ಸಮರ್ಥ ರಾಮದಾಸಸ್ವಾಮಿಯವರು ಛತ್ರಪತಿ ಶಿವಾಜಿ ಮಹಾರಾಜರ (ಶಿಷ್ಯನ) ಅಹಂ ತೊಲಗಿಸುವುದು !

೧. ಸಮರ್ಥರ ಶಬ್ದಗಳನ್ನು ಕೇಳುತ್ತಲೇ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನವು ತಕ್ಷಣ ನುಚ್ಚುನೂರಾಗುವುದು : ‘ಛತ್ರಪತಿ ಶಿವಾಜಿ ಮಹಾರಾಜರು ಹುಕ್ಕೇರಿ ಪ್ರಾಂತ್ಯದ ಸಾಮನಗಡ ಕೋಟೆಯನ್ನು ಕಟ್ಟುವ ಕೆಲಸವನ್ನು ಆರಂಭಿಸಿದರು. ಅದಕ್ಕೆ ಸಾವಿರಾರು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಒಂದು ದಿನ ಕೆಲಸ ವನ್ನು ನೋಡುತ್ತಿರುವಾಗ ‘ಇಷ್ಟು ಜನರನ್ನು ನಾನು ಸಾಕಿ-ಸಲಹುತ್ತಿದ್ದೇನೆ ಎಂದು ಶಿವಾಜಿಯ ಮನಸ್ಸಿನಲ್ಲಿ ಸಹಜವಾಗಿ ವಿಚಾರ ಬಂದು ಹೋಯಿತು. ‘ಅಭಿಮಾನದಿಂದ ನನ್ನ ಶಿಷ್ಯನ ಮನಸ್ಸು ಕಲುಷಿತವಾಗಿದ್ದರಿಂದ ಅದನ್ನು ಸ್ವಚ್ಛಗೊಳಿಸಬೇಕು’, ಎಂಬ ವಿಚಾರದಿಂದ ಸಮರ್ಥ ರಾಮದಾಸ ಸ್ವಾಮಿಯರು ಕೂಡಲೇ ಸಾಮನಗಡಕ್ಕೆ ಬಂದರು. ಒಮ್ಮೆಲೆ ಸಮರ್ಥರು ಅಲ್ಲಿ ಬಂದಿದ್ದರಿಂದ ಶಿವಾಜಿ ಮಹಾರಾಜರು ಸ್ವಲ್ಪ ಗಲಿಬಿಲಿಗೊಂಡರು.
‘‘ಶಿವಬಾ ! ನಡಿ, ಕೆಲಸ ಹೇಗೆ ಆಗಿದೆಯೆಂದು ನೋಡೋಣ’’ ಎಂದು ಸಮರ್ಥರು ಹೇಳಿದರು. ಆಗ ಛತ್ರಪತಿ ಶಿವಾಜಿ ಮಹಾರಾಜರು ಸಮರ್ಥರೊಂದಿಗೆ ವಿವಿಧ ಸ್ಥಳಗಳನ್ನು ನೋಡುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮದೇ ಗುಂಗಿನಲ್ಲಿರುವುದನ್ನು ಕಂಡ ಸಮರ್ಥರು, ‘‘ಶಿವಬಾ, ನಿಜವಾಗಿಯೂ ನಿನ್ನ ಸಾಮರ್ಥ್ಯ ಎಷ್ಟೆಂದು ವರ್ಣಿಸಲಿ ? (ಕೂಲಿಗಾರರತ್ತ ಬೆರಳು ಮಾಡಿ) ಇಂದು ಈ ಬಡ ಜನರ ಮೇಲೆ ದಯೆ ತೋರದಿದ್ದರೆ ಪಾಪ ಆ ಜನರು ಅನ್ನ ಇಲ್ಲದೆ ಒದ್ದಾಡುತ್ತಿದ್ದರು !’’ ಎಂದರು. ಮುಂದೆ ಒಂದು ಕಲ್ಲಿನತ್ತ ಬೆರಳು ಮಾಡಿ, ‘‘ಶಿವಬಾ, ಜನರನ್ನು ಕರೆದು ಈ ಕಲ್ಲು ಸ್ವಲ್ಪ ಒಡೆಯಲು ಹೇಳು’’ ಎಂದರು. ಜನರು ಬಂದು ಪ್ರಹಾರ ಮಾಡಿದರು. ಕಲ್ಲಿನ ಎರಡು ಹೋಳಾದಾಗ ನೀರಿನಿಂದ ಒಂದು ಕಪ್ಪೆ ಜಿಗಿದು ಹೊರಗೆ ಬಂದಿತು. ಆಗ ಸಮರ್ಥರು, ‘‘ಶಿವಬಾ, ಏನು ನಿನ್ನ ಸಾಮರ್ಥ್ಯ ! ಈ ಕಪ್ಪೆಗೆ ಕಲ್ಲಿನಲ್ಲಿಯೂ ನೀರು ಸಿಗುವ ವ್ಯವಸ್ಥೆಯನ್ನು ಮಾಡಿದಿ’’ ಎಂದರು.
ಸಮರ್ಥರ ಶಬ್ದವನ್ನು ಕೇಳಿದಾಕ್ಷಣ ಶಿವಾಜಿ ಮಹಾರಾಜರ ಅಭಿಮಾನವು ಕೂಡಲೇ ಕೆಳಗಿಳಿಯಿತು. ಅವರು ಸಮರ್ಥರ ಚರಣಗಳನ್ನು ಹಿಡಿದು, ‘ಮಹಾರಾಜರೇ, ನೀವು ಇಂದು ನನ್ನ ಕಣ್ಣುಗಳನ್ನು ತೆರೆದಿರಿ; ಆದರಿಂದ ನಾನು ಎಚ್ಚರಗೊಂಡೆ. ಇಲ್ಲದಿದ್ದರೆ ಇದೇ ರೀತಿಯಲ್ಲಿ ಎಚ್ಚರವಿಲ್ಲದೆ ನಿಶ್ಚಿತವಾಗಿ ದುರ್ಗತಿಗೆ ಹೋಗುತ್ತಿದ್ದೆ !’ ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಮರ್ಥ ರಾಮದಾಸಸ್ವಾಮಿಯವರು ಛತ್ರಪತಿ ಶಿವಾಜಿ ಮಹಾರಾಜರ (ಶಿಷ್ಯನ) ಅಹಂ ತೊಲಗಿಸುವುದು !