ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !

ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ನಮ್ಮ ಸಂಪೂರ್ಣ ಗಮನ ಗುರಿಯ ಮೇಲಿದ್ದರೆ ಮಾತ್ರ ಹೇಗೆ ಯಶಸ್ವಿಯಾಗುವೆವು ಎಂಬುದು ತಿಳಿಯುತ್ತದೆ.
ಗುರಿಯ ಮೇಲೆ ಸಂಪೂರ್ಣ ಗಮನವಿದ್ದರೆ ಮಾತ್ರ ಯಶಸ್ವಿಯಾಗುವಿರಿ !
ಗುರು ದ್ರೋಣಾಚಾರ್ಯರು ಕೌರವರಿಗೆ ಮತ್ತು ಪಾಂಡವರಿಗೆ ಬಾಣವನ್ನು ಬಿಡುವ ಶಿಕ್ಷಣವನ್ನು ನೀಡುತ್ತಿದ್ದರು. ಈ ವಿದ್ಯೆಯಲ್ಲಿ ಶಿಷ್ಯರು ನಿಪುಣರಾಗುತ್ತಿದ್ದರು. ಒಂದು ದಿನ ದ್ರೋಣಾಚಾರ್ಯರು ಶಿಷ್ಯರನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಅವರು ಒಂದು ಮಣ್ಣಿನ ಪಕ್ಷಿಯನ್ನು ತಂದು ಒಂದು ಮರದ ಕೊಂಬೆಗೆ ಕಟ್ಟಿದರು. ಎಲ್ಲ  ಶಿಷ್ಯರನ್ನು ಒಂದು ಕಡೆ ಸೇರಿಸಿ ಅವರು, ‘ಮರದ ಮೇಲಿರುವ ಆ ಪಕ್ಷಿಯನ್ನು ನೋಡಿರಿ. ಬಾಣ ಬಿಟ್ಟು ಅದರ ತಲೆಯನ್ನು ಯಾರು ಕತ್ತರಿಸುವರು ನೋಡೋಣ’ ಎಂದು ಹೇಳಿದರು. ದ್ರೋಣಾಚಾರ್ಯರು ಯುಧಿಷ್ಠಿರನಿಗೆ, ‘ಮೊದಲು ನಿನ್ನ ಬಾರಿ.
ಬಿಲ್ಲಿಗೆ ಬಾಣವನ್ನು ಜೋಡಿಸು ಮತ್ತು ಆ ಪಕ್ಷಿಯ ಮೇಲೆ ಗುರಿಯಿಡು’ ಎಂದು ಹೇಳಿದರು. ಯುಧಿಷ್ಠಿರನು ಬಿಲ್ಲಿಗೆ ಬಾಣವನ್ನು ಜೋಡಿಸಿ ಪಕ್ಷಿಯ ಮೇಲೆ ಗುರಿಯಿಟ್ಟನು. ದ್ರೋಣಾಚಾರ್ಯರು, ‘ನಿನಗೆ ಈಗ ಆ ಮರ ಕಾಣಿಸುತ್ತಿದೆಯೇ ? ನಾನು ಕಾಣಿಸುತ್ತಿದ್ದೇನೆಯೇ ? ನಿನ್ನ ತಮ್ಮಂದಿರು ಕಾಣಿಸುತ್ತಿದ್ದಾರೆಯೇ ?’ ಎಂದು ಕೇಳಿದರು. ಅದಕ್ಕೆ ಯುಧಿಷ್ಠಿರನು, ‘ನನಗೆ ಆ ಮರ ಕಾಣಿಸುತ್ತಿದೆ, ನೀವೂ ಕಾಣಿಸುತ್ತಿರುವಿರಿ, ನನ್ನ ಸಹೋದರರು ಸಹ ಕಾಣಿಸುತ್ತಿದ್ದಾರೆ’ ಎಂದು ಹೇಳಿದನು. ಆಗ ದ್ರೋಣಾಚಾರ್ಯರು, ‘ನಿನಗೆ ಆ ಪಕ್ಷಿಯ ತಲೆಯನ್ನು ಕತ್ತರಿಸಲು ಆಗುವುದಿಲ್ಲ, ನೀನು ಆ ಕಡೆ ಹೋಗು’ ಎಂದು ಹೇಳಿದರು. ನಂತರ ದುರ್ಯೋಧನನ ಸರದಿಯಿತ್ತು. ಅವನಿಗೂ ದ್ರೋಣಾಚಾರ್ಯರು ಬಿಲ್ಲಿಗೆ ಬಾಣವನ್ನು ಜೋಡಿಸಿ ಗುರಿಯಿಡಲು ಹೇಳಿದರು. ನಂತರ ಅವರು, ‘ದುರ್ಯೋಧನಾ, ನಿನಗೆ ಈಗ ಆ ಮರ ಕಾಣಿಸುತ್ತಿದೆಯೇ ? ನಾನು ಕಾಣಿಸುತ್ತಿದ್ದೇನೆಯೇ ? ನಿನ್ನ ತಮ್ಮಂದಿರು ಕಾಣಿಸುತ್ತಿದ್ದಾರೆಯೇ ?’ ಎಂದು ಕೇಳಿದರು. ದುರ್ಯೋಧನನು ಅದಕ್ಕೆ, ‘ಹೌದು, ನನಗೆ ಮರ ಕಾಣಿಸುತ್ತಿದೆ, ನೀವೂ ಕಾಣಿಸುತ್ತಿದ್ದೀರಿ, ನನ್ನ ಸಹೋದರರು ಸಹ ಕಾಣಿಸುತ್ತಿದ್ದಾರೆ ಮತ್ತು ಪಕ್ಷಿಯೂ ಕಾಣಿಸುತ್ತಿದೆ’ ಎಂದು ಹೇಳಿದನು. ದ್ರೋಣಾಚಾರ್ಯರು ಅವನಿಗೂ ಸಹ ಬದಿಗೆ ಸರಿಯಲು ಹೇಳಿದರು. ದ್ರೋಣಾಚಾರ್ಯರು ಉಳಿದ ಶಿಷ್ಯರಿಗೂ ಇದೇ ಪ್ರಶ್ನೆಯನ್ನು ಕೇಳಿದರು. ಎಲ್ಲರೂ ಇದೇ ರೀತಿ ಉತ್ತರ ನೀಡಿದರು. ಅವರನ್ನೆಲ್ಲರನ್ನೂ ದ್ರೋಣಾಚಾರ್ಯರು ಒಂದು ಬದಿಯಲ್ಲಿ ನಿಲ್ಲಿಸಿದರು. ಕೊನೆಗೆ ಅವರು ಅರ್ಜುನನನ್ನು ಕರೆದರು. ಅರ್ಜುನನು ಬಿಲ್ಲಿಗೆ ಬಾಣವನ್ನು ಹಚ್ಚಿದನು ದ್ರೋಣಾಚಾರ್ಯರು ಅರ್ಜುನನಿಗೆ, ‘ಅರ್ಜುನಾ, ನಿನಗೆ ಈಗ ಆ ಮರ ಕಾಣಿಸುತ್ತಿದೆಯೇ ? ನಾನು ಕಾಣಿಸುತ್ತಿದ್ದೇನೆಯೇ ? ನಿನ್ನ ತಮ್ಮಂದಿರು ಕಾಣಿಸುತ್ತಿದ್ದಾರೆಯೇ ?’ ಎಂದು ಕೇಳಿದರು. ಅರ್ಜುನನು ಅದಕ್ಕೆ ‘ನನಗೆ ಕೇವಲ ಪಕ್ಷಿ ಮಾತ್ರ ಕಾಣಿಸುತ್ತಿದೆ. ಮರ ಕಾಣಿಸುವುದಿಲ್ಲ, ನೀವೂ ಕಾಣಿಸುವುದಿಲ್ಲ ಮತ್ತು ನನ್ನ ಸಹೋದರರು ಸಹ ಕಾಣಿಸುವುದಿಲ್ಲ’ ಎಂದು ಹೇಳಿದನು. ದ್ರೋಣಾಚಾರ್ಯರು ಪ್ರಸನ್ನರಾದರು. ಸ್ವಲ್ಪ ಸಮಯ ತಡೆದು ಅವರು ‘‘ಸರಿಯಾಗಿ ಯೋಚಿಸಿ ಉತ್ತರಕೊಡು ಎಂದು ಹೇಳಿದರು. ನಿನಗೆ ಕೇವಲ ಪಕ್ಷಿ ಮಾತ್ರ ಕಾಣಿಸುತ್ತದೆಯೋ ಅಥವಾ ಬೇರೆ ಏನಾದರೂ ಕಾಣಿಸುತ್ತಿದೆಯೇ, ಎಂದು ಕೇಳಿದಾಗ ಅದಕ್ಕೆ ಅರ್ಜುನನು ‘‘ನನಗೆ ಕೇವಲ ಆ ಪಕ್ಷಿಯ ತಲೆ ಮಾತ್ರ ಕಾಣಿಸುತ್ತಿದೆ,  ಇನ್ನೇನೂ ಕಾಣಿಸುವುದಿಲ್ಲ’’ ಎಂದು ಹೇಳಿದನು. ಅರ್ಜುನನು ನೀಡಿದ ಈ ಉತ್ತರವನ್ನು ಕೇಳಿ ದ್ರೋಣಾಚಾರ್ಯರು ಹರ್ಷಗೊಂಡರು. ಅವರು, 'ಬಾಣ ಬಿಡು' ಎಂದು ಹೇಳಿದರು. ಅರ್ಜುನನು ಬಾಣ ಬಿಟ್ಟನು. ಆ ಬಾಣವು ಸರಿಯಾಗಿ ಪಕ್ಷಿಯ ತಲೆಯನ್ನು ಕತ್ತರಿಸಿತು. ದ್ರೋಣಾಚಾರ್ಯರು ಅರ್ಜುನನ್ನು ಹೊಗಳಿದರು.’ (ಪೂ.) ಡಾ. ವಸಂತ ಬಾಳಾಜಿ ಆಠವಲೆ (ವರ್ಷ ೧೯೯೯)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !