ಅಧ್ಯಾತ್ಮ ಬಗ್ಗೆ ಹಾಗೂ ಭಕ್ತನಾಗಲು ಗುರುದೇವ ಡಾ. ಕಾಟೇಸ್ವಾಮೀಜಿಯವರ ಅಮೂಲ್ಯ ವಿಚಾರಧನ

ಅಧ್ಯಾತ್ಮದ ಹುಚ್ಚುತನವೆಂದರೆ ನಿಜವಾದ ಬುದ್ಧಿವಂತಿಕೆ !
ಗುರುದೇವ ಡಾ.  ಕಾಟೇಸ್ವಾಮೀಜಿ
‘ಭಕ್ತರಾಗಲೂ ಒಂದು ಪದ್ಧತಿ ಇದೆ, ಒಂದು ನಿಯಮವಿದೆ, ಮೊದಲು ಹುಚ್ಚು ಹಿಡಿಯುತ್ತದೆ, ನಂತರ ನಿಧಾನವಾಗಿ ಎಲ್ಲವೂ ಸ್ಥಿರವಾಗುತ್ತದೆ. ಅನಂತರ ನಿಮಗೆ ‘ಮೊದಲು ಯಾವ ಸ್ಥಿತಿ ಇತ್ತೋ (ಮಾಯೆ) ಅದುವೇ ಹುಚ್ಚುತನವಾಗಿತ್ತು’ ಎಂದು ತಿಳಿಯುತ್ತದೆ. ನೀವು ಈಗ ಬುದ್ಧಿವಂತರಾಗುತ್ತೀರಿ, ಆದರೆ ಜಗತ್ತು ನಿಮ್ಮನ್ನು ಹುಚ್ಚರೆಂದು ಕರೆಯುತ್ತದೆ; ಆದರೆ ನಿಮಗೆ ಈಗ ತಿಳಿದಿರುತ್ತದೆ, ನೀವು ಮೊದಲು ಹುಚ್ಚರಾಗಿದ್ದಿರಿ, ಈಗ ಹುಚ್ಚರಲ್ಲ. ಈಗ ಮೊದಲ ಬಾರಿಗೆ ಜೀವನದಲ್ಲಿ ಅಂಧಃಕಾರವನ್ನು ತೆಗೆದುಹಾಕುವ ಪ್ರಕಾಶದ ಕಿರಣವು ಉದಯಿಸುತ್ತದೆ. ಈಗ ಹುಚ್ಚುತನವು ಮುಗಿದಿರುತ್ತದೆ.’- ಗುರುದೇವ ಡಾ.  ಕಾಟೇಸ್ವಾಮೀಜಿ (ಘನಗರ್ಜಿತ, ಮೇ ೨೦೦೬)
ಭಕ್ತನಾಗುವುದೆಂದರೆ ಒಬ್ಬಂಟಿಗನಾಗುವುದು ಮತ್ತು ಭಕ್ತಿಯಲ್ಲಿ
ಮುಳುಗುವುದೆಂದರೆ ಸಂಸಾರವನ್ನು ಮರೆಯುವುದು  !
ಸಾಧಕರೇ ನಿಜವಾದ ಸಾಹಸಿಗಳು : ‘ಭಕ್ತನಾಗಲು ಎಲ್ಲವನ್ನೂ ತ್ಯಾಗ ಮಾಡುವುದು ಒಂದು ಸಾಹಸವಾಗಿದೆ. ಭಗವಂತನೆಡೆಗೆ ಹೋಗುವ ಮಾರ್ಗವು ಘೋರ ಅರಣ್ಯದ ಮೂಲಕ ಸಾಗುತ್ತದೆ. ಈ ಮಾರ್ಗದಲ್ಲಿ ಹೆಜ್ಜೆಯ ಗುರುತುಗಳು ಅಥವಾ ಪದಚಿಹ್ನೆಗಳು ಇರಬಹುದೆಂದೇನೂ ಇಲ್ಲ. ಅವುಗಳು ಇಲ್ಲದಿರುವ ಸಾಧ್ಯತೆಗಳೇ ಹೆಚ್ಚು  !
ಭಗವಂತನು ಎಲ್ಲಿರುತ್ತಾನೆ ಎಂಬುದರ ಗೊತ್ತುಗುರಿ ಇರುವುದಿಲ್ಲ, ಅಜ್ಞಾನದಲ್ಲಿ ಹೋಗುವುದಿದೆ. ನಾವು ಎಂದಿಗೂ ನೋಡದ, ಎಂದಿಗೂ ನಡೆಯದಂತಹ ಮಾರ್ಗವಿದು. ಇದು ರಾಜಮಾರ್ಗವಲ್ಲ. ರಾಜಮಾರ್ಗದಲ್ಲಿ ಬಹಳ ಜನಸಂದಣಿ ಇರುತ್ತದೆ. ಅಲ್ಲಿ ಇರುವೆಗಳಂತೆ ಜನದಟ್ಟಣೆ ಇರುತ್ತದೆ. ಅಲ್ಲಿ ಉಪದ್ರವಗಳು, ಗದ್ದಲ, ಸಂಗೀತ, ನೃತ್ಯ, ಮೆರವಣಿಗೆ, ಶೋಕಯಾತ್ರೆ ಇತ್ಯಾದಿಗಳಿರುತ್ತವೆ. ಭಗವಂತನ ಕಡೆಗೆ ಹೋಗುವ ಮಾರ್ಗವು ಏಕಾಂಗಿಯಾಗುವ, ಏಕಾಂತದ ಮಾರ್ಗವಾಗಿದೆ. ಭಕ್ತನಾಗುವುದೆಂದರೆ ಒಬ್ಬಂಟಿಗನಾಗುವುದು. ಭಕ್ತಿಯಲ್ಲಿ ಮುಳುಗುವುದೆಂದರೆ ಸಂಸಾರವನ್ನು ಮರೆಯುವುದು  !
ತ್ಯಾಗವೇ ಸಾಹಸ !
‘ಈ ಮಾರ್ಗದಲ್ಲಿ ಹೋಗುವಾಗ ಒಬ್ಬರೇ, ಒಬ್ಬಂಟಿಗರಾಗಿ, ಏಕಾಂತದಲ್ಲಿ ಹೋಗಬೇಕಾಗುತ್ತದೆ. ಈ ಏಕಾಂತದ ಭಯವಾಗುತ್ತದೆ. ಎಲ್ಲ ಸಂಬಂಧಗಳನ್ನು, ಸ್ವಕೀಯರನ್ನು ಬಿಟ್ಟು ಮುಂದೆ ಹೋಗುವುದಿರುತ್ತದೆ. ಅದಕ್ಕಾಗಿ ಧರ್ಮಪಾಲನೆಯನ್ನು ಮಾಡುವ ಸಾಹಸವು ಬೇಕು. ಸಾಹಸವಿದ್ದರೆ ಧನವನ್ನು ಬಿಡಬಹುದು. ಸಾಹಸವಿಲ್ಲದಿದ್ದರೆ ಧನವನ್ನು ಹೇಗೆ ಬಿಡುವಿರಿ  ? ಕಾಮ, ಕ್ರೋಧ ಮತ್ತು ಆಸಕ್ತಿಗಳನ್ನು ಹೇಗೆ ತ್ಯಜಿಸುವಿರಿ ? ಮನೆಮಠವನ್ನು ಹೇಗೆ ತ್ಯಜಿಸುವಿರಿ  ? ಸಂಬಂಧಗಳನ್ನು ಹೇಗೆ ಮುರಿಯುವಿರಿ ? ಆದುದರಿಂದ ಸಾಹಸವೇ ಇದರ ಮೊದಲನೆಯ ಹೆಜ್ಜೆಯಾಗಿದೆ. ಒಂದು ಸಲ ಸಾಹಸವನ್ನು ಮಾಡಿದರೆ ನೀವು ಯಾವುದನ್ನೂ ತ್ಯಜಿಸಬಹುದು. ಸಾಹಸವನ್ನು ಮಾಡಿರಿ, ಆಮೇಲೆ ಒಮ್ಮೆಲೆ ನೀವು ಬಲಶಾಲಿಗಳಾಗಿದ್ದೀರಿ ಎಂದು ತಿಳಿಯುವುದು. ಯಾವುದೋ ಶಕ್ತಿಶಾಲಿ ಹಸ್ತವು ನಿಮ್ಮ ಹಸ್ತದಲ್ಲಿ ಬಂದಿದೆ ಎಂಬುದರ ಅರಿವಾಗುವುದು. ಅಸಹಾಯಕ, ನಿರಾಶ್ರಿತ ಮತ್ತು ನಿರಾಧಾರಿಗಳಾಗಿರಿ. ಆಗ ನಿಮಗೆ ಭಗವಂತನ ಆಧಾರ ಸಿಕ್ಕಿರುವುದು ತಿಳಿಯುವುದು. ಯಾರ ಬಗ್ಗೆ ಏನೂ ಸುದ್ದಿಯಿರಲಿಲ್ಲವೋ, ಯಾರ ಗೊತ್ತುಗುರಿ ಇರಲಿಲ್ಲವೋ, ಯಾರನ್ನು ಎಂದಿಗೂ ನೋಡಿರಲಿಲ್ಲವೋ ಅವನೇ ಪ್ರತಿಯೊಂದು ಶ್ವಾಸದಲ್ಲಿ ಏಕರೂಪವಾಗುತ್ತಾನೆ. ಯಾರ ಹೆಸರು ಗೊತ್ತಿರಲಿಲ್ಲವೋ, ಯಾರು ಅನಾಮಿಕನಾಗಿದ್ದಾನೋ (ಹೆಸರಿಲ್ಲದವನಾಗಿದ್ದಾನೋ) ಈಗ ಕೇವಲ ಅವನ ಹೆಸರೇ ಗೀತೆಯಾಗಿದೆ. ತ್ಯಾಗವೇ ಸಾಹಸವಾಗಿದೆ. ಏಕಾಂಗಿಯಾಗುವ ಸಾಹಸ ಮಾಡಿರಿ. ಅನಂತರ ನೀವು ಏಕಾಂಗಿಯಾಗಿ ಉಳಿಯಲಾರಿರಿ. ಪರಮಾತ್ಮನು ನಿಮ್ಮೊದಿಗೇ ಇರುವನು.’
- ಗುರುದೇವ ಡಾ.  ಕಾಟೇಸ್ವಾಮೀಜಿ (ಘನಗರ್ಜಿತ, ಮೇ ೨೦೦೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಧ್ಯಾತ್ಮ ಬಗ್ಗೆ ಹಾಗೂ ಭಕ್ತನಾಗಲು ಗುರುದೇವ ಡಾ. ಕಾಟೇಸ್ವಾಮೀಜಿಯವರ ಅಮೂಲ್ಯ ವಿಚಾರಧನ