ಗುರು ರಾಮಾನಂದರು ಕಬೀರರ ಪರೀಕ್ಷೆಯನ್ನು ತೆಗೆದುಕೊಳ್ಳಲು ಎಸೆದ ಪಾದುಕೆಯು ಅವನ ಹಣೆಗೆ ತಾಗಿ ದೊಡ್ಡ ತೂತಾಗುವುದು, ಅವರು ಆ ಪಾದುಕೆಯನ್ನು ತನ್ನ ಹೃದಯಕ್ಕೆ ಹಿಡಿದಾಗ ಗುರುಗಳು ಪ್ರಸನ್ನರಾಗುವುದು

ಒಂದು ದಿನ ಕಬೀರರು ಪೇಟೆಗೆ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಮನೆಯ ಕಟ್ಟೆಯ ಮೇಲೆ ಓರ್ವ ಹೆಂಗಸು ಜೋಳವನ್ನು ಬೀಸುತ್ತಿದ್ದಳು. ಅವಳ ಬೀಸುಗಲ್ಲಿನತ್ತ ಅವರ ಗಮನ ಹೋಯಿತು. ಅದನ್ನು ನೋಡಿ ಅವರಿಗೆ ಒಮ್ಮೆಲೆ ಅಳು ಬಂದಿತು. ತನ್ನ ಸಂದೇಹದ ಪರಿಮಾರ್ಜನೆ ಆಗದೆ ಅಲ್ಲಿಂದ ಅಲುಗಾಡಬಾರದೆಂಬ ನಿಶ್ಚಯದಿಂದ ಅವರು ಅಲ್ಲಿಯೇ ನಿಂತುಕೊಂಡರು.
ಸ್ವಲ್ಪ ಸಮಯದ ನಂತರ ಸ್ವಾಮಿ ರಾಮಾನಂದರ ಶಿಷ್ಯರಾದ ನಿಪಟ ನಿರಂಜನರು ಆ ಮಾರ್ಗದಿಂದ ಹೋಗುತ್ತಿರುವಾಗ ಅವರ ಗಮನವು ಕಬೀರರ ಕಡೆಗೆ ಹೋಯಿತು ಮತ್ತು ಅವರು ಕಬೀರರಿಗೆ ಅಳುವ ಕಾರಣವನ್ನು ಕೇಳಿದರು. ಆಗ ಕಬೀರರು ಕಣ್ಣುಗಳನ್ನು ಒರೆಸಿ ಬೀಸುವ ಕಲ್ಲಿನೆಡೆ ಬೆರಳು ತೋರಿಸುತ್ತಾ, ಅಲ್ಲಿ ನೋಡಿರಿ, ಇದರಲ್ಲಿ ಎಷ್ಟು ಜೋಳಗಳನ್ನು ಹಾಕುತ್ತಾರೆಯೋ ಅಷ್ಟರದ್ದು ಹಿಟ್ಟು ಆಗುತ್ತಿದೆ, ಅದರಂತೆ ನಮ್ಮದು ಕೂಡಾ ಈ ಭವಚಕ್ರದಲ್ಲಿ ಹೀಗೆಯೇ ಹಿಟ್ಟಾಗು ವುದು ಎಂಬ ವಿಚಾರದಿಂದ ನನಗೆ ಅತ್ಯಂತ ಕೆಡುಕೆನಿಸುತ್ತಿದೆ ಎಂದು ಹೇಳಿದರು. ಆಮೇಲೆ ನಿಪಟ ನಿರಂಜನರು ಬೀಸುಗಲ್ಲಿನ ಮೇಲ್ಬಾಗದ ಕಲ್ಲನ್ನು ಎತ್ತಿ ನಡುವಿನ ಗೂಟದೆಡೆಗೆ ಬೆರಳು ತೋರಿಸುತ್ತಾ, ಈ ಗೂಟದ ಸುತ್ತಲೂ ಇರುವ ಜೋಳಗಳೆಲ್ಲವೂ ಗಟ್ಟಿಯಾಗಿವೆ ಮತ್ತು ಉಳಿದ ಜೋಳಗಳು ಮಾತ್ರ ಹಿಟ್ಟಾಗಿದೆ. ಅದರಂತೆ ಸದ್ಗುರುವಿನ ಸಹಾಯ ಪಡೆಯುವವರು ಕಾಲಚಕ್ರದಲ್ಲಿ ಸಿಲುಕಿಕೊಳ್ಳುವುದಿಲ್ಲ ಎಂದು ಹೇಳಿದರು.
ಅದರಂತೆ ಅವರು ಕಬೀರರಿಗೆ ಸಮಾಧಾನ ಪಡಿಸಿದರು ಮತ್ತು ‘‘ನೀನು ರಾಮಾನಂದರಿಗೆ ಶರಣಾಗು, ಅದರಿಂದ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದು’’ ಎಂದು ಹೇಳಿದರು.
ಆಗ ಕಬೀರರು ರಾಮಾನಂದರ ಆಶ್ರಮಕ್ಕೆ ಹೋದರು. ಕಬೀರರು ಯವನ ಜಾತಿಯವರಾಗಿದ್ದಾರೆ ಎಂದು ತಿಳಿದಾಗ ರಾಮಾನಂದರ ಶಿಷ್ಯರಲ್ಲಿ ಒಬ್ಬನು, ‘‘ನೀನು ನೀಚ ಜಾತಿಯವನಾಗಿರುವೆ; ಆದುದರಿಂದ ನಮ್ಮ ಗುರುಗಳು ನಿನ್ನನ್ನು ಸ್ವೀಕರಿಸುವುದಿಲ್ಲ’’, ಎಂದು ಹೇಳಿ ಅವರಿಗೆ ಹೊರಗಿಂದಲೇ ಕಳುಹಿಸಿದನು. ವಾಸ್ತವದಲ್ಲಿ ಗುರುಗಳಿಗೆ ಯಾವುದೇ ರೀತಿಯ ಭೇದಭಾವವಿರುವುದಿಲ್ಲ.
ನಂತರ ಸ್ವಾಮಿ ರಾಮಾನಂದರು ಪ್ರತಿದಿನ ಬೆಳಗ್ಗೆ ಸ್ನಾನಕ್ಕಾಗಿ ಗಂಗಾನದಿಯ ದಂಡೆಗೆ ಹೋಗುತ್ತಾರೆಂಬುದನ್ನು ತಿಳಿದು ಕಬೀರರು ಆ ರಾತ್ರಿ ಗಂಗಾ ನದಿಯ ದಂಡೆಯಲ್ಲಿ ಹೋಗಿ ಮಲಗಿದರು, ಎಂದಿನಂತೆ ಮುಂಜಾನೆ ಸ್ವಾಮಿ ಸ್ನಾನಕ್ಕಾಗಿ ಹೋಗುತ್ತಿರುವಾಗ ಮಾರ್ಗದಲ್ಲಿ ಮಲಗಿರುವ ಕಬೀರರ ಎದೆಯ ಮೇಲೆ ಅವರ ಕಾಲು ತಾಗಿತು. ‘‘ಯಾರು ನೀನು ? ಇನ್ನೂ ಮಲಗಿದ್ದೀಯಾ ? ಎದ್ದೇಳು. ರಾಮ ! ರಾಮ !
ರಾಮ !’’ ಎಂದು ಹೇಳಿ ಅವರು ಮುಂದೆ ಹೋದರು. ಗುರುಗಳು ಮಂತ್ರ ಹೇಳಿ ಇಂದು ತನ್ನನ್ನು ಪವಿತ್ರಗೊಳಿಸಿದರು ಎಂಬ ಆನಂದದಲ್ಲಿ ‘ರಾಮ, ರಾಮ’ ಎಂದು ಹೇಳಿ ಕಬೀರರು ಕುಣಿಯುತ್ತಾ ಮನೆಗೆ ತೆರಳಿದರು.
ಮುಂದೆ ಕೆಲವು ದಿನಗಳ ನಂತರ ಒಂದು ದಿನ ಕಬೀರರು ರಸ್ತೆಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಗುರು ರಾಮಾನಂದರು ಬರುತ್ತಿರುವುದು ಅವರಿಗೆ ಕಾಣಿಸಿತು. ಆಗ ಅವರು ಗುರುಗಳನ್ನು ದೊಡ್ಡ ಸ್ವರದಲ್ಲಿ ಜೈ ಜೈಕಾರ ಮಾಡಿದರು. ಆಗ ಗುರುಗಳು ಪರೀಕ್ಷೆಯನ್ನು ನೋಡುವ ಉದ್ದೇಶದಿಂದ ಕೋಪಗೊಳ್ಳುತ್ತಾ, ‘‘ಏನೋ, ನಾನು ಯಾವಾಗ ನಿನ್ನ ಗುರುವಾದೆ ? ನೀನು ನನ್ನ ಶಿಷ್ಯನಾಗಿರುವುದಕ್ಕೆ ಯಾರು ಸಾಕ್ಷಿ ?’’ ಎಂದು ಹೇಳುತ್ತಾ ತಮ್ಮ ಬಲ ಕಾಲಿನ ಪಾದುಕೆಯನ್ನು ತೆಗೆದು ರಭಸದಿಂದ ಕಬೀರರ ಮೈಮೇಲೆ ಎಸೆದರು. ಆ ಪಾದುಕೆ ಕಬೀರರ ಹಣೆಗೆ ತಗುಲಿ ದೊಡ್ಡ ಗಾಯವಾಯಿತು ಮತ್ತು ರಕ್ತದ ಧಾರೆ ಬರಲಾರಂಭಿಸಿತು. ಗುರುಪ್ರೇಮದಿಂದಾಗಿ ಕಬೀರರು ಆ ಪಾದುಕೆಯನ್ನು ತಮ್ಮ ಎದೆಯ ಹತ್ತಿರ ಹಿಡಿದರು ಮತ್ತು ನಮ್ರತೆಯಿಂದ, ‘‘ಮಹಾರಾಜರೇ, ಈ ಪಾದುಕೆಯೇ ಸಾಕ್ಷಿ ಆಗಿದೆ’’ ಎಂದರು. ಕಬೀರರ ಈ ಶಬ್ದಗಳನ್ನು ಕೇಳಿದ ತಕ್ಷಣ ರಾಮಾನಂದರ ಹೃದಯವು ಪ್ರೀತಿಯಿಂದ ಉಕ್ಕಿ ಬಂದಿತು. ಅವರು ಕಬೀರರಿಗೆ ಪ್ರೇಮಾಲಿಂಗನ ಮಾಡಿ ಅವರ ಮಸ್ತಕದಲ್ಲಿ ಕೈಯಿಟ್ಟರು ಅದರಿಂದಾಗಿ ಕಬೀರರು ಪೂರ್ಣಕಾಮರಾದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರು ರಾಮಾನಂದರು ಕಬೀರರ ಪರೀಕ್ಷೆಯನ್ನು ತೆಗೆದುಕೊಳ್ಳಲು ಎಸೆದ ಪಾದುಕೆಯು ಅವನ ಹಣೆಗೆ ತಾಗಿ ದೊಡ್ಡ ತೂತಾಗುವುದು, ಅವರು ಆ ಪಾದುಕೆಯನ್ನು ತನ್ನ ಹೃದಯಕ್ಕೆ ಹಿಡಿದಾಗ ಗುರುಗಳು ಪ್ರಸನ್ನರಾಗುವುದು