ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಕೃತಿಯ ಸ್ತರದ ಕೆಲವು ಅಂಶಗಳು

೨೭ ರಿಂದ ೩೦ ಜೂನ್ ೨೦೧೬ ಈ ಕಾಲಾವಧಿಯಲ್ಲಿ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಖಿಲ ಭಾರತೀಯ ಸಾಧನಾವೃದ್ಧಿ ಶಿಬಿರವು ಜರುಗಿತು. ಈ ಸಂದರ್ಭದಲ್ಲಿ, ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗೆ ಸಂಬಂಧಪಟ್ಟಂತೆ ಬರುವ ಅಡಚಣೆಗಳನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ಪರಾತ್ಪರ ಗುರುಗಳಾದ ಡಾ. ಆಠವಲೆಯವರು ಆಗಾಗ ನೀಡಿದ ಮಾರ್ಗದರ್ಶನದಲ್ಲಿನ ಅಂಶಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
೧. ಸಾಧನೆಯ ಅಡಿಪಾಯವು ಸುಭದ್ರವಾಗುವುದರ ಮಹತ್ವ
ಸಾಧನೆಯ ಅಡಿಪಾಯವು ಸುಭದ್ರವಾಯಿತೆಂದರೆ, ಅರ್ಥಾತ್ ಸ್ವಭಾವ ದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯಾಗ ತೊಡಗಿದ ನಂತರ ತನ್ನ ಪ್ರಕೃತಿಗನುಸಾರ ವ್ಯಷ್ಟಿ ಅಥವಾ ಸಮಷ್ಟಿ ಸಾಧನೆಯನ್ನು ಮಾಡಬೇಕು.
೨. ಸಾಧಕರ ಮನಸ್ಸಿನ ಮೇಲೆ ಸಾಧನೆಯ ಮಹತ್ವವನ್ನು ಬಿಂಬಿಸಬೇಕು
ರೋಗಿಗಳಿಗೆ ಔಷಧಿಯ ಮಹತ್ವವು ತಿಳಿದಿರುತ್ತದೆ; ಆದುದರಿಂದ ಅವರು ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಾರೆ, ಅಂತೆಯೇ ಸಾಧನೆಯ ಮಹತ್ವವನ್ನು ಸಾಧಕರ ಮನಸ್ಸಿನ ಮೇಲೆ ಬಿಂಬಿಸಿದರೆ ಅವರು ನಿಯಮಿತವಾಗಿ ಸಾಧನೆ ಮಾಡುತ್ತಾರೆ.

೩. ಸಾಧನೆಯು ಸರಿಯಾಗಿ ಆಗುತ್ತಿಲ್ಲವಾದರೆ, ತನಗೆ ತಾನೇ ಪರಿಣಾಮಕಾರಿ ಶಿಕ್ಷೆಯನ್ನು 
ನೀಡಿದರೆ ಕೆಲವೇ ತಿಂಗಳುಗಳಲ್ಲಿ ಸಾಧನೆಯು ಸರಿಯಾಗಿ ಆಗತೊಡಗುತ್ತದೆ
ಶಿಕ್ಷೆಯ ಭಯದಿಂದಾಗಿ ಜಗತ್ತು ಅಲ್ಪಸ್ವಲ್ಪವಾದರೂ ವ್ಯವಸ್ಥಿತವಾಗಿ ನಡೆಯುತ್ತದೆ. ಆದುದರಿಂದ ತನ್ನಿಂದ ಸಾಧನೆಯು ಸರಿಯಾಗಿ ಆಗದಿದ್ದರೆ ತನಗೆ ಪರಿಣಾಮಕಾರಕ ಶಿಕ್ಷೆಯನ್ನು ನೀಡಿರಿ, ಉದಾ. ಭೋಜನ ಸೇವಿಸದಿರುವುದು. ಆ ಶಿಕ್ಷೆಯಿಂದ ಪರಿಣಾಮವಾಗದಿದ್ದರೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಕೆಲವೇ ತಿಂಗಳುಗಳಲ್ಲಿ ಸಾಧನೆಯು ಸರಿಯಾಗಿ ಆಗತೊಡಗುತ್ತದೆ.
೪. ಶೇ. ೬೦ ರ ಆಧ್ಯಾತ್ಮಿಕ ಮಟ್ಟವನ್ನು ತಲುಪುವುದರ ಮಹತ್ವ
೪ ಅ. ಶೇ. ೬೦ ರ ಆಧ್ಯಾತ್ಮಿಕ ಮಟ್ಟದ ನಂತರವೇ ಮನೋಲಯ ವಾಗಲು ಆರಂಭವಾಗುತ್ತದೆ. ಹಾಗಾಗಿ ಸಾಧನೆಯು ಸರಿಯಾಗಿ ಆಗುತ್ತಿಲ್ಲ ಎನ್ನುವ ಬಗ್ಗೆ ದುಃಖ ಪಡಬೇಡಿ ! : ಶೇ. ೬೦ ರ ಆಧ್ಯಾತ್ಮಿಕ ಮಟ್ಟವನ್ನು ತಲಪುವ ತನಕ ಮನಸ್ಸು ಕಾರ್ಯನಿರತವಿರುವುದರಿಂದ ಸಾಧನೆಯಲ್ಲಿ ಹಲವಾರು ಅಡಚಣೆಗಳು ಬರುತ್ತವೆ. ಎಲ್ಲರ ಸಂದರ್ಭದಲ್ಲಿಯೂ ಇದು ಹೀಗೆಯೇ ಆಗುತ್ತದೆ. ಆದ್ದರಿಂದ ತನ್ನ ಸಾಧನೆಯು ಸರಿಯಾಗಿ ಆಗುತ್ತಿಲ್ಲ ಎನ್ನುವುದರ ಬಗ್ಗೆ ದುಃಖ ಪಡಬಾರದು. ಸಾಧನೆಯ ಪ್ರಯತ್ನವನ್ನು ಮುಂದುವರಿಸುತ್ತಲಿರಬೇಕು. ಶೇ. ೬೦ ರ ಆಧ್ಯಾತ್ಮಿಕ ಮಟ್ಟದ ನಂತರ ಮನೋಲಯವಾಗಲು ಪ್ರಾರಂಭವಾಗುತ್ತದೆ. ಆಗ ಸಾಧನೆಯು ಉತ್ತಮವಾಗತೊಡಗುತ್ತದೆ.
೪ ಆ. ಶೇ. ೬೦ ರ ಆಧ್ಯಾತ್ಮಿಕ ಮಟ್ಟದ ನಂತರ ಸಾಧನೆಯಲ್ಲಿ ಸಾತತ್ಯ ಬರುವುದರಿಂದ ಅಧೋಗತಿಯಾಗುವುದರ ಪ್ರಮಾಣವು ಕಡಿಮೆ ಯಾಗುವುದು : ಸಾಧನೆಯಲ್ಲಿ ೨-೩ ಹೆಜ್ಜೆ ಮುಂದೆ ಹೋಗುವುದು ಮತ್ತು ೧-೨ ಹೆಜ್ಜೆ ಹಿಂದೆ ಬರುವುದು ನಿರಂತರವಾಗಿ ನಡೆಯುತ್ತಿರುತ್ತದೆ. ಶೇ. ೬೦ ರ ಆಧ್ಯಾತ್ಮಿಕ ಮಟ್ಟವನ್ನು ದಾಟಿದ ನಂತರ ಮನೋಲಯವಾಗಲು ಆರಂಭವಾಗುವುದರಿಂದ ಹಿಂದೆ ಬರುವುದರ ಪ್ರಮಾಣವು ನಿಧಾನವಾಗಿ ಕಡಿಮೆಯಾಗತೊಡಗುತ್ತದೆ. ಆಧ್ಯಾತ್ಮಿಕ ಮಟ್ಟವು ಶೇ. ೭೦, ಶೇ. ೮೦ ಹೀಗೆ ಹೆಚ್ಚುತ್ತಾ ಹೋದಂತೆ ಹಿಂದೆ ಬರುವುದರ ಪ್ರಮಾಣವು ಕಡಿಮೆಯಾಗುತ್ತಾ ಹೋಗಿ ಶೇ. ೯೦ ರ ನಂತರ ಮುಂದೆಯೇ ಹೋಗುತ್ತಿರುತ್ತೇವೆ.
೫. ಸಾಧನೆಯ ಸಂದರ್ಭದಲ್ಲಿ ‘ಈಗಿಲ್ಲದಿದ್ದರೆ ಮತ್ತೆಂದೂ ಇಲ್ಲ’ (Now or Never) ಎಂಬ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಸಾಧನೆಯನ್ನು ಮಾಡಬೇಕು, ಇಲ್ಲದಿದ್ದರೆ ಸಾಧನೆ ಎಂದಿಗೂ ಆಗಲಾರದು.
೬. ಬೇರೆಯವರು ತನ್ನನ್ನು ಒಳ್ಳೆಯವನು ಎನ್ನಬೇಕು (ಹೊಗಳಬೇಕು) ಎನ್ನುವುದಕ್ಕಿಂತ ದೇವರು ತನ್ನನ್ನು ಒಳ್ಳೆಯವನು ಎನ್ನಬೇಕು (ಹೊಗಳ ಬೇಕು) ಎಂದೆನಿಸಬೇಕು.
೭. ತಂದೆ-ತಾಯಿಯವರು ಅನಾರೋಗ್ಯದಲ್ಲಿದ್ದಾಗ ಅಥವಾ ವೃದ್ಧಾಪ್ಯದಲ್ಲಿ ಸೇವೆ ಮಾಡಬೇಕಾಗಿ ಬಂದರೆ ಸಂತರ ಸೇವೆಯನ್ನು ಮಾಡುತ್ತಿದ್ದೇವೆ ಎನ್ನುವ ಭಾವವನ್ನು ಇಟ್ಟುಕೊಂಡರೆ ಸಾಧನೆಯಾಗುವುದು
ಸಾಧನೆಯನ್ನು ವಿರೋಧಿಸುವ ಅಥವಾ ಒಳ್ಳೆಯವರಿಲ್ಲದ ತಂದೆ-ತಾಯಿಯವರ ಸೇವೆಯನ್ನು ಅವರ ಅನಾರೋಗ್ಯದ ಕಾಲದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಮಾಡಬೇಕಾಗಿ ಬಂದರೆ ಆ ಸೇವೆಯನ್ನು ಸಂತರ ಸೇವೆ ಯನ್ನು ಮಾಡುತ್ತಿದ್ದೇವೆ ಎಂಬ ಭಾವದಿಂದ ಮಾಡಬೇಕು. ಅದರಿಂದ ಅವರ ಕಾಳಜಿ ತೆಗೆದುಕೊಳ್ಳುವುದರ ಜೊತೆಗೆ ನಮ್ಮ ಸಾಧನೆಯೂ ಆಗುತ್ತದೆ.
೮. ವಾಸನೆಯ ವಿಚಾರಗಳನ್ನು ಶಾಶ್ವತವಾಗಿ ಕಡಿಮೆಯಾಗಿಸುವ ಪ್ರಭಾವಶಾಲಿ ಉಪಾಯ - ಭಾವಜಾಗೃತಿ
ಸಾಧನೆಯಲ್ಲಿನ ಒಂದು ಬಹು ದೊಡ್ಡ ಅಡಚಣೆಯೆಂದರೆ ವಾಸನೆಯ ವಿಚಾರಗಳು. ವಾಸನೆಯ ವಿಚಾರಗಳು ಮನಸ್ಸಿಗೆ ಬರುವುದು ತಪ್ಪೇನಲ್ಲ. ಹಸಿವು-ಬಾಯಾರಿಕೆ ಆಗುವ ಹಾಗೇ ವಾಸನಾಪೂರ್ತಿಯ ಆಸಕ್ತಿ ಬೆಳೆಯು ತ್ತದೆ. ಹೀಗಿದ್ದರೂ ಅದನ್ನು ಜಯಿಸಲು, ಎಂದರೆ ಆ ವಿಚಾರವನ್ನು ತಾತ್ಕಾಲಿಕವಾಗಿ ಹೋಗಲಾಡಿಸಲು ತನಗೆ ತಾನು ಚಿವುಟಿಕೊಳ್ಳುವುದು ಎಂಬಂತಹ ಶಿಕ್ಷೆ ಮಾಡಿಕೊಳ್ಳಬಹುದು. ಈ ಅಡಚಣೆಯುನ್ನು ಶಾಶ್ವತವಾಗಿ ದೂರಗೊಳಿಸುವ ಏಕೈಕ ಸಾಧನವೆಂದರೆ ಭಾವಜಾಗೃತಿ. ಭಾವಜಾಗೃತಿಯಿಂದ ಸಿಗುವ ಆನಂದವು ವಾಸನೆಯ ವಿಚಾರಗಳಿಂದ ಸಿಗುವ ಸುಖಕ್ಕಿಂತ ಅನಂತ ಪಟ್ಟು ಹೆಚ್ಚಾಗಿರುತ್ತದೆ. ಆದ್ದರಿಂದ ವಾಸನೆಯ ವಿಚಾರಗಳು ನಾಶವಾಗಲು ಸಹಾಯವಾಗುತ್ತದೆ.
೯. ಬುದ್ಧಿಶಕ್ತಿಯಿಂದ ಅಧ್ಯಾತ್ಮದಲ್ಲಿನ ವಿಷಯವನ್ನು ಕಲಿಯುವುದಕ್ಕಿಂತ ಭಾವಾವಸ್ಥೆಯಲ್ಲಿರುವುದು ಮಹತ್ವದ್ದು
ಇದಕ್ಕೆ ಕಾರಣವೇನೆಂದರೆ ಅಧ್ಯಾತ್ಮವು ಬುದ್ಧಿಯನ್ನು ಮೀರಿರುವ ಶಾಸ್ತ್ರವಾಗಿದೆ ಮತ್ತು ಭಾವವೂ ಬುದ್ಧಿಶಕ್ತಿಯ ಆಚೆಯದ್ದಾಗಿದೆ.
೧೦. ಸಾಧನೆಯನ್ನು ವಿರೋಧಿಸುವವರಿಗೆ ಪ್ರತ್ಯುತ್ತರವನ್ನು ನೀಡುವ ಬದಲು ಭಾವಾವಸ್ಥೆಯಲ್ಲಿರಿ
ಮನೆಯಲ್ಲಿ ಸಾಧನೆಗೆ ವಿರೋಧ ಮಾಡುವವರು ಆ ಬಗ್ಗೆ ಗೊಣಗುತ್ತಿದ್ದರೆ ಅವರ ಮಾತುಗಳೆಡೆ ಗಮನ ಹರಿಸದೇ ಭಾವಾವಸ್ಥೆಯಲ್ಲಿರಬೇಕು. ಇದರಿಂದ ನಮ್ಮ ಮನಸ್ಸು ಒತ್ತಡಕ್ಕೊಳಗಾಗುವುದಿಲ್ಲ ಅಥವಾ ಅವರಿಗೆ ಉತ್ತರ ಕೊಡುವುದರಲ್ಲಿ ನಮ್ಮ ಶಕ್ತಿಯು ವ್ಯಯವಾಗುವುದಿಲ್ಲ/ಖರ್ಚಾಗುವುದಿಲ್ಲ.
೧೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಯಿಂದಾಗುವ ಲಾಭಗಳು
ಅ. ಪ್ರಕ್ರಿಯೆಯಲ್ಲಿ ಎಲ್ಲ ಜನರೂ ತಮ್ಮ ಮತ್ತು ಇತರರ ತಪ್ಪನ್ನು ಮನಮುಕ್ತವಾಗಿ ಹೇಳುತ್ತಾರೆ. ಕೆಲ ದಿನಗಳ ನಂತರ, ಅವರಿಗೆ ತಮ್ಮ ತಪ್ಪನ್ನು ಹೇಳಲು ನಾಚಿಕೆಯೆನಿಸುವುದಿಲ್ಲ. ಹೀಗಾದಾಗ, ಪ್ರತಿಮೆ ಕಾಪಾಡುವುದು, ಹಾಗೆಯೇ ಅಹಂಭಾವವು ಕಡಿಮೆಯಾಗಲು ಪ್ರಾರಂಭವಾಗುತ್ತದೆ.
ಆ. ಒಂದು ವೇಳೆ ನಮ್ಮ ಕಡೆಯಿಂದ ತಪ್ಪು ಆಗದಿದ್ದರೂ ಮತ್ತು ಇತರರ ಕಡೆಯಿಂದ ಆಗುತ್ತಿದ್ದಲ್ಲಿ, ಅವರ ಸಂದರ್ಭದಲ್ಲಿ ಪ್ರಕ್ರಿಯೆಯಲ್ಲಿ ನೀಡಿದ ದೃಷ್ಟಿಕೋನವನ್ನು ಅರಿತುಕೊಂಡರೆ ಮುಂದೆ ನಮ್ಮಿಂದ ಆ ತಪ್ಪಾಗುವ ಪ್ರಮೇಯವಿರುವುದಿಲ್ಲ .
೧೨. ತೊಂದರೆ ಇದ್ದವರು ಕುಳಿತು ನಾಮಜಪ ಮಾಡುವುದು ಅವಶ್ಯವಿದೆ
ನಡೆದಾಡುವಾಗ ರಜೋಗುಣ ಹೆಚ್ಚಿರುತ್ತದೆ, ಆದರೆ ಕುಳಿತ ನಂತರ ಅದು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆದುದರಿಂದ ನಾಮಜಪವನ್ನು ಕುಳಿತು ಮಾಡಿದರೆ ನಾಮಜಪದ ಮೇಲೆ ಮನಸ್ಸು ಏಕಾಗ್ರ ಮಾಡಲು ಮತ್ತು ಭಾವ ನಿರ್ಮಾಣವಾಗುವುದಕ್ಕಾಗಿ ಪ್ರಯತ್ನ ಮಾಡುವುದು ಸುಲಭವಾಗುತ್ತದೆ.
೧೩. ಪ್ರಾರ್ಥನೆ
ಕೆಲವು ಸಾಧಕರಿಗೆ ‘ದೇವರ ಬಳಿ ಏನು ಬೇಡಬೇಕು’, ಎಂಬುದು ಗೊತ್ತಾಗುವುದಿಲ್ಲ. ಅವರ ಪೈಕಿ ಕೆಲವರಿಗೆ, ‘ಯೋಗ್ಯವೇನಿದೆಯೋ ಅದನ್ನು ದೇವರು ಕೊಟ್ಟೇಕೊಡುತ್ತಾರೆ’ ಎಂದೆನಿಸುತ್ತದೆ. ಹೀಗಿದ್ದರೂ ಸ್ವಭಾವದೋಷ ಮತ್ತು ಅಹಂನ್ನು ದೂರ ಮಾಡಲು ದೇವರಲ್ಲಿ ಪ್ರಾರ್ಥಿಸಬೇಕು ; ಏಕೆಂದರೆ ಪ್ರಾರ್ಥನೆಯಿಂದಾಗಿ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
೧೪. ‘ಭಾವ’ವೆಂದರೆ ದೇವರ ಕಡೆಗೆ ಹೋಗಲು ಸಿಕ್ಕಿದ ಪಾಸ್‌ಪೋರ್ಟ್ !
೧೫. ದೇವಾಲಯವು ಸಾತ್ತ್ವಿಕವಿರುವುದರ ಮಹತ್ವ
ದೇವಾಲಯದಲ್ಲಿ ಸಾತ್ತ್ವಿಕತೆಯನ್ನು ಕಾಪಾಡುತ್ತಿದ್ದಲ್ಲಿ, ಹಾಗೆಯೇ ಎಲ್ಲ ವಿಧಿಗಳನ್ನು ಧರ್ಮಶಾಸ್ತ್ರಾನುಸಾರ ಮಾಡುತ್ತಿದ್ದಲ್ಲಿ, ಅಲ್ಲಿ ಚೈತನ್ಯ ನಿರ್ಮಾಣವಾಗುತ್ತದೆ. ಆದುದರಿಂದ ಅಲ್ಲಿಗೆ ಹೋದ ನಂತರ ಆವರಣ ಕಡಿಮೆಯಾಗುತ್ತದೆಯೆಂದು ಹಿಂದಕ್ಕೆ ದೇವಾಲಯಕ್ಕೆ ಹೋಗುವುದು ಮಹತ್ವದ್ದಾಗಿತ್ತು. ಈಗ ಮಾತ್ರ ಬಹಳಷ್ಟು ದೇವಾಲಯಗಳು ಅಸಾತ್ತ್ವಿಕ ವಿರುವುದರಿಂದ ಅಲ್ಲಿಗೆ ಹೋದರೆ ಕೇವಲ ಮಾನಸಿಕ ಲಾಭವಾಗುತ್ತದೆ.
೧೬. ಕರ್ಮಯೋಗಕ್ಕನುಸಾರ ಕರ್ಮದ ಫಲದ, ಪ್ರಸಾರದಲ್ಲಿ ಫಲನಿಷ್ಪತ್ತಿಯ ಅಪೇಕ್ಷೆ ಬೇಡ !
‘ನಾವು ಎಷ್ಟು ಪ್ರಯತ್ನ ಮಾಡುತ್ತೇವೆ, ಆದರೂ ಅವಶವಿದ್ದಷ್ಟು ಪ್ರಸಾರವಾಗುವುದಿಲ್ಲ’, ಎಂಬ ವಿಚಾರದಿಂದಾಗಿ ಕೆಲವು ಜನರಿಗೆ ನಿರಾಶೆ ಯಾಗುತ್ತದೆ. ಅವರು ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳು ವುದು ಅವಶ್ಯಕವಿದೆ.
ಅ. ‘ನಾವು ಯೋಗ್ಯ ವ್ಯಕ್ತಿಗಳಿಗೆ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವಲ್ಲ’, ಎಂಬುದರ ಅಭ್ಯಾಸ ಮಾಡಬೇಕು. ಯಾರಿಗೆ ಸಾಧನೆ ಯನ್ನು ಮಾಡಲಿಕ್ಕಿಲ್ಲವೋ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನೂ ಮಾಡುವುದಿರುವುದಿಲ್ಲವೋ ಅಂತಹವರೊಂದಿಗೆ ಮಾತನಾಡುವುದರಲ್ಲಿ ನಮ್ಮ ಸಮಯವನ್ನು ವ್ಯರ್ಥಮಾಡಬಾರದು.
ಆ. ನಾವು ಇತರರ ಪ್ರಶ್ನೆಗಳಿಗೆ ಯೋಗ್ಯ ಉತ್ತರಗಳನ್ನು ನೀಡು ತ್ತಿದ್ದೇವೇನು ? ಎಂಬುದರ ಅಭ್ಯಾಸವನ್ನೂ ಮಾಡಬೇಕು.
ಇ. ಫಲ ಪ್ರಾಪ್ತಿಯಾಗಲು ಕಾಲಮಹಾತ್ಮೆಗನುಸಾರ ಯೋಗ್ಯ ಕಾಲ ಬರುವುದು ಅವಶ್ಯವಿರುತ್ತದೆ.
೧೭. ನಮಗೆ ಜಗತ್ತನ್ನು ಬದಲಿಸಲು ಆಗುವುದಿಲ್ಲ; ಅದಕ್ಕಾಗಿ ನಾವು ಬದಲಾಗಬೇಕು.’
- (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಕೃತಿಯ ಸ್ತರದ ಕೆಲವು ಅಂಶಗಳು