ನಕ್ಸಲ್‌ವಾದದ ರಣನೀತಿಯ ಅನುಷ್ಠಾನ

(ನಿವೃತ್ತ) ಬ್ರಿಗೇಡಿಯರ್
ಹೇಮಂತ ಮಹಾಜನ
ನಕ್ಸಲ್‌ವಾದವು ಬೇರೂರಿದಲ್ಲೆಲ್ಲ ಮಧ್ಯಮ ವರ್ಗೀಯರ ಅಭಾವವೇ ಮುಖ್ಯ ಕಾರಣವೆಂದೆನಿಸುತ್ತದೆ. ೨ ಹೊತ್ತಿನ ಊಟದ ಸಮಸ್ಯೆ ಇಲ್ಲದಿರುವಾಗ ಸಹಜವಾಗಿಯೇ ಸಮಾಜವು ಕೈಯಲ್ಲಿ ಬಂದೂಕು ಹಿಡಿದು ಗುಡ್ಡಗಾಡುಗಳಲ್ಲಿ ಅಲೆದಾಡಲು ಸಿದ್ಧವಿರುವುದಿಲ್ಲ. ಅದೇ ರೀತಿ ಮಧ್ಯಮವರ್ಗವು ಪ್ರಸ್ಥಾಪಿತ ವ್ಯವಸ್ಥೆಗೆ ಪೂರಕವಾಗಿರುತ್ತದೆ. ಅದಕ್ಕೆ ಈ ಸುರಕ್ಷಿತವಾದ ಚೌಕಟ್ಟನ್ನು ಬಿಡಲು ಇಲ್ಲದಿರುವುದರಿಂದ ಅದು ನಕ್ಸಲ್‌ವಾದದಂತಹ ಹಿಂಸಾತ್ಮಕ ಚಳುವಳಿಗೆ ಆಶ್ರಯ ಕೊಡುವುದಿಲ್ಲ. ಇಂದು ಭಾರತದ ಇತರ ಪ್ರದೇಶಗಳಂತೆಯೇ ಛತ್ತೀಸಗಡದಲ್ಲಿಯೂ, ಎಲ್ಲಿ ನಕ್ಸಲ್‌ವಾದದ ಚಳುವಳಿ ಬೇರೂರಿದೆಯೋ, ಅಲ್ಲಿ ಬಡತನ, ಶೋಷಣೆ, ವಿಕಾಸದ ಮೂಲಭೂತ ಸೌಲಭ್ಯಗಳ ಅಭಾವ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತಿವೆ. ಈ ಪ್ರದೇಶದಲ್ಲಿ ಮಧ್ಯಮ ವರ್ಗಕ್ಕಿಂತ ಬಡತನರೇಖೆಯ ಕೆಳಗೆ ಜೀವಿಸುವ ವರ್ಗವೇ ದೊಡ್ಡದಾಗಿದೆ.
______________________________________
ಛತ್ತೀಸಗಡವು ಅನೇಕ ವರ್ಷಗಳ ವರೆಗೆ ಮಧ್ಯಪ್ರದೇಶದಂತಹ ದೊಡ್ಡ ಪ್ರಾಂತದ ಒಂದು ಮೂಲೆಯಲ್ಲಿದ್ದ ಪ್ರದೇಶವಾಗಿತ್ತು. ದಟ್ಟಅರಣ್ಯ, ಬಡತನ ಮತ್ತು ಹೊಲಸು ಸಾಮಾಜಿಕ ಮತ್ತು ರಾಜಕೀಯ ನೇತೃತ್ವದಿಂದಾಗಿ ಈ ಪ್ರದೇಶವು ಅಭಿವೃದ್ಧಿಯ ಹಾದಿಯಿಂದ ಹಿಂದುಳಿಯಿತು. ೨೦೦೦ ನೇ ಇಸವಿಯಲ್ಲಿ ಹೊಸರಾಜ್ಯ ಸ್ಥಾಪನೆಯ ನಂತರ ಈ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಪ್ರಾಪ್ತವಾಯಿತು. ಆದರೂ ನಕ್ಸಲ್‌ಗ್ರಸ್ತ ಕ್ಷೇತ್ರಗಳಲ್ಲಿ ಎಷ್ಟು ಪ್ರಮಾಣದಲ್ಲಿ ಈ ಕೆಲಸಗಳು ಆರಂಭವಾಗಬೇಕಿತ್ತೋ, ಅಷ್ಟು ಪ್ರಮಾಣದಲ್ಲಿ ಅದು ಆಗಿರುವುದು ಕಾಣಿಸುವುದಿಲ್ಲ. ಅಭಿವೃದ್ಧಿಯ ಸರ್ವಸಾಧಾರಣ ಯೋಜನೆಗಳ ವೇಗವು ನಕ್ಸಲ್‌ವಾದದಂತಹ ಉಪದ್ರವಿ ಸಂಘಟಿತ ಶಕ್ತಿಯಿಂದಾಗಿ ಕಡಿಮೆಯಾಗುತ್ತದೆ. ಈ ನಿಯಮಕ್ಕೆ ಛತ್ತೀಸಗಡ್ ಸಹ ಹೊರತಾಗಿಲ್ಲ. ಸಾರಿಗೆ, ಶಿಕ್ಷಣ, ಆರೋಗ್ಯ, ಕೃಷಿ, ದಿನಗೂಲಿ, ಉದ್ಯೋಗ ಮುಂತಾದ ಎಲ್ಲ ವಿಷಯಗಳು ಈ ಕ್ಷೇತ್ರದಲ್ಲಿ ಸ್ತಬ್ದವಾಗಿರುವುದು ಕಂಡುಬರುತ್ತಿದೆ.
ರಣನೀತಿಯ ರಚನೆ ಮತ್ತು ಅನುಷ್ಠಾನ
ಸಮಗ್ರ ಹಾಗೂ ಆಕ್ರಮಕ ಕಾರ್ಯಾಚರಣೆ ಮತ್ತು ಅಭಿವೃದ್ಧಿಯ ದಿಟ್ಟ ಯೋಜನೆ, ಹೀಗೆ ಎರಡು ಹಂತಗಳಲ್ಲಿ ನಕ್ಸಲರ ನಿಯಂತ್ರಣದ ವಿಚಾರ ಮಾಡುವ ಅವಶ್ಯಕತೆಯಿದೆ. ಇದರಲ್ಲಿ ಆಕ್ರಮಕ ಕಾರ್ಯಾ ಚರಣೆಯ ವಿಷಯವನ್ನು ರಾಜ್ಯಕ್ಕಿಂತ ಕೇಂದ್ರ ಸರಕಾರವು ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು. ಸದ್ಯ ಕಾನೂನು ಸುವ್ಯವಸ್ಥೆಯು ರಾಜ್ಯದ ಹತೋಟಿಯಲ್ಲಿರುವ ವಿಷಯವಾಗಿದೆ. ಆದ್ದರಿಂದ ನಕ್ಸಲರ ಹಿಂಸಾಚಾರ ವನ್ನು ಬಗ್ಗುಬಡಿಯುವ ಜವಾಬ್ದಾರಿಯೂ ರಾಜ್ಯ ಸರಕಾರದ್ದಾಗುತ್ತದೆ; ಆದರೆ ಈ ವಿಷಯದಲ್ಲಿ ಪ್ರತಿಯೊಂದು ರಾಜ್ಯಸರಕಾರದ ಧೋರಣೆಯು ಬೇರೆ ಬೇರೆಯಾಗಿದೆ. ಒಂದು ಸರಕಾರ ನಕ್ಸಲರೊಂದಿಗೆ ಹೋರಾಡು ತ್ತಿರುವಾಗ, ಇನ್ನೊಂದು ಅವರೊಂದಿಗೆ ಮಾತುಕತೆ ನಡೆಸುತ್ತದೆ. ಈ ಪರಿಸ್ಥಿತಿಯು ನಕ್ಸಲರನ್ನು ನಿಯಂತ್ರಿಸುವುದರಲ್ಲಿ ಅಡ್ಡಿಯಾಗುತ್ತದೆ. ಅದಕ್ಕಾಗಿ ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸಲು  ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಯುಕ್ತವಾಗಿ ಒಂದು ರಣನೀತಿಯನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ.
ನಕ್ಸಲರೊಂದಿಗೆ ಹೋರಾಡುವ ಆಧುನಿಕ ತಂತ್ರಜ್ಞಾನ, ದಟ್ಟ ಅರಣ್ಯಗಳಲ್ಲಿರುವ ಅವರ ಅಡಗುತಾಣ, ಅವರ ಪ್ರತಿನಿತ್ಯದ ತಾಲೀಮು, ಅತ್ಯಾಧುನಿಕ ಹಾಗೂ ದೊಡ್ಡಪ್ರಮಾಣದ ಶಸ್ತ್ರಸಂಗ್ರಹವನ್ನು ಗಮನಿಸಿದರೆ ಅವರೊಂದಿಗೆ ಹೋರಾಡಲು ಪೊಲೀಸರು ಸಕ್ಷಮರಿಲ್ಲವೆಂದು ಕಾಣಿಸುತ್ತದೆ. ಆದ್ದರಿಂದ ಈ ಹಿಂಸಾತ್ಮಕ ಚಳುವಳಿಯನ್ನು ಬೇರುಸಹಿತ ಕಿತ್ತೆಸೆಯಬೇಕಾದರೆ, ಅದಕ್ಕೆ ಸೇನಾ ಕಾರ್ಯಾಚರಣೆಯೇ ಪರಿಣಾಮಕಾರಿ ಯಾಗಬಹುದು. ಅಂದರೆ ಇಂತಹ ಸಶಸ್ತ್ರ ಕಾರ್ಯಾಚರಣೆ ಮಾಡು ವಾಗ ಆದಿವಾಸಿ-ವನವಾಸಿಗಳ ಜೀವನಶೈಲಿ, ಅವರ ಗೌರವ, ಸಾಂಸ್ಕೃತಿಕ ಸಂದರ್ಭ ಇತ್ಯಾದಿಗಳನ್ನು ಗಮನದಲ್ಲಿಟ್ಟು ಹಾಗೂ ಸಂಪೂರ್ಣ ಸಂವೇದನಾ ಶೀಲತೆಯನ್ನು ಅವಲಂಬಿಸಿ ಯಾವುದೇ ಹೆಜ್ಜೆ ಇಡಬೇಕಾಗುವುದು. ನೇರವಾದ ಮಾರ್ಗದಲ್ಲಿ ಹಾಗೂ ಶುದ್ಧವಾದ ಕಾನೂನು-ವ್ಯವಸ್ಥೆಯ ಪ್ರಶ್ನೆಯೆಂದು ಈ ವಿಷಯವನ್ನು ನೋಡಿದರೆ ಕೊನೆಗೆ ಬಹಳ ದುಬಾರಿಯಾಗಬಹುದು.
ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸಗಡ್ ಇವುಗಳ ಗಡಿ ಎಲ್ಲಿ ಜೋಡಿಸಲ್ಪಡುತ್ತವೆಯೋ, ಆ ನಕ್ಸಲ್‌ಗ್ರಸ್ತ ಪ್ರದೇಶವನ್ನು ಒಮ್ಮೆಲೆ ಮುತ್ತಿಗೆ ಹಾಕುವುದು ಹಾಗೂ ಬಿಹಾರ್, ಝಾರಖಂಡ ಮತ್ತು ಝಾರಖಂಡದ ಗಡಿಯು ಎಲ್ಲಿ ಛತ್ತೀಸಗಡಕ್ಕೆ ಜೋಡಿಸಲ್ಪಡುವುದೋ, ಆ ಪ್ರದೇಶವನ್ನೂ ಅದೇ ಸಮಯದಲ್ಲಿ ಮುತ್ತಿಗೆ ಹಾಕಿ ನಕ್ಸಲ್‌ರ ತಾಣಗಳಿಗೆ ಮುತ್ತಿಗೆ ಹಾಕುವುದು ಇಂತಹ ಸೇನಾ ಕಾರ್ಯಾಚರಣೆ ಮಾಡುವ ಸಮಯ ಈಗ ಬಂದಿದೆ. ೧೯೬೯- ೭೦ ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ ರಾಯ್ ಇವರು ಪಶ್ಚಿಮ ಬಂಗಾಲದಲ್ಲಿ ಅರೆಸೇನಾ ಪಡೆಯ ಸಹಾಯದಿಂದ ಹೀಗೆ ತೀವ್ರ ದಾಳಿ ಮಾಡಿ ಕೆಲವೇ ದಿನಗಳಲ್ಲಿ ಈ ಚಳುವಳಿಯನ್ನು ಬಗ್ಗು ಬಡಿದಿದ್ದರು. ಈ ಸಂದರ್ಭದಲ್ಲಿ ಆ ಉದಾಹರಣೆಯು ಯೋಗ್ಯ ವೆನಿಸುತ್ತದೆ; ಆದರೆ ಆ ಸಮಯದಲ್ಲಿ ಈ ಚಳುವಳಿ ಬಂಗಾಲದ ದಾರ್ಜಿಲಿಂಗ್ ಜಿಲ್ಲೆಗಷ್ಟೇ ಸೀಮಿತವಾಗಿತ್ತು. ಆಗ ಈ ವಿಷಯವನ್ನು ರಾಜ್ಯ ಸರಕಾರ ನಿರ್ವಹಿಸುವುದು ಯೋಗ್ಯವಾಗಿತ್ತು. ಈಗ ಈ ಚಳುವಳಿಯು ಬಿಹಾರ್, ಝಾರಖಂಡ್, ಛತ್ತೀಸಗಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಇತ್ಯಾದಿ ಅನೇಕ ರಾಜ್ಯಗಳಲ್ಲಿ ಪಸರಿಸಿದೆ. ಅದೇ ರೀತಿ ಒಂದು ಉದ್ದೇಶ ಮತ್ತು ಒಂದೇ ಸಂಘಟನೆ ಇಂತಹ ಮಾರ್ಗದಲ್ಲಿ ಅದು ಮುಂದುವರಿದಿದೆ. ಆದ್ದರಿಂದಲೇ ಕೇಂದ್ರಸರಕಾರವು ಮುಂದಾಳತ್ವ ವಹಿಸಿ ಈ ಚಳುವಳಿಯನ್ನು ಹತ್ತಿಕ್ಕುವುದು ಆವಶ್ಯಕವಾಗಿದೆ.
  ನಾಗಾ ಬಟಾಲಿಯನ್‌ನ ಬಸ್ತನದಲ್ಲಿನ ಉಪಸ್ಥಿತಿಯು ನಕ್ಸಲ್‌ರ ಹಿಂಸಾಚಾರವನ್ನು ನಿಯಂತ್ರಿಸಲು ಉಪಯೋಗವಾಗಬಹುದು. ಛತ್ತೀಸಗಡದಲ್ಲಿ ಎಲ್ಲೆಲ್ಲಿ ಇಂತಹ ಕಾರ್ಯಾಚರಣೆ ನಡೆಯುತ್ತಿದೆಯೋ, ಅಲ್ಲಲ್ಲಿ ಸಶಸ್ತ್ರ ದಳಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅವರ ವಾಹನಗಳಿಗೆ ಸಾಕಷ್ಟು ಇಂಧನವನ್ನು ಪೂರೈಸುವ ಅವಶ್ಯಕತೆಯಿದೆ. ನಕ್ಸಲ್‌ಪೀಡಿತ ಪ್ರದೇಶದಲ್ಲಿ ಕಾವಲಿಡಲು ವಾಹನಗಳನ್ನು ಉಪಯೋಗಿಸುವುದಕ್ಕಿಂತ, ಸುರಕ್ಷಾದಳದ ಭೂದಳವನ್ನು ನೇಮಿಸುವ ವಿಚಾರ ಮಾಡಬೇಕು. ಕೇಂದ್ರ ಸರಕಾರವು ಈ ವಿಷಯದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ನಂತರ ಈ ಪ್ರದೇಶಗಳಲ್ಲಿ ರಾಜಕೀಯ ನೇತೃತ್ವ ಮತ್ತು ಆಡಳಿತದಲ್ಲಿ ಟೊಳ್ಳು ನಿರ್ಮಾಣವಾಗಲು ಬಿಡದಿರುವುದು, ಸಂಬಂಧಪಟ್ಟ ರಾಜ್ಯಗಳ ಜವಾಬ್ದಾರಿಯಾಗಿರುವುದು. ಇಲ್ಲಿನ ಆದಿವಾಸಿಗಳು ತಲಾಠಿ, ಪೊಲೀಸ್ ಮತ್ತು ಅರಣ್ಯಾಧಿಕಾರಿಗಳ ಹಿಡಿತದಲ್ಲಿ ಪುನಃ ಸಿಲುಕಿದರೆ, ನಕ್ಸಲ್‌ವಾದ ಚೆನ್ನಾಗಿತ್ತು, ಎಂಬ ಭಾವನೆ ಪುನಃ ನಿರ್ಮಾಣವಾಗುವ ಭಯವಿದೆ. ಹಾಗಾಗಬಾರದೆಂದು ನಕ್ಸಲರನ್ನು ಹತ್ತಿಕ್ಕಿದ ನಂತರ ಈ ಪ್ರದೇಶಗಳಲ್ಲಿ ವಿಕಾಸದ ಯೋಜನೆಯನ್ನು ಶೀಘ್ರಗತಿಯಲ್ಲಿ ಹಮ್ಮಿಕೊಳ್ಳಬೇಕಾಗುವುದು. ನಕ್ಸಲ್‌ಪ್ರಭಾವಿತ ಕ್ಷೇತ್ರದ ಜೀವನ ಸುಖಕರಗೊಳಿಸುವ ದೃಷ್ಟಿಯಿಂದ ಮಾಡಬೇಕಾದ ನಿವಾರಣೋಪಾಯವು ಆ ಪ್ರದೇಶದ ವಿಕಾಸ, ಸಕ್ಷಮೀಕರಣ ಮತ್ತು ಅದರಲ್ಲಿ ಭಾಗವಹಿಸುವ ಜನಸಮುದಾಯವು ಈ ತ್ರಿಸೂತ್ರವನ್ನು ಆಧರಿಸಿರಬೇಕು.
ಭೂಸುಧಾರಣೆ 
ಭೂಸುಧಾರಣೆಯ ಕಾನೂನು ತಂದು ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಭೂಮಿಯ ಒಡೆತನದ ಹಕ್ಕು ನಕ್ಸಲ್‌ನಂತಹ ಹಿಂಸಾತ್ಮಕ ಚಳುವಳಿಯ ಮೂಲವಾಗಿರುತ್ತದೆ. ಬಂಗಾಲದಲ್ಲಿ ಈ ಚಳುವಳಿಯನ್ನು ಹತ್ತಿಕ್ಕಿದ ನಂತರ ಅಲ್ಲಿ ಆಗ ಹೊಸತಾಗಿ ಬಂದಿದ್ದ ಜ್ಯೋತಿ ಬಸು ಸರಕಾರವು ಭೂಸುಧಾರಣಾ ಕಾನೂನಿನ ಮೂಲಕ ಸುಮಾರು ಶೇ. ೨೪ ರಷ್ಟು ಕೃಷಿ ಭೂಮಿಯನ್ನು ಪುನಃ ಹಂಚಿತು. ಕೇರಳದಲ್ಲಿಯೂ ಇದೇ ಕಾನೂನಿನ ಅನುಷ್ಠಾನದಿಂದ ನಕ್ಸಲ್ ಚಳುವಳಿಗೆ ತಲೆ ಎತ್ತಲು ಸಾಧ್ಯವಾಗಲಿಲ್ಲ. ಈ ಉದಾಹರಣೆಯನ್ನು ಗಮನಿಸಿದರೆ, ಭೂಮಿ ಹಂಚಿಕೆಯ ವಿಷಯವನ್ನು ತಕ್ಷಣ ಕೈಗೊಳ್ಳಬೇಕಾಗುವುದು.
ನಿಷ್ಠಾವಂತ ಅಧಿಕಾರಿಗಳ ನೇಮಕ
ಭೂಮಿ, ಅರಣ್ಯ ಮತ್ತು ಆದಿವಾಸಿಗಳ ಸಮಸ್ಯೆಯ ಬಗ್ಗೆ ಮುತುವರ್ಜಿ ಇರುವ ಆಡಳಿತಾಧಿಕಾರಿಗಳ, ಪ್ರಸಂಗಾನುಸಾರ ಅವರ ಸ್ವತಂತ್ರ ಕೇಡರ್ ನಿರ್ಮಿಸಿ ಇಂತಹ ಕ್ಷೇತ್ರದಲ್ಲಿ ನೇಮಿಸಬೇಕು. ವಿಕಾಸದ ನಿಜವಾದ ಯೋಜನೆ, ಅವುಗಳ ಅವಧಿ ಇತ್ಯಾದಿಗಳನ್ನು ಗಮನದಲ್ಲಿಟ್ಟು ಕೊಡಬೇಕು. ಪ್ರಸಂಗ ಬಂದಾಗ ನಿವೃತ್ತ ಆಡಳಿತಾಧಿಕಾರಿಗಳನ್ನು ನಿರ್ಧಿಷ್ಟ ಅವಧಿಗೆ ಇಂತಹ ಪ್ರದೇಶಗಳಲ್ಲಿ ಪುನಃ ನೇಮಿಸಬೇಕು. ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಆಡಳಿತದ ಬುನಾದಿ ಬೇರೆಯೇ ಇರಬೇಕು. ಅಲ್ಲಿನ ಆದಿವಾಸಿ, ವನವಾಸಿ ಬಾಂಧವರ ಜೀವನಪದ್ಧತಿ, ಸಮಸ್ಯೆಗಳ ವಿಷಯದಲ್ಲಿ ಆಡಳಿತದ ಅಧಿಕಾರಿಗಳಿಗೆ ಕಳಕಳಿ ಇರಬೇಕು. ಶಿಕ್ಷೆಯೆಂದು ಇಂತಹ ಪ್ರದೇಶಗಳಿಗೆ ವರ್ಗಾವಣೆ ಮಾಡುವ ಬದಲು ಕೇವಲ ಇದೇ ಪ್ರದೇಶದ ಮೇಲೆ ನಿಗಾ ಇಡುವ ಹಾಗೂ ಆದಿವಾಸಿ-ವನವಾಸಿಗಳ ವಿಕಾಸದ ಬಗ್ಗೆ ನಿಷ್ಠೆ ಇರುವ ಅಧಿಕಾರಿಗಳನ್ನು ಅಲ್ಲಿ ನೇಮಿಸಬೇಕು. ಭೂಮಿಯ ವಿಷಯದ ಪ್ರಶ್ನೆಗಳಿಂದ ಪ್ರಾಮುಖ್ಯವಾಗಿ ನಕ್ಸಲ್‌ವಾದ ಹೆಚ್ಚಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟು ಇಂತಹ ಖಟ್ಲೆಗಳಿಗೆ ತೀರ್ಪು ನೀಡುವ ಅಧಿಕಾರ ಆ ಪ್ರದೇಶದ ಮುಖ್ಯ ಆಡಳಿತದವರಿಗೆ ಇರಬೇಕು. 
ರಸ್ತೆ ನಿರ್ಮಾಣಕ್ಕಾಗಿ ಸೇನೆಯ ಸಹಾಯ
ಛತ್ತೀಸಗಡ್‌ದಲ್ಲಿ ನಕ್ಸಲ್‌ರ ಆರ್ಥಿಕ ವ್ಯವಹಾರದ ಅಧ್ಯಯನ ಮಾಡಿದರೆ ಗುತ್ತಿಗೆದಾರರಿಂದ ಹಪ್ತಾ ವಸೂಲಿ ಮಾಡುವುದು, ಅವರ ಉತ್ಪನ್ನದ ಮುಖ್ಯ ಮಾರ್ಗವಾಗಿದೆ, ಎಂದು ಅರಿವಾಗುತ್ತದೆ. ಸರಕಾರಿ ಅಧಿಕಾರಿಗಳು ಮತ್ತು ನಕ್ಸಲ್‌ವಾದಿಗಳಿಗೆ ಕಪ್ಪಕಾಣಿಕೆ  ಕೊಟ್ಟು ಉಳಿದ ಹಣದಿಂದ ಒಳ್ಳೆಯ ಗುಣಮಟ್ಟದ ಕೆಲಸ ಮಾಡುವುದು ಖಾಸಗಿ ಗುತ್ತಿಗೆದಾರರಿಗೆ ಸಾಧ್ಯವಾಗುವುದಿಲ್ಲ. ಅದರ ಪರಿಣಾಮವೆಂದು ಛತ್ತೀಸಗಡ್‌ದಲ್ಲಿ ತಯಾರಿಸಿದ ಅನೇಕ ರಸ್ತೆಗಳು ಸ್ವಲ್ಪ ಕಾಲದಲ್ಲಿಯೇ ಹಾಳಾಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ ನಕ್ಸಲರ ಪ್ರಭಾವವಿರುವ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಇಂತಹ ರಸ್ತೆಗಳನ್ನು ತಯಾರಿಸುವ ಕೆಲಸವನ್ನು ಸೈನಿಕರಿಗೆ ಒಪ್ಪಿಸಬೇಕು ಹಾಗೂ ಅದರಲ್ಲಿ ಮಹಾರಾಷ್ಟ್ರದ ರೋಜ್‌ಗಾರ್ ಹಮಿ ಯೋಜನೆಯಂತೆ ಸ್ಥಳೀಯ ಕೂಲಿಗಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಒಂದೇ ಸಮಯದಲ್ಲಿ ಮೂರು ಉದ್ದೇಶಗಳು ಸಾಧ್ಯವಾಗುತ್ತವೆ. ಒಂದನೆಯದ್ದು ರಸ್ತೆಗಳ ಗುಣಮಟ್ಟ ಸುಧಾರಿಸುವುದು. ಎರಡನೆಯದ್ದು ನಕ್ಸಲ್‌ವಾದಿಗಳಿಗೆ ಅದರಿಂದ ಹಪ್ತಾ ಸಿಗದಿರುವುದರಿಂದ ಅವರ ಉತ್ಪನ್ನದ  ಪ್ರಮಾಣವು ಕಡಿಮೆಯಾಗುವುದು ಹಾಗೂ ಮೂರನೆಯದ್ದು ಸ್ಥಳೀಯ ಯುವಕರಿಗೆ ದಿನಕೂಲಿ ಸಿಗುವುದರಿಂದ ಅವರಿಗೆ ನಕ್ಸಲ್‌ವಾದದ ಬಗ್ಗೆ ಇರುವ ಆಸಕ್ತಿ ಕಡಿಮೆಯಾಗುವುದು.
ವಿಕೇಂದ್ರಿತ ಹಾಗೂ ಉದ್ಯೋಗಪುರಸ್ಕೃತ ವಿಕಾಸ
ನಕ್ಸಲ್‌ಪೀಡಿತ ದಟ್ಟಡವಿಗಳಲ್ಲಿ ಪ್ರತಿ ೨೫ ಕಿ.ಮೀಟರ್‌ಗಳ ಹಂತಗಳನ್ನು ನಿರ್ಮಾಣ ಮಾಡಿ ಅಲ್ಲಿ ಆರೋಗ್ಯ ಕೇಂದ್ರ, ಆಶ್ರಮಶಾಲೆ, ಪೊಲೀಸ್ ಚೌಕಿ ಇತ್ಯಾದಿ ನಿರ್ಮಿಸಬೇಕು. ಅದರಿಂದ ಆ ಪ್ರದೇಶದಲ್ಲಿ ಚಲನವಲನ ಹೆಚ್ಚಾಗಲು ಸಹಾಯವಾಗುವುದು. ಇದರಿಂದ ಇಂತಹ ಪ್ರದೇಶಗಳಲ್ಲಿ ಅನುರೂಪವಾಗಿ ಸಣ್ಣಕೈಗಾರಿಕೆಗಳು ಸಹ ತನ್ನಿಂತಾನೇ ತಲೆಯೆತ್ತುವವು. ಅದರಿಂದ ನಕ್ಸಲ್‌ರ ಅಲೆದಾಟ ಕಡಿಮೆಯಾಗಲು ಸಹಾಯವಾಗುವುದು. ವಿದ್ಯುತ್ ನಿರ್ಮಾಣದ ವಿಷಯದಲ್ಲಿ ಛತ್ತೀಸಗಡ್ ರಾಜ್ಯದ ಸ್ಥಿತಿ ಸಮಾಧಾನಕರವಾಗಿದೆ. ರಾಜ್ಯದ ಒಟ್ಟು ಅವಶ್ಯಕತೆಗಿಂತಲೂ ಹೆಚ್ಚು ವಿದ್ಯುತ್ ನಿರ್ಮಾಣವಾಗುತ್ತದೆ; ಆದರೂ ಅನೇಕ ಸಣ್ಣ ಹಳ್ಳಿಗಳಿಗೆ ವಿದ್ಯುತ್ ತಲುಪಲಿಲ್ಲ. ಕೇವಲ ದಂತೆವಾಡಾ ಜಿಲ್ಲೆಯಲ್ಲಿಯೇ ೧ ಸಾವಿರದ ೨೦೮ ಊರುಗಳಲ್ಲಿ ೪೧೫ ಊರುಗಳಿಗೆ ಇನ್ನೂ ವಿದ್ಯುತ್ ಇಲ್ಲ. ಆದ್ದರಿಂದಲೇ ಪ್ರತಿ ೨೫ ಕಿ.ಮೀ. ಹಂತದ  ವಿಕಾಸ ಯೋಜನೆಯಲ್ಲಿ ವಿದ್ಯುತ್ತೀಕರಣವನ್ನು ಅಳವಡಿಸಿಕೊಳ್ಳಬೇಕು. ಆದಿವಾಸಿ ಕ್ಷೇತ್ರಗಳಲ್ಲಿ ವಿಕಾಸ ಮಾಡುವಾಗ ದೊಡ್ಡ ಪ್ರಕಲ್ಪಗಳ ಬದಲು ಅರಣ್ಯವನ್ನು ಅವಲಂಬಿಸಿರುವ ಯೋಜನೆಗಳಿಗೆ ಒತ್ತು ಕೊಡಬೇಕು. ಅಲ್ಲದೆ ಸಾಮಾನ್ಯವಾಗಿ ನಕ್ಸಲ್‌ವಾದಿಗಳ ಸಶಸ್ತ್ರದಳದಲ್ಲಿ ಸೇರ್ಪಡೆಯಾಗುವ ಯುವಕರ ವಯಸ್ಸು ೧೬ ರಿಂದ ೨೫ ಹೀಗಿರುತ್ತದೆ, ಎಂದು ಕಂಡು ಬರುತ್ತದೆ. ಈ ವಯಸ್ಸಿನ ಯುವಕರ ಕೈಗೆ ಹೇಗೆ ಕೆಲಸ ಕೊಡಿಸಬಹುದು, ಎಂಬ ದೃಷ್ಟಿಯಿಂದ ವಿಚಾರ ಮಾಡುವ ಅವಶ್ಯಕತೆಯಿದೆ. ಅಷ್ಟುಮಾತ್ರವಲ್ಲ, ಹಮ್ಮಿಕೊಂಡಿರುವ ಯೋಜನೆಗಳಲ್ಲಿನ ಹಣವನ್ನು ನೌಕರಶಾಹಿಯಲ್ಲಿನ ಕುಳಗಳು ಪರಸ್ಪರ ಕಬಳಿಸದಂತೆ ತೀಕ ದೃಷ್ಟಿ ಇಡುವ ಅವಶ್ಯಕತೆಯಿದೆ.
ಹಸ್ತಕಲೆಗಳಿಗೆ ಮಾರುಕಟ್ಟೆಯನ್ನು  ನಿರ್ಮಿಸುವುದು
ಬಸ್ತರನ ಹಸ್ತಕಲೆಯ ವಸ್ತುಗಳು ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಪ್ರಸಿದ್ಧವಾಗಿವೆ; ಆದರೆ ಸದ್ಯ ಈ ಉತ್ಪಾದನೆಗೆ ಬೇಡಿಕೆ ಇಲ್ಲದಿರುವುದರಿಂದ ಈ ವಸ್ತುಗಳನ್ನು ನಿರ್ಮಿಸುವ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಕ್ರಮೇಣ ಈ ಕಲೆಯೇ ನಾಶವಾಗುವ ಭಯವಿದೆ; ಏಕೆಂದರೆ, ಈಗಿನ ಪರಿಸ್ಥಿತಿಯನ್ನು ನೋಡಿದರೆ, ಮುಂದಿನ ಪೀಳಿಗೆಯು ಈ ವ್ಯವಸಾಯದತ್ತ ತಿರುಗುವ ಸಾಧ್ಯತೆ ಕಡಿಮೆಯೆನಿಸುತ್ತದೆ. ಆದ್ದರಿಂದ ಅತ್ಯಂತ ಯೋಜನಾಪೂರ್ವಕ ರಚನೆ ಮಾಡಿ ಈ ಕಲೆಗಳ ನಿರ್ಮಿತಿಗೆ ಪ್ರೋತ್ಸಾಹ ನೀಡುವುದು ಹಾಗೂ ಅವರ ಉತ್ಪಾದನೆಯ ಮಾರಾಟ ಕೇಂದ್ರಗಳನ್ನು ಪ್ರವಾಸಿಗರ ಸಂದಣಿ ಇರುವ ನಗರಗಳಲ್ಲಿ ಸ್ಥಾಪಿಸಿ ಅದರ ಜಾಹೀರಾತುಗಳನ್ನು ನೀಡುವ ಅವಶ್ಯಕತೆಯಿದೆ.
ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮತ್ತು ಸಂಚಾರಿ ಚಿಕಿತ್ಸಾಲಯಗಳನ್ನು ಸ್ಥಾಪಿಸಬೇಕು. ಅದೇ ರೀತಿ ದಟ್ಟ ಅರಣ್ಯ ಪ್ರದೇಶದಲ್ಲಿರುವ ಜನರ ಆರೋಗ್ಯ ಪರೀಕ್ಷೆಯನ್ನು ನಿಯಮಿತವಾಗಿ ಆಗಬೇಕು. ಬಾಲಮೃತ್ಯುಗಳ ಪ್ರಮಾಣವನ್ನು ತಡೆಗಟ್ಟಲು ಗರ್ಭವತಿ ಮಹಿಳೆಯರಿಗಾಗಿ ಆಶ್ರಯಗೃಹಗಳಂತಹ ನಾವಿಣ್ಯಪೂರ್ಣ ಪ್ರಕಲ್ಪಗಳ ವಿಚಾರ ಮಾಡಬೇಕು.
ಗ್ರಾಮ ಸುರಕ್ಷಾ ಸಮಿತಿಗಳ ಸ್ಥಾಪನೆ
ಸಲವಾ ಜುಡುಮ್ ಎಂಬ ನಕ್ಸಲ್ ವಿರೋಧಿ ಆಂದೋಲನಕ್ಕೆ ಸಿಕ್ಕಿದ ಯಶಸ್ಸನ್ನು ನೋಡುವಾಗ ಭವಿಷ್ಯದಲ್ಲಿ ಗ್ರಾಮಸುರಕ್ಷಾ ಸಮಿತಿಗಳನ್ನು ನಿರ್ಮಿಸಲು ಸರಕಾರ ಒತ್ತು ಕೊಡಬೇಕು. ಇಂತಹ ಸಮಿತಿಗಳನ್ನು ಸ್ವಯಂಸೇವಿ ಸಂಸ್ಥೆಗಳ ಮೂಲಕ ನಿರ್ಮಿಸಬೇಕು; ಆದರೆ ಕೇವಲ ನಕ್ಸಲರಿಗೆ ಭಯಹುಟ್ಟಿಸುವ ಭೂಮಿಕೆ ಇದರಲ್ಲಿರಬಾರದು. ಈ ಆಂದೋಲನದ ಜೊತೆಗೆ ವಿಕಾಸ ಕಾರ್ಯಗಳಿಗೆ ವೇಗ ಪ್ರಾಪ್ತವಾಗಿ ಸಾಕಷ್ಟು ಉದ್ಯೋಗ ನಿರ್ಮಾಣವಾಗದಿದ್ದರೆ, ಈ ಆಂದೋಲನವು ನಿರುಪಯೋಗವಾಗುವುದು.
ಆಧುನಿಕ ಕೃಷಿ-ಪದ್ಧತಿಯ ಉಪಯೋಗ
ಛತ್ತೀಸಗಡ ರಾಜ್ಯವು ಪ್ರಾಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದೆ. ಇಲ್ಲಿನ ಕೃಷಿಕರು ಪ್ರಾಮುಖ್ಯವಾಗಿ ಭತ್ತ ಮತ್ತು ಜೋಳವನ್ನು ಅವಲಂಬಿಸಿದ್ದಾರೆ. ಸಾಧಾರಣ ೨ ರಿಂದ ೩ ಎಕ್ರೆ ಭೂಮಿ ಇರುವ ರೈತರ ಸಂಖ್ಯೆ ದೊಡ್ಡದಾಗಿದೆ. ಈ ರೈತರು ತಮ್ಮ ಕೃಷಿಗೆ ಮಳೆಯ ನೀರನ್ನೇ ಅವಲಂಬಿಸಿರುತ್ತಾರೆ. ಆದ್ದರಿಂದ ಸಹಜವಾಗಿಯೇ ವರ್ಷದಲ್ಲಿ ಒಮ್ಮೆ ಮಾತ್ರ ಅವರಿಗೆ ಬೆಳೆ ಬರುತ್ತದೆ. ಅಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಇದೆ. ಅದರಿಂದ ಅವರಿಗೆ ರಕ್ಷಣೆ ಸಿಗುವುದು ಆವಶ್ಯಕವಾಗಿದೆ. ಅಲ್ಲಿನ ಮುಖ್ಯ ಬೆಳೆಯಾಗಿರುವ ಭತ್ತದಂತಹ ಮುಖ್ಯ ಬೆಳೆಯು ಗ್ರಾಮೀಣ ಸ್ತರದ್ದಾಗಿದೆ. ಅದನ್ನು ಶಾಸ್ತ್ರೀಯ ಪದ್ಧತಿಯಲ್ಲಿ ಮಾಡುವುದೂ ಕಾಣಿಸುವುದಿಲ್ಲ. ಆದ್ದರಿಂದ ಒಮ್ಮೆ ಇಲ್ಲಿ ನಾಟಿ ಮಾಡಿದರೆ ನಂತರ ಅದರ ಹಿಂದೆ ಯಾವುದೇ ಪರಿಶ್ರಮವಾಗುವುದಿಲ್ಲ. ಆದ್ದರಿಂದ ಜಪಾನಿ ಪದ್ದತಿಯ ಒಂದೇ ಸಾಲಿನಲ್ಲಿ ನೆಡುವ  ಪದ್ಧತಿಯನ್ನು ಈ ರೈತರಿಗೆ ಕಲಿಸಬೇಕು. ಹೊಲದಲ್ಲಿ ಕಸ ತೆಗೆಯುವುದು, ಗೊಬ್ಬರ ಹಾಕುವುದು, ಇತ್ಯಾದಿಗಳು ಇದರಿಂದ ಸಾಧ್ಯವಾಗುವುದು. ಮಹಾರಾಷ್ಟ್ರದಲ್ಲಿ ಈಗ ಭತ್ತದ ಒಂದು ಹೊಸ ತಳಿಯನ್ನು ಕಂಡುಹಿಡಿಯಲಾಗಿದೆ. ೪-೫ ಗಿಡಗಳನ್ನು ಒಟ್ಟಿಗೆ ನೆಡುವುದಕ್ಕಿಂತ ಈ ಹೊಸಪದ್ಧತಿಯಲ್ಲಿ ಒಂದೇ ಗಿಡವನ್ನು ನೆಡಲಾಗುವುದು. ಇದರಿಂದ ಬೀಜಗಳ ಖರ್ಚು ೪ ಪಟ್ಟು ಕಡಿಮೆಯಾಗುತ್ತದೆ, ಆದರೆ ಉತ್ಪನ್ನ ಮಾತ್ರ ಮೂರು ಪಟ್ಟಿನಲ್ಲಿ ಹೆಚ್ಚಾಗುತ್ತದೆ. ವಿದ್ಯುತ್ ಇರುವಲ್ಲಿ  ಹನಿನೀರಾವರಿ ವ್ಯವಸ್ಥೆ ಮಾಡಿಕೊಟ್ಟರೆ, ಬೇಸಿಗೆಯ ಬೆಳೆಯನ್ನೂ ಬೆಳೆಸಬಹುದು. ಭೂಮಿ ಕಡಿಮೆ ಇರುವ ರೈತರು ವರ್ಷವಿಡಿ ಬೇಸಾಯದ ಕೆಲಸದಲ್ಲಿದ್ದು ಅವರ ಉತ್ಪನ್ನವೂ ಹೆಚ್ಚಾಗಿ ಅವರು ಬಡತನ ರೇಖೆಯ ಮೇಲೆ ಬರಬಹುದು.
ಮಾಧ್ಯಮಗಳ ಯೋಗ್ಯ ಬಳಕೆ
ಆದಿವಾಸಿ-ವನವಾಸಿಗಳೊಂದಿಗೆ ಸಂಭಾಷಣೆ ಮಾಡುವ ಭೂಮಿಕೆಯಿಂದ ಆಕಾಶವಾಣಿಯನ್ನು ವ್ಯಾಪಕ ಹಾಗೂ ಚಾತುರ್ಯದಿಂದ ಉಪಯೋಗಿಸಿಕೊಳ್ಳಬೇಕು. ಸ್ಥಳೀಯ ಭಾಷೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಉಚ್ಛಶಕ್ತಿಯ ಟ್ರಾನ್ಸ್‌ಮೀಟರ್ಸ್‌ ಅಳವಡಿಸಿ ಆಕಾಶವಾಣಿ ಕೇಂದ್ರಗಳನ್ನು ಕಾರ್ಯನಿರತಗೊಳಿಸುವ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಜ್ಜೆ ಇಡಬೇಕು.
- (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಕ್ಸಲ್‌ವಾದದ ರಣನೀತಿಯ ಅನುಷ್ಠಾನ