ಪರಾತ್ಪರ ಗುರುಗಳು ಸಾಧಕರಿಗೆ ಭಾವಜಾಗೃತಿಯಾಗಲು ಮಾಡಿರುವ ಸಂಕಲ್ಪದ ಲಾಭ ಪಡೆದುಕೊಳ್ಳೋಣ !

(ಪೂ.) ಶ್ರೀ. ಅಶೋಕ ಪಾತ್ರೀಕರ,
ಪ.ಪೂ. ಡಾಕ್ಟರರು ‘ಯಾರಾದರೂ ಸಾಧಕರ ವ್ಯಷ್ಟಿ ಪ್ರಯತ್ನ ತುಂಬಾ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುತ್ತದೆಯೋ ಹಾಗೂ ಯಾರಲ್ಲಿ ಬಹಳ ದೋಷಗಳು ಇರುತ್ತವೆಯೋ, ಅವರಿಗೆ ‘ಭಾವವನ್ನು ಹೆಚ್ಚಿಸಲು ಪ್ರಯತ್ನಿಸಿ’ ಎಂದು ಹೇಳುತ್ತಾರೆ. ಗುರುಗಳ  ಮಾತಿನಿಂದಲೇ ಅವರ ಸಂಕಲ್ಪವಾಗಿರುತ್ತದೆ. ಆದ್ದರಿಂದ ಸಾಧಕರು ಭಾವ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ, ಗುರುಗಳ ಸಂಕಲ್ಪವಿರುವುದರಿಂದ ಎಲ್ಲ ಸಾಧಕರಲ್ಲಿ ಭಾವ ಹೆಚ್ಚಾಗುತ್ತದೆ. ಸಾಧಕರಿಗೆ ಭಾವಜಾಗೃತಿಯಾಗದಿರಲು ಅವರಲ್ಲಿರುವ ಸ್ವಭಾವದೋಷ ಹಾಗೂ ಅಹಂಭಾವವೇ ಕಾರಣವಾಗಿದೆ, ಎಂದು ಗುರುಗಳಿಗೆ ತಿಳಿದಿದೆ. ಅವರು ಯಾವ ಅರ್ಥದಲ್ಲಿ ಸಾಧಕರಲ್ಲಿ ಭಾವ ಹೆಚ್ಚಾಗಲು ಸಂಕಲ್ಪ ಮಾಡಿರುವರೋ ಅದರೊಂದಿಗೆ ‘ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಆಗಲಿ’, ಎಂಬ ಸಂಕಲ್ಪವಿರುತ್ತದೆ. ಸಾಧಕರು ತಮ್ಮ ಕ್ರಿಯಮಾಣವನ್ನು ಸರಿಯಾಗಿ ಉಪಯೋಗಿಸಿ ಒಂದು ಕಡೆಯಿಂದ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯ ಹಾಗೂ ಮತ್ತೊಂದು ಕಡೆಯಿಂದ ಭಾವವನ್ನು ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಸಾಧಕರಿಗೆ ಗುರುಗಳ ಸಂಕಲ್ಪದ ಎರಡು ಪಟ್ಟು ಲಾಭವಾಗಲಿದೆ.
ಪ್ರತಿಯೊಬ್ಬರೂ ಭಾವಜಾಗೃತಿಗಾಗಿ ಮಾಡಬೇಕಾಗಿರುವ ಪ್ರಯತ್ನಗಳು ವ್ಯಕ್ತಿಗತವಾಗಿ ಬೇರೆಬೇರೆಯಾಗಿರುತ್ತದೆ. ಸಾಧಕರು ತಮಗೆ ಯಾವ ಕೃತಿಯಿಂದ ಅಥವಾ ಯಾವ ವಿಷಯದಿಂದ ಭಾವಜಾಗೃತವಾಗುತ್ತದೆಯೋ, ಆ ಕೃತಿಯನ್ನು ಮಾಡಿ ಭಾವ ಜಾಗೃತಗೊಳಿಸಲು ಪ್ರಯತ್ನಿಸಿರಿ. ಭಾವವನ್ನು ಹೆಚ್ಚಿಸಲು ದಿನವೆಲ್ಲ ಯಾವ ಪ್ರಸಂಗದಲ್ಲಿ ಹಾಗೂ ಹೇಗೆ ಪ್ರಯತ್ನಿ ಸುವವರಿದ್ದೀರಿ, ಎಂಬ ಬಗ್ಗೆ ಆಯೋಜನೆ ಮಾಡಿದರೆ ಅದು ಸಾಧ್ಯವಾಗುತ್ತದೆ. ಸ್ವಭಾವದೋಷಗಳ ವ್ಯಾಪ್ತಿಯನ್ನು ತೆಗೆಯುವಂತೆಯೇ ಭಾವಜಾಗೃತಿಯ ಪ್ರಸಂಗದ ವ್ಯಾಪ್ತಿಯನ್ನು ತೆಗೆಯಿರಿ. ಆಶ್ರಮದಲ್ಲಿ ಅಥವಾ ಮನೆಯಲ್ಲಿ ಎಲ್ಲಿದ್ದರೂ ಸಾಧನೆ ಮಾಡುವ ಸಾಧಕರು ಈ ರೀತಿಯಲ್ಲಿ ಪ್ರಯತ್ನಿಸಿದರೆ ಆಗ ಅವರಿಗೆ ಗುರುಗಳ ಸಂಕಲ್ಪದ ಲಾಭವಾಗುತ್ತದೆ.
೧. ಬೆಳಗ್ಗೆ ಮಾಡಬೇಕಾದ ಪ್ರಾರ್ಥನೆ
ಅ. ರಾತ್ರಿಯೆಲ್ಲಾ ಶಾಂತನಿದ್ರೆ ಲಭಿಸಿದ್ದಕ್ಕಾಗಿ, ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸಿ ಹಾಗೂ ‘ಹಗಲಿನಲ್ಲಿ ನಿನ್ನ ಅನುಸಂಧಾನದಲ್ಲಿರಲು ನನಗೆ ನೆನಪಿಸು’, ಎಂದು ಪ್ರಾರ್ಥನೆ ಮಾಡಿ ವೈಖರಿಯಲ್ಲಿ ನಾಮಜಪವನ್ನು ಮಾಡುತ್ತಾ ಹಾಸಿಗೆಯಿಂದ ಏಳಿ.
ಆ. ವೈಯಕ್ತಿಕ ಕೆಲಸವನ್ನು ಮಾಡುವಾಗ ‘ಪ್ರತಿಯೊಂದು ಕೃತಿಯೂ ಭಾವಪೂರ್ಣವಾಗಿ ಆಗುವಂತೆ’ ಪ್ರಯತ್ನಿಸಿ.
೨. ಸನಾತನ ಪ್ರಭಾತವನ್ನು ಓದುವಾಗ :
ಸನಾತನ ಪ್ರಭಾತವನ್ನು ಓದುವಾಗ ‘ಇದು ಸನಾತನ ಪ್ರಭಾತವಲ್ಲ ಗುರುಗಳ ಆಜ್ಞಾಪತ್ರವನ್ನೇ ಓದುತ್ತಿದ್ದೇನೆ’, ಎಂಬ ಭಾವವಿಟ್ಟುಕೊಂಡು ಓದಿರಿ.’
೩. ಬೆಳಗ್ಗೆ ಹಾಗೂ ರಾತ್ರಿ ಉಪಾಯದ ಛಾಯಾಚಿತ್ರವನ್ನು ಬದಲಾಯಿಸುವಾಗ
ಅ. ಮೈಮೇಲಿರುವ ಶ್ರೀಕೃಷ್ಣನ ಚಿತ್ರವನ್ನು ಬದಲಾಯಿಸುವಾಗ ‘ನೀನು ಹಗಲೆಲ್ಲಾ/ರಾತ್ರಿಯೆಲ್ಲಾ ನನ್ನ ದೇಹದಲ್ಲಿರುವ (ಉಪಾಯ ಚಿತ್ರ ಹಾಕುವ) ಚಕ್ರಗಳನ್ನು ರಕ್ಷಿಸಿದ್ದೀಯ’, ಎಂದು ಕೃತಜ್ಞತೆ ಸಲ್ಲಿಸಿ. ಇದರೊಂದಿಗೆ ತೊಂದರೆಗೆ ಸಂಬಂಧಪಟ್ಟ ಚಕ್ರವನ್ನೂ ಉಚ್ಚರಿಸಿ.
ಆ. ಶ್ರೀಕೃಷ್ಣನ ಚಿತ್ರಗಳ ಮೇಲಿನಿಂದ ಊದುಬತ್ತಿಯಿಂದ ಆವರಣ ತೆಗೆಯುವಾಗ ‘ನನ್ನ ದೋಷಗಳಿಂದ ನಿನ್ನ ಮೇಲೆ ಆವರಣ ಬಂದಿದೆ ಆದರೂ ನೀನು ನನ್ನನ್ನು ರಕ್ಷಿಸಿದ್ದೀಯ’, ಎಂದು ಕ್ಷಮಾಯಾಚನೆ ಮಾಡಿರಿ. ನಂತರ ನಾಮಜಪ ಮಾಡುತ್ತಾ ಅದರ ಮೇಲಿರುವ ಆವರಣವನ್ನು ತೆಗೆಯಿರಿ ಹಾಗೂ ಉಪಾಯವೆಂದು ಚಿತ್ರವನ್ನು ಹಾಕಿಕೊಳ್ಳುವ ಮುನ್ನ ತಮ್ಮ ರಕ್ಷಣೆಯಾಗಲು ಪ್ರಾರ್ಥನೆ ಮಾಡಿ ಹಾಗೂ ನಂತರ ಚಿತ್ರವನ್ನು ದೇಹದ ಮೇಲೆ ಹಾಕಿಕೊಳ್ಳಿ.
೪. ಉಪಹಾರ ಹಾಗೂ ಮಹಾಪ್ರಸಾದವನ್ನು ಸೇವಿಸುವಾಗ
ಅ. ಶ್ರೀಕೃಷ್ಣ ಹಾಗೂ ಪ.ಪೂ. ಡಾಕ್ಟರರ ಕೃಪೆಯಿಂದ ಪ್ರಸಾದ/ಮಹಾಪ್ರಸಾದವನ್ನು ಸೇವಿಸುವ ಅವಕಾಶವನ್ನು ನೀಡಿರುವುದಕ್ಕಾಗಿ ಶ್ರೀಕೃಷ್ಣನ ಚರಣಗಳಲ್ಲಿ, ಪ.ಪೂ. ಡಾಕ್ಟರರ ಚರಣಗಳಲ್ಲಿ, ಅನ್ನಪೂರ್ಣಾ ದೇವಿಯ ಚರಣಗಳಲ್ಲಿ, ಪ್ರಸಾದ/ಮಹಾಪ್ರಸಾದದ ಸೇವೆಯಲ್ಲಿ ಹಾಗೂ ಪಾತ್ರೆ ತೊಳೆಯುವ ಸೇವೆಯಲ್ಲಿ ಭಾಗವಹಿಸಿದ ಸಾಧಕರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಅದರೊಂದಿಗೆ ತಟ್ಟೆ, ಬಟ್ಟಲು, ಲೋಟ, ಆಸನ, ಮೇಜು, ಯಂತ್ರ, ಉಪಕರಣ, ಆಶ್ರಮ ಹೀಗೆ  ಸಜೀವವಾಗಿರುವ ಎಲ್ಲ ನಿರ್ಜೀವ ವಸ್ತುಗಳಿಗೆ ಕೃತಜ್ಞತೆ ಸಲ್ಲಿಸಿ ‘ಈ ಕೃತಜ್ಞತಾಭಾವವನ್ನು ಜಾಗೃತವಾಗಿಡಲು ಕಲಿಸಿಕೊಡಿ’, ಎಂದು ಪ್ರಾರ್ಥನೆ ಮಾಡಿರಿ. ನಂತರ ಮೊದಲ ತುತ್ತನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀಕೃಷ್ಣನಿಗೆ ‘ಮೊದಲ ತುತ್ತನ್ನು ನಾನು ನಿನಗೆ ತಿನ್ನಿಸುತ್ತೇನೆ. ಅದನ್ನು ನೀನು ಸೇವಿಸಿ ಆ ಉಚ್ಛಿಷ್ಟವನ್ನು ನನಗೆ ನೀಡು’, ಎಂದು ತುತ್ತಿನಲ್ಲಿ ಸ್ವಲ್ಪ ಶ್ರೀಕೃಷ್ಣನಿಗಾಗಿ ತೆಗೆದಿಟ್ಟು ನಂತರ ‘ಅದನ್ನು ಅವನು ನೀಡಿದ್ದಾನೆ’, ಎಂಬ ಭಾವದಿಂದ ಮೊದಲು ಅದನ್ನು ಸೇವಿಸಿ ಹಾಗೂ ನಂತರ ಭೋಜನ/ತಿಂಡಿಯನ್ನು ಸೇವಿಸಿ. ಪ್ರಸಾದ ಮಹಾಪ್ರಸಾದ ಸೇವಿಸುವಾಗ ಪ್ರತಿಯೊಂದು ತುತ್ತಿನೊಂದಿಗೆ ‘ಕೃಷ್ಣ’ ‘ಕೃಷ್ಣ’ ಎಂದು ಜಪಿಸಿ.  ಪ್ರಸಾದ/ಮಹಾಪ್ರಸಾದವಾದ ಬಳಿಕ ಕೃತಜ್ಞತೆ ವ್ಯಕ್ತಪಡಿಸಿರಿ.
೫. ಅತ್ತರ್ ಹಾಗೂ ಕರ್ಪೂರದ ಉಪಾಯ ಮಾಡುವಾಗ : ಅತ್ತರನ್ನು ಮಣಿಕಟ್ಟಿಗೆ ಹಚ್ಚಿಕೊಳ್ಳುವಾಗ ಅತ್ತರಿನಿಂದ ಮಣಿಕಟ್ಟಿನ ಮೇಲೆ ‘ಶ್ರೀಕೃಷ್ಣ’ ಎಂದು ಬರೆಯಿರಿ ಹಾಗೂ ‘ಯಾವ ರೀತಿ ಈ ೩ ಅಕ್ಷರಗಳು ದೇಹದೊಳಗೆ ತಕ್ಷಣ ಹೀರಿಕೊಳ್ಳುವುದೋ, ಅದೇ ರೀತಿ ಈ ದೇಹವನ್ನು ೩ ಅಕ್ಷರಗಳಲ್ಲಿ, ಅಂದರೆ ಶ್ರೀಕೃಷ್ಣನ ಚರಣಗಳಲ್ಲಿ ಗುರುಗಳ ಮಾಧ್ಯಮದಿಂದ ಲೀನವಾಗಿ ಸವೆಯುವಂತಾಗಲಿ, ಎಂದು ಪ್ರಾರ್ಥಿಸಿ.  ಕರ್ಪೂರ ಹಚ್ಚಿಕೊಳ್ಳುವಾಗಲೂ ಈ ರೀತಿ ಪ್ರಾರ್ಥಿಸಬಹುದು.
೬. ಆರತಿ ಮಾಡುವಾಗ ಇಟ್ಟುಕೊಳ್ಳಬೇಕಾದ ಭಾವ ಹಾಗೂ ಮಾಡಬೇಕಾಗಿದ ಕೃತಿ
ಅ. ಆರತಿಗೆ ಹೋಗುವ ಸಾಧಕರು ಆರತಿಯ ನಂತರ (ತಮ್ಮ ಸುತ್ತಲು) ಪ್ರದಕ್ಷಿಣೆ ಹಾಕುವಾಗ ಮೊದಲನೇ ಪ್ರದಕ್ಷಿಣೆ ಹಾಕುವಾಗ ‘ಬ್ರಹ್ಮದೇವನ ರೂಪದಲ್ಲಿರುವ ಶ್ರೀಕೃಷ್ಣನ (ಪ.ಪೂ. ಡಾಕ್ಟರರ) ಚರಣಗಳಿಗೆ ವಂದಿಸಿ, ಎರಡನೇ ಬಾರಿ ವಿಷ್ಣುರೂಪಿ ಶ್ರೀಕೃಷ್ಣನ (ಪ.ಪೂ. ಡಾಕ್ಟರರ) ಚರಣಗಳಿಗೆ ವಂದಿಸುತ್ತೇನೆ ಹಾಗೂ ಮೂರನೇ ಬಾರಿ ಶಿವರೂಪಿ ಶ್ರೀಕೃಷ್ಣನ (ಪ.ಪೂ. ಡಾಕ್ಟರರ) ಚರಣಗಳಿಗೆ ವಂದಿಸುತ್ತೇನೆ’, ಎಂದು ಹೇಳುತ್ತಾ ಕೊನೆಗೆ ‘ಗುರುರ್ಬ್ರಹ್ಮಾ...’ ಈ ಶ್ಲೋಕವನ್ನು ಹೇಳಿ.
ಆ. ‘ಜ್ಯಾ ಜ್ಯಾ ಠಿಕಾಣೀ’ ಈ ಶ್ಲೋಕವನ್ನು ಹೇಳುವಾಗ ಕೊನೆಗೆ ’ಶ್ರೀ ಗುರವೇ ನಮಃ ’ ಎಂದು ಮೂರು ಸಲ ಹೇಳುವಾಗ ಅನುಕ್ರಮವಾಗಿ ಶ್ರೀಕೃಷ್ಣ, ಗುರು ಹಾಗೂ ಎಲ್ಲ ಸಾಧಕರಿಗೂ ವಂದಿಸಿರಿ.
ಇ. ಯಾವ ಸಾಧಕರು ಆರತಿಗೆ ಹೋಗುವುದಿಲ್ಲವೋ, ಅವರು ಆರತಿಗಾಗಿ ಶಂಖವನ್ನು ಊದಿದ ತಕ್ಷಣ, ತಾವು ಇರುವ ಜಾಗದಿಂದಲೇ ‘ನನಗೆ ಆರತಿಯ ಚೈತನ್ಯ ಗ್ರಹಿಸಲು ಸಾಧ್ಯವಾಗಲಿ’, ಎಂದು ಪ್ರಾರ್ಥನೆ ಮಾಡಿರಿ.
೭. ಸೇವೆ ಮಾಡುವಾಗ ಇಟ್ಟುಕೊಳ್ಳಬೇಕಾದ ಭಾವ :
ಸೇವೆ ಮಾಡುವಾಗ ಪ್ರಸಾದ, ಮಹಾಪ್ರಸಾದದ ಸಮಯದಲ್ಲಿ ಗಣಕಯಂತ್ರವನ್ನು ಬಂದ್ ಮಾಡುವ ಕ್ಷಣದ ತನಕ ಶ್ರೀಕೃಷ್ಣನು ಸೂಕ್ಷ್ಮದಲ್ಲಿ ಮಾಡಿದ ಮಾರ್ಗದರ್ಶನದ ಬಗ್ಗೆ ಅವನಿಗೆ ಕೃತಜ್ಞತೆಯನ್ನು ಸಲ್ಲಿಸಿ. ಮಾಡಿರುವ ಯೋಗ್ಯ ಕೃತಿಗಳ ಕರ್ತೃತ್ವವನ್ನು ಶ್ರೀಕೃಷ್ಣನಿಗೆ ಸಮರ್ಪಿಸಿ ಹಾಗೂ ತಿಳಿದೋ, ತಿಳಿಯದೆಯೋ ಆಗಿರುವ ತಪ್ಪುಗಳಿಗಾಗಿ ಕ್ಷಮೆಯಾಚನೆ ಮಾಡಿ.
೮. ಭಜನೆಯ ಮಾಧ್ಯಮದಿಂದ ಹೇಗೆ ಭಾವ ಜಾಗೃತಿ ಮಾಡುವುದು ? :
ಆಗಾಗ ಸೇವೆಯ ಸಮಯದಲ್ಲಿ ತಮಗೆ ಅನ್ವಯವಾಗುವಂತೆ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಹೇಳಿರಿ ಅಥವಾ ಕೇಳಿರಿ.
‘ಗುರುಗಳ ಸಂಕಲ್ಪದಿಂದ ನಮ್ಮೆಲ್ಲ ಸಾಧಕರಲ್ಲಿರುವ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಯಾಗಲಿ ಹಾಗೂ ಸುಪ್ತಾವಸ್ಥೆಯಲ್ಲಿರುವ ಭಾವವು ಜಾಗೃತವಾಗಲಿ’, ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ. ಪ.ಪೂ. ಡಾಕ್ಟರರು ಸೂಚಿಸಿದ ಅಂಶಗಳನ್ನು ಅವರ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ. - (ಪೂ.) ಶ್ರೀ. ಅಶೋಕ ಪಾತ್ರೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೨.೪.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರುಗಳು ಸಾಧಕರಿಗೆ ಭಾವಜಾಗೃತಿಯಾಗಲು ಮಾಡಿರುವ ಸಂಕಲ್ಪದ ಲಾಭ ಪಡೆದುಕೊಳ್ಳೋಣ !