ಈಶ್ವರ ಮತ್ತು ಗುರುಗಳಲ್ಲಿ ಸಾಮ್ಯತೆ

ಅ. ಈಶ್ವರ ಮತ್ತು ಗುರುಗಳು ಒಂದೇ ಆಗಿದ್ದಾರೆ: ಗುರುಗಳೆಂದರೆ ಈಶ್ವರನ ಸಾಕಾರ ರೂಪ ಮತ್ತು ಈಶ್ವರನೆಂದರೆ ಗುರುಗಳ ನಿರಾಕಾರ ರೂಪ.
೧. ಬ್ಯಾಂಕಿನ ಹಲವಾರು ಶಾಖೆಗಳಿರುತ್ತವೆ. ಅವುಗಳ ಪೈಕಿ ಸ್ಥಳೀಯ ಶಾಖೆಯಲ್ಲಿ ಖಾತೆಯನ್ನು ತೆರೆದು ಹಣವನ್ನು ತುಂಬಿದರೆ ನಡೆಯುತ್ತದೆ. ಹೀಗೆ ಮಾಡುವುದು ಸುಲಭವೂ ಆಗಿರುತ್ತದೆ. ದೂರದಲ್ಲಿನ ಪ್ರಧಾನ ಕಛೇರಿಗೆ ಹೋಗಿ ಹಣವನ್ನು ತುಂಬ ಬೇಕೆಂದಿರುವುದಿಲ್ಲ. ಹಾಗೆ ಮಾಡಲು ತೊಂದರೆಯನ್ನು ಪಡುವ ಆವಶ್ಯಕತೆಯೂ ಇರುವುದಿಲ್ಲ. ಹಾಗೆಯೇ ಭಾವ, ಭಕ್ತಿ, ಸೇವೆ, ತ್ಯಾಗ ಇತ್ಯಾದಿಗಳನ್ನು ಕಾಣಿಸದೇ ಇರುವ ಈಶ್ವರನಿಗೋಸ್ಕರ ಮಾಡುವುದಕ್ಕಿಂತಲೂ ಅವನ ಸಗುಣ ರೂಪದ, ಅಂದರೆ ಗುರುಗಳಿಗೆ ಮಾಡು ವುದು ಸುಲಭವಾಗಿರುತ್ತದೆ. ಸ್ಥಳೀಯ ಶಾಖೆಯಲ್ಲಿ ತುಂಬಿರುವ ಹಣವು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜಮೆಯಾಗುವಂತೆ ಗುರುಗಳಿಗೆ ಸಲ್ಲಿಸಿದ ಸೇವೆಯೂ ಈಶ್ವರನಿಗೇ ತಲುಪುತ್ತದೆ.

೨. ವಾಮನ ಪಂಡಿತರು ಭಾರತದೆಲ್ಲೆಡೆ ಸಂಚರಿಸಿ ದೊಡ್ಡ-ದೊಡ್ಡ ವಿದ್ವಾಂಸರೆಲ್ಲರನ್ನು ಸೋಲಿಸಿ ಅವರಿಂದ ಪರಾಜಯ ಪತ್ರಗಳನ್ನು ಬರೆಸಿಕೊಂಡರು. ಅವು ಗಳೊಂದಿಗೆ ಹೋಗುತ್ತಿದ್ದಾಗ ಒಂದು ಸಂಜೆ ಒಂದು ಮರದ ಕೆಳಗೆ ಸಂಧ್ಯಾವಂದನೆ ಮಾಡುವುದಕ್ಕೆಂದು ಕುಳಿತುಕೊಂಡರು. ಆಗ ಆ ಗಿಡದ ಮೇಲೆ ಅವರಿಗೆ ಒಂದು ಬ್ರಹ್ಮರಾಕ್ಷಸವು ಕಂಡಿತು. ಅಷ್ಟರಲ್ಲಿಯೇ ಇನ್ನೊಂದು ಬ್ರಹ್ಮರಾಕ್ಷಸವು ಬಂದು ಪಕ್ಕದ ಕೊಂಬೆಯ ಮೇಲೆ ಕುಳಿತುಕೊಳ್ಳಲು ಅನುವಾಯಿತು. ಆಗ ಮೊದಲನೆಯದು ಅದನ್ನು ಅಲ್ಲಿ ಕೂರಲು ಬಿಡದೇ, ‘‘ಈ ಜಾಗವು ವಾಮನ ಪಂಡಿತರಿಗಾಗಿದೆ; ಏಕೆಂದರೆ ಅವರಿಗೆ ತಮ್ಮ ವಿಜಯದ ಬಗ್ಗೆ ಬಹಳ ಅಹಂಕಾರ ವುಂಟಾಗಿದೆ’’ ಎಂದಿತು. ಇದನ್ನು ಕೇಳಿದ ತಕ್ಷಣ ವಾಮನ ಪಂಡಿತರು ಎಲ್ಲ ಪರಾಜಯ ಪತ್ರಗಳನ್ನು ಹರಿದು ಹಾಕಿದರು ಮತ್ತು ತಪಶ್ಚರ್ಯವನ್ನು ಮಾಡಲು ಹಿಮಾಲಯಕ್ಕೆ ಹೋದರು. ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿಯೂ ಅವರಿಗೆ ದೇವರು ದರ್ಶನ ನೀಡಲಿಲ್ಲ. ಆದ್ದರಿಂದ ನಿರಾಶರಾಗಿ ಅವರು ಮೇಲಿಂದ ಪ್ರಪಾತಕ್ಕೆ ಧುಮುಕಿದರು. ಅಷ್ಟರಲ್ಲಿಯೇ ಈಶ್ವರನು ಅವರನ್ನು ಹಿಡಿದು ಕೊಂಡು ಅವರ ತಲೆಯ ಮೇಲೆ ಎಡಗೈಯನ್ನಿಟ್ಟು ಆಶೀರ್ವಾದ ನೀಡಿದನು. ಅನಂತರ ಅವರಿಬ್ಬರ ನಡುವೆ ಈ ಕೆಳಗಿನ ಸಂಭಾಷಣೆಯು ನಡೆಯಿತು.
ಪಂಡಿತ : ತಲೆಯ ಮೇಲೆ ಎಡಗೈಯನ್ನೇಕೆ ಇಟ್ಟೆ ? ಬಲಗೈಯನ್ನು ಏಕೆ ಇಡಲಿಲ್ಲ ?
ಈಶ್ವರ : ಆ ಅಧಿಕಾರವು ಗುರುಗಳದ್ದಾಗಿದೆ.
ಪಂಡಿತ : ಗುರುಗಳ ಭೇಟಿಯು ಎಲ್ಲಿ ಆಗುವುದು ?
ಈಶ್ವರ : ಸಜ್ಜನಗಡದಲ್ಲಿ
ತರುವಾಯ ವಾಮನ ಪಂಡಿತರು ಸಮರ್ಥ ರಾಮದಾಸ ಸ್ವಾಮಿಗಳ ದರ್ಶನಕ್ಕೆಂದು ಸಜ್ಜನಗಡಕ್ಕೆ ಹೋದರು. ಅಲ್ಲಿ ಸಮರ್ಥ ರಾಮದಾಸರು ಅವರ ಬೆನ್ನಿನ ಮೇಲೆ ಬಲಗೈಯನ್ನಿಟ್ಟು ಅವರಿಗೆ ಆಶೀರ್ವಾದ ಮಾಡಿದರು.
ಪಂಡಿತ : ತಲೆಯ ಮೇಲೆ ಕೈಯನ್ನಿಟ್ಟು ಏಕೆ ಆಶೀರ್ವಾದ ನೀಡಲಿಲ್ಲ ?
ಸ್ವಾಮಿಗಳು : ಈಶ್ವರನು ಕೈ ಇಟ್ಟಿದ್ದಾನಲ್ಲ !
ಪಂಡಿತ : ಹಾಗಾದರೆ, ಈಶ್ವರನು ‘ತಲೆಯ ಮೇಲೆ ಕೈಯಿಡುವ ಅಧಿಕಾರವು ಗುರುಗಳದ್ದಾಗಿದೆ’ ಎಂದೇಕೆ ಹೇಳಿದನು ?
ಸ್ವಾಮಿಗಳು : ಈಶ್ವರನ ಬಲಗೈ ಮತ್ತು ಎಡಗೈ ಒಂದೇ ಆಗಿದೆ. ಈಶ್ವರ ಮತ್ತು ಗುರುಗಳೂ ಒಂದೇ ಆಗಿದ್ದಾರೆ, ಎನ್ನುವುದು ನಿನಗೇಕೆ ತಿಳಿಯುವುದಿಲ್ಲ ! - ಪ.ಪೂ. ಕಾಣೇ ಮಹಾರಾಜ, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.
೩. ಆದಿಶಂಕರಾಚಾರ್ಯರು ‘ಸರ್ವವೇದಾಂತ ಸಿದ್ಧಾಂತಸಾರಸಂಗ್ರಹ’ ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ -
ಜನ್ಮಾನೇಕಶತೈಃ ಸದಾದರಯುಜಾ ಭಕ್ತ್ಯಾ ಸಮಾರಾಧಿತೋ
ಭಕ್ತೈರ್ವೈದಿಕಲಕ್ಷಣೇನ ವಿಧಿನಾ ಸಂತುಷ್ಟ ಈಶಃ ಸ್ವಯಮ್
ಸಾಕ್ಷಾತ್ ಶ್ರೀ ಗುರುರೂಪಮೇತ್ಯ ಕೃಪಯಾ ದೃಗ್ಗೋಚರಃ ಸನ್ ಪ್ರಭುಃ
ತತ್ತ್ವಂ ಸಾಧು ವಿಬೋಧ್ಯ ತಾರಯತಿ ತಾನ್ ಸಂಸಾರದುಃಖಾರ್ಣವಾತ್ ॥೨೫೪॥
ಅರ್ಥ : ಯಾವಾಗ ಭಕ್ತರು ನೂರಾರು ಜನ್ಮಗಳಲ್ಲಿ ಸಾತ್ತ್ವಿಕ, ಶ್ರದ್ಧಾಯುತ, ವೈದಿಕ ಪದ್ಧತಿಯಿಂದ ವಿಧಿಪೂರ್ವಕವಾಗಿ ಈಶನ ಉತ್ತಮ ಆರಾಧನೆ ಮಾಡುತ್ತಾರೆಯೋ, ಆಗ (ಯಾವುದಾದರೊಂದು ಜನ್ಮದಲ್ಲಿ) ಪ್ರಭು ಈಶ, ಅಂದರೆ ಶಂಕರನು ಸಂತುಷ್ಟನಾಗಿ ಸಾಕ್ಷಾತ್ ಗುರುರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ನಂತರ ಅವರು ಉತ್ತಮ ರೀತಿಯಲ್ಲಿ ತತ್ತ್ವಬೋಧನೆ ಮಾಡಿ ಸಂಸಾರರೂಪಿ ದುಃಖಸಾಗರದಿಂದ ಆ ಶಿಷ್ಯ ನನ್ನು ಉದ್ಧರಿಸುತ್ತಾರೆ.
ಇದೇ ಗ್ರಂಥದಲ್ಲಿ ಹೀಗೆಯೂ ಹೇಳಲಾಗಿದೆ,
ಶಿವ ಏವ ಗುರುಃ ಸಾಕ್ಷಾತ್ ಗುರುರೇವ ಶಿವಃ ಸ್ವಯಮ್
ಉಭಯೋರಂತರಂ ಕಿಂಚಿತ್ ನ ದ್ರಷ್ಟವ್ಯಂ ಮುಮುಕ್ಷುಭಿಃ ॥ ೨೫೫ ॥
ಅರ್ಥ : ಶಿವನೆಂದರೆ ಸಾಕ್ಷಾತ್ ಗುರು ಮತ್ತು ಗುರುಗಳೆಂದರೆ ಸ್ವತಃ ಶಿವ. ಮುಮುಕ್ಷುಗಳು ಅವರ ನಡುವೆ ಸ್ವಲ್ಪವೂ ಭೇದವೆನಿಸಬಾರದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಈಶ್ವರ ಮತ್ತು ಗುರುಗಳಲ್ಲಿ ಸಾಮ್ಯತೆ