ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಮಾಡುವಾಗ
ಜಿಗುಟುತನಕ್ಕೆ ಹೆಚ್ಚು ಮಹತ್ವ !
ಪರಾತ್ಪರ ಗುರು ಡಾ. ಆಠವಲೆ
ಓರ್ವ ಸಾಧಕ : ೫ ತಿಂಗಳ ಹಿಂದೆ ನಾನು ಪ್ರಕ್ರಿಯೆ ಪ್ರಾರಂಭಿಸುವವನಿದ್ದೆ. ಆಗ ತುಂಬಾ ಜಡತ್ವವೆನಿಸುತ್ತಿತ್ತು. ಇದರಿಂದ ನನಗೆ ಪ್ರಕ್ರಿಯೆ ಮಾಡಲು ಸಾಧ್ಯವೇ ? ಎಂದೆನಿಸುತ್ತಿತ್ತು. ನನಗೆ ಹೇಳಿದ್ದಾರೆ ಎಂದು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಐದು ತಿಂಗಳ ನಂತರ ಮನಸ್ಸಿನಲ್ಲಿ ಈಗ ಪುನಃ ಅದೇ ವಿಚಾರ ಬರುತ್ತಿದೆ, ನನ್ನಿಂದ ಪ್ರಕ್ರಿಯೆ ಸಾಧ್ಯವೇ ?
ಪ.ಪೂ. ಡಾಕ್ಟರ್ : ೫ ಅಲ್ಲ, ೧೦ ವರ್ಷಗಳಾದರೂ ನಾನು ಪ್ರಕ್ರಿಯೆ ಮಾಡಿಯೇ ಮಾಡುತ್ತೇನೆ ಎಂಬ ಜಿಗುಟುತನ ನಮ್ಮಲ್ಲಿರಬೇಕು.
೨. ಸ್ವಪ್ರಶಂಸೆಯ ವಿಚಾರ ಮನಸ್ಸಿನಲ್ಲಿ ಬಂದರೆ ಕೃತಿ ಮಾಡುವ
ವಿಚಾರಕೊಟ್ಟಿದ್ದಕ್ಕಾಗಿ ಶ್ರೀಕೃಷ್ಣನಿಗೆ ಶ್ರೇಯಸ್ಸು ಕೊಡಬೇಕು ಮತ್ತು ಸ್ವಯಂಸೂಚನೆಯನ್ನೂ ಕೊಡಬೇಕು !
ಓರ್ವ ಸಾಧಕಿ : ಮನಸ್ಸಿನಲ್ಲಿ ತುಂಬಾ ಸ್ವಪ್ರಶಂಸೆಯ ವಿಚಾರಗಳು ಬರುತ್ತವೆ.
ಪ.ಪೂ. ಡಾಕ್ಟರ್ : ಸ್ವಪ್ರಶಂಸೆಯಿಂದ ಸುಖ ಸಿಗುತ್ತದೆ, ಆನಂದ ಸಿಗುವುದಿಲ್ಲ. ನಾವು ಸುಖ-ದುಃಖಗಳಲ್ಲಿ ಸಿಲುಕಿಕೊಳ್ಳಬಾರದು. ಅದರ ಆಚೆಗೆ ಹೋಗಬೇಕು. ಸ್ವಪ್ರಶಂಸೆಯ ವಿಚಾರ ಮನಸ್ಸಿನಲ್ಲಿ ಬಂದ ಕೂಡಲೇ ‘ಕೃತಿ ಮಾಡಲು ಯಾರು ವಿಚಾರ ಕೊಟ್ಟರು? ದೇವರಲ್ಲವೇ?’ ಎಂದು ಚಿಂತನೆ ಮಾಡಬೇಕು. ಒಂದು ವೇಳೆ ಅವನು ಈ ವಿಚಾರವನ್ನು ಕೊಡದೇ ಇದ್ದರೆ ನಾನು ಕೃತಿ ಮಾಡುತ್ತಲೇ ಇರಲಿಲ್ಲ. ಆಗ ಶ್ರೇಯಸ್ಸು ಯಾರಿಗೆ ಹೋಗುತ್ತದೆ ? ಶ್ರೀಕೃಷ್ಣನಿಗಲ್ಲವೇ ? ಹೀಗೆ ಸ್ವಯಂಸೂಚನೆ ಕೊಡಬೇಕು.
೩. ಅಪೇಕ್ಷೆಯೆಂದರೆ ಸ್ವೇಚ್ಛೆಯಾಗಿದ್ದು ಸಾಧಕರು ಸ್ವೇಚ್ಛೆ ಮತ್ತು ಪರೇಚ್ಛೆಯನ್ನು
ಬಿಟ್ಟು ಈಶ್ವರೇಚ್ಛೆಯಂತೆ ನಡೆದುಕೊಳ್ಳಬೇಕು !
ಓರ್ವ ಸಾಧಕ : ನನ್ನಲ್ಲಿ ತುಂಬಾ ಅಪೇಕ್ಷೆಗಳಿರುತ್ತವೆ.
ಪ.ಪೂ. ಡಾಕ್ಟರ್ : ಅಪೇಕ್ಷೆಯೆಂದರೇನು? ನನಗೇನನಿಸುತ್ತದೆಯೋ ಹಾಗೆ ಆಗಬೇಕು ಎಂದು ಅನಿಸುವುದು. ಸಾಧನೆಯ ಮಹತ್ವದ ಹಂತಗಳೆಂದರೆ ಪರೇಚ್ಛೆ ಮತ್ತು ಈಶ್ವರೇಚ್ಛೆ. ಎಲ್ಲಿಯವರೆಗೆ ನಾವು ಸ್ವೇಚ್ಛೆಯನ್ನು ಬಿಡುವುದಿಲ್ಲವೋ ಅಲ್ಲಿಯವರೆಗೆ ನಾವು ಪರೇಚ್ಛೆಯಂತೆ ವರ್ತಿಸಲಾರೆವು ಮತ್ತು ಪರೇಚ್ಛೆ ಬಿಡುವ ತನಕ ಈಶ್ವರೇಚ್ಛೆ ಅರ್ಥವಾಗಲಾರದು.
೪. ಭವಿಷ್ಯತ್ಕಾಲ ಉತ್ತಮವಾಗಲು ವರ್ತಮಾನದ ಪ್ರತಿಯೊಂದು ಕ್ಷಣವನ್ನು ಸಾಧನೆಗಾಗಿ ಮತ್ತು 
ಈಶ್ವರನ ಅನುಸಂಧಾನದಲ್ಲಿ ಕಳೆಯುವುದು ಆವಶ್ಯಕ ! 
ಓರ್ವ ಸಾಧಕ : ಈ ಮೊದಲು ಆಗಿರುವ ತಪ್ಪುಗಳ ಬಗ್ಗೆ ಭಯ ವಾಗುತ್ತದೆ. ಮುಂದೆ ಹೇಗೆ ? ಎಂದು ಚಿಂತೆಯಾಗುತ್ತದೆ.
ಪ.ಪೂ. ಡಾಕ್ಟರ್ : ಭೂತಕಾಲ ಮತ್ತು ಭವಿಷ್ಯತ್‌ಕಾಲದ ವಿಚಾರ ಮಾಡಿ ಪ್ರಯೋಜನವಿಲ್ಲ. ಭವಿಷ್ಯತ್‌ಕಾಲದ ಚಿಂತೆ ಮಾಡಿದರೆ ಭವಿಷ್ಯ ಉತ್ತಮವಾಗುವುದಿಲ್ಲ. ಆದರೆ ವರ್ತಮಾನದ ಪ್ರತಿಯೊಂದು ಕ್ಷಣವನ್ನು ಸಾಧನೆಗಾಗಿ ವ್ಯಯಿಸುವುದು, ಈಶ್ವರನ ಅನುಸಂಧಾನದಲ್ಲಿರುವುದು, ಹೀಗೆಲ್ಲ ಮಾಡಿದರೆ ಖಂಡಿತವಾಗಿಯೂ ಭವಿಷ್ಯ ಉತ್ತಮವಾಗುತ್ತದೆ. ಸಾಧನೆಯ ಒಂದು ಮೂಲಭೂತ ತತ್ತ್ವವೆಂದರೆ ಸತತವಾಗಿ ವರ್ತಮಾನ ಕಾಲದಲ್ಲಿರುವುದು.
೫. ವ್ಯವಹಾರದ ಶೇ. ೧೦೦ ರಷ್ಟು ಸುಖಕ್ಕೆ ಹೋಲಿಸಿದರೆ ಸಾಧನೆಯಿಂದ 
ಸಿಗುವ ಶೇ. ೧ ರಷ್ಟು ಆನಂದ ಸರ್ವಶ್ರೇಷ್ಠ !
ಓರ್ವ ಸಾಧಕಿ : ಸಮಾಜದ ವ್ಯಕ್ತಿಗಳನ್ನು ನೋಡಿದರೆ ಅವರೂ ಆನಂದದಲ್ಲಿದ್ದಾರೆ ಎಂದೆನಿಸುತ್ತದೆ ಮತ್ತು ನನ್ನ ಸ್ಥಿತಿ ಅವರಿಗಿಂತಲೂ ಕೆಟ್ಟದ್ದಾಗಿದೆ ಅಂದರೆ ನಾನು ಅವರಿಗಿಂತಲೂ ದುಃಖಿಯಾಗಿದ್ದೇನೆ ಎಂದೆನಿಸುತ್ತದೆ. ನಾನು ಇತರರೊಂದಿಗೆ ತುಲನೆ ಮಾಡುತ್ತೇನೆ.
ಪ.ಪೂ. ಡಾಕ್ಟರ್ : ತುಲನೆ ಮಾಯೆಯದ್ದಾಗಿದೆ. ಸಮಾಜದ ವ್ಯಕ್ತಿ ಗಳೊಂದಿಗೆ ನಮ್ಮನ್ನು ತುಲನೆ ಮಾಡಿದರೆ ನಮಗೆ ಅವರ ಸ್ಥಿತಿ ಹೇಗಿದೆ ಎಂದು ಹೇಗೆ ತಿಳಿಯುತ್ತದೆ? ನಾವು ಮನೆ-ಮಠ ಬಿಟ್ಟು, ಎಲ್ಲವನ್ನು ತ್ಯಾಗ ಮಾಡಿ ಸಾಧನೆಗಾಗಿ ಬಂದಿದ್ದೇವೆ. ನಮ್ಮೆಲ್ಲರ ತ್ಯಾಗದಿಂದ ಸಿಗುವ ೧ ಶೇಕಡಾ ಆನಂದವು ಮಾಯೆಯ ಶೇ. ೧೦೦ ರಷ್ಟು ಸುಖಕ್ಕಿಂತ ಸರ್ವಶ್ರೇಷ್ಠವಾಗಿದೆ.
೬. ತಪ್ಪುಗಳಾಗಿರುವುದರಿಂದಲೇ ನಮಗೆ ಮನುಷ್ಯ ಜನ್ಮ ಸಿಕ್ಕಿದೆ !
ಓರ್ವ ಸಾಧಕ : ನನ್ನಿಂದ ತುಂಬಾ ತಪ್ಪುಗಳಾಗಿವೆ. ಇದರಿಂದ ನನಗೆ ತುಂಬಾ ಅಪರಾಧಿಯಾಗಿದ್ದೇನೆ ಎಂದೆನಿಸುತ್ತದೆ.
ಪ.ಪೂ. ಡಾಕ್ಟರ್ : ತಪ್ಪುಗಳು ಮತ್ತು ಅಪರಾಧಗಳು ಕೇವಲ ಈ ಜನ್ಮದ್ದಾಗಿರದೆ ಕಳೆದ ಅನೇಕ ಜನ್ಮಗಳದ್ದಾಗಿದೆ; ಅದಕ್ಕಾಗಿಯೇ ನಮಗೆ ಮನುಷ್ಯಜನ್ಮ ಸಿಕ್ಕಿದೆ, ಇಲ್ಲದಿದ್ದರೆ ನಾವು ಯಾವಾಗಲೋ ಜನಲೋಕ, ತಪೋಲೋಕ ಅಥವಾ ಮೋಕ್ಷಕ್ಕೆ ಹೋಗಿರುತ್ತಿದ್ದೆವು.
೭. ಕೇವಲ ಆಶ್ರಮದಲ್ಲಿ ಮಾತ್ರವಲ್ಲ, ಪ್ರಸಾರದಲ್ಲಿಯೂ ಶ್ರೀಕೃಷ್ಣನಿದ್ದಾನೆ ಎಂಬುದನ್ನು ಅಂತರ್ಮನಸ್ಸಿಗೆ
ತಿಳಿಸಿಕೊಡಲು ಸ್ವಯಂಸೂಚನೆಗಳನ್ನು ಕೊಡಿ !
ಓರ್ವ ಸಾಧಕಿ : ಸ್ವಭಾವದೋಷ ನಿರ್ಮೂಲನೆಯನ್ನು ಕಲಿಯುವ ನನ್ನ ಪ್ರಕ್ರಿಯೆ ಪೂರ್ಣವಾಗಿದ್ದು ಈಗ ಪ್ರಸಾರಕ್ಕೆ ಹೋಗಲು ಹೇಳಿದ್ದಾರೆ; ಆದರೆ ಅದನ್ನು ಸ್ವೀಕರಿಸಲು ಸಂಘರ್ಷವಾಗುತ್ತಿದೆ. ಆಶ್ರಮದಲ್ಲಿ ಚೈತನ್ಯ ವಿದ್ದರೂ ಪ್ರಕ್ರಿಯೆ ಮಾಡಲು ಇಷ್ಟು ಕಷ್ಟಪಡಬೇಕಾಯಿತು, ಇನ್ನು ಹೊರಗೆ ಹೋದ ಮೇಲೆ ಪುನಃ ರಜ-ತಮ, ಮಾಯೆ ಇರುತ್ತದೆ. ಪುನಃ ಆವರಣ ಹೆಚ್ಚಾಗುತ್ತದೆ. ಆದ್ದರಿಂದ ನನಗೆ ಹೋಗಬೇಕೆಂದೆನಿಸುತ್ತಿಲ್ಲ. ಇದರ ಬಗ್ಗೆ ಚಿಂತನೆ ಮಾಡಿ ದೋಷಗಳ ಬಗ್ಗೆ ಸ್ವಯಂಸೂಚನೆ ನೀಡಲು ಪ್ರಾರಂಭಿಸಿದೆನು. ಆದರೆ ಬುದ್ಧಿಗೆ ಎಲ್ಲವೂ ತಿಳಿಯುತ್ತಿದ್ದರೂ ಮನಸ್ಸಿನಿಂದ ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಪ.ಪೂ. ಡಾಕ್ಟರ್ : ಪ್ರಸಾರದಲ್ಲಿಯೂ ಶ್ರೀಕೃಷ್ಣನಿದ್ದಾನಲ್ಲ ? ಇದನ್ನು ಸ್ವಯಂಸೂಚನೆಗೆ ತೆಗೆದುಕೊಳ್ಳಿ, ಆಗ ಅಂತರ್ಮನಸ್ಸಿಗೆ ಅರಿವಾಗುತ್ತದೆ. ಅಂತರ್ಮನಸ್ಸಿಗೆ ಸತತವಾಗಿ ತಿಳಿಸಿ ಹೇಳಿದರೆ ಮನಸ್ಸಿನ ಮೇಲಿನ ಅಯೋಗ್ಯ ಸಂಸ್ಕಾರ ಕಡಿಮೆಯಾಗಿ, ಯೋಗ್ಯ ಕೃತಿಯಾಗುವುದು.
೮. ಸೇವೆ ಕಡಿಮೆಯಾದರೂ ಪರವಾಗಿಲ್ಲ;
ಆದರೆ ವ್ಯಷ್ಟಿ ಸಾಧನೆ ಉತ್ತಮವಾಗಿ ಆಗಬೇಕು !
ಓರ್ವ ಸಾಧಕಿ : ಮನಸ್ಸಿನಲ್ಲಿ ತುಂಬಾ ವಿಚಾರಗಳು ಬಂದು ಅದರಿಂದ ತುಂಬಾ ತೊಂದರೆಯಾಗುತ್ತದೆ.
ಪ.ಪೂ. ಡಾಕ್ಟರ್ : ಇದಕ್ಕಾಗಿ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳಿ. ಕಾರ್ಯ ಕಡಿಮೆಯಾದರೂ ಪರವಾಗಿಲ್ಲ; ಆದರೆ ಇದರಿಂದ ಹೊರ ಬರಬೇಕು. ಸ್ವಭಾವದೋಷ ನಿರ್ಮೂಲನಾ ಸತ್ರ, ಸಾಧನೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯ ಮಾಡಿ ಬೇಗನೇ ಸರಿಯಾಗಬೇಕು. ಕಾರ್ಯ ಮೋಕ್ಷಕ್ಕೆ ಕರೆದೊಯ್ಯುವುದಿಲ್ಲ, ಸಾಧನೆ ಮಾತ್ರ ಕರೆದೊಯ್ಯುತ್ತದೆ, ಇದನ್ನು ಗಮನದಲ್ಲಿಡಬೇಕು.
೯. ಈಶ್ವರನೊಂದಿಗೆ ಅಖಂಡ ಅನುಸಂಧಾನವಿರುವುದೇ ಅಂತಿಮ ಸತ್ಯ
೧೦. ದೇವರ ಕೃಪೆಯಿಂದ ಎಲ್ಲರ ಪ್ರಗತಿಯು ಖಂಡಿತವಾಗಿ ಆಗುತ್ತದೆ, ಎಂಬ ದೃಢ ಶ್ರದ್ಧೆಯಿಟ್ಟು ನಾವು ಜಿಗುಟುತನದಿಂದ ಸಾಧನೆ ಮಾಡುತ್ತಿದ್ದರೆ ದೇವರು ಖಂಡಿತ ಸಿಗುತ್ತಾರೆ.
೧೧. ನಮ್ಮ ಪ್ರಗತಿಯಾದರೆ ಮಾತ್ರ ನಮ್ಮ ವಾಣಿಯಲ್ಲಿ ಚೈತನ್ಯ ಬರುತ್ತದೆ ಮತ್ತು ಅದರ ಪರಿಣಾಮ ಸಮಾಜದ ಮೇಲಾಗುತ್ತದೆ.
೧೨. ಸ್ವಯಂಸೂಚನೆ ತೆಗೆದುಕೊಳ್ಳುವ ಮಹತ್ವ
ನಾವು ನಮ್ಮ ಮನಸ್ಸಿನ ವಿಚಾರವನ್ನು ಯಾರೊಂದಿಗಾದರೂ ಹಂಚಿ ಕೊಳ್ಳುವಾಗ ಅದು ನಮ್ಮ ಮನಸ್ಸು ಮತ್ತು ಬುದ್ಧಿಗೆ ತಿಳಿಯುತ್ತದೆ; ಆದರೆ ಆ ವಿಚಾರವನ್ನು ಚಿತ್ತಕ್ಕೆ ಬಿಂಬಿಸಬೇಕಾದರೆ ಸ್ವಯಂಸೂಚನೆಗಳನ್ನೇ ತೆಗೆದು ಕೊಳ್ಳಬೇಕು.
೧೩. ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಗೆ
ತುಂಬಾ ಕಷ್ಟ ಪಡಬೇಕಾಗುತ್ತದೆ !
ಜನ್ಮಜನ್ಮಾಂತರದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ ಸುಲಭವಲ್ಲ. ತುಂಬಾ ಕಷ್ಟಪಡಬೇಕಾಗುತ್ತದೆ, ಆಗಲೇ ನಮ್ಮಲ್ಲಿ ಬದಲಾವಣೆಯಾಗುತ್ತದೆ.
೧೪. ಸತತ ಕೇಳುವ ಮತ್ತು ಕಲಿಯುವ ಸ್ಥಿತಿಯಲ್ಲಿರಬೇಕು !
ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯಲ್ಲಿ ಎಂದಿಗೂ ಸ್ಪಷ್ಟೀಕರಣ ಕೊಡಬಾರದು, ಕೇವಲ ಕೇಳುವ ಮತ್ತು ಕಲಿಯುವ ಸ್ಥಿತಿಯಲ್ಲಿರಬೇಕು, ಹೀಗಿದ್ದರೆ ಮಾತ್ರ ತಮ್ಮಲ್ಲಿ ಬದಲಾವಣೆಯಾಗುತ್ತದೆ.
೧೫. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಮಾಡುವಾಗ ಅದರಲ್ಲಿ ಭಾವವನ್ನು ಜೊತೆಗೂಡಿಸಿದರೆ
ಅಲ್ಪಾವಧಿಯಲ್ಲಿ ದೋಷ ಕಡಿಮೆಯಾಗುವುದು !
ನಮ್ಮ ಮೇಲೆ ಅನೇಕ ಜನ್ಮಗಳ ಸಂಸ್ಕಾರವಿದೆ. ಅವು ನಾಶವಾಗಲು ಖಂಡಿತವಾಗಿಯೂ ಸಮಯ ತಗಲುತ್ತದೆ. ಸ್ವಯಂಸೂಚನೆಗಳ ಸತ್ರ ಮಾಡಿದಾಗ ಅದು ಅಂತರ್ಮನಸ್ಸಿಗೆ ಹೋಗಿ ಅದರ ಪರಿಣಾಮವಾಗಲು ತುಂಬಾ ಕಾಲಾವಧಿ ಬೇಕಾಗುತ್ತದೆ. ಅದಕ್ಕೆ ಭಾವದ ಜೊತೆ ನೀಡಬೇಕು. ಪ್ರಕ್ರಿಯೆ ಮಾಡುವಾಗ ಒಂದೊಂದು ದೋಷ ಹೋಗಲು ತುಂಬಾ ಸಮಯ ಬೇಕಾಗುತ್ತದೆ. ಅದಕ್ಕೆ ಭಾವವನ್ನು ಜೊತೆಗೂಡಿಸಿದರೆ ಅಲ್ಪಾವಧಿಯಲ್ಲಿ ದೋಷ ಕಡಿಮೆಯಾಗುತ್ತದೆ.
೧೬. ದೋಷಗಳ ತೀವ್ರತೆ ಹೆಚ್ಚಿದ್ದರೆ ಅವುಗಳ ಮೇಲಿನ
ಉಪಾಯಗಳ ತೀವ್ರತೆಯನ್ನೂ ಹೆಚ್ಚಿಸಬೇಕು !
ಸಾಧನೆ ಮಾಡಲು ಪ್ರಕೃತಿಯು ಚೆನ್ನಾಗಿರಬೇಕು. ಅದರಲ್ಲಿ ಮನಸ್ಸಿನ ಪ್ರಕೃತಿ ಸರಿಯಾಗಿಲ್ಲದಿದ್ದರೆ ಅದರಿಂದಾಗುವ ತೊಂದರೆಯ ಪ್ರಮಾಣ ಹೆಚ್ಚಿರುತ್ತದೆ; ಏಕೆಂದರೆ ಮನಸ್ಸಿನಿಂದಲೇ ಸಾಧನೆಯಾಗುವುದು. ಆದ್ದರಿಂದ ಅದಕ್ಕೆ ಸೂಚನೆ ಕೊಡಬೇಕು. ದೋಷಗಳ ತೀವ್ರತೆ ಹೆಚ್ಚಿದ್ದರೆ ಅವುಗಳ ಮೇಲಿನ ಉಪಾಯಗಳ ತೀವ್ರತೆಯನ್ನೂ ಹೆಚ್ಚಿಸಬೇಕು.
೧೭. ದೇವರಿಗೆ ಎಲ್ಲವೂ ತಿಳಿಯುವುದರಿಂದ ಅವನಿಂದ ನಾವು
ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ !
ಪ್ರತಿಷ್ಠೆ ಎಂದರೇನು ? ಎದುರಿನ ವ್ಯಕ್ತಿಗೆ ನಾವು ಒಳ್ಳೆಯವರೆಂದು ತೋರಿಸಿಕೊಳ್ಳುವುದು; ಆದರೆ ದೇವರಿಗೆ ಎಲ್ಲವೂ ತಿಳಿಯುತ್ತದೆ. ಅವನಿಂದ ನಾವು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಅವನೇ ನಮ್ಮ ಸಾಧನೆಯ ಲೆಕ್ಕಾಚಾರವನ್ನಿಡುತ್ತಾನೆ. ಹೀಗಿರುವಾಗ ನಾವು ಯಾರಿಂದ ಯಾವ ಪ್ರತಿಷ್ಠೆ ಯನ್ನು ಕಾಪಾಡುತ್ತೇವೆ ?
೧೮. ಭಾವದ ಮಹತ್ವ
ತಪ್ಪುಗಳು, ಸ್ವಭಾವದೋಷ ಮತ್ತು ಅಹಂ ನಮ್ಮನ್ನು ದೇವರಿಂದ ದೂರ ಕೊಂಡೊಯ್ಯುತ್ತವೆ; ಆದರೆ ಭಾವ ನಮ್ಮನ್ನು ಈಶ್ವರನ ಬಳಿ ಕೊಂಡೊಯ್ಯುತ್ತದೆ.
೧೯. ವ್ಯಷ್ಟಿ ಭಾವಕ್ಕಿಂತ ಪರಿಪೂರ್ಣ ಸೇವೆ ಹೆಚ್ಚು ಮಹತ್ವದ್ದು !
ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವಾದ ನಂತರ ಸತತ ಭಾವದ ಸ್ಥಿತಿ ಬರುತ್ತದೆ. ಆದರೆ ಭಾವಕ್ಕಿಂತ ಪರಿಪೂರ್ಣ ಸೇವೆಗೆ ಹೆಚ್ಚು ಮಹತ್ವ. ಭಾವವು ವ್ಯಷ್ಟಿಯಾಗಿದೆ. ಇದರಿಂದ ದೇವರಿಗೆ ‘ಇವನು ಸ್ವಾರ್ಥಿಯಾಗಿದ್ದಾನೆ, ಕೇವಲ ತನ್ನ ವಿಚಾರ ಮಾತ್ರ ಮಾಡುತ್ತಾನೆ’ ಎಂದೆನಿಸುತ್ತದೆ. ಪರಿಪೂರ್ಣ ಸೇವೆಯು ಸಮಷ್ಟಿ ಸೇವೆಯಾಗಿದೆ. ದೇವರಿಗೆ, ‘ಇವನು ಸಮಷ್ಟಿಯ ವಿಚಾರ ಮಾಡುತ್ತಾನೆ, ಆದ್ದರಿಂದ ಇವನು ನನ್ನವನಾಗಿದ್ದಾನೆ’ ಎಂದೆನಿಸುತ್ತದೆ.
೨೦. ವ್ಯಕ್ತ ಭಾವ ಮತ್ತು ಅವ್ಯಕ್ತ ಭಾವ
ವ್ಯಕ್ತ ಭಾವ ಮತ್ತು ಅವ್ಯಕ್ತ ಭಾವ ಎಂಬ ಎರಡು ಹಂತಗಳಿವೆ. ವ್ಯಕ್ತ ಭಾವದಲ್ಲಿ ಸೇವೆ ಮಾಡಲು ಆಗುವುದಿಲ್ಲ ಮತ್ತು ಅವ್ಯಕ್ತ ಭಾವದಲ್ಲಿ ಪರಿಪೂರ್ಣ ಸೇವೆ ಮಾಡುವ ಪ್ರಯತ್ನವನ್ನು ನಾವು ಮಾಡಬಹುದು.
- ಕು. ಯೋಗಿತಾ ಪಾಲನ್, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೧೫)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ