ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಜನಸಹಭಾಗದೊಂದಿಗೆ ಹೋರಾಡುವುದೇ ಹಿಂದೂ ಜನಜಾಗೃತಿ ಸಮಿತಿಯ ಮುಂದಿನ ಕಾರ್ಯದ ದಿಶೆ !

ಶ್ರೀ. ರಮೇಶ ಶಿಂದೆ
ಪ್ರಜಾಪ್ರಭುತ್ವದಲ್ಲಿ ಸರ್ವೋಚ್ಚ ಸ್ಥಾನವಿರುವ ಜನಸಾಮಾನ್ಯರ ಸ್ಥಿತಿ ಇಂದು ಅತ್ಯಂತ ಬಿಕ್ಕಟ್ಟಿನಿಂದ ಕೂಡಿದೆ. ಅವರು ಪ್ರತಿದಿನ ಭ್ರಷ್ಟಾಚಾರ, ಸುಲಿಗೆ, ಹೊಡೆದಾಟ ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ನ್ಯಾಯ ಪಡೆಯಲು ಸಂಬಂಧಪಟ್ಟ ವ್ಯವಸ್ಥೆಗಳಲ್ಲಿಗೆ ಹೋಗೋಣವೆಂದರೆ, ಅಲ್ಲಿ ಪೊಲೀಸರಿಂದ ಹಿಡಿದು ನ್ಯಾಯ ವ್ಯವಸ್ಥೆಯ ವರೆಗೆ ಎಲ್ಲಿ ನೋಡಿದರೂ ಇದಕ್ಕಿಂತ ಭಿನ್ನವಾದ ಸ್ಥಿತಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಹೆಸರಿನಲ್ಲಿ ಕಾರ್ಯ ಮಾಡುವ ಸಂಘಟನೆಗಳಲ್ಲಿಯೂ ಅನೇಕ ಸ್ವಾರ್ಥಿಗಳು ನುಸುಳಿದ್ದರಿಂದ ಅಲ್ಲಿಯೂ ಭ್ರಷ್ಟಾಚಾರವೇ ಕಾಣಸಿಗುತ್ತದೆ. ಅದರ ಪರಿಣಾಮದಿಂದ ಜನರಿಗೆ ಎಲ್ಲಿ ಹೋದರೂ ನಿರಾಶೆಯೇ ಎದುರಾಗುತ್ತದೆ. ಇಂತಹ ನಿರಾಶ ಸಮಾಜದಲ್ಲಿ ಭ್ರಷ್ಟಾಚಾರ ಮಾಡುವವರ ವಿರುದ್ಧ ಸಂಘರ್ಷ ಮಾಡುವ ಸಿದ್ಧತೆ ನಿರ್ಮಿಸುವ ಕಾರ್ಯವನ್ನು ಹಿಂದೂ ಜನಜಾಗೃತಿ ಸಮಿತಿ ಮಾಡಲಿದೆ. ತೊಂದರೆಗೀಡಾದ ಜನರ ಮನಸ್ಸಿನಲ್ಲಿ ಕುದಿಯುತ್ತಿರುವ ಆಕ್ರೋಶದ ಕಿಡಿಯನ್ನು ಪ್ರಜ್ವಲಿಸಿ ಅದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾಡ್ಗಿಚ್ಚನ್ನು ಹೊತ್ತಿಸಲಿಕ್ಕಿದೆ. ಜನರ ಆಕ್ರೋಶಕ್ಕೆ ಕಾರಣವಾದ ಕೆಲವು ಸಮಸ್ಯೆ ಮತ್ತು ಅದರ ವಿರುದ್ಧ ಆರಂಭಿಸಬೇಕಾದ ಹೋರಾಟದ ಬಗ್ಗೆ ಮಾಹಿತಿಯನ್ನು ಮುಂದೆ ನೀಡಲಾಗಿದೆ.
೧. ಪ್ರತಿದಿನ ಎದುರಿಸಬೇಕಾದ ಸಮಸ್ಯೆಗಳು
ಇಂದು ಪ್ರತಿಯೊಬ್ಬ ನಾಗರಿಕನಿಗೂ ಪ್ರತಿ ಕ್ಷಣ ಒಂದೊಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಪ್ರಾತಃಕಾಲ ಸಿಗುವ ಕಲಬೆರಕೆಯ ಹಾಲಿನಿಂದ ದಿನ ಆರಂಭವಾಗುತ್ತದೆ. ಅನಂತರ ಕಾರ್ಯಾಲಯಕ್ಕೆ ಹೋಗುವಾಗ ಬಸ್ಸಿನಲ್ಲಿ ಟಿಕೇಟಿಗಾಗಿ ಚಿಲ್ಲರೆ ಹಣ ಇಲ್ಲದಿರುವುದರಿಂದ ಮಾಡುವ ಸುಲಿಗೆ, ರಸ್ತೆಯಲ್ಲಿನ ಟೋಲ್‌ಗಳಲ್ಲಿ ನಡೆಯುವ ಲೂಟಿ, ಕಾರ್ಯಾಲಯದಲ್ಲಿನ ಭ್ರಷ್ಟಾಚಾರ, ಕಾಳಸಂತೆಯಲ್ಲಿ ಅಡಿಗೆ ಅನಿಲವನ್ನು ಕೊಳ್ಳಬೇಕಾದ ಅನಿವಾರ‌್ಯತೆ, ಸಾರಿಗೆ ನಿಯಂತ್ರಣ ಪೊಲೀಸರು ವಿವಿಧ ನಿಯಮಗಳ ಭಯ ತೋರಿಸಿ ಮಾಡುವ ಸುಲಿಗೆ, ಇತ್ಯಾದಿ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಎದುರಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಪರಿಹಾರೋಪಾಯ ಕಾಣಿಸದಿ ರುವುದರಿಂದ ನಿರಾಶೆ ಹೆಚ್ಚಾಗುತ್ತದೆ.
೨. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳು
೨ ಅ. ಆರೋಗ್ಯ : ವೈದ್ಯಕೀಯ ಅಧಿಕಾರಿ ಹೆಚ್ಚು ಶುಲ್ಕ ತೆಗೆದುಕೊಳ್ಳು ವುದು, ವಿನಾಕಾರಣ ದುಬಾರಿ ಪರೀಕ್ಷೆ ಮಾಡಿಸುವುದು, ಉಪಚಾರ ಅಥವಾ ಶಸ್ತ್ರ ಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಮಾಡುವುದು, ರೋಗಿ ಮೃತಪಟ್ಟಿದ್ದರೂ ಅವನು ಬದುಕಿದ್ದಾನೆಂದು ಹೇಳಿ ತುರ್ತು ನಿಗಾ ಘಟಕದಲ್ಲಿರಿಸಿ (ಐಸಿಯು) ಉಪಚಾರದ ಖರ್ಚು ಹೆಚ್ಚಿಸುವುದು, ಭಾರತದಲ್ಲಿ ಉತ್ಪಾದನೆಯಾಗುವ ಅಗ್ಗದ ಔಷಧಿಗಳಿರುವಾಗಲೂ ವಿದೇಶದ ದುಬಾರಿ ಔಷಧಿಗಳನ್ನೇ ಖರೀದಿಸುವಂತೆ ಮಾಡುವುದು, ಹೆರಿಗೆಯ ಸಮಯದಲ್ಲಿ ಭೀತಿ ಹುಟ್ಟಿಸಿ ಶಸ್ತ್ರಚಿಕಿತ್ಸೆ ಮಾಡಿ ಹಣ ಕೀಳುವುದು, ಔಷಧಿಗಳ ಹೊದಿಕೆಗಳ ಮೇಲಿನ ಸೂಚನೆಗಳನ್ನು ಯಾರೂ ಓದಲು ಸಾಧ್ಯವಾಗದಷ್ಟು ಸಣ್ಣ ಅಕ್ಷರಗಳಲ್ಲಿ ಹಾಗೂ ಆಂಗ್ಲ ಭಾಷೆಯಲ್ಲಿ ಬರೆಯುವುದು, ನಿರ್ದಿಷ್ಟ ಔಷಧಾಲಯದಿಂದಲೇ ಔಷಧಿಗಳನ್ನು ಖರೀದಿಸಬೇಕೆಂದು ಅಥವಾ ನಿರ್ದಿಷ್ಟ ಚಿಕಿತ್ಸಾಲಯದಲ್ಲಿಯೇ ಪರೀಕ್ಷಿಸಬೇಕೆಂದು ಒತ್ತಡ ಹೇರುವುದು, ಆಸ್ಪತ್ರೆಯ ಬಿಲ್ ತುಂಬಿಸುವವರೆಗೆ ಶವವನ್ನು ಕೊಡದಿರುವುದು ಇತ್ಯಾದಿ.
೨ ಆ. ಶಿಕ್ಷಣ : ಮಕ್ಕಳನ್ನು ಶಾಲೆಗೆ ದಾಖಲಿಸಲು ಪ್ರವೇಶ ಶುಲ್ಕದೊಂದಿಗೆ ಡೊನೇಶನ್ ತೆಗೆದುಕೊಳ್ಳುವುದು, ವಿಶಿಷ್ಟ ಅಂಗಡಿಯಿಂದಲೇ ಹೆಚ್ಚು ಹಣ ಕೊಟ್ಟು ಸಮವಸ್ತ್ರ, ವಹಿ-ಪುಸ್ತಕಗಳನ್ನು ಖರೀದಿಸಲು ಒತ್ತಾಯಿಸುವುದು, ಶಾಲೆಗಳಲ್ಲಿ ವಿವಿಧ ಉಪಕ್ರಮಗಳನ್ನು ಹೇಳಿ ಹೆಚ್ಚುವರಿ ಶುಲ್ಕಗಳನ್ನು ವಸೂಲು ಮಾಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಖಾಸಗಿ ಶಿಕ್ಷಣ ವರ್ಗಗಳಿಗಾಗಿ ಮಿತಿಮೀರಿದ ಶುಲ್ಕಗಳನ್ನು ತೆಗೆದುಕೊಳ್ಳುವುದು, ಶಾಲೆಯಲ್ಲಿ ಕಲಿಸದೇ ವಿದ್ಯಾರ್ಥಿಗಳಿಗೆ ಖಾಸಗಿ ವರ್ಗಗಳಿಗೆ ಬರಬೇಕೆಂದು ಕಡ್ಡಾಯಗೊಳಿಸುವುದು, ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದ್ದರೂ ವಿದ್ಯಾಲಯದ ಫಲಿತಾಂಶ ಹೆಚ್ಚು ಬರಬೇಕೆಂದು ಅವರ ಉಪಸ್ಥಿತಿಯನ್ನು ತೋರಿಸುವುದು, ಮಾತೃಭಾಷೆಯ ಬದಲು ವಿದೇಶಿ ಭಾಷೆಗಳನ್ನು ಕಲಿಸಲು ಪ್ರಾಧಾನ್ಯತೆ ನೀಡುವುದು, ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಭಯ ತೋರಿಸಿ ಅವರಿಂದ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುವುದು, ಶಿಕ್ಷಣ ನೀಡದೇ ಹಣಕ್ಕಾಗಿ ಪದವಿಗಳನ್ನು ಹಂಚುವುದು, ಪಠ್ಯಕ್ರಮಗಳಿಗಿಂತಲೂ ಆಟ, ಪ್ರವಾಸ, ವಿವಿಧಡೇಗಳ (ದಿನಗಳ) ಆಚರಣೆಗೆ ಮಹತ್ವ ಮಾಡುವುದು, ಕ್ರೈಸ್ತ ಕಾನ್ವೆಂಟ್‌ಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಧರ್ಮಾಚರಣೆಗೆ ನಿರ್ಬಂಧ ಹೇರುವುದು ಹಾಗೂ ಧರ್ಮಾಚರಣೆ ಮಾಡಿದರೆ ಅದಕ್ಕಾಗಿ ಕಠಿಣ ಶಿಕ್ಷೆ ವಿಧಿಸುವುದು ಇತ್ಯಾದಿ.
೨ ಇ. ಸಾರಿಗೆ : ಖಾಸಗಿ ವಾಹನಗಳಿಗೆ ಹೆಚ್ಚು ಪ್ರಯಾಣಿಕರು ಸಿಗಬೇಕೆಂದು ಸರಕಾರಿ ಸಾರಿಗೆಯ ವಾಹನಗಳನ್ನು ಸಮಯಕ್ಕೆ ಸರಿಯಾಗಿ ಬಿಡ ದಿರುವುದು, ವಾಹನಗಳಲ್ಲಿ ಕ್ಷಮತೆಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿ ಅದನ್ನು ರಭಸದಿಂದ ಓಡಿಸುವುದು, ಪ್ರಯಾಣಕ್ಕಾಗಿ ಹೆಚ್ಚು ಅಥವಾ ತಪ್ಪು ಶುಲ್ಕ ತೆಗೆದುಕೊಳ್ಳುವುದು, ಚಿಲ್ಲರೆ ಹಣ ಹಿಂದಿರುಗಿಸದಿರುವುದು, ರಾತ್ರಿಯ ಸಮಯದಲ್ಲಿ ಅಥವಾ ಮಳೆಯಿಂದಾಗಿ ರೈಲು ರದ್ದಾದರೆ ಅಸಹಾಯಕರಾಗುವ ನಾಗರಿಕರಿಂದ ಮನಬಂದಂತೆ ೨-೩ ಪಟ್ಟು ಹೆಚ್ಚು ಹಣ ಕೀಳುವುದು, ನಿರ್ದಿಷ್ಟ ನಿಲ್ದಾಣಗಳಲ್ಲಿ ವಾಹನವನ್ನು ನಿಲ್ಲಿಸದೆ ಹಿಂದೆ-ಮುಂದೆ ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ಕೊಡುವುದು, ಪ್ರವಾಸದಲ್ಲಿ ಭೋಜನಕ್ಕಾಗಿ ದುಬಾರಿ ಉಪಹಾರಗೃಹಗಳ ಮುಂದೆ ವಾಹನ ನಿಲ್ಲಿಸುವುದು, ವಾಹನದ ಯಾವುದೇ ಕೆಲಸಕ್ಕಾಗಿ ದಲ್ಲಾಳಿಗಳ ಬಳಿ ಹೋಗುವಂತೆ ಮಾಡಿ ಹಣ ಕೀಳುವುದು, ರೈಲು ಟಿಕೇಟುಗಳ ಕಾಳಸಂತೆ ಮಾಡಿ ಹೆಚ್ಚು ಶುಲ್ಕವನ್ನು ಕೀಳುವುದು ಇತ್ಯಾದಿ.
೨ ಈ. ಪೊಲೀಸ್ : ಜನರ ದೂರನ್ನು ದಾಖಲಿಸಿಕೊಳ್ಳದಿರುವುದು, ದೂರು ದಾಖಲಿಸಿಕೊಳ್ಳಲು ಲಂಚ ಕೇಳುವುದು, ವಿಚಾರಣೆ ಅಥವಾ ಬಂಧನದ ಭಯ ತೋರಿಸಿ ಸುಲಿಗೆ ಮಾಡುವುದು, ಖಟ್ಲೆಯ ಕಾಗದಪತ್ರಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಲಂಚ ತೆಗೆದುಕೊಳ್ಳುವುದು, ಸೆರೆಮನೆಯಲ್ಲಿ ವಸ್ತುಗಳನ್ನು ಕೊಡಿಸಲು ಲಂಚ ತೆಗೆದುಕೊಳ್ಳುವುದು, ಲಂಚ ಪಡೆದು ವಿಪಕ್ಷಕ್ಕೆ ಖಟ್ಲೆಯಲ್ಲಿನ ಮಾಹಿತಿಯನ್ನು ಒದಗಿಸುವುದು, ಲಂಚ ತೆಗೆದುಕೊಂಡು ಅನಧಿಕೃತ ವ್ಯವಹಾರ, ಕೃತ್ಯಗಳನ್ನು ದುರ್ಲಕ್ಷಿಸುವುದು, ಭ್ರಷ್ಟಾಚಾರಿಗಳಿಗೆ ಸಹಾಯ ಮಾಡುವುದು, ಕೋಮುಗಲಭೆಗಳ ಸಮಯದಲ್ಲಿ ಹಿಂದೂಗಳ ವಿರುದ್ಧವೇ ಕ್ರಮತೆಗೆದುಕೊಳ್ಳುವುದು, ಹಿಂದೂಗಳ ಹಬ್ಬಗಳ ಸಮಯದಲ್ಲಿ ವಿವಿಧ ಕಾನೂನಿನ ಭಯ ಹುಟ್ಟಿಸುವುದು; ಆದರೆ ಅಲ್ಪಸಂಖ್ಯಾತರ ಅನುಮತಿಯಿಲ್ಲದ ಉತ್ಸವಗಳತ್ತವೂ ದುರ್ಲಕ್ಷಿಸುವುದು, ಗಣೇಶೋತ್ಸವದಲ್ಲಿ ಧ್ವನಿಮಾಲಿನ್ಯದ ಕಾನೂನಿಗನುಸಾರ ಕ್ರಮಕೈಗೊ ಳ್ಳುವುದು; ಆದರೆ ಪ್ರತಿದಿನ ಮಸೀದಿ ಗಳಿಂದ ಅನಧಿಕೃತ ಭೋಂಗಾಗಳಿಂದಾಗುವ ಧ್ವನಿ ಮಾಲಿನ್ಯವನ್ನು ದುರ್ಲಕ್ಷಿಸುವುದು ಇತ್ಯಾದಿ. ಇಷ್ಟು ಮಾತ್ರವಲ್ಲ, ಭಾರತದ ಸಾರಿಗೆ ನಿಯಂತ್ರಣ ಪೊಲೀಸರು ದೆಹಲಿಯಿಂದ ಮುಂಬಯಿಯ ಮಾರ್ಗದಲ್ಲಿ ಟ್ರಕ್‌ಚಾಲಕರನ್ನು ಹಣಕ್ಕಾಗಿ ನಿಲ್ಲಿಸದಿದ್ದರೆ ಅವರ ಪ್ರವಾಸದಲ್ಲಿ ೨ ದಿನಗಳಷ್ಟು ಸಹಜವಾಗಿಯೇ ಕಡಿಮೆಯಾಗಬಹುದು, ಎಂದು ವಿಶ್ವಬ್ಯಾಂಕ್ ಹೇಳಿದೆ.
೨ ಉ. ನ್ಯಾಯವ್ಯವಸ್ಥೆ : ಖಟ್ಲೆಗಳಿಗೆ ಮಿತಿಮೀರಿದ ಶುಲ್ಕ ತೆಗೆದುಕೊಳ್ಳುವುದು, ಎದುರು ಪಕ್ಷ ದವರೊಂದಿಗೆ ಒಪ್ಪಂದ ಮಾಡಿಕೊಂಡು ದಿನಾಂಕ ಮುಂದೆದೂಡುತ್ತಾ ಖಟ್ಲೆಯನ್ನು ನೆನೆಗುದಿಯಲ್ಲಿಡುವುದು, ಖಟ್ಲೆಯ ದಿನಾಂಕಕ್ಕೆ ಅನುಪಸ್ಥಿತರಿರುವುದು, ವರ್ಷಗಟ್ಟಲೆ ಖಟ್ಲೆಗಳನ್ನು ನೆನೆಗುದಿಯಲ್ಲಿಡುವುದು, ನ್ಯಾಯಾಲಯದಲ್ಲಿ ಖಟ್ಲೆಯ ಕ್ರಮಾಂಕವನ್ನು ಮೇಲೆ ತರಲು ಲಂಚ ತೆಗೆದುಕೊಳ್ಳುವುದು, ಖಟ್ಲೆಯ ಮಹತ್ವದ ಕಾಗದಪತ್ರಗಳನ್ನು ಕಳೆದು ಹಾಕುವುದು, ಆರ್ಥಿಕ ಖಟ್ಲೆಗಳನ್ನು ಹೋರಾಡಲು ಶುಲ್ಕವನ್ನು ಹೇಳದೆ ಅದರಲ್ಲಿ ಶೇಕಡಾವಾರು ಕೇಳುವುದು ಇತ್ಯಾದಿ.
೨ ಊ. ಆಡಳಿತ ವ್ಯವಸ್ಥೆ: ಜನರ ದೂರುಗಳನ್ನು ನೋಂದಾಯಿಸಿ ಕೊಳ್ಳದಿರುವುದು, ಅಧಿಕಾರಿಗಳು ಕೆಲಸದ ಸಮಯದಲ್ಲಿ ಖಾಸಗಿ ಕೆಲಸಗಳನ್ನು ಮಾಡಿ ಸರಕಾರಿ ಕೆಲಸಗಳನ್ನು ಬಾಕಿ ಇಡುವುದು, ಕಾರ್ಯಾಲಯದ ಸಮಯದ ಮೊದಲೇ ಕೆಲಸ ನಿಲ್ಲಿಸಿ ಹೋಗುವುದು, ಕೆಲಸ ಮಾಡಲು ಲಂಚ ಕೇಳುವುದು, ಕಡತಗಳನ್ನು ಕಳೆದು ಹಾಕಿ ಭ್ರಷ್ಟಾಚಾರಿಗಳಿಗೆ ಸಹಾಯ ಮಾಡುವುದು, ಯೋಜನೆಗಳ ಮಾಹಿತಿಯನ್ನು ನೀಡದೆ, ಅದಕ್ಕಾಗಿ ಶುಲ್ಕ ತೆಗೆದುಕೊಳ್ಳುವುದು, ತನ್ನ ಪರಿಚಯದ ಗುತ್ತಿಗೆದಾರರಿಗೇ ಕೆಲಸ ಕೊಡುವ ಸಲುವಾಗಿ ಅವರಿಗೆ ಗುತ್ತಿಗೆಯ ಮಾಹಿತಿ ನೀಡುವುದು, ಗುತ್ತಿಗೆ ಕೊಡುವಾಗ ಅದರಲ್ಲಿ ತನ್ನ ಶೇಕಡಾವಾರು ಕೇಳುವುದು, ವಿಶಿಷ್ಟ ಕಂಪನಿಗೆ ಗುತ್ತಿಗೆ ಸಿಗುವ ಹಾಗೆ ಮಾಡಲು ಆವಶ್ಯಕ ಸಮಯಮಿತಿಯನ್ನು ಬದಲಾವಣೆ ಮಾಡುವುದು, ಗುತ್ತಿಗೆಯ ಗುಣಮಟ್ಟಕ್ಕನುಸಾರ ಕೆಲಸ ಮಾಡದೆ ಕನಿಷ್ಠ ಮಟ್ಟದ ಕೆಲಸ ಮಾಡುವುದು, ನ್ಯಾಯಾಲಯದ ಆದೇಶಗಳನ್ನು ಪಾಲಿಸದೆ ಜನರನ್ನು ಪದೇ ಪದೇ ಅಲೆಯುವಂತೆ ಮಾಡುವುದು, ಆಪತ್ಕಾಲದ ವಿಷಯದಲ್ಲಿ ಸೂಚನೆ ಸಿಕ್ಕಿದ್ದರೂ, ಪೂರ್ವಸಿದ್ಧತೆ ಮಾಡದೆ ಜೀವ ಹಾಗೂ ಆಸ್ತಿಪಾಸ್ತಿಗಳ ಹಾನಿ ಮಾಡುವುದು, ಧಾನ್ಯ ಹಾಗೂ ವಸ್ತುಗಳ ಸಂಗ್ರಹ ಮಾಡುವವರಿಗೆ ಸಹಾಯ ಮಾಡಿ ಸಂಗ್ರಹವನ್ನು ಪೇಟೆಗೆ ತರದೆ ಕೃತಕ ಅಭಾವವನ್ನುಂಟು ಮಾಡಿ ಬೆಲೆಯೇರಿಕೆ ಮಾಡುವುದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಅನುಮತಿ ನೀಡದೆ ಅವರನ್ನು ಕೇವಲ ವರ್ಗಾವಣೆ ಮಾಡುವುದು.
ಈ ಮೇಲಿನ ಉದಾಹರಣೆಗಳು ಕೇವಲ ಮಾದರಿಗಾಗಿ ನೀಡಿದ್ದು ಪ್ರತಿಯೊಬ್ಬರೂ ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಟ್ರಾನ್ಸರೆನ್ಸಿ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಯ ವರದಿಗನುಸಾರ ಭಾರತದಲ್ಲಿ ಶೇ. ೬೨ ರಷ್ಟು ಜನರಿಗೆ ಪ್ರತ್ಯಕ್ಷವಾಗಿ ಲಂಚ ಕೊಡುವುದು ಅನುಭವಕ್ಕೆ ಬರುತ್ತದೆ. ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ, ಬಹಳಷ್ಟು ವರ್ಷಗಳಿಂದ ಅದರ ಅನುಭವವಾಗುತ್ತಿದೆ; ಆದರೆ ಪ್ರತಿಯೊಬ್ಬರೂ ತಮ್ಮ ಆವಶ್ಯಕತೆಯನ್ನು ಮಾತ್ರ ನೋಡುತ್ತಿದ್ದು ಅದರ ವಿರುದ್ಧ ಯಾರೂ ಮಾತನಾಡದಿರುವುದರಿಂದ ಈ ಭ್ರಷ್ಟಾಚಾರಕ್ಕೆ ಈಗ ರಾಜಮಾನ್ಯತೆ ಸಿಕ್ಕಿದೆ. ದೌರ್ಭಾಗ್ಯದ ವಿಷಯವೆಂದರೆ, ಮಹಾರಾಷ್ಟ್ರ ರಾಜ್ಯದ ವಿಧಾನಸಭೆಯ ಸದಸ್ಯರಂತೂ ಭ್ರಷ್ಟಾಚಾರ ನಿರ್ಮೂಲನೆಯನ್ನು ಮರೆತಿದ್ದು ಅವರು ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿ ಅದರ ಬೆಲೆ ನಿಗದಿಪಡಿಸಲು ವಿನಂತಿಸು ತ್ತಿದ್ದಾರೆ. ಇದರಿಂದ ಕುಸಿಯುತ್ತಿರುವ ನೈತಿಕತೆ ಹಾಗೂ ರಾಜಕೀಯ ನೇತಾರರಲ್ಲಿ ಈ ವಿಷಯದಲ್ಲಿರುವ ಗಾಂಭೀರ್ಯವು ಅರಿವಾಗುತ್ತಿದೆ. ಆದ್ದರಿಂದಲೇ ಜನರ ಮನಸ್ಸಿನಲ್ಲಿ ಆಕ್ರೋಶವಿದ್ದರೂ ಅವರಿಗೆ ಯಾರ ಸಹಾಯವೂ ಸಿಗದಿರುವುದರಿಂದ ಅವರು ಈಗ ಅಸಹಾಯಕರಾಗುತ್ತಿದ್ದಾರೆ.
೩. ಭ್ರಷ್ಟಾಚಾರದಿಂದ ನಿರ್ಮಾಣವಾಗುವ ಸಮಸ್ಯೆಗಳು
೩ ಅ. ಮಾನಸಿಕ ಸಂಘರ್ಷ ಹೆಚ್ಚಾಗಿ ಕೌಟುಂಬಿಕ ಸಮಸ್ಯೆಗಳು ಉದ್ಭವಿಸುವುದು : ಈ ಮೇಲಿನಂತೆ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ಉತ್ಪನ್ನ ಮತ್ತು ಖರ್ಚು ಇವುಗಳ ಆರ್ಥಿಕ ಲೆಕ್ಕಾಚಾರವು ಹೊಂದಾಣಿಕೆಯಾಗದೆ ಹಾಗೂ ಅದರಿಂದ ಪರಿಹಾರದ ಮಾರ್ಗ ಕಾಣದಿರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಕೌಟುಂಬಿಕ ಸಮಸ್ಯೆಗಳೂ ಉದ್ಭವವಾಗುತ್ತವೆ.
೩ ಆ. ಕಾರ್ಯಾಲಯದಲ್ಲಿ ಹೆಚ್ಚಾಗುವ ಒತ್ತಡದ ಪ್ರಸಂಗಗಳು : ಜನರ ಸಮಸ್ಯೆಗಳತ್ತ ದುರ್ಲಕ್ಷಿಸುವುದರಿಂದ ಅನೇಕ ಸ್ಥಳಗಳಲ್ಲಿ ವಿವಾದದ ಪ್ರಸಂಗಗಳು ಉದ್ಭವಿ ಸುತ್ತವೆ. ಕೆಲವು ಸ್ಥಳಗಳಲ್ಲಿ ಆಂದೋಲನದ ನಂತರ ಹೊಡೆ ದಾಟವೂ ಆಗುತ್ತದೆ. ವಿಶೇಷ ವಾಗಿ ಆಸ್ಪತ್ರೆಗಳಲ್ಲಿ ಮೋಸವಾಗಿದೆಯೆಂದು ತಿಳಿದಾಗ ಅಲ್ಲಿನ ವಸ್ತುಗಳನ್ನು ಧ್ವಂಸಗೊಳಿಸುವುದು, ವೈದ್ಯರಿಗೆ ಹೊಡೆಯುವುದು, ಇತ್ಯಾದಿ ಪ್ರಸಂಗಗಳೂ ಈಗ ಹೆಚ್ಚಾಗುತ್ತಿವೆ.
೩ ಇ. ಮನುಷ್ಯಹಾನಿಯಗುವುದು : ಈ ಮೇಲಿನ ದುಷ್ಪ್ರವೃತ್ತಿಯಿಂದಾಗಿ ಹೆಚ್ಚೆಚ್ಚು ಲಾಭಗಳಿಸುವ ಸಲುವಾಗಿ ಗುತ್ತಿಗೆದಾರರು ನಿರ್ದಿಷ್ಟ ಪ್ರಮಾಣದಲ್ಲಿ ಸಾಮಾಗ್ರಿಗಳನ್ನು ಉಪಯೋಗಿಸದೆ ಅಥವಾ ಕಡಿಮೆ ಗುಣಮಟ್ಟದ ಸಾಮಾಗ್ರಿಗಳನ್ನು ಉಪಯೋಗಿಸುತ್ತಾರೆ. ಆದ್ದರಿಂದ ಯಾವುದೇ ನೈಸರ್ಗಿಕ ಆಪತ್ತು ಬಾರದೆ ಸೇತುವೆಗಳು ಬೀಳುವಂತಹ ಘಟನೆಗಳು ಸಂಭವಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗುತ್ತದೆ. ವಾಹನಚಾಲಕರಿಂದ ಲಂಚ ಪಡೆದು ಅವರನ್ನು ಪರೀಕ್ಷಿಸದೆಯೇ ಅವರಿಗೆ ವಾಹನ ಚಾಲನಾ ಅನುಮತಿ ನೀಡುವುದರಿಂದ ಹಾಗೂ ಹಳೆಯ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡದೆ ಅವು ಸುಸ್ಥಿತಿಯಲ್ಲಿದೆ ಎಂದು ಪ್ರಮಾಣಪತ್ರ ನೀಡುವುದರಿಂದ ಅಪಘಾತಗಳಾಗಿ ಜೀವಹಾನಿಯಾಗು ತ್ತದೆ. ಒಂದು ಸಮೀಕ್ಷೆಯ ವರದಿಗನುಸಾರ ಭಾರತದ ಶೇ. ೬೦ ರಷ್ಟು ವಾಹನ ಚಾಲಕರು ಲಂಚ ಕೊಟ್ಟು ಯಾವುದೇ ಪರೀಕ್ಷೆ ಇಲ್ಲದೆಯೇ ಚಾಲನಾ ಅನುಮತಿ ಪಡೆದಿದ್ದರು.
೩ ಈ. ದೇಶ ವಿಕಾಸದಲ್ಲಿ ಹಿಂದೆ ಉಳಿಯುವುದು : ಭ್ರಷ್ಟಾಚಾರ ಮತ್ತು ಲಂಚ ಪಡೆದು ಕೆಲಸ ಮಾಡುವುದರಿಂದ ಕೆಲಸದ ಗುಣಮಟ್ಟ ಕುಸಿಯುತ್ತದೆ, ಅದರೊಂದಿಗೆ ಗುತ್ತಿಗೆದಾರರಿಂದ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ಅನೇಕ ಅಣೆಕಟ್ಟುಗಳ ಕೆಲಸ ೧೫ ರಿಂದ ೨೦ ವರ್ಷಗಳಷ್ಟು ವಿಳಂಬವಾಗಿ ರುವುದರಿಂದ ಅವುಗಳ ಖರ್ಚು ಹೆಚ್ಚುತ್ತಾ ಹೋಗುತ್ತದೆ ಹಾಗೂ ಜನರಿಗೂ ಅದರ ಲಾಭವಾಗುವುದಿಲ್ಲ. ಆದ್ದರಿಂದ ದೇಶದ ವಿಕಾಸವು ಕುಂಠಿತವಾಗುತ್ತದೆ.
೨೦೦೯ ರ ಒಂದು ಸಂಸ್ಥೆಯ ವರದಿಗನುಸಾರ ಭಾರತದ ಸರಕಾರಿ ಆಡಳಿತ ವ್ಯವಸ್ಥೆಯು ಏಷ್ಯಾದ ಥೈಲ್ಯಾಂಡ್, ಮಲೇಷ್ಯಾಗಳಂತಹ ಅನೇಕ ಸಣ್ಣ ಸಣ್ಣ ದೇಶಗಳಿಗಿಂತಲೂ ನಿಧಾನ ಹಾಗೂ ತೊಂದರೆದಾಯಕ ಪದ್ಧತಿಯಿಂದ ಕಾರ್ಯ ಮಾಡುತ್ತಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
೩ ಉ. ಖಟ್ಲೆಗಳು ತುಂಬಿ ಹೋಗಿರುವುದರಿಂದ ಅಪರಾಧಗಳ ಪ್ರಮಾಣ ಹೆಚ್ಚಾಗುವುದು: ಟ್ರಾನ್ಸರೆನ್ಸಿ ಇಂಟರ್‌ನ್ಯಾಶನಲ್ ಸಂಸ್ಥೆಯ ವರದಿಗನುಸಾರ ಭ್ರಷ್ಟಾಚಾರದಿಂದಾಗಿ ಖಟ್ಲೆಗಳು ನೆನೆಗುದಿಯಲ್ಲಿರುವ ಪ್ರಮಾಣವು ಹೆಚ್ಚಾಗಿದ್ದು ಭಾರತದ ಕೋಲಕಾತಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ. ಸೌಮಿತ್ರ ಸೇನ್ ಇವರು ಉತ್ಪನ್ನಕ್ಕಿಂತ ಹೆಚ್ಚು ಸಂಪತ್ತು ಸಂಗ್ರಹಿಸಿರುವುದರಿಂದ ಸಂಸತ್ತು ಅವರನ್ನು ಅಮಾನತುಗೊಳಿಸಿರುವ ಉದಾಹರಣೆ ಪ್ರಸಿದ್ಧವಾಗಿದೆ. ನ್ಯಾಯಾಲಯದಲ್ಲಿ ಖಟ್ಲೆಗಳು ವರ್ಷ ಗಟ್ಟಲೆ ನಿರ್ಣಯವಾಗದೆ ಭ್ರಷ್ಟಾಚಾರಿಗಳಿಗೆ ಭ್ರಷ್ಟಾಚಾರ ವಿರೋಧಿ ಕಾನೂನಿನ ಭಯವೆನಿಸುವುದಿಲ್ಲ, ಕಿಂಗ್‌ಫಿಶರ್ ಕಂಪನಿಯ ಮಾಲೀಕ ವಿಜಯ ಮಲ್ಯಾ ಇವರಂತಹ ದೊಡ್ಡ ಉದ್ಯಮಿಗಳು ಸಾವಿರಾರು ಕೋಟಿಗಳ ಹಗರಣ ಮಾಡಿ ರಾಜವೈಭವದ ಜೀವನ ನಡೆಸುತ್ತಿದ್ದಾರೆ ಹಾಗೂ ವಿದೇಶದಲ್ಲಿ ಸುರಕ್ಷಿತವಾಗಿ ತಲೆಮರೆಸಿಕೊಳ್ಳುತ್ತಾರೆ. ಸಾಮಾನ್ಯ ರೈತ ಮಾತ್ರ ಸಾಲ ತೀರಿಸುವ ಭಯದಿಂದ ಆತ್ಮಹತ್ಯೆಯ ಮಾರ್ಗವನ್ನು ತುಳಿಯುತ್ತಾನೆ.
೪. ಪ್ರಜಾಪ್ರಭುತ್ವದಲ್ಲಿ ಅಯೋಗ್ಯ ಸರಕಾರಗಳು ಬದಲಾಗುತ್ತವೆ; 
ಆದ್ದರಿಂದ ವ್ಯವಸ್ಥೆಗಳನ್ನೂ ಬದಲಾಯಿಸುವ ಅವಶ್ಯಕತೆ
ಮಾಜಿ ಐಎಎಸ್ ಅಧಿಕಾರಿ ಮಾಧವ ಗೋಡಬೋಲೆಯವರು, ‘ಇಂದಿನ ಆಡಳಿತವೆಂದರೆ ದುಃಶಾಸನವಾಗಿದೆ !’ ಎಂದು ಆಡಳಿತ ಶೈಲಿ ಯನ್ನು ವರ್ಣಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿನ ಕೊರತೆ, ಜನರ ವಿಷಯದಲ್ಲಿ ಸಂವೇದನಾಶೂನ್ಯತೆ, ತಪ್ಪು ನಿರ್ಣಯ ಹಾಗೂ ಹೆಚ್ಚುತ್ತಿರುವ ಭ್ರಷ್ಟಾಚಾರ, ಇವು ಇದರ ಹಿಂದಿನ ಕಾರಣಗಳೆಂದು ಅವರು ಹೇಳಿದ್ದಾರೆ. ಸದ್ಯ ಆಡಳಿತಾಧಿಕಾರಿಗಳು ತಮ್ಮ ಬಡ್ತಿಗಾಗಿ ಅಥವಾ ಹೆಚ್ಚು ಲಾಭದ (ಕ್ರಿಮ್) ಖಾತೆಯನ್ನು ಗಳಿಸುವ ಸಲುವಾಗಿ ರಾಜಕಾರಣಿಗಳಲ್ಲಿಗೆ ಹೆಚ್ಚೆಚ್ಚು ಅಲೆದಾಡುತ್ತಿರುತ್ತಾರೆ. ಪ್ರಜಾಪ್ರಭುತ್ವ ಪದ್ಧತಿಗನುಸಾರ ಪ್ರತಿ ೫ ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತಿರುವುದರಿಂದ ಭ್ರಷ್ಟ ಸರಕಾರವನ್ನು ಬದಲಾಯಿಸುವ ಅವಕಾಶ ಜನರಿಗೆ ಸಿಗುತ್ತದೆ; ಆದರೆ ಆಡಳಿತಾಧಿಕಾರಿಗಳು ಮಾತ್ರ ನಿವೃತ್ತಿಯಾಗುವವರೆಗೆ ನಿಶ್ಚಿಂತೆಯಿಂದ ಇರುವುದರಿಂದ ಅವರಿಗೆ ಯಾವುದೇ ರೀತಿಯ ಭೀತಿಯಿರುವುದಿಲ್ಲ. ಭ್ರಷ್ಟ ಆಡಳಿತಾಧಿಕಾರಿಗಳಿಗೆ ಶಿಕ್ಷೆಯೆಂದು ಕೇವಲ ಅವರ ವರ್ಗಾವಣೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ದಂಡ ಇಲ್ಲದಿರುವುದರಿಂದ ಹಾಗೂ ನೈತಿಕತೆಯಲ್ಲಿ ಬದಲಾವಣೆಯಾಗದಿರುವುದರಿಂದ ಅವರು ಹೊಸ ಸ್ಥಳದಲ್ಲಿಯೂ ಭ್ರಷ್ಟಾಚಾರವನ್ನು ಆರಂಭಿಸುತ್ತಾರೆ. ಈ ಪದ್ಧತಿಯು ಈಗ ಕಾಲಬಾಹ್ಯವಾಗಿದ್ದು ಈಗ ಅದನ್ನು ಬದಲಾಯಿಸುವ ಸಮಯ ಬಂದಿದೆ.
೫. ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯವಿರುವಾಗ ಸಾಮಾಜಿಕ ವಿಷಯದಲ್ಲಿನ ಕಾರ್ಯವೇಕೆ ?
ನಮಗೆ ಅಪೇಕ್ಷಿತವಿರುವ ಹಿಂದೂ ರಾಷ್ಟ್ರವು ರಾಮರಾಜ್ಯದ ಹಾಗೆ ಆದರ್ಶವಾಗಿರುವುದು. ಅದರಲ್ಲಿ ಕೇವಲ ಅಧಿಕಾರ ಬದಲಾಗಿ ಅದು ಹಿಂದೂಗಳ ಕೈಗೆ ಹೋಗುವುದಷ್ಟೇ ಅಲ್ಲ, ರಾಮರಾಜ್ಯದಲ್ಲಿ ಶ್ರೀರಾಮನಂತಹ ಆದರ್ಶ ರಾಜನಿದ್ದನು, ಅಷ್ಟೇ ಅಲ್ಲ, ಅದರೊಂದಿಗೆ ಪ್ರಜೆಗಳೂ ಸಾತ್ತ್ವಿಕರು ಹಾಗೂ ಶ್ರದ್ಧೆಯುಳ್ಳವರಾಗಿದ್ದರು. ಆದ್ದರಿಂದಲೇ ಹಿಂದೂ ರಾಷ್ಟ್ರಕ್ಕಾಗಿ ಈಗಿರುವ ರಾಜ್ಯವ್ಯವಸ್ಥೆಯಲ್ಲಿ ಕೇವಲ ಬದಲಾವಣೆ ಮಾಡಿದರೆ ಸಾಲದು, ದೇಶಭಕ್ತರು ಹಾಗೂ ಪ್ರಾಮಾಣಿಕ ಜನರನ್ನು ಮೊದಲು ಜಾಗೃತ ಹಾಗೂ ಸಂಘಟಿತಗೊಳಿಸಬೇಕಾಗಿದೆ. ಅವರ ಮನಸ್ಸಿನಲ್ಲಿ ಅನ್ಯಾಯದ ವಿಷಯದಲ್ಲಿ ಆಕ್ರೋಶ ನಿರ್ಮಿಸಿ ಅವರನ್ನು ಕೃತಿಶೀಲರನ್ನಾಗಿ ಮಾಡಬೇಕಾಗಿದೆ. ಹೀಗೆ ಆಕ್ರೋಶ ನಿರ್ಮಾಣವಾದ ನಂತರ ಅವರು ಸಣ್ಣ-ಸಣ್ಣ ಆಂದೋಲನಗಳಲ್ಲಿ ಭಾಗವಹಿಸುತ್ತಾರೆ ಹಾಗೂ ಮುಂದೆ ಅವರೇ ಹಿಂದೂ ರಾಷ್ಟ್ರದ ಆಂದೋಲನದಲ್ಲಿ ಶ್ರದ್ಧೆಯಿಂದ ಭಾಗವಹಿಸಿ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುತ್ತಾರೆ.
೬. ಕಾರ್ಯವನ್ನು ಹೇಗೆ ಆರಂಭಿಸುವುದು ?
ಅ. ತಮ್ಮ ಪರಿಸರ, ಕಾರ್ಯಾಲಯ ಹಾಗೂ ಮುಖ್ಯವಾಗಿ ಕಾಣಿಸುವ ಅಥವಾ ಇತರರಿಂದ ಅರಿವಾದ ಅನ್ಯಾಯದ ಘಟನೆಗಳನ್ನು ಬರೆದಿಟ್ಟುಕೊಳ್ಳಿ.
ಆ. ಆ ವಿಷಯದಲ್ಲಿ ಸಾಧ್ಯವಿದ್ದಲ್ಲಿ ಮಾಹಿತಿ ಹಕ್ಕು ಅಧಿಕಾರದಿಂದ ಅಧಿಕೃತ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿರಿ.
ಇ. ಸರಕಾರಿ ಅಧಿಕಾರಿಗಳು ತಮ್ಮ ಆಸ್ತಿಪಾಸ್ತಿಗಳನ್ನು ಘೋಷಿಸಬೇಕೆಂಬುದು ಕಡ್ಡಾಯವಾಗಿದ್ದರೂ ಅವರು ಅದನ್ನು ಘೋಷಿಸದಿದ್ದರೆ, ಆ ವಿಷಯದ ಮಾಹಿತಿ ಪಡೆದು ಅವರ ವಿರುದ್ಧ ದೂರು ದಾಖಲಿಸಿರಿ.
ಈ. ಸರಕಾರಿ ಅಧಿಕಾರಿಗಳ ಜೀವನಶೈಲಿಯಲ್ಲಿ ಬೃಹತ್ಪ್ರಮಾಣದಲ್ಲಿ ಬದಲಾವಣೆ, ಉದಾ. ದೊಡ್ಡ ಹಾಗೂ ವೈಭವಶಾಲಿ ಮನೆ ಖರೀದಿಸುವುದು, ದುಬಾರಿ ವಾಹನ ಖರೀದಿಸುವುದು, ಅಪಾರ ಹಣ ಖರ್ಚು ಮಾಡುವುದು, ಇತ್ಯಾದಿಗಳು ಗಮನಕ್ಕೆ ಬಂದರೆ ಅದರತ್ತ ತಕ್ಷಣ ಗಮನ ಹರಿಸಿ ಮಾಹಿತಿ ಹಕ್ಕು ಅಧಿಕಾರದ ಕಾರ್ಯ ಮಾಡುವವರಿಗೆ ಈ ವಿಷಯದಲ್ಲಿ ಮಾಹಿತಿ ಸಂಗ್ರಹಿಸಲು ಹೇಳಿ ಅವರ ವಿರುದ್ಧ ದೂರು ದಾಖಲಿಸಬಹುದು.
ಉ. ಸಮಾಜದಲ್ಲಿ ಇಂತಹ ಅನ್ಯಾಯಗಳ ವಿರುದ್ಧ ಹೋರಾಡುವ ಪ್ರಾಮಾಣಿಕ ವ್ಯಕ್ತಿ (ವಕೀಲರು, ಮಾಹಿತಿ ಹಕ್ಕು ಕಾರ್ಯಕರ್ತರು)ಗಳನ್ನು ಭೇಟಿಯಾಗಿ ಅವರ ಸಹಾಯದಿಂದ ಜನಜಾಗೃತಿ ಮಾಡಿ.
ಊ. ಯಾರ ಮನಸ್ಸಿನಲ್ಲಿ ಈ ಸಾಮಾಜಿಕ ಅನ್ಯಾಯದ ವಿಷಯದಲ್ಲಿ ಆಕ್ರೋಶವಿದೆಯೋ, ಅಂತಹ ನಾಗರೀಕರನ್ನು ಮತ್ತು ಸಂಘಟನೆಗಳನ್ನು ಒಟ್ಟು ಗೂಡಿಸಿ ಆಂದೋಲನದ ಆಯೋಜನೆ ಮಾಡಿರಿ. ಅದಕ್ಕಾಗಿ ಸಭೆಯ ಮೂಲಕ ಈ ವಿಷಯಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಪ್ರಯತ್ನಿಸಬೇಕು.
ಎ. ಭ್ರಷ್ಟ ಹಾಗೂ ರಾಷ್ಟ್ರದ್ರೋಹಿ ವ್ಯಕ್ತಿಗಳ ಹಾಗೂ ಅವರ ಕುಟುಂಬ ದವರ ಸಾಮಾಜಿಕ ಸ್ತರದಲ್ಲಿ ಛೀ-ಥೂ ಆಗುವ ಹಾಗೆ ಭಿತ್ತಿಪತ್ರಗಳು, ಅಥವಾ ಫಲಕಗಳನ್ನು ಹಚ್ಚುವುದು ಇತ್ಯಾದಿ ನಿಯೋಜನೆ ಮಾಡಬೇಕು. ಇದರಿಂದ ಅವರು ಮುಂದೆ ಭ್ರಷ್ಟಾಚಾರ ಮಾಡಲು ಧೈರ್ಯ ಮಾಡುವುದಿಲ್ಲ.
ಐ. ಭ್ರಷ್ಟ ವ್ಯವಸ್ಥೆಯನ್ನು ನಾವು ಸಂಘಟಿತರಾಗಿ ಬದಲಾಯಿಸ ಬಹುದು, ಎಂಬ ವಿಶ್ವಾಸವನ್ನು ಸಮಾಜದ ಮನಸ್ಸಿನಲ್ಲಿ ನಿರ್ಮಿಸಿ ಅವರನ್ನು ಕೃತಿಶೀಲರನ್ನಾಗಿ ಮಾಡಿರಿ.
ಈ ಮೇಲಿನ ಉದಾಹರಣೆಯಿಂದ ಇಂದು ಜನರನ್ನು ಹೇಗೆ ಸುಲಿಗೆ ಮಾಡಲಾಗುತ್ತದೆ, ಎಂಬುದು ಎಲ್ಲರಿಗೂ ಅರಿವಾಗಿರಬಹುದು. ಇದರಿಂದ ಜನಸಾಮಾನ್ಯರ ಮನಸ್ಸಿನಲ್ಲಿ ನಮ್ಮನ್ನು ಮೂರ್ಖರನ್ನಾಗಿಸಿ ಸುಲಿಗೆ ಮಾಡಲಾಗುತ್ತದೆ, ಎಂಬ ಅರಿವನ್ನು ನಿರ್ಮಿಸಬೇಕು. ಈ ಅರಿವು ಎಷ್ಟು ತೀವ್ರವಾಗುತ್ತದೆಯೋ, ಅಷ್ಟು ಪ್ರಮಾಣದಲ್ಲಿ ಸಮಾಜವೇ ಇದರ ವಿರುದ್ಧ ಕೃತಿ ಮಾಡಲು ಸಿದ್ಧವಾಗುತ್ತದೆ. ಜನರು ಹೀಗೆ ಅನ್ಯಾಯದ ವಿರುದ್ಧ ಹೋರಾಡಲು ಸಿದ್ಧರಾಗುವುದೆಂದರೆ ಸಮಾಜವು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸಿದಂತಾಗುವುದು ಹಾಗೂ ಅದರಿಂದಲೇ ಎಲ್ಲ ದೃಷ್ಟಿಯಿಂದ ಆದರ್ಶ ಹಿಂದೂ ರಾಷ್ಟ್ರ ಸಾಕಾರವಾಗುತ್ತದೆ. - ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ. (೧೩.೫.೨೦೧೬) (ಆಧಾರ : ಸನಾತನದ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆ)
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು
ಮತ್ತು ಸನಾತನದ ಸಾಧಕರಿಗೆ ಸೂಚನೆ !
ಜನರ ಜ್ವಲಂತ ಸಮಸ್ಯೆಗಳ ವಿಷಯದಲ್ಲಿ ಜಾಗೃತಿ ಮಾಡುವ ಈ ಲೇಖನವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ವಿವಿಧ ಜ್ವಲಂತ ಸಮಸ್ಯೆಗಳ ಪಟ್ಟಿ ತಯಾರಿಸಲು ಈ ಲೇಖನವನ್ನು ಉಪಯೋಗಿಸಬಹುದು.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ ! 
ತಮ್ಮ ತಮ್ಮ ಪರಿಸರದಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುವಂತಹ ಜ್ವಲಂತ ಸಮಸ್ಯೆಗಳನ್ನು ತಿಳಿಸಿ ! 
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಿಂದ ನಾವು ಇಂದಿನವರೆಗೆ ಹಿಂದೂ ಧರ್ಮ ಮತ್ತು ರಾಷ್ಟ್ರದ ವಿಷಯದಲ್ಲಿ ಸಮಸ್ಯೆಗಳನ್ನು ಮಂಡಿಸಿದೆವು, ಅಷ್ಟೇ ಅಲ್ಲ ಈ ವಿಷಯದಲ್ಲಿ ಕೆಲವು ಯಶಸ್ವಿ ಆಂದೋಲನಗಳನ್ನೂ ನಡೆಸಿದೆವು. ಕಾಲಾನುಸಾರ ಆಪತ್ಕಾಲ (ಮೂರನೇ ಮಹಾಯುದ್ಧದ ಕಾಲ) ಸಮೀಪಿಸುತ್ತಿದ್ದು ಹಿಂದೂ ರಾಷ್ಟ್ರ ಸ್ಥಾಪನೆಯ ಮಹತ್ವವನ್ನು ಈಗ ಜನರ ಮನಸ್ಸಿನಲ್ಲಿ ಬಿಂಬಿಸಬೇಕಾಗಿದೆ. ಪ್ರಸ್ತುತ ರಾಜ್ಯವ್ಯವಸ್ಥೆಯು ನಿಷ್ಕ್ರಿಯ ಹಾಗೂ ನಿರುಪಯೋಗಿ ಆಗಿರುವುದನ್ನು ಎಲ್ಲರಿಗೂ ಹೇಳಬೇಕಾಗುವುದು. ಅದಕ್ಕಾಗಿ ನಮಗೆ ಈ ಕಾರ್ಯದ ವ್ಯಾಪ್ತಿಯನ್ನು ಹೆಚ್ಚಿಸಲಿಕ್ಕಿದ್ದು ಜನಸಾಮಾನ್ಯರನ್ನು ಸುಲಿಗೆ ಮಾಡುವ ಭ್ರಷ್ಟ ಹಾಗೂ ರಾಷ್ಟ್ರದ್ರೋಹಿ ವ್ಯಕ್ತಿಗಳು ಹಾಗೂ ವ್ಯವಸ್ಥೆಯ ವಿರುದ್ಧ ಈಗ ನಮಗೆ ಜನಜಾಗೃತಿ ಚಳುವಳಿಯನ್ನು ಆರಂಭಿಸಲಿಕ್ಕಿದೆ. ಈ ಚಳುವಳಿಯ ಮೂಲಕ ಭ್ರಷ್ಟಾಚಾರಿಗಳು, ಜನರನ್ನು ಮೋಸಗೊಳಿಸುವ, ವಿವಿಧ ಸೇವೆಗಳ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುವವರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆದ್ಯತೆಯಿಂದ ಚಳುವಳಿಯನ್ನು ಹಮ್ಮಿಕೊಳ್ಳಲಿಕ್ಕಿದೆ. ನಮಗೆ ಸಮಾಜದಲ್ಲಿನ ದುಷ್ಪ್ರವೃತ್ತಿಯಿಂದ ನಿರ್ಗತಿಕರಾದ ಹಾಗೂ ಭ್ರಷ್ಟಾಚಾರದ ವಿರುದ್ಧ ಏನೂ ಆಗದಿರುವುದರಿಂದ ನಿರಾಶರಾದ ಜನರ ಮನಸ್ಸಿನಲ್ಲಿ ಅನ್ಯಾಯದ ವಿರುದ್ಧ ಆಕ್ರೋಶ ನಿರ್ಮಾಣ ಮಾಡಿ ಅವರಲ್ಲಿ ಹೋರಾಡುವ ವಿಶ್ವಾಸ ನಿರ್ಮಿಸಲಿಕ್ಕಿದೆ. ಅದಕ್ಕಾಗಿ ನಮ್ಮ ಪರಿಸರ ದಲ್ಲಿನ ಸರಕಾರಿ ಕಾರ್ಯಾಲಯ, ಆಸ್ಪತ್ರೆ, ಶೈಕ್ಷಣಿಕಕ್ಷೇತ್ರ, ಪೊಲೀಸ್, ನ್ಯಾಯವ್ಯವಸ್ಥೆ ಇತ್ಯಾದಿ ಕ್ಷೇತ್ರಗಳಲ್ಲಿ ಜನಸಾಮಾನ್ಯರನ್ನು ಮೋಸಗೊಳಿಸುವ, ಸುಲಿಗೆ ಮಾಡುವ ಹಾಗೂ ಭ್ರಷ್ಟಾಚಾರದಂತಹ ಜ್ವಲಂತ ಸಮಸ್ಯೆಗಳ ಪಟ್ಟಿ ಮಾಡಿ ಅದನ್ನು ತಿಳಿಸಿರಿ. ಈ ಮಾಹಿತಿಯನ್ನು ಶ್ರೀ. ಮಹಾವೀರ ಶ್ರೀಶ್ರೀಮಾಳ ಇವರ ಹೆಸರಿಗೆ prasar.hjs@gmail.com ಈ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಜನಸಹಭಾಗದೊಂದಿಗೆ ಹೋರಾಡುವುದೇ ಹಿಂದೂ ಜನಜಾಗೃತಿ ಸಮಿತಿಯ ಮುಂದಿನ ಕಾರ್ಯದ ದಿಶೆ !