ನಿಜವಾದ ಆರೋಪಿಗಳನ್ನು ದಂಡಿಸುವುದೇ ನಿಜವಾದ ನ್ಯಾಯ !

೨೦೦೮ ನೇ ಸಾಲಿನಲ್ಲಿ ಮಾಲೆಗಾಂವ್ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಆರೋಪಿಯೆಂದು ಕಳೆದ ೮ ವರ್ಷಗಳಿಂದ ಕಾರಾಗೃಹದಲ್ಲಿ ಅನೇಕ ದೌರ್ಜನ್ಯಗಳನ್ನು, ಯಾತನೆಗಳನ್ನು ಅನುಭವಿಸಿದ ಸಾಧ್ವಿ ಪ್ರಜ್ಞಾಸಿಂಗ್ ಇವರನ್ನು ನಿರಪರಾಧಿಯೆಂದು ಘೋಷಿಸಿದ ವಾರ್ತೆಯು ಸಮಸ್ತ ಹಿಂದೂಪ್ರೇಮಿಗಳಿಗೆ ಆನಂದದ ವಾರ್ತೆಯಾಯಿತು. ಈಗ ಕಾರಾಗೃಹದಿಂದ ಅವರ ಬಿಡುಗಡೆಯೂ ಆಗಬಹುದು; ಆದರೆ ಎರಡೂ ಮಾಲೆಗಾಂವ್ ಬಾಂಬ್‌ಸ್ಫೋಟದ ಅತ್ಯಂತ ಕ್ಲಿಷ್ಟಕರವಾದ ಪ್ರಕರಣದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ರಾಜಕಾರಣಿಗಳು ಮತ್ತು ತನಿಖಾ ದಳದ ತಂಡವು ಸತ್ಯವನ್ನು ಸುಳ್ಳೆಂದು ಮತ್ತು ಸುಳ್ಳನ್ನು ಸತ್ಯವೆಂದು ಪರಿವರ್ತಿಸಿ ಸಮಸ್ತ ರಾಷ್ಟ್ರದ ಜನತೆ ಮತ್ತು ಸೇನಾದಳಕ್ಕೆ ಪೀಡಿಸಿದರಲ್ಲದೇ, ಹಿಂದೂ ಧರ್ಮಾಭಿಮಾನಿಗಳ ಜೀವನಕ್ಕೆ ತುಂಬಲಾರದಷ್ಟು ಹಾನಿ ಮಾಡಿದ್ದಾರೆ. ಇದಕ್ಕೆ ಜವಾಬ್ದಾರರಾಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಜೀವಮಾನವಿಡಿ ನೆನಪಿನಲ್ಲಿಡು ವಂತಹ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಹಿಂದುತ್ವನಿಷ್ಠರು ಸಂಘಟಿತರಾಗಿ ಆಗ್ರಹಿಸಬೇಕು. ದೈವಬಲವು ಸಾಧ್ವಿ ಯೊಂದಿಗಿದ್ದ ಕಾರಣ ಕೊನೆಗೆ ಸತ್ಯಕ್ಕೆ ಜಯ ದೊರೆಯಿತು; ಆದರೆ ಒಬ್ಬ ಸನ್ಯಾಸಿನಿಗೆ ಅತ್ಯಂತ ಘೋರವಾದ ಅಪಮಾನವಾಗುತ್ತಿರುವಾಗ ಹಿಂದೂ ಗಳು ಮಾತ್ರ ಶಾಂತವಾಗಿ ಕುಳಿತಿದ್ದ ರೆನ್ನುವ ಸತ್ಯವನ್ನು ಅಲ್ಲಗೆಳೆಯಲಾಗದು.
ಭಯಾನಕ ಹಿಂದೂದ್ವೇಷಿ ಷಡ್ಯಂತ್ರ ಬಯಲು !
ಅಲಿಬಾಗ್‌ನಲ್ಲಿ ಜರುಗಿದ ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಿಬಿರದಲ್ಲಿ ಶರದ ಪವಾರರು, 'ಈ ತನಿಖೆ ಯಾವ ದಿಕ್ಕಿನಲ್ಲಿ ನಡೆಯಬೇಕೆಂದು ನಾನು ಹೇಳಿದ್ದೇನೆ' ಎಂದಿದ್ದರು. ಅವರು ತಿಳಿಸಿರುವ ವಿಷಯವು ಈಗ ಸೂರ್ಯನ ಬೆಳಕಿ ನಷ್ಟು ಸ್ಪಷ್ಟವಾಗಿದೆ. ಇದರಿಂದ ಆಗಿನ ಗೃಹಮಂತ್ರಿ ರಾ.ರಾ. ಪಾಟೀಲ ಇವರ ಮಾಧ್ಯಮದಿಂದ ಮಾಲೇಗಾಂವ್ ಬಾಂಬ್‌ಸ್ಫೋಟದ ಪ್ರಕರಣದಲ್ಲಿ ಅವರು ಹಿಂದುತ್ವನಿಷ್ಟರನ್ನು ಬಂಧಿಸಿ ತನಿಖಾ ದಳದವರು ಸುಳ್ಳು ಪುರಾವೆಗಳನ್ನು ಸಂಗ್ರಹಿಸುವಂತೆ ಮಾಡಿ ಹಿಂದೂಗಳನ್ನು ಭಯೋತ್ಪಾದಕರೆನ್ನುವಂತೆ ಬಿಂಬಿಸಿದರು. ಈ ವಿಷಯವೀಗ ಕೇವಲ ಸುದ್ದಿಯಾಗಿ ಉಳಿದಿಲ್ಲ. ಹಿಂದೂ ಭಯೋತ್ಪಾದನೆ ಈ ಶಬ್ದವನ್ನು ಚಿದಂಬರಮ್ ಮತ್ತು ಪವಾರ ಇವರು ಸೃಷ್ಟಿಸಿದರು ಹಾಗೂ ಮಾಧ್ಯಮದವರ ಮೂಲಕ ಈ ವಾರ್ತೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬುವಂತೆ ಮಾಡಿದರು. ೧೯೯೩ ರ ಸ್ಫೋಟದ ಸಮಯದಲ್ಲಿಯೂ ಪವಾರ ಇವರು ಮುಸಲ್ಮಾನರ ವಸತಿಯಲ್ಲಿ ಸ್ಫೋಟಗೊಂಡಿದೆಯೆನ್ನುವ ಗಾಳಿಸುದ್ದಿ ಮಾಧ್ಯಮದಲ್ಲಿ ಹಬ್ಬಿಸಿದ್ದರು. ಇದು ಅವರ ಕೀಳುಮಟ್ಟದ ರಾಜಕಾರಣದ ಮತ್ತೊಂದು ಮುಖವಾಡವಾಗಿದೆ.
ಉಗ್ರ ನಿಗ್ರಹ ದಳವೋ ಉಗ್ರರ ದಳವೋ ?
ಉಗ್ರ ನಿಗ್ರಹ ದಳದವರು ಸ್ವತಃ ಉಗ್ರರೆಂಬಂತೆ ತಮ್ಮ ಪಾತ್ರವನ್ನು ನಿರ್ವಹಿಸಿದರು. ಪುರೋಹಿತ ಮತ್ತು ಚತುರ್ವೇದಿಯವರ ಮನೆಯಲ್ಲಿ ತಾವೇ ಆರ್.ಡಿ.ಎಕ್ಸ್ ಇಟ್ಟರು. ಸಾಧ್ವಿಯನ್ನು ಅನೇಕ ರೀತಿಯಲ್ಲಿ ಪೀಡಿಸಿದರು. ಅವರ ಶಿಷ್ಯರಿಂದಲೇ ಅವರಿಗೆ ಹೊಡೆಸಿದರು. ಅವರಿಗೆ ಅಶ್ಲೀಲ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಿದರು. ಕಾಲಿನಿಂದ ಒದ್ದರು, ಮುಷ್ಟಿಯಿಂದ ಗುದ್ದಿದರು. ಇಂದು ಸಾಧ್ವಿಯನ್ನು ತಮ್ಮ ಕಾಲ ಮೇಲೆ ನಿಲ್ಲಲಾರದಂತಹ ವಿಕಲಾಂಗ ಪರಿಸ್ಥಿತಿಗೆ ತಂದಿದ್ದಾರೆ. ಅರ್ಬುದರೋಗದಿಂದ ಬಳಲುತ್ತಿರುವ ಸಾಧ್ವಿಯ ಮೃತ್ಯುವಿನ ದಾರಿಯನ್ನೇ ಕಾಯುತ್ತಿದ್ದರು. ಅವರು ನಿಜ ಪುರಾವೆಗಳನ್ನು ಹುಡುಕಲಿಲ್ಲ. ಸುಳ್ಳು ಸಾಕ್ಷಿಗಳನ್ನು ಸಿದ್ಧಪಡಿಸಿದರು. ಉಗ್ರ ನಿಗ್ರಹ ದಳದ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾದರು ಮತ್ತು ಅವರು ಹೇಳಿದಂತೆ ವರ್ತಿಸುತ್ತಾ, ದೇಶದ್ರೋಹವನ್ನು ಬಗೆದರು. ಯಾವ ಪ್ರಾಯಶ್ಚಿತದಿಂದ ಅವರ ಈ ಪಾಪ ತೊಳೆಯಬಲ್ಲದು ? ಸಾಧ್ವಿ, ಪುರೋಹಿತ ಹಾಗೆಯೇ ಇತರ ೧೨ ಜನರ ಕಳೆದು ಹೋಗಿರುವ ತಾರುಣ್ಯದ ವರ್ಷಗಳು, ಅವರಿಗೆ ಎಷ್ಟೇ ದೊಡ್ಡ ನ್ಯಾಯ ದೊರಕಿದರೂ ಮರಳಿ ಬರಲಾದಂತಹ ನಷ್ಟವಾಗಿದೆ. ಇವರೆಲ್ಲರೂ ಹಳ್ಳಿಯ ಗೂಂಡಾಗಳು ಅಥವಾ ಗ್ಯಾಂಗಸ್ಟರ್ ಆಗಿರಲಿಲ್ಲ; ಅವರು ಪ್ರಖರ ಧರ್ಮಾಭಿಮಾನಿ ಮತ್ತು ದೇಶಭಕ್ತರಾಗಿದ್ದರು. ಅವರ ದೇಶಭಕ್ತಿಗೆ ದೊರಕಿದ ಈ ಕಹಿಫಲವು ಬ್ರಿಟಿಷರು ಕ್ರಾಂತಿಕಾರರಿಗೆ ನೀಡಿದ ಫಲದಂತೆಯೇ ಕಟುವಾಗಿದೆ. ಈ ಎಲ್ಲ ಪ್ರಕರಣಗಳಿಂದಾಗಿ ತನಿಖಾದಳದ ಮೇಲೆ ಜನಸಾಮಾನ್ಯರಿಗೆ ವಿಶ್ವಾಸವೇ ಇಲ್ಲದಂತಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಉಗ್ರ ನಿಗ್ರಹ ದಳವು ಹಿಂದೂ ತರುಣರನ್ನು ಆರೋಪಿಗಳೆಂದು ನಿರ್ಧರಿಸಲು ಇಂಡಿಯಾ ಬುಲ್ಸ್ ಸಂಸ್ಥೆಯ ವಿಮಾನವನ್ನು ೨೪ ಮತ್ತು ೨೫ ಅಕ್ಟೋಬರ್ ೨೦೦೮ ರಂದು ಉಪಯೋಗಿಸಿತ್ತು. ಅದರ ಪುರಾವೆಗಳು ದೊರೆತಿವೆ. ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಹಿಂದೂ ಭಯೋತ್ಪಾದನೆ ಸಿದ್ಧಪಡಿಸಲು ಎಷ್ಟು ದೊಡ್ಡ ಪ್ರಮಾಣದಲ್ಲಿ ಜನತೆಯ ಹಣ ಮತ್ತು ಸರಕಾರದ ಅಧಿಕಾರ ವ್ಯಾಪ್ತಿಯನ್ನು ಉಪಯೋಗಿಸಿತು ಎನ್ನುವುದಕ್ಕೆ ಇದು ದ್ಯೋತಕವಾಗಿದೆ. ಸರಕಾರವು ತನಿಖಾದಳದಲ್ಲಿರುವ ಮೋಸಗಾರರಿಗೆ, ಭ್ರಷ್ಟರಿಗೆ ಮತ್ತು ದುರ್ಜನರಿಗೆ ಭಯವನ್ನುಂಟು ಮಾಡುವಂತೆ ಕ್ರಮಕೈಗೊಂಡರೆ ನಿಜವಾದ ಅರ್ಥದಲ್ಲಿ ಭಯೋತ್ಪಾದನೆಯನ್ನು ನಾಶಗೊಳಿಸುವ ತನಿಖಾದಳದ ತಂಡವು ಸಿದ್ಧಗೊಳ್ಳಬಹುದು. ಸರಕಾರ ಈಗಲಾದರೂ ನ್ಯಾಯವನ್ನು ಒದಗಿಸಬೇಕು.
ಸೇನೆಯಲ್ಲಿ ಪ್ರತ್ಯೇಕವಾದ ಒಂದು ನ್ಯಾಯಾಲಯವಿರುತ್ತದೆ. ಅದು ತತ್ಪರವಾಗಿದ್ದು ಅಲ್ಲಿ ಭ್ರಷ್ಟತೆಯಿರುವುದಿಲ್ಲ. ಆ ಕೋರ್ಟ್ ಮಾರ್ಶಲ್ ನಲ್ಲಿ ೨೦೧೧ ರಲ್ಲಿ ಕರ್ನಲ್ ಪುರೋಹಿತರನ್ನು ನಿರಪರಾಧಿಯೆಂದು ತೀರ್ಪನ್ನು ನೀಡಲಾಗಿದೆ. ನಾಳೆ ಈ ನ್ಯಾಯಾಲಯದಲ್ಲಿ ಕರ್ನಲ್ ಪುರೋಹಿತರು ನಿರಪರಾಧಿಗಳೆಂದು ಸಾಬೀತಾದರೆ, ಭಾಜಪದವರು ಅವರನ್ನು ನಿರಪರಾಧಿಗಳೆಂದು ಸಾಬೀತು ಪಡಿಸಲು ಪ್ರಯತ್ನಿಸಿದರೆನ್ನುವ ಆರೋಪಗಳಾಗುವವು. ಪ್ರತ್ಯಕ್ಷದಲ್ಲಿ ಭಾಜಪ ಸರಕಾರ ಬಂದು ೨ ವರ್ಷಗಳಾದರೂ ದೇಶಕ್ಕಾಗಿ ಪ್ರಾಣವನ್ನು ನೀಡಲು ತತ್ಪರರಾಗಿರುವ ಕರ್ನಲ್ ಹುದ್ದೆಯಲ್ಲಿರುವ ಅಧಿಕಾರಿಯನ್ನು ಮತ್ತು ಹಿಂದೂ ದೇಶಭಕ್ತನನ್ನು ಕಾರಾಗೃಹದಲ್ಲಿ ಕೂಡಿಡುವುದು ಹಿಂದೂ ಎಂದು ಹೇಳಿಕೊಳ್ಳುವ ಸರಕಾರಕ್ಕೆ ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆಯೆಂದು ಅತೀ ದುಃಖದಿಂದ ಹೇಳಬೇಕಾಗಿದೆ. ೨೦೦೮ ರಿಂದ ೨೦೧೬ ರ ವರೆಗೆ ಈ ಪ್ರಕರಣದ ತನಿಖೆಯು ಸರಿಯಾದ ಮಾರ್ಗದಲ್ಲಿ ನಡೆಯಲಿಲ್ಲ. ಇಲ್ಲಿಯ ವರೆಗೆ ಕೇವಲ ಆರೋಪಪತ್ರವನ್ನು ಸಲ್ಲಿಸುವುದು, ಜಾಮೀನಿಗಾಗಿ ವಾದ-ಪ್ರತಿವಾದ ಮಂಡಿಸುವುದು, ಮೊಕ್ಕಾ ಕಾನೂನು ಹಿಂತೆಗೆದುಕೊಳ್ಳಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ಚರ್ಚೆಗಳು, ಇದರಲ್ಲಿಯೇ ೮ ವರ್ಷಗಳು ಕಳೆದುಹೋದವು. ಮೋದಿ ಸರಕಾರವು ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಮೇಲೆ ತಂದು ಪ್ರತಿದಿನವೂ ವಿಚಾರಣೆ ನಡೆಸಿ ನಿಜವಾದ ಅರ್ಥದಲ್ಲಿ ಹಿಂದೂಗಳಿಗೆ ನ್ಯಾಯವನ್ನು ದೊರಕಿಸಬೇಕೆನ್ನುವುದೇ ಅಪೇಕ್ಷೆಯಾಗಿದೆ. ಇಂದಿಗೂ ಮುಜ್ಜಮೀನ ಎಂಬ ಹೆಸರಿನ ಮುಸಲ್ಮಾನ ಆರೋಪಿ ಪರಾರಿಯಾಗಿದ್ದಾನೆ. ಅವನು ಪಾಕಿಸ್ತಾನದಲ್ಲಿ ಬಿರ್ಯಾನಿ ತಿನ್ನುತ್ತ ಕುಳಿತಿರುವುದು ಕಂಡುಬರಬಹುದು. ಅವನನ್ನು ಹಿಡಿದು ತಂದು ಭಯೋತ್ಪಾದನೆಯ ನಿಜವಾದ ಮುಖವಾಡವನ್ನು ಜನರೆದುರಿಗೆ ತೆರೆದಿಡಬೇಕು. ಈ ಆರೋಪಪತ್ರವನ್ನು ಮುಚ್ಚಿ ಹಾಕಲು ಯಾರ್ಯಾರು ಪ್ರಯತ್ನಿಸಿದ್ದಾರೆಯೋ, ಅವರೆಲ್ಲರೂ ಈ ಸಂಚಿನ ಸೂತ್ರಧಾರರಾಗಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗದೇ ಹಿಂದೂಗಳಿಗೆ ಶಾಂತಿ ದೊರೆಯಲಾರದು. ಆದರೆ ಅಂತಹ ಬೆಳಕನ್ನು ನೋಡಲು ಹಿಂದೂ ರಾಷ್ಟ್ರ ಸ್ಥಾಪನೆಯ ದಾರಿ ಕಾಯಬೇಕಾಗುವುದೋ ಏನೋ ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಿಜವಾದ ಆರೋಪಿಗಳನ್ನು ದಂಡಿಸುವುದೇ ನಿಜವಾದ ನ್ಯಾಯ !