ ಹೀಗೇಕೆ ವರ್ತಿಸುತ್ತಾರೆ? ಎಂಬುದರ ಉತ್ತರವನ್ನು ಸ್ವತಃ ಮಾಧ್ಯಮಗಳಲ್ಲಿನ ಹಿರಿಯರೇ ಕಂಡು ಹಿಡಿಯುವುದು ಆವಶ್ಯಕವಾಗಿದೆ. ಅದರ ಸಾಮಾನ್ಯ ಉತ್ತರವೆಂದರೆ ಅವರಿಗೆ ಮಾಧ್ಯಮಗಳ ಅವಶ್ಯಕತೆ ಅನಿಸುವುದಿಲ್ಲ.
೨. ಮಾಧ್ಯಮಗಳನ್ನು ಮತ್ತು ದೊಡ್ಡ ಪತ್ರಕರ್ತರನ್ನು ಪ್ರಧಾನಮಂತ್ರಿ ಮೋದಿಯವರು ಏಕೆ ದೂರವಿಟ್ಟಿದ್ದಾರೆ ?
ಮಾಧ್ಯಮಗಳು ಸಮಾಜಕ್ಕೆ ಸಂದೇಶವನ್ನು ನೀಡಲು ಇರುತ್ತವೆ. ಒಂದು ವೇಳೆ ಆ ಸಂದೇಶಗಳು ಮಾಧ್ಯಮಗಳನ್ನು ದೂರವಿಟ್ಟರೂ ತಲುಪುತ್ತಿದ್ದರೆ ಅಥವಾ ತಲುಪಿಸಲು ಸಾಧ್ಯವಿದ್ದರೆ, ಸಾರ್ವಜನಿಕ ಕ್ಷೇತ್ರದಲ್ಲಿನ ವ್ಯಕ್ತಿ ಅದೇ ಸುಲಭ ಮಾರ್ಗವನ್ನು ಅವಲಂಬಿಸುವನು ಅಲ್ಲವೆ ? ಮೋದಿಯವರು ಇಲ್ಲಿಯೇ ದೊಡ್ಡ ಗೆಲುವನ್ನು ಸಾಧಿಸಿದ್ದಾರೆ. ಪ್ರಧಾನಮಂತ್ರಿಗಳಾದ ನಂತರದ ಪತ್ರಕರ್ತರ ಪರಿಷತ್ತು ದೂರದ ಮಾತಾಯಿತು. ಅದಕ್ಕಿಂತ ಮೊದಲೂ ಗುಜರಾತಿನ ಮುಖ್ಯಮಂತ್ರಿಯಾಗಿರುವಾಗ ಅವರು ೭ ವರ್ಷ ಗಳ ವರೆಗೆ ಪತ್ರಕರ್ತರಿಂದ ತಮ್ಮನ್ನು ದೂರವೇ ಇಟ್ಟಿದ್ದರು. ಅವರು ಪತ್ರಕರ್ತರಿಗೆ ಮತ್ತು ಮಾಧ್ಯಮಗಳಿಗೆ ಬಹಳ ಹೆದರುತ್ತಾರೆಂದು ಸಹ ಬಹಳ ಚರ್ಚೆಯಾಗಿತ್ತು; ಆದರೆ ಅದೇ ರೀತಿ, ಅದೇ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬಗ್ಗೆಯೂ ಹಾಗೇ ಹೇಳಬಹುದು. ಸೋನಿಯಾ ಗಾಂಧಿ ೧೮ ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಮತ್ತು ಆ ಅವಧಿಯಲ್ಲಿ ಅವರು ಎಷ್ಟು ಪತ್ರಕರ್ತರ ಪರಿಷತ್ತನ್ನು ತೆಗೆದು
ಕೊಂಡಿದ್ದಾರೆ ? ಅದರಲ್ಲಿನ ವ್ಯತ್ಯಾಸವಿಷ್ಟೇ, ಮೋದಿಯವರು ಚುರುಕು ಹಾಗೂ ನೇರವಾಗಿ ಉತ್ತರಿಸುವ ವ್ಯಕ್ತಿಯಾಗಿದ್ದಾರೆ. ತದ್ವಿರುದ್ಧ ಸೋನಿಯಾ ಗಾಂಧಿಯವರಿಗೆ ಭಾಷೆ ಮತ್ತು ಭಾರತೀಯ ಜೀವನ ಶೈಲಿಯ ಅಡಚಣೆಯಿದೆ.
೨೦೦೨ ರಲ್ಲಿನ ಗುಜರಾತ ಗಲಭೆಯ ವಿಷಯದಲ್ಲಿ ಮಾಧ್ಯಮಗಳು ಎಷ್ಟು ಚರ್ಚೆಗಳನ್ನು ಮಾಡಿದ್ದರೆಂದರೆ ಮೋದಿಯವರು ಎಲ್ಲಿ ಹೋದರೂ, ಯಾವುದೇ ಸ್ಥಳದಲ್ಲಿದ್ದರೂ, ಗಲಭೆಯಲ್ಲಿನ ಅವರ ಭೂಮಿಕೆಯ ಬಗ್ಗೆಯೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಅದೇ ಪ್ರಶ್ನೆಗಳು ಮತ್ತು ಅದೇ ಉತ್ತರಗಳನ್ನು ನೀಡಿಯೂ ಈ ವಿಷಯವು ನಿಲ್ಲಲಿಲ್ಲ. ಆದ್ದರಿಂದ ೨೦೦೭ ರ ನಂತರ ಮೋದಿಯವರು ಸಂದರ್ಶನ ಹಾಗೂ ಪತ್ರಕರ್ತರ ಪರಿಷತ್ತುಗಳಿಗೆ ಶಾಶ್ವತವಾಗಿ ಪೂರ್ಣವಿರಾಮ ಹಾಕಿದರು. ಪ್ರಧಾನಮಂತ್ರಿಗಳ ಹುದ್ದೆಯ ಸ್ಪರ್ಧೆಗಿಳಿದ ನಂತರವೂ ಮೋದಿಯವರು ಮಾಧ್ಯಮಗಳತ್ತ ಬೆನ್ನು ತಿರುಗಿಸಿಯೇ ಇದ್ದರು. ಪ್ರತ್ಯಕ್ಷ ಸಂಸದ ಚುನಾವಣೆ ರಂಗೇರಿದಾಗ ಅವರೇ ಗೆಲ್ಲುತ್ತಾರೆಂದು ಸ್ಪಷ್ಟವಾಗಿತ್ತು. ಆಗ ವಿವಿಧ ಮಾಧ್ಯಮಗಳು ಮತ್ತು ವಾರ್ತಾವಾಹಿನಿಗಳು ಮೋದಿಯವರ ಸಂದರ್ಶನ ತೆಗೆದುಕೊಳ್ಳಲು ಹಾತೊರೆದರು; ಆದರೆ ಮೋದಿಯವರು ಎಲ್ಲ ಮಾಧ್ಯಮಗಳನ್ನು ಮತ್ತು ದೊಡ್ಡ ಪತ್ರಕರ್ತರನ್ನು ದೂರವಿಟ್ಟರು. ಪ್ರಮುಖವಾಗಿ ಹೆಸರಾಂತ ಹಾಗೂ ಸನ್ಮಾನಿತ ಮಾಧ್ಯಮಗಳಿಗೂ ಸಂದರ್ಶನ ನೀಡಲು ನಿರಾಕರಿಸಿದ್ದರು. ಅದರಲ್ಲಿಯೂ ಲೆಕ್ಕಕ್ಕಿಲ್ಲದ ಹಾಗೂ ಎರಡನೇಯ ಸ್ಥಾನದ ಪತ್ರಕರ್ತರಿಗೆ ಸಂದರ್ಶನ ನೀಡಿ ಗಣ್ಯರನ್ನು ನಿರ್ಗತಿಕರನ್ನಾಗಿ ಮಾಡಿದ್ದರು.
೩. ಪ್ರಧಾನಮಂತ್ರಿ ಮೋದಿಯವರು ಮಾಧ್ಯಮ 
ಸಲಹೆಗಾರರನ್ನೇ ನೇಮಿಸದಿರುವುದರಿಂದ ಗಲಿಬಿಲಿಗೊಂಡ ಪತ್ರಕಾರರು !
ಮಧ್ಯಂತರದ ಮೋದಿಯವರಿಗೆ ಸೋಶಿಯಲ್ ಮಿಡಿಯಾ ಎಂಬ ಹೆಸರಿನ ಪರ್ಯಾಯ ಉಪಲಬ್ಧವಾಗಿತ್ತು ಮತ್ತು ಆ ಹೊಸ ಮಾಧ್ಯಮದಿಂದ ಈಗಿರುವ ಹೆಸರಾಂತ ಮಾಧ್ಯಮಗಳಿಲ್ಲದೆಯೇ ಸಾಮಾನ್ಯ ಜನರ ವರೆಗೆ ತಲುಪಲು ಅವರಿಗೆ ಸಹಜವಾಗಿ ಸಾಧ್ಯವಾಗಿತ್ತು. ಹೆಚ್ಚಿನ ರಾಜಕಾರಣಿಗಳು ತಮ್ಮ ಹೇಳಿಕೆಗಳನ್ನು ವಿಪರ್ಯಾಸ ಮಾಡಲಾಗಿದೆಯೆಂದು ದೂರುತ್ತ್ತಾರೆ. ಮೋದಿಯವರೂ ಅದಕ್ಕೆ ಅಪವಾದವಾಗಿಲ್ಲ. ಇಂತಹ ಸ್ಥಿತಿಯಲ್ಲಿ ತಮ್ಮ ನಿಜವಾದ ಶಬ್ದ ಮತ್ತು ಉದ್ದೇಶವನ್ನು ಜನರಲ್ಲಿಗೆ ಒಯ್ಯುವ ಮಾಧ್ಯಮ ವೆಂದು ಮೋದಿಯವರು ಸೋಶಿಯಲ್ ಮಿಡಿಯಾವನ್ನು ಆಯ್ದು ಕೊಂಡರು. ಅದನ್ನು ಎಷ್ಟು ಕೌಶಲ್ಯದಿಂದ ಉಪಯೋಗಿಸಿದರೆಂದರೆ, ಇಂದು ಸಹ ಅವರಿಗೆ ಪ್ರತಿಷ್ಠಿತ ಪತ್ರಕರ್ತರ ಹಾಗೂ ಮಾಧ್ಯಮಗಳ ಅವಶ್ಯಕತೆಯಿದೆ ಎಂದು ಅನಿಸುವುದಿಲ್ಲ. ಪ್ರಧಾನಮಂತ್ರಿಗಳಾದ ನಂತರ ಆಕಾಶವಾಣಿ ಮತ್ತು ದೂರದರ್ಶನ ಈ ಸರಕಾರಿ ಮಾಧ್ಯಮಗಳನ್ನು ಮೋದಿಯವರು ಅತ್ಯಂತ ಚಾತುರ್ಯದಿಂದ ಉಪಯೋಗಿಸಿಕೊಂಡಿದ್ದಾರೆ. ಸಹಜವಾಗಿ ನಮಗೆ ಪ್ರಧಾನಮಂತ್ರಿಗಳಿಗೆ ಪ್ರಶ್ನೆಗಳನ್ನು ಕೇಳಲು ಆಗುವುದಿಲ್ಲ, ಇದು ಸನ್ಮಾನ್ಯ ಸಂಪಾದಕ ಪತ್ರಕರ್ತರ ವ್ಯಥೆಯಾಗಿದೆ. ಪ್ರಧಾನಮಂತ್ರಿಯವರ ಭೇಟಿಯ ಸುಲಭ ಮಾರ್ಗವೆಂದರೆ ಅವರ ಮಾಧ್ಯಮ ಸಲಹೆಗಾರರು; ಆದರೆ ಮೋದಿಯವರು ಹೀಗೆ ಯಾರನ್ನೂ ನೇಮಿಸಿಲ್ಲ. ಆದ್ದರಿಂದ ಮೋದಿಯವರ ಭೇಟಿಗೆ ದೆಹಲಿಯ ಪ್ರತಿಷ್ಠಿತ ಪತ್ರಕರ್ತರಿಗೆ ದೊಡ್ಡ ಅಡಚಣೆಯಾಗಿದೆ. ಆದರೆ ಅದರಿಂದ ಮೋದಿಯವರಿಗೆ ಯಾವುದೇ ಅಡಚಣೆಯಾಗಿರುವುದು ಕಾಣುವುದಿಲ್ಲ. ಪ್ರಮುಖವಾಗಿ ಸರಕಾರಿ ಯೋಜನೆಗಳು ಮತ್ತು ಸಂದೇಶಗಳು ಜನರಿಗೆ ನಿಯಮಿತ ತಲುಪುತ್ತಿವೆ. ಈ ಮೇಲಿನ ಚರ್ಚೆಯ ಚಿಂತೆಯ ವಿಷಯವು ಅದೇ ಆಗಿರಬೇಕು. ಯಾವ ಮಾಧ್ಯಮಗಳು ರಚನಾತ್ಮಕ ಮಾರ್ಗದಿಂದ ನಡೆಯುತ್ತ್ತಿವೆಯೋ, ಅವರಿಗೆ ಯಾವುದೇ ರೀತಿಯ ಅಡಚಣೆಗಳು ಬಂದಿಲ್ಲ. ಪ್ರಾದೇಶಿಕ ಹಾಗೂ ಭಾಷಿಕ ಮಾಧ್ಯಮಗಳ ಬಂಡಿ ಮೋದಿಯವರ ಇಂತಹ ದುರ್ಲಕ್ಷ್ಯದಿಂದ ಎಲ್ಲಿಯೂ ಕೆಸರಿನಲ್ಲಿ ಸಿಲುಕಿಕೊಂಡಿಲ್ಲ; ಆದರೆ ದೆಹಲಿಯ ರಾಜಕಾರಣದ ಮೇಲೆ ಹಾಗೂ ಅದರ ಪ್ರಸಿದ್ಧಿಯ ಮೇಲೆ ತಮ್ಮ ಅಧಿಕಾರವನ್ನು ತೋರಿಸುವವರು ಮಾತ್ರ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಬರಗಾಲ, ದಾದ್ರಿ ಘಟನೆ, ಪುರಸ್ಕಾರಹಿಂತಿರುಗಿಸುವುದು ಅಥವಾ ವಿಶ್ವವಿದ್ಯಾಲಯದ ವಿವಾದದ ನಂತರವೂ ಮೋದಿಯವರನ್ನು ಬಗ್ಗಿಸಲು ಸಾಧ್ಯವಾಗದಿರುವುದರ ಸ್ವೀಕೃತಿ ಇದಾಗಿರಬಹುದೇ ಅಥವಾ ಮಾಧ್ಯಮಗಳಲ್ಲಿನ ದೆಹಲಿಯವರ ಅಧಿಕಾರಶಾಹಿಗೆ ಆಘಾತವಾಗಿರುವುದರ ಭಯ ಅದರಲ್ಲಿದೆಯೇ ?
೪. ಪ್ರಧಾನಮಂತ್ರಿ ಮೋದಿಯವರು ದೂರದರ್ಶನ ಮತ್ತು ಸರಕಾರಿ ಮಾಧ್ಯಮಗಳ ಮೂಲಕ ಜನರ
 ಮುಂದೆ ವಿಷಯವನ್ನು ಮಂಡಿಸಿದ್ದರಿಂದ ಮುಖ್ಯ ಪ್ರವಾಹದಲ್ಲಿನ ವಾಹಿನಿಗಳು ಮತ್ತು ವಾರ್ತಾಪತ್ರಗಳು ಹಿಂದೆ ಬಿದ್ದವು !
ದೆಹಲಿಯಲ್ಲಿ ತಥಾಕಥಿತ ಸನ್ಮಾನ್ಯ ಪತ್ರಕರ್ತ ಸಂಪಾದಕರಿಗೆ ಮಧ್ಯದ ಕಾಲದಲ್ಲಿ ಎಷ್ಟು ಮದ ಏರಿತ್ತೆಂದರೆ, ಅವರೇ ರಾಜಕಾರಣದ ಆಟವನ್ನು ಆಡಲಾರಂಭಿಸಿದ್ದರು. ಪ್ರಮುಖವಾಗಿ ಯುಪಿಎ ಹಾಗೂ ಸೋನಿಯಾ ಗಾಂಧಿಯವರ ಅಜೆಂಡಾವನ್ನು ಮುಂದೆ ಕೊಂಡೊಯ್ಯುವ ಹಾಗೂ ನಿರ್ವಹಿಸುವ ಪತ್ರಕರ್ತರೆಂದು ನಂತರ ಅವರು ಪರಿಚಿತರಾಗಿದ್ದರು. ಅವರು ಸುಪಾರಿ ತೆಗೆದುಕೊಂಡವರಂತೆ ಗುಜರಾತ್ ಗಲಭೆಯ ನಂತರ ಕೆಲಸವನ್ನು ಮಾಡಿದರು. ಭಾಜಪದ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ವಿಸ್ತಾರವನ್ನು ತಡೆಯಲು ಕಾಂಗ್ರೆಸ್ ವಿಫಲವಾಗುತ್ತಿತ್ತು. ಆ ಕೆಲಸವನ್ನು ಅವರೊಂದಿಗೆ ವೈಚಾರಿಕ ಸಮಾನತೆಯಿರುವ ಪತ್ರಕರ್ತರು ಕೈಗೆತ್ತಿಕೊಂಡರು. ಯೋಗಾಯೋಗವೆಂದರೆ ಅದೇ ಕಾಲಾವಧಿಯಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮಗಳ ವಿಸ್ತಾರವಾಗುತ್ತಾ ಹೋಯಿತು. ಅದರಲ್ಲಿ ಹಣ ತೊಡಗಿಸಿದವರು ಸಹ ಇಂತಹ ಪತ್ರಕರ್ತರ ಆಗಿನ ಆಡಳಿತದವರೊಂದಿಗೆ ಆತ್ಮೀಯತೆ ಇದ್ದಿದ್ದರಿಂದ ಅವರಿಗೆನೇ ಮಾಧ್ಯಮಗಳ ಎಲ್ಲ ಅಧಿಕಾರವನ್ನು ನೀಡಿದರು. ಅದರಿಂದ ಅನೇಕ ಜನರು ಮಾಧ್ಯಮಗಳ ಸಾಮ್ರಾಟರಂತೆ ವರ್ತಿಸತೊಡಗಿದರು; ಆದರೆ ಮೋದಿಯವರು ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಯಾದರು ಮತ್ತು ಸೋನಿಯಾರವರ ಯುಪಿಎ ಆಡಳಿತವು ಈ ಎಲ್ಲ ಪತ್ರಕರ್ತರನ್ನು ಆ ಜೂಜಿನಲ್ಲಿ (ಚುನಾವಣೆಯಲ್ಲಿ) ಪಣಕ್ಕೆ ಇಟ್ಟಂತೆ ಉಪಯೋಗಿಸಿತು ಹಾಗೂ ಹೀಗೆ ಅನೇಕ ಜನರು ಮೋದಿಯವರ ವಿರೋಧಿಗಳೆಂದು ಪರಿಚಿತರಾದರು. ‘ಸುಪಾರಿಬಾಜ್’ ಎಂದು ಮೋದಿಯವರು ಅವರನ್ನು ದೂರವಿಡಲು ಪ್ರಯತ್ನಿಸಿದರು, ಅದರಲ್ಲಿಯೇ ಅವರಿಗೆ ನೇರವಾಗಿ ಜನಸಾಮಾನ್ಯರ ವರೆಗೆ ತಲಪುವ ಹೊಸ ಮಾರ್ಗ ಸೋಶಲ್ ಮಿಡಿಯಾದಿಂದ ಉಪಲಬ್ಧವಾಯಿತು. ಮುಂದೆ ಪ್ರಧಾನಮಂತ್ರಿಗಳಾದ ನಂತರ ದೂರದರ್ಶನ ಮತ್ತು ಸರಕಾರಿ ಮಾಧ್ಯಮಗಳು ಲಭಿಸಿದವು. ಪ್ರಧಾನಮಂತ್ರಿಗಳಿಗೆ ತಮ್ಮ ವಿಷಯವನ್ನು ಜನರ ವರೆಗೆ ತಲಪಿಸಲು ಅಷ್ಟು ಮಾಧ್ಯಮಗಳು ಸಾಕಾಗಿತ್ತು; ಆದರೆ ಈ ಗಡಿಬಿಡಿಯಲ್ಲಿ ಮುಖ್ಯ ಪ್ರವಾಹದಲ್ಲಿನ ವಾಹಿನಿಗಳು ಮತ್ತು ವಾರ್ತಾಪತ್ರಿಕೆಗಳು ಹಿಂದೆ ಬೀಳುತ್ತಾ ಹೋದವು.

ಮೊದಲು ಮೋದಿಯವರ ವಿಜಯದಿಂದ ಈ ಮಾಧ್ಯಮ ಗಳ ವಿಶ್ವಾಸಾರ್ಹತೆ ಕಡಿಮೆಯಾಯಿತು ಮತ್ತು ಈಗ ಅವಶ್ಯಕತೆಯೂ ಮುಗಿಯುತ್ತಾ ಬಂದಿದೆ. ಅದಕ್ಕೆ ಅದರಲ್ಲಿನ ಸುಪಾರಿಬಾಜಿಯೇ ಒಂದು ರೀತಿಯಲ್ಲಿ ಕಾರಣವಾಯಿತು ಹಾಗೂ ಇನ್ನೊಂದೆಡೆ ಹೊಸ ಮಾಧ್ಯಮವನ್ನು ಕೌಶಲ್ಯದಿಂದ ಉಪಯೋಗಿಸುವ ಮೋದಿಯವರೇ ಕಾರಣರಾದರು. ಆದ್ದರಿಂದಲೇ ಈ ಚಿಂತೆ ನಿರ್ಮಾಣವಾಗಿದೆ. ಮೋದಿಯವರನ್ನು ಅವಮಾನಗೊಳಿಸುವುದರಲ್ಲಿ ೧೦ ವರ್ಷಗಳನ್ನು ವ್ಯರ್ಥಗೊಳಿಸಿರುವ ಈ ಪತ್ರಕರ್ತರಿಗೆ ಈಗ ಮೋದಿ ಯವರ ಗುಣಗಾನ ಮಾಡಬೇಕಾಗಿದೆ; ಆದರೆ ಅದಕ್ಕೂ ಅವಕಾಶ ಉಳಿದಿಲ್ಲ. - ಶ್ರೀ. ಭಾವೂ ತೋರ್ಸೆಕರ್, ಹಿರಿಯ ಪತ್ರಕರ್ತರು, ಮುಂಬಯಿ (ಆಧಾರ : http://jagatapahara.blogspot.in/)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮೋದಿ ಸರಕಾರದ ವಿರುದ್ಧ ಕೋಲಾಹಲವೆಬ್ಬಿಸುವ ಎಲ್ಲ ಮಾಧ್ಯಮಗಳ ವಿಶ್ವಾಸಾರ್ಹತೆ ಎಷ್ಟು ?