ಸಮುದ್ರ ತೀರದ ಭದ್ರತೆಯೆಡೆಗೆ ಮಾಡುವ ಅಕ್ಷಮ್ಯ ನಿರ್ಲಕ್ಷ್ಯ ಭಾರತಕ್ಕೆ ಅಪಾಯಕಾರಿ !

ಸ್ವಾತಂತ್ರ್ಯದ ಬಳಿಕ ರಾಜಕೀಯ ಮುಖಂಡರು ಸಮುದ್ರ ತೀರದ ಭದ್ರತೆ ವಿಷಯದಲ್ಲಿ ಉದಾಸೀನತೆ ತೋರಿಸಿದ್ದಾರೆ. ರಾಜಕೀಯ ಮುಖಂಡರು ಇತಿಹಾಸದಿಂದ ಪಾಠ ಕಲಿಯುವ ಬದಲು ಇನ್ನಿತರೇ ವಿಷಯಗಳಲ್ಲಿಯೇ ಅಭಿರುಚಿ ಹೊಂದಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಸ್ವಾತಂತ್ರ್ಯದ ಬಳಿಕ ಸಮುದ್ರತೀರವು ಬೃಹತ್ಪ್ರಮಾಣದಲ್ಲಿ ಕಳ್ಳಸಾಗಾಣಿಕೆಗಾಗಿ ದುರುಪಯೋಗ ವಾಗತೊಡಗಿತು. ಕಳ್ಳಸಾಗಾಣಿಕೆಯ ಅನೇಕ ಪ್ರಕರಣಗಳು ಬೆಳಕಿಗೆ ಬಂದರೂ ಈ ವಿಷಯದಲ್ಲಿ ಸರಕಾರವು ಕಣ್ಮುಚ್ಚಿ ಕುಳಿತಿದೆ. ಭಾರತದಲ್ಲಿ ಭಯೋತ್ಪಾದಕರ ದಾಳಿಗಾಗಿ ಸಮುದ್ರ ಮಾರ್ಗವನ್ನೇ ಉಪಯೋಗಿಸಲಾಗಿದ್ದರೂ ಈ ವಿಷಯದಲ್ಲಿ ಉದಾಸೀನತೆಯು ಹಾಗೆಯೇ ಮುಂದುವರಿದಿದೆ. ಸದ್ಯ ಭಾರತೀಯ ಭೂಕ್ಷೇತ್ರದ ಗಡಿರೇಖೆಯಲ್ಲಿ ಪಕ್ಕದ ರಾಷ್ಟ್ರದ ನುಸುಳುವಿಕೆಯ ಕಾರಣದಿಂದ ಬೃಹತ್ಪ್ರಮಾಣದಲ್ಲಿ ಸೇನೆಯನ್ನು ಹೆಚ್ಚಿಸಲಾಗಿದೆ. ಆದರೆ ಸಮುದ್ರ ದಂಡೆಯ ಗಡಿ ಸುರಕ್ಷತೆಯ ವಿಷಯದಲ್ಲಿ ಹೆಚ್ಚಿನ ಚರ್ಚೆಗಳಾಗುತ್ತಿಲ್ಲ.
ಭಾರತದ ವಿಸ್ತೀರ್ಣದಷ್ಟು ವಿಶಾಲವಾಗಿರುವ ಸಮುದ್ರ ಕ್ಷೇತ್ರದ
ರಕ್ಷಣೆಗಾಗಿ ಕೇವಲ ೪೮ ಠಾಣೆಗಳ ನೇಮಕ !
ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗವು ಸಾಕಷ್ಟು ಸಮುದ್ರ ಕ್ಷೇತ್ರದೊಂದಿಗೆ ಹೊಂದಿಕೊಂಡಿದೆ. ನಮ್ಮ ದೇಶದ ವಿಸ್ತೀರ್ಣದಷ್ಟು ವಿಶಾಲವಾದ ಸಮುದ್ರ ದಂಡೆ ನಮಗೆ ದೊರೆತಿದೆ. ಒಟ್ಟು ಸಮುದ್ರ ದಂಡೆಯ ಉದ್ದವು ಸುಮಾರು ೮ ಸಾವಿರ ೭೨೯ ಕಿ.ಮೀ.ಗಳಷ್ಟಿದೆ. ಇಷ್ಟು ವಿಶಾಲವಾದ ಸಮುದ್ರ ದಂಡೆಯ ರಕ್ಷಣೆಗಾಗಿ ಕೇವಲ ೪೮ ಠಾಣೆಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಠಾಣೆಯಲ್ಲಿ ಎಷ್ಟು ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ; ಏಕೆಂದರೆ ಇಷ್ಟು ವಿಶಾಲವಾದ ಸಮುದ್ರದ ದಡವಿರುವಾಗ ಕೇವಲ ೪೮ ಠಾಣೆಗಳಿಂದ ಹೇಗೆ ರಕ್ಷಿಸಬಲ್ಲರು? ಸ್ವಾತಂತ್ರ್ಯದ ಬಳಿಕ ಇತಿಹಾಸದಿಂದ ನಾವೇನಾದರೂ ಕಲಿತಿದ್ದೇವೆಯೇ? ಭಾರತಕ್ಕೆ ವ್ಯಾಪಾರಕ್ಕಾಗಿ ಸಮುದ್ರ ಮಾರ್ಗದಿಂದ ಬಂದಂತಹ ಆಂಗ್ಲರು ಮತ್ತು ಪೋರ್ಚುಗೀಸರು ನಮ್ಮ ಮೇಲೆ ಅಧಿಪತ್ಯವನ್ನು ಸ್ಥಾಪಿಸಿದರು. ತದನಂತರ ಸಮುದ್ರ ಮಾರ್ಗದ ಸುರಕ್ಷತೆಯ ವಿಷಯದಲ್ಲಿ ಮರಳಿ ಯಾವುದೇ ವಿಚಾರಗಳಾಗಲೇ ಇಲ್ಲ. ಈ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆಯೆಂದು ಹೇಳಿದರೆ ತಪ್ಪಾಗಲಾರದು.
ಎಲ್ಲಿ ಮುಂಬರುವ ಅಪಾಯವನ್ನರಿತು ಸಮುದ್ರ ದಡದಲ್ಲಿ ಬಂದರು ನಿರ್ಮಿಸಿದ 
ಶಿವಾಜಿ ಮಹಾರಾಜರು ಮತ್ತು ಎಲ್ಲಿ ಸಮುದ್ರಮಾರ್ಗದಿಂದ ದಾಳಿ ಆಗುತ್ತಿದ್ದರೂ 
ಅದನ್ನು ತಡೆಯಲು ಉದಾಸೀನತೆಯುಳ್ಳ ಇಂದಿನ ರಾಜಕಾರಣಿಗಳು !
ಸ್ವಾತಂತ್ರ್ಯದ ಬಳಿಕ ರಾಜಕೀಯ ಮುಖಂಡರು ಸಮುದ್ರ ದಡದ ರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯವನ್ನೇ ತೋರಿಸಿದ್ದಾರೆ. ಸ್ವಾತಂತ್ರ್ಯದ ಬಳಿಕ ಸಮುದ್ರ ದಡವನ್ನು ಕಳ್ಳಸಾಗಾಣಿಕೆಗಾಗಿ ಬೃಹತ್ಪ್ರಮಾಣದಲ್ಲಿ ಉಪಯೋಗಿಸಲಾಯಿತು. ಮುಂಬಯಿಯಲ್ಲಿ ಜರುಗಿದ ಬಾಂಬ್‌ಸ್ಫೋಟಕ್ಕಾಗಿ ಉಪಯೋಗಿಸಲಾದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಸಮುದ್ರ ಮಾರ್ಗದ ಮುಖಾಂತರವೇ ತರಲಾಗಿತ್ತೆಂದು, ಆ ಸಮಯದ ತನಿಖೆಯಿಂದ ಬಹಿರಂಗಗೊಂಡಿದೆ. ಆ ಬಳಿಕವೂ ಭಯೋತ್ಪಾದಕರು ಮುಂಬಯಿಯನ್ನು ಅನೇಕ ಬಾರಿ ಗುರಿ ಯಾಗಿಟ್ಟುಕೊಂಡರು. ಮುಂಬಯಿ ಮೇಲೆ ದಾಳಿ ಮಾಡಿದ ಉಗ್ರರು ಸಹ ಸಮುದ್ರ ಮಾರ್ಗದಿಂದಲೇ ಬಂದಿದ್ದರು. ಇಷ್ಟೆಲ್ಲ ಆಗಿದ್ದರೂ ಅದನ್ನು ತಡೆ ಗಟ್ಟಲು ನಿರ್ದಿಷ್ಟವಾದ ಯಾವುದೇ ಸೂಕ್ತ ಕ್ರಮಗಳನ್ನು ಕೈಕೊಂಡಿಲ್ಲ.
ಆದರೆ ಆಗಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಆಂಗ್ಲರು, ಪೋರ್ಚುಗೀಸರು, ಡಚ್ಚರು ಸಮುದ್ರ ಮಾರ್ಗವನ್ನು ಉಪಯೋಗಿಸುತ್ತಾರೆ ಎನ್ನುವುದು ಗಮನಕ್ಕೆ ಬಂದ ಬಳಿಕ ಮುಂದೆ ಎದುರಾಗುವ ಅಪಾಯದ ಮುನ್ಸೂಚನೆಯನ್ನು ಅರಿತು ಈ ಜನರನ್ನು ತಡೆಯಲು ಬಂದರು ನಿರ್ಮಿಸಿ ದರು. ಮಹಾರಾಜರನ್ನು ವೈಭವೀಕರಿಸುವವರು ಕೂಡ ಅವರ ಈ ಕ್ರಮದ ಕುರಿತು ಹೇಳುವುದಿಲ್ಲ ಅಥವಾ ಆ ಬಗ್ಗೆ ಆಗ್ರಹಿಸುವುದಿಲ್ಲ.
ಹಡಗು ನಿರ್ಮಾಣದ ಉದ್ಯಮವನ್ನು ಸುದೃಢಗೊಳಿಸುವುದು ಯಾವಾಗ ?
ರಾಜಕಾರಣಿಗಳು ನಮ್ಮ ಸಮುದ್ರದ ಬಂದರುಗಳಲ್ಲಿ ವಿದೇಶಿ ನೌಕಾದಳದವರು ನಿವೃತ್ತಗೊಳಿಸಿರುವ ಅವರ ಹಡಗುಗಳನ್ನು ತಂದು ನಮ್ಮ ನೌಕಾದಳದಲ್ಲಿ ಸೇರ್ಪಡೆಗೊಳಿಸಿ, ಅದನ್ನು ಸಜ್ಜುಗೊಳಿಸುವಲ್ಲಿ ಧನ್ಯತೆ ಕಂಡರು. ನಮ್ಮ ನೌಕಾದಳದಲ್ಲಿರುವ ಅನೇಕ ಹಡಗುಗಳು ಅಪಘಾತದಲ್ಲಿ ಹಾನಿಗೊಳಗಾಗಿವೆ. ಇದೆಲ್ಲವೂ ಯಾವುದರ ದ್ಯೋತಕವಾಗಿದೆ? ನಾವು ಈ ವಿಷಯವನ್ನು ಗಂಭೀರತೆಯಿಂದ ಪರಿಗಣಿಸಿರುವುದಿಲ್ಲವೋ ? ಅಥವಾ ನೌಕಾದಳದ ಉದಾಸೀನತೆಯೆನ್ನಬೇಕೋ ? ಇಂತಹ ವಿಷಯಗಳಲ್ಲಿ ರಾಜಕೀಯ ಪಕ್ಷದವರು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿ ಕೊಳ್ಳುವುದರೆಡೆಗೆ ಮಾತ್ರ ಗಮನಹರಿಸುವರೋ ಅಥವಾ ಈ ಕುರಿತು ಇನ್ನು ಮುಂದಾದರೂ ಏನಾದರೂ ನಿರ್ದಿಷ್ಟ ಕ್ರಮವನ್ನು ಕೈಕೊಳ್ಳುವರೋ ? ಭಾರತದಲ್ಲಿಯೇ ತಯಾರಿಸಲಾಗುವ ಹಡಗುಗಳನ್ನು ಈಗ ನೌಕಾದಳದಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ. ಇದು ಹೆಮ್ಮೆಯ ವಿಷಯವಾಗಿದೆ. ಆದರೆ ಈ ಸಂದರ್ಭದಲ್ಲಿಯೇ ಈ ಉದ್ಯಮವು ಇನ್ನಷ್ಟು ಸುದೃಢವಾಗುವ ಕಡೆಗೆ ಸರಕಾರವು ಗಮನಹರಿಸುವುದು ಅವಶ್ಯಕವಿದೆ. ಯಾವುದೇ ಸೈನ್ಯವೂ ಸಮರ್ಪಕ ಶಸ್ತ್ರಾಸ್ತ್ರಗಳಿಲ್ಲದೆಯೇ ಯುದ್ಧವನ್ನು ಗೆಲ್ಲಲು ಸಾಧ್ಯವಾಗಲಾರದು. ಅದು ಪೂರ್ಣ ಶಸ್ತ್ರಸಜ್ಜಿತವಾಗಿರಬೇಕಾಗುತ್ತದೆ. ನಮ್ಮ ಸೈನಿಕರ ಮನಸ್ಸಿನಲ್ಲಿ ನಮ್ಮ ಮಾತೃಭೂಮಿ ಮತ್ತು ದೇಶಕ್ಕಾಗಿ ಜೀವವನ್ನು ಪಣಕ್ಕಿಡುವ ವಿಚಾರ ದೃಢವಾಗಿರುವ ಕಾರಣದಿಂದ ನಾವು ಸೈನಿಕರಿಗಾಗಿ ಏನನ್ನೂ ಮಾಡದೆಯೇ ಅವರನ್ನು ಹೋರಾಡುವಂತೆ ಹೇಳುವುದು ತಪ್ಪಾಗು ತ್ತದೆ. ಅವರಿಗೆ ಕೆಲವು ಹೆಚ್ಚಿನ ಅಧಿಕಾರ ನೀಡುವುದೂ ಅವಶ್ಯಕವಾಗಿದೆ.
ಭೂಕ್ಷೇತ್ರದೊಂದಿಗೆ ಸಮುದ್ರ ಕ್ಷೇತ್ರದೆಡೆಗೂ ಗಮನಹರಿಸುವುದು ಅತ್ಯಾವಶ್ಯಕವಾಗಿದೆ !
ಈ ಮೊದಲು ಭಾರತದ ಅಧೀನದಲ್ಲಿದ್ದ ದ್ವೀಪಸಮೂಹಗಳ ಪೈಕಿ ಕೆಲವು ದ್ವೀಪಸಮೂಹಗಳನ್ನು ನಾವು ಚೀನಾಗೆ ನೀಡಿದ್ದೇವೆ. ಈ ದ್ವೀಪಗಳಲ್ಲಿ ಚೀನಾ ದೇಶವು ಬೃಹತ್ಪ್ರಮಾಣದಲ್ಲಿ ಸಟೆಲೈಟ್‌ಗಳ ಟವರ್ ಸ್ಥಾಪಿಸಿ, ಅವುಗಳ ಮುಖಾಂತರ ಅವರು ಪೂರ್ಣ ಜಗತ್ತಿನ ಆಗುಹೋಗುಗಳ ಮೇಲೆ ಗಮನವಿಟ್ಟು ಕಾವಲು ಕಾಯುತ್ತಿದ್ದಾರೆ. ಅದರ ಫಲವಾಗಿಯೇ ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಈ ಮಾರ್ಗದಿಂದ ತರಲಾಯಿತು. ಈ ಸಮುದ್ರ ಮಾರ್ಗದ ಕಾರಣದಿಂದ ಭಾರತವು ಸಹಜವಾಗಿ ಅನೇಕ ರಾಷ್ಟ್ರಗಳೊಂದಿಗೆ ಅತ್ಯಲ್ಪ ವೆಚ್ಚದಲ್ಲಿ ಸಂಪರ್ಕವನ್ನು ಹೊಂದಲು ಸಾಧ್ಯವಾಗಿದೆ. ಆದುದರಿಂದ ಭೂಕ್ಷೇತ್ರದ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚು ಈ ಭಾಗದ ಮೇಲೆ ಗಮನವಿರಿಸುವುದು ಆವಶ್ಯಕವಿದೆ. ಚೀನಾದ ಜಲಾಂತರ್ಗಾಮಿ ನೌಕೆಯು ಸಮುದ್ರದಲ್ಲಿ ಪ್ರಯಾಣಿಸಿ ನೇರ ಅರಬ್ಬಿಸಮುದ್ರದ ವರೆಗೆ ಬಂದು ಹೋಗುತ್ತದೆ. ಅದು ಇಷ್ಟು ದೂರದ ವರೆಗೆ ಬಂದು ಹೋಗುವವರೆಗೆ ನಮಗೆ ಅದರ ಸುಳಿವೂ ಸಿಗುವುದಿಲ್ಲ.
ಸಮುದ್ರ ಕ್ಷೇತ್ರದ ರಕ್ಷಣೆ ಮಾಡುವ
ರಕ್ಷಣಾ ದಳಗಳಲ್ಲಿ ಸಮನ್ವಯತೆಯ ಕೊರತೆ !
ಸದ್ಯ ಸಮುದ್ರ ಕ್ಷೇತ್ರದಲ್ಲಿ ಕರಾವಳಿ ರಕ್ಷಣಾ ಪಡೆ, ನೌಕಾದಳ, ಪೊಲೀಸರು, ಗಡಿ ಸೀಮೆಯ ಶುಲ್ಕ ದಳ ಇತ್ಯಾದಿಗಳು ಗಸ್ತು ನಡೆಸುತ್ತವೆ; ಆದರೆ ಈ ಎಲ್ಲ ದಳಗಳಲ್ಲಿ ಸಮನ್ವಯತೆ ಇದೆಯೇ ? ಅವರು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅವರಲ್ಲಿ ಸಮನ್ವಯತೆಯ ಕೊರತೆಯಿದೆ. ಯಾವುದಾದರೂ ಕ್ರಮ ಜರುಗಿಸಬೇಕಾದರೆ, ಆ ಕಾರ್ಯವು ಯಾರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದೆಯೆನ್ನುವ ವಿಷಯದಲ್ಲಿ ವಾದ ವಿವಾದಗಳಾಗುತ್ತವೆ. ಅಷ್ಟರಲ್ಲಿ ನುಸುಳುಖೋರರು ಇದರ ದುರುಪಯೋಗವನ್ನು ಪಡೆದು ಒಳಗೆ ನುಸುಳುತ್ತಾರೆ. ಆದರೆ ಈ ಅಧಿಕಾರಿವರ್ಗದವರು ಮಾತ್ರ ತಾವು ಗಸ್ತು ತಿರುಗುತ್ತಿರುವ ಸಮಯದಲ್ಲಿ, ತಮ್ಮದೇ ದೇಶದ ಮೀನುಗಾರರನ್ನೇ ಹಿಡಿದು, ಅವರಲ್ಲಿ ಯಾರಾದರೊಬ್ಬರ ಬಳಿ ಅವರ ಗುರುತು ಚೀಟಿ ಇಲ್ಲದಿದ್ದರೆ ಅಥವಾ ನೋಂದಣಿ ಪತ್ರವಿಲ್ಲದಿದ್ದರೆ ಅವನನ್ನು ಹೊಡೆದು ಬಡಿದು ಭಯಾನಕ ವಾತಾವರಣವನ್ನು ನಿರ್ಮಾಣ ಮಾಡಿ, ಅವರ ದೋಣಿಯಲ್ಲಿರುವ ಬೆಲೆ ಬಾಳುವ ಮೀನನ್ನು ಕಸಿದುಕೊಳ್ಳುತ್ತಾರೆ. ಇದರಲ್ಲಿಯೇ ಅವರು ಸಾರ್ಥಕತೆಯನ್ನು ಕಾಣುತ್ತಾರೆಯೇ ? ಕಳ್ಳಸಾಗಾಣಿಕೆಯ ಹಡಗು ಅಥವಾ ಗುರುತು ಪತ್ತೆಯಿಲ್ಲದ ಹಡಗುಗಳು ಸಮುದ್ರ ದಡಕ್ಕೆ ಹೇಗೆ ಬರುತ್ತವೆ ?
ಸಮುದ್ರದ ಸುರಕ್ಷತೆಗಾಗಿ ಮೀನುಗಾರರನ್ನು ಸೇರಿಸಿಕೊಳ್ಳುವ ವಿಷಯದಲ್ಲಿಯೂ
ನಿರ್ಲಕ್ಷಿಸುತ್ತಿರುವ ಸುರಕ್ಷಾ ದಳದವರು !
ಇತ್ತೀಚೆಗೆ ಸಮುದ್ರದ ಸುರಕ್ಷತೆಗಾಗಿ ಮೀನುಗಾರರನ್ನು ಸೇರಿಸಿಕೊಳ್ಳುವ ಕುರಿತು ಚರ್ಚಿಸಲಾಗುತ್ತಿದೆ. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಯುವಕರಿಗೆ ಗುರುತುಚೀಟಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಆ ಭಾಗದಲ್ಲಿ ಏನಾದರೂ ಸಂಶಯಾಸ್ಪದ ವಿಷಯಗಳು ಕಂಡುಬಂದಲ್ಲಿ ತಕ್ಷಣ ಆ ಕುರಿತು ಮಾಹಿತಿ ತಿಳಿಸಬೇಕಾಗಿದೆ. ಆದರೆ ಅವರಿಗೆ ಈ ವಿಷಯದಲ್ಲಿ ತರಬೇತಿ ನೀಡಲಾಗಿದೆಯೇ ? ಅವರಿಗೆ ದೇಶದ ಸುರಕ್ಷತೆ ಮುಂತಾದವುಗಳ ಬಗ್ಗೆ ಜ್ಞಾನವಿದೆಯೇ ? ಈ ಬಗ್ಗೆ ಪರಿಶೀಲಿಸದೇ ರಾಜಕಾರಣಿಗಳು ಊರಿನ ಜನರ ಹೆಸರನ್ನು ನೀಡಿದರು. ಸುರಕ್ಷಾ ದಳ ದವರು ಅವರಿಗೆ ಗುರುತುಪತ್ರ ನೀಡಿ ಕೆಲಸಕ್ಕೆ ಸೇರಿಸಿಕೊಂಡರು.
ಸಮುದ್ರ ಪ್ರವಾಸೋದ್ಯಮ ಸಂದರ್ಭದಲ್ಲಿ ಮುಂದಾಗ ಬಹುದಾದ ಅಪಾಯದ ಕುರಿತು 
ರಾಜಕಾರಣಿಗಳ ಹಾಗೂ ಸುರಕ್ಷಾ ದಳದವರ ನಿರ್ಲಕ್ಷ್ಯ !
ಇತ್ತೀಚೆಗೆ ಸಮುದ್ರದ ಪ್ರವಾಸೋದ್ಯಮವು ಬಹಳ ಜೋರಾಗಿ ನಡೆದಿದೆ. ಅನೇಕ ಸ್ಥಳಗಳಲ್ಲಿ ವಾಸ್ತವ್ಯ ಹಾಗೂ ಮನೆಯೂಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆದರೆ ಈ ವ್ಯವಸಾಯದಲ್ಲಿರುವ ಎಷ್ಟು ಜನರು ತಮ್ಮಲ್ಲಿ ವಾಸ್ತವ್ಯ ಮಾಡಿದ ಪ್ರವಾಸಿಗರ ನೋಂದಣಿಯನ್ನು ಇಡುತ್ತಾರೆ ? ಅವರ ಗುರುತಿಗಾಗಿ ಕಾಗದ ಪತ್ರಗಳನ್ನು ಪರಿಶೀಲಿಸುತ್ತಾರೆ ? ಇಂತಹ ಗಂಭೀರವಾದ ವಿಷಯದಲ್ಲಿ ಸ್ಥಳೀಯ ಪೊಲೀಸರು ಕೇವಲ ಸಂಬಂಧಿತ ಜನರಿಗೆ ಗುರುತು ಪತ್ರವನ್ನು ಕಳುಹಿಸುತ್ತಾರೆ ಅಥವಾ ಸ್ಥಳೀಯ ಸರಕಾರಿ ಕಚೇರಿಗಳಿಗೆ ತಿಳಿಸುತ್ತಾರೆ. ಪ್ರತ್ಯಕ್ಷದಲ್ಲಿ ಈ ಕಾನೂನು ಕಾರ್ಯರೂಪದಲ್ಲಿದೆಯೇ ? ಎನ್ನುವುದು ಪ್ರಶ್ನೆಯೇ ಆಗಿದೆ. ಪ್ರವಾಸಿಗರು ಸಮುದ್ರ ದಡದಲ್ಲಿ ಮಾಡುವ ಧ್ವನಿ ಚಿತ್ರೀಕರಣದ ಕುರಿತೂ ನಿರ್ಬಂಧಗಳಿಲ್ಲ. ಅನೇಕ ಪ್ರವಾಸಿಗರು ಸಮುದ್ರದಲ್ಲಿ ಸ್ನಾನ ಮಾಡುವಾಗ ಅಥವಾ ಸೂರ್ಯಾಸ್ತದ ಛಾಯಾಚಿತ್ರವನ್ನು ಬಳಿಕ ಈ ಛಾಯಾಚಿತ್ರಗಳನ್ನು ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌ನಲ್ಲಿ ಅಪಲೋಡ್ ಮಾಡುತ್ತಾರೆ. ಒಂದು ವೇಳೆ ಪ್ರವಾಸಿಗರಲ್ಲಿ ವಿದೇಶಿ ನುಸುಳುಕೋರರಿದ್ದಲ್ಲಿ, ಇಂತಹ ಛಾಯಾಚಿತ್ರಗಳನ್ನು ಮಾಡುವುದು ಎಷ್ಟು ಅಪಾಯಕಾರಿಯಾಗಿದೆಯೆಂದು ವಿಚಾರ ಮಾಡುವುದು ಅತ್ಯಾವಶ್ಯಕವಾಗಿದೆ.
ಇಂದು ಸಮುದ್ರ ದಂಡೆಯಲ್ಲಿ ಸಿ.ಓ. ಝೆಡ್. ಜಾರಿಯಲ್ಲಿರುವಾಗ ಅದನ್ನು ಉಲ್ಲಂಘಿಸಿ ಸುಸಜ್ಜಿತ ಬಂಗಲೆ, ರಿಸಾರ್ಟ್‌ಗಳ ನಿರ್ಮಾಣದಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ತೊಡಗಿದ್ದಾರೆ. ಅಂದರೆ ಕಾನೂನು ಮಾಡುವವರು ಮತ್ತು ಅದನ್ನು
ಜಾರಿಗೊಳಿಸುವವರೇ, ಅದನ್ನು ಮುರಿಯುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಅತ್ಯಂತ ಅವಶ್ಯಕವಿದೆ. ಇಲ್ಲದಿದ್ದಲ್ಲಿ ಇನ್ನು ಮುಂದೆ ರಾತ್ರಿ ವೈರಿಗಳದ್ದಾಗಿದೆ. ಎಚ್ಚರವಾಗಿರಿ ! ಎನ್ನುವ ಸಂದೇಶವನ್ನು ನೀಡಿದರೂ ಉಪಯೋಗವಾಗುವುದಿಲ್ಲ. ಶಿವಾಜಿ ಮಹಾರಾಜರಂತೆ ಎಲ್ಲವನ್ನು ತಿಳಿದುಕೊಂಡಿರುವ ರಾಜನಾಗಬೇಕಾದ ಅವಶ್ಯಕತೆಯಿದೆ. - ಶ್ರೀ. ಉದಯ ಕರಮರಕರ
(ಆಧಾರ : ಸಾಪ್ತಾಹಿಕ ವಿವೇಕ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಮುದ್ರ ತೀರದ ಭದ್ರತೆಯೆಡೆಗೆ ಮಾಡುವ ಅಕ್ಷಮ್ಯ ನಿರ್ಲಕ್ಷ್ಯ ಭಾರತಕ್ಕೆ ಅಪಾಯಕಾರಿ !