ದೇಶದ್ರೋಹಿ ಪಿಡಿಪಿ ಜೊತೆ ಭಾಜಪ ಮೈತ್ರಿ ಮಾಡಿದ್ದರಿಂದ ನಮ್ಮ ಮನಸ್ಸಿನಲ್ಲಿ ಸಂದೇಹ ಮೂಡುತ್ತದೆ ! - ಡಾ. ಅಗ್ನಿಶೇಖರ, ರಾಷ್ಟ್ರೀಯ ಸಮನ್ವಯಕರು, ಪನೂನ ಕಾಶ್ಮೀರ

ಬಿಜೆಪಿ-ಪಿಡಿಪಿ ಅನುಮಾನದ ಅಜೆಂಡಾ
ಡಾ. ಅಗ್ನಿಶೇಖರ
ಕಾಶ್ಮೀರಿ ಹಿಂದೂಗಳ ಪುನರ್ವಸತಿಗೆ, ಅವರ ಸ್ವಾಭಿಮಾನಕ್ಕೆ ಹೋರಾಡುತ್ತಿರುವ ಪನೂನ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಮನ್ವಯಕರಾದ ಡಾ. ಅಗ್ನಿಶೇಖರ ಲೇಖಕ, ಪತ್ರಕರ್ತ, ಕವಿ ಮತ್ತು ಹೋರಾಟಗಾರ. ಅವರು ಇತ್ತೀಚೆಗೆ ಬೆಂಗಳೂರು ಪ್ರವಾಸ ಕೈಗೊಂಡಾಗ ದೈನಿಕ 'ವಿಜಯವಾಣಿ' ಸಲಹೆಗಾರ ಸಂಪಾದಕರಾದ ಡಾ. ಜಿ.ಬಿ. ಹರೀಶರವರು ಅವರ ಸಂದರ್ಶನ ತೆಗೆದುಕೊಂಡರು. ಕಣಿವೆ ರಾಜ್ಯದ ಒಳರಾಜಕೀಯ ಮತ್ತು ಅದು ದೀರ್ಘಾವಧಿಯಲ್ಲಿ ದೇಶದ ರಕ್ಷಣಾವ್ಯವಸ್ಥೆಗೆ ತಲೆನೋವಾಗುವ ಸಾಧ್ಯತೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಕೆಲವು ಭಾಗಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಪ್ರಶ್ನೆ : ಕಾಶ್ಮೀರಿಗಳು ಮತ್ತೆ ಮೂಲ ನೆಲಕ್ಕೆ ಹೋಗಿ ನೆಲೆಸಲು ಸಮಸ್ಯೆ ಏನು ?
ಡಾ. ಅಗ್ನಿಶೇಖರ : ಇದು ಒಂದು ರಾಜಕೀಯ ವ್ಯೆಹ. ನೀವು ಈಗ ಕಾಶ್ಮೀರಕ್ಕೆ ಬರಬಹುದು, ಅಲ್ಲಿನ ಬಹುಸಂಖ್ಯಾತರೊಡನೆ ಸೇರಬಹುದು, ಅವರೊಳಗೆ ನಿಧಾನವಾಗಿ ಒಂದಾಗಬಹುದು ಎಂದು ಸರಕಾರಗಳು ಷರತ್ತುಬದ್ಧವಾಗಿ ಹೇಳುತ್ತವೆ. ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರವರ ಮಾತಿನ ಅರ್ಥವೇನು ? ರಾಜ್ಯಭ್ರಷ್ಟರಾಗಿರುವ ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಹೋಗಿ ಅಲ್ಲಿನ ಇಸ್ಲಾಂ ಜೊತೆ ಸೇರಬೇಕು, ಒಂದಾಗ ಬೇಕು. ಹುರಿಯತ್ ಹೇಳುವುದು - 'ನೀವು ಭಾರತದ ವಿರುದ್ಧದ ಸಮರದಲ್ಲಿ ಒಂದಾಗಬಹುದು.' ಹೀಗೆ ನಮ್ಮ ಪರಂಪರೆಯ ವಿರುದ್ಧ ನಾವೇ ಹೋರಾಡಲು ಕಾಶ್ಮೀರಕ್ಕೆ ಮರಳಿ ಎಂದು ವಿವಿಧ ಸ್ವರಗಳಲ್ಲಿ ಆಹ್ವಾನ ಬರುತ್ತಿದೆ.
ಪ್ರಶ್ನೆ : ಜಮ್ಮ-ಕಾಶ್ಮೀರದಲ್ಲಿನ ಈಗಿನ ರಾಜಕೀಯ ಪರಿಸ್ಥಿತಿ ಹೇಗಿದೆ ?
ಡಾ. ಅಗ್ನಿಶೇಖರ : ಪಿಡಿಪಿ ಮತ್ತು ಬಿಜೆಪಿಯ ಮೈತ್ರಿ ಸರಕಾರವಿದೆ. ಆದರೆ ಅದರ ಹಿಂದೆ ತಿಳಿದುಕೊಳ್ಳ ಬೇಕಾದ ಕೆಲವು ಮಹತ್ವದ ವಿಷಯಗಳಿವೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ನೇಪಾಳ, ಚೀನಾದೊಡನೆ ಮಾತುಕತೆ ನಡೆಸಿದಾಗ ನಮ್ಮ ಕಣಿವೆ ಯಲ್ಲಿ ಒಂದು ಆಶಾಕಿರಣ ಮೂಡಿತ್ತು. ಅವರು ಮಾಧವಪುರದಲ್ಲಿ ಮಾಡಿದ ಭಾಷಣ ಇದಕ್ಕೆ ಸಾಕ್ಷಿ. ಅವರು 'ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂಗಳು ಭಾರತದ ಭಾಗ' ಎಂದಾಗ ನಮಗೂ ವಿಶ್ವಾಸ ಬಂದಿತ್ತು.
ಪ್ರಶ್ನೆ : ಹಾಗಾದರೆ ಈ ಭರವಸೆಯ ಅಲೆ ಕಣಿವೆಗೂ ತಲುಪಿತೇ ?
ಡಾ. ಅಗ್ನಿಶೇಖರ : ಅದೇ ಸಮಸ್ಯೆ ಆದದ್ದು. ನಂತರ ರಾಜ್ಯದ ರಾಜಕೀಯ ರಾಷ್ಟ್ರವಾದಿಗಳು ಬಯಸುವುದಕ್ಕಿಂತ ಬೇರೆ ನೆಲೆ ಕಂಡುಕೊಂಡಿತು. ಎರಡೂ ಪಕ್ಷಗಳ ನಡುವಿನ ಕಾರ್ಯಸೂಚಿ (ಅಜೆಂಡಾ ಆಫ್ ಅಲಯನ್ಸ್) ಬಹಳ ವಿಚಿತ್ರವಾಗಿದೆ. ರಾಜ್ಯದಲ್ಲಿ ಭಾರತೀಯ ಸೇನೆಯ ಸಂಖ್ಯೆಯನ್ನು ಕ್ರಮೇಣ ಕಡಿಮೆ ಮಾಡುವುದು, ಭಾರತ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಡುವಿನ ಗಡಿಯ ಭದ್ರತೆಯನ್ನು ಮೃದುಗೊಳಿಸುವುದು (ಅಂದರೆ ಭಾರತ-ನೇಪಾಳ ಗಡಿಯಂತೆ), ಜಂಟಿ ನಾಣ್ಯ ವ್ಯವಸ್ಥೆ (ಜಾಯಿಂಟ್ ಕರೆನ್ಸಿ)
ಮತ್ತು ಜಂಟಿ ಆಡಳಿತ (ಜಾಯಿಂಟ ಅಡ್ಮಿನಿಸ್ಟ್ರೇಷನ್).
ಪ್ರಶ್ನೆ : ಇದನ್ನು ಒಬ್ಬ ಭಾರತೀಯ ಕಾಶ್ಮೀರಿಯಾಗಿ ನೀವು ಹೇಗೆ ನೋಡುವಿರಿ ?
ಡಾ. ಅಗ್ನಿಶೇಖರ : ಇದು ಪಾಕಿಸ್ತಾನದ ಜನರಲ್ ಮುಷರಫ್ ಮಂಡಿಸಿದ್ದ ಸಿದ್ಧಾಂತಕ್ಕಿಂತ ಭಿನ್ನವಲ್ಲ.
ಪ್ರಶ್ನೆ : ಹಾಗಾದರೆ ಈ ಅಜೆಂಡಾದ ಒಳಮರ್ಮವೇನು ?
ಡಾ. ಅಗ್ನಿಶೇಖರ : ಭಾರತ ಮತ್ತು ನೇಪಾಳ ಶತ್ರು ದೇಶಗಳಲ್ಲ, ಹೀಗಾಗಿ ಅಲ್ಲಿ ಮೃದು ಗಡಿಧೋರಣೆ ಹೊಂದಿದರೆ ಈಗಂತೂ ಸಮಸ್ಯೆಯಿಲ್ಲ. ಆದರೆ ಪಾಕ್ ನಮ್ಮ ಶತ್ರು ದೇಶ, ಅದರ ಜತೆಗಿನ ನಮ್ಮ ಗಡಿ ಭದ್ರತೆಯನ್ನು ದುರ್ಬಲಗೊಳಿಸಿ, ಸೈನ್ಯವನ್ನು ಕಮ್ಮಿ ಮಾಡಿಕೊಂಡರೆ ಯಾರಿಗೆ ಲಾಭ ? ಬುದ್ಧಿಜೀವಿ ಅರುಂಧತಿ ರಾಯ ಹೇಳುತ್ತಿರುವುದೂ ಇದನ್ನೇ ! ಭಾರತದ ವಾಯವ್ಯ ಗಡಿಭಾಗ ಭಾರತದ ಸುರಕ್ಷತೆಯ ದೃಷ್ಟಿಯಿಂದ ಮೊದಲಿನಿಂದಲೂ ಮುಖ್ಯ ಮಾರ್ಗ. ಅದನ್ನು ದುರ್ಬಲಗೊಳಿಸುವುದು ಅಪಾಯಕಾರಿ. ಮನಮೋಹನ್ ಸಿಂಗ್ ಪ್ರಧಾನಿಯಾಗಿ ನಡೆಸಿದ್ದ ಒಂದು ಸಭೆಯಲ್ಲಿ ಈ ರಸ್ತೆಯನ್ನು 'ಅಮನ್ ಕಾ ರಾಸ್ತಾ' ಎಂದಿದ್ದರು. ನಾನು ಅದನ್ನು ವಿರೋಧಿಸಿ ಇದು ದಂಗೆ ಮತ್ತು ಆಕ್ರಮಣದ ರಸ್ತೆ ಎಂದಿದ್ದೆ. ಈಗಲೂ ವಾಸ್ತವ ಬದಲಾಗಿಲ್ಲ. ಆದರೆ ಎಲ್ಲ ಸರಿಹೋಗಿದೆಯೋ ಎಂಬಂತೆ ರಾಜ್ಯದ ಸರಕಾರ ಮಾತನಾಡುತ್ತಿದೆ.
ಪ್ರಶ್ನೆ : ಜೆಎನ್‌ಯುನಲ್ಲಿ ದೇಶದ್ರೋಹದ ಘೋಷಣೆ ಕೂಗಿದವರಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಗಳೂ ಇದ್ದರಲ್ಲ ?
ಡಾ. ಅಗ್ನಿಶೇಖರ : ಹೌದು, ಕಾಶ್ಮೀರದ ಪ್ರಸಕ್ತ ರಾಜಕೀಯ ಸಂದರ್ಭಕ್ಕೆ ಅದೇ ಸಮಸ್ಯೆ ಆದದ್ದು. ಇಡೀ ಪ್ರಕರಣವನ್ನು ಗಂಭೀರವಾಗಿ ನಿಭಾಯಿಸಿ ಕನ್ಹಯ್ಯಾ ಹೀರೋ ಆಗದಂತೆ ಮಾಡಬಹುದಿತ್ತು. ಮುಖ್ಯ ವೆಂದರೆ ಅಲ್ಲಿ ಘೋಷಣೆ ಕೂಗಿದ್ದ ಕಾಶ್ಮೀರಿ ಪ್ರತ್ಯೇಕತಾ ವಾದಿಗಳನ್ನು ಏಕೆ ಬಂಧಿಸಲಿಲ್ಲ ? ಏಕೆಂದರೆ ಇದರಿಂದ ಪಿಡಿಪಿಗೆ ಮುಜುಗರವಾಗುತ್ತದೆ. ಅಂದರೆ ಭಾರತ- ವಿರೋಧಿ ಧೋರಣೆ ಹೊಂದಿರುವ ಪಿಡಿಪಿ ಜೊತೆ ಯಾವುದೇ ಷರತ್ತುಗಳಿಲ್ಲದೆ ಬಿಜೆಪಿ ಸಹಕರಿಸುತ್ತಿರುವುದು ಕಾಶ್ಮೀರದ ಉಳಿವಿಗೆ ಹೋರಾಡುವ ನಮ್ಮಂಥವ ರಿಗೆ ಅನುಮಾನ, ಆಶ್ಚರ್ಯ ಎರಡನ್ನೂ ಮೂಡಿಸಿದೆ.
ಪ್ರಶ್ನೆ : ನಿಮ್ಮ ಸಂಘಟನೆಯ ನಿಲುವುಗಳೇನು ?
ಡಾ. ಅಗ್ನಿಶೇಖರ : ನಾವು ಭಾರತಭಕ್ತರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾತ್ರವಲ್ಲ, ಸ್ವತಃ ಕಾಶ್ಮೀರವೇ ಭಾರತ. ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ಆಧ್ಯಾತ್ಮಿಕವಾಗಿ ಕಾಶ್ಮೀರ ಭಾರತದ್ದೇ ಅಂಗ. ಆದರೆ ಇತರ ಭಾರತೀಯರು ಕಾಶ್ಮೀರದಲ್ಲಿ ನೆಲೆಸಬೇಕೆಂದರೆ ಅದಕ್ಕೆ ೩೭೦ ನೇ ವಿಧಿ ತೊಡರು ಗಾಲು. ಹೀಗಾಗಿ ಕಾಶ್ಮೀರವನ್ನು ಒಂದು ಕೇಂದ್ರಾಡಳಿತ ಪ್ರದೇಶ ಮಾಡಿ, ಅಲ್ಲಿ ಎಲ್ಲ ನೆಲೆಕಳೆದುಕೊಂಡ ಹಿಂದೂಗಳು ನೆಲೆಸಬಹುದು. ಕೇಂದ್ರಾಡಳಿತ ಪ್ರದೇಶಕ್ಕೆ ಒಪ್ಪುವ ನಿಯಮಗಳು ಇಲ್ಲಿಯೂ ಜಾರಿಗೆ ಬರಲಿ. ಆಗ ಪ್ರತ್ಯೇಕತಾವಾದಿಯಾದ ೩೭೦ ನೇ ವಿಧಿ ಇರುವುದಿಲ್ಲ. ಕಾಶ್ಮೀರವನ್ನು ಉಳಿಸುವುದರಲ್ಲಿ ಇದು ಒಂದು ಹಂತದ ಪ್ರಯತ್ನ. ಭಾರತ ಸರಕಾರ ತಿಳಿದೋ ತಿಳಿಯದೆಯೋ ಚುನಾವಣಾ ರಾಜಕೀಯಕ್ಕಾಗಿ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದೆ. ನಾವು ಕಾಶ್ಮೀರಿ ಹಿಂದೂಗಳು ಯಾರಿಗೂ ಬೇಡ, ಯಾಕೆಂದರೆ ನಾವು ಒಂದು ವೋಟ್ ಬ್ಯಾಂಕ್ ಅಲ್ಲವಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಳೆ ಪಂಜಾಬ್ ಮತ್ತು ಹಿಮಾಚಲ ಪ್ರದೇಶಕ್ಕೂ ಭಯೋತ್ಪಾದನೆ ಹರಡುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ, ೩೭೦ನೇ ವಿಧಿ, ಭಾರತದ ಅಖಂಡತೆ ಕುರಿತು ನಾವು ಜನಜಾಗೃತಿಯ ಕೆಲಸ ಮಾಡುತ್ತಿದ್ದೇವೆ. ಸದ್ಯಕ್ಕೆ ನಾವು ನಮ್ಮ ದೇಶದ ಬೇರು ಕಳೆದುಕೊಂಡಿರುವ ಜನರು.
ಪ್ರಶ್ನೆ : ಮೈತ್ರಿ ಕೂಟದ ಸಂಬಂಧ ಹೇಗಿದೆ ?
ಡಾ. ಅಗ್ನಿಶೇಖರ : ಅದು ಭರವಸೆ ಮೂಡಿಸಿದಷ್ಟು ಚೆನ್ನಾಗಿಲ್ಲ. 'ಬಿಜೆಪಿ ಜೊತೆ ರಾಜಕೀಯ ನಂಟು ಬೆಳೆಸಲು ಇಷ್ಟು ಸಮಯ ಏಕೆ ತೆಗೆದುಕೊಂಡಿರಿ ?' ಎಂದು ಕೇಳಿದ್ದಕ್ಕೆ ಮುಫ್ತಿ ಮಹಮದ್ ಅವರು ಕೊಟ್ಟಿದ್ದ ಉತ್ತರ- ಬಿಜೆಪಿ ಜೊತೆ ಕೈಜೋಡಿಸುವ ಮೊದಲು ನಾವು ಹುರಿಯತ್ ಮನವೊಲಿಸುತ್ತಿದ್ದೆವು ಎಂದು! ಮುಫ್ತಿ ೩೭೦ನೇ ವಿಧಿಗೆ ಸಂಬಂಧಿಸಿದಂತೆ ಬಿಜೆಪಿ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದರು. ಆಗಲೂ ಬಿಜೆಪಿ ಇದನ್ನು ತಳ್ಳಿಹಾಕಲಿಲ್ಲ. ಆದ್ದರಿಂದ ಹೆಚ್ಚಿನ ಅನುಮಾನ ಬಿಜೆಪಿ ಮೇಲೇ ಇರುವುದು (ಭಾಜಪವು ಕಾಶ್ಮೀರಿ ಹಿಂದೂಗಳ ಹಿತಕ್ಕಾಗಿ ಆದ್ಯತೆ ಮತ್ತು ದಿಟ್ಟತನದಿಂದ ಹೋರಾಡಬೇಕೆಂಬುದೇ ಪೂರ್ಣ ಹಿಂದೂ ಜನತೆಗೆ ಭಾಜಪದಿಂದ ಅಪೇಕ್ಷೆಯಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶದ್ರೋಹಿ ಪಿಡಿಪಿ ಜೊತೆ ಭಾಜಪ ಮೈತ್ರಿ ಮಾಡಿದ್ದರಿಂದ ನಮ್ಮ ಮನಸ್ಸಿನಲ್ಲಿ ಸಂದೇಹ ಮೂಡುತ್ತದೆ ! - ಡಾ. ಅಗ್ನಿಶೇಖರ, ರಾಷ್ಟ್ರೀಯ ಸಮನ್ವಯಕರು, ಪನೂನ ಕಾಶ್ಮೀರ