ಬೇಸಿಗೆ ರಜೆಯ ನಿಮಿತ್ತ ಪ್ರತಿವಾರ ಓದಿ ಬೋಧಕಥೆ

ಪರೀಕ್ಷೆ ಮುಗಿದು ಈಗ ವಿದ್ಯಾರ್ಥಿಗಳ ಬೇಸಿಗೆ ರಜೆಗಳು ಪ್ರಾರಂಭವಾಗಿವೆ. ರಜೆಗಳ ಸದುಪಯೋಗವಾಗಬೇಕು ಮತ್ತು ಸದ್ಗುಣ ಮತ್ತು ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿಯಬೇಕೆಂದು ಈ ಮಾಲಿಕೆಯನ್ನು ನಮ್ಮ ವಾಚಕರಿಗಾಗಿ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಇಲ್ಲಿ ನೀಡಿದ ಮುಂದಿನ ಕಥೆಯಿಂದ ತನ್ನನ್ನು ಅಜ್ಞಾನಿ ಎಂದು ತಿಳಿಯುವವನೇ ನಿಜವಾದ ಜ್ಞಾನಿ ಹೇಗೆ ? ಎಂಬುದು ತಿಳಿಯುತ್ತದೆ.
 . . . . . . . . . . . . . . . . . . . . . . . . . . . 
ತನ್ನನ್ನು ಅಜ್ಞಾನಿ ಎಂದು ತಿಳಿಯುವವನೇ ನಿಜವಾದ ಜ್ಞಾನಿ !
‘ಸಾಕ್ರೆಟಿಸ್ ಎಂಬ ವಿಶ್ವವಿಖ್ಯಾತ ತತ್ತ್ವಜ್ಞಾನಿ ಅಥೆನ್ಸ್ ನಗರದಲ್ಲಿ ವಾಸಿಸುತ್ತಿದ್ದನು. ಆ ಸಮಯದಲ್ಲಿ ಆ ನಗರದಲ್ಲಿ ಇನ್ನೂ ೮-೧೦ ಜನ ವಿದ್ವಾಂಸರು ವಾಸಿಸುತ್ತಿದ್ದರು. ಪ್ರತಿಯೊಬ್ಬ ವಿದ್ವಾಂಸರಿಗೆ ಬೇರೆ ಬೇರೆ ಶಿಷ್ಯರಿದ್ದರು. ಒಮ್ಮೆ ಈ ಎಲ್ಲ ವಿದ್ವಾಂಸರ ಶಿಷ್ಯರು ಯಾವುದೋ ಒಂದು ಕಾರಣದಿಂದ ಒಟ್ಟಿಗೆ ಸೇರಿದರು. ಆಗ ಅವರಲ್ಲಿ ‘ಅಥೆನ್ಸ್ ನಗರದಲ್ಲಿ ಅತಿ ದೊಡ್ಡ ವಿದ್ವಾಂಸರು ಯಾರು ?’ ಎಂಬ ವಾದ ನಿರ್ಮಾಣವಾಯಿತು. ಪ್ರತಿಯೊಬ್ಬರೂ ತಮ್ಮ ಗುರುಗಳೇ ಎಲ್ಲರಿಗಿಂತ ಹೆಚ್ಚು ಜ್ಞಾನಿಗಳಾಗಿದ್ದಾರೆ, ಎಂದು ಹಠ ಹಿಡಿದರು. ತುಂಬಾ ವಾದವಿವಾದದ ನಂತರ ಕೊನೆಗೆ, ನಾವು ಗ್ರಾಮದೇವತೆಯಲ್ಲಿ ಪ್ರಶ್ನೆಯನ್ನು ಕೇಳೋಣ ಮತ್ತು ಅವಳು ಹೇಳಿದ ಉತ್ತರವನ್ನು ನಾವೆಲ್ಲರೂ ಒಪ್ಪಿಕೊಳ್ಳೋಣ ಎಂಬ ನಿರ್ಣಯಕ್ಕೆ ಬಂದರು. ಈ ನಿರ್ಣಯಕ್ಕನುಸಾರ ಎಲ್ಲ ಶಿಷ್ಯರು ಗ್ರಾಮದೇವತೆಯ ದೇವಸ್ಥಾನದಲ್ಲಿ ಸೇರಿದರು.
ಗ್ರಾಮದೇವತೆಯ ಪುರೋಹಿತರು ಎಲ್ಲ ವಿದ್ವಾಂಸರ ಹೆಸರಿನಲ್ಲಿ ಒಂದೊಂದು ಮೊಗ್ಗನ್ನು ದೇವಿಯ ಕಾಲಿನ ಸಮೀಪದ ಕಲ್ಲಿಗೆ ಅಂಟಿಸಿದರು ಹಾಗೂ ‘ಯಾರ ಮೊಗ್ಗು ಮೊದಲು ಕೆಳಗೆ ಬೀಳುವುದೋ, ಆ ವಿದ್ವಾಂಸರು ಅಥೆನ್ಸ್ ನಗರದಲ್ಲಿ ಎಲ್ಲರಿಗಿಂತ ಹೆಚ್ಚು ಜ್ಞಾನಿಯೆಂದು ತಿಳಿಯಲಾಗುವುದು’, ಎಂದು ಘೋಷಣೆ ಮಾಡಿದರು. ಆಗ ಎಲ್ಲ ವಿದ್ವಾಂಸರ ಶಿಷ್ಯರು ಗ್ರಾಮದೇವತೆಗೆ, ‘ಹೇ ದೇವೀ, ನಮ್ಮ ಗುರುಗಳ ಮೊಗ್ಗು ಎಲ್ಲಕ್ಕಿಂತ ಮೊದಲು ಬೀಳಲಿ’, ಎಂದು ಮನಸ್ಸಿನಲ್ಲಿ ಪ್ರಾರ್ಥನೆಯನ್ನು ಮಾಡತೊಡಗಿದರು. ಆಶ್ಚರ್ಯದ ವಿಷಯವೆಂದರೆ, ಸಾಕ್ರೇಟಿಸ್ ಹೆಸರಿನ ಮೊಗ್ಗು ಮೊದಲು ಕೆಳಗೆ ಬಿದ್ದಿತು. ಇದನ್ನು ನೋಡಿ ಸಾಕ್ರೇಟಿಸ್‌ರವರ ಶಿಷ್ಯರಿಗೆ ಅತ್ಯಂತ ಆನಂದವಾಯಿತು. ಅವರು ಸಂತೋಷದಿಂದ ಕುಣಿಯುತ್ತಾ ಸಾಕ್ರೇಟಿಸ್‌ರವರ ಬಳಿಗೆ ಹೋಗಿ, ‘ಗುರುವರ್ಯರೇ, ‘ಈ ನಗರದಲ್ಲಿ ಅತಿ ಹೆಚ್ಚು ಜ್ಞಾನಿ ಯಾರು ?’ ಎಂದು ನಾವು ಯಾವಾಗ ಯಾವಾಗ ಕೇಳಿದೆವೋ, ಆಗಾಗ ನೀವು ನಮಗೆ ‘ನಾನು ಜ್ಞಾನಿಯಲ್ಲ’, ಎಂದು ಉತ್ತರ ನೀಡಿದ್ದೀರಿ. ತದ್ವಿರುದ್ಧ ಇತರ ಎಲ್ಲ ವಿದ್ವಾಂಸರು ತಮ್ಮನ್ನೇ ಎಲ್ಲರಿಗಿಂತ ಹೆಚ್ಚು ಜ್ಞಾನಿಯೆಂದು ಹೇಳುತ್ತಾ ಬಂದರು. ಈ ಪ್ರಶ್ನೆಗೆ ಶಾಶ್ವತವಾದ ಉತ್ತರವನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ನಾವೆಲ್ಲರೂ ಗ್ರಾಮದೇವತೆಗೆ ಪ್ರಶ್ನೆಯನ್ನು ಕೇಳಿದೆವು. ಆಗ ಅವಳು ‘ನೀವೇ ಎಲ್ಲರಿಗಿಂತ ಹೆಚ್ಚು ಜ್ಞಾನಿಯಾಗಿದ್ದೀರಿ’, ಎಂದು ಉತ್ತರವನ್ನು ನೀಡಿದಳು. ಹಾಗಾದರೆ ನೀವು ಹೇಳುವುದು ಸರಿಯೇ ಅಥವಾ ಗ್ರಾಮದೇವತೆ ಹೇಳಿದ್ದು ಸರಿಯೇ ?’ ಎಂದರು. ಇದಕ್ಕೆ ಸಾಕ್ರೇಟಿಸ್, ‘ದೇವೀ ಸುಳ್ಳು ಉತ್ತರ ನೀಡಿದ್ದಾಳೆ’ ಎಂದು ನಾನು ಹೇಳುತ್ತಿಲ್ಲ. ಜಗತ್ತಿನ ಯಾವ ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬೇಕೋ, ಅವುಗಳನ್ನು ನೋಡಿದರೆ ಇತರ ವಿದ್ವಾಂಸರಲ್ಲಿ ಮತ್ತು ನನ್ನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಾನು ಅಜ್ಞಾನಿಯಾಗಿದ್ದೇನೆ; ನನಗೆ ಅದರ ಅರಿವಿದೆ, ಇತರ ವಿದ್ವಾಂಸರಿಗೆ ಅದರ ಅರಿವಿಲ್ಲ; ಆದುದರಿಂದ ಗ್ರಾಮದೇವತೆ ನನ್ನನ್ನು ಜ್ಞಾನಿ ಎಂದು ನಿರ್ಣಯಿಸಿದ್ದಾಳೆ’ ಎಂದು ಹೇಳಿದರು.
ತಾತ್ಪರ್ಯ : ಅಜ್ಞಾನದ ಶೋಧನೆಯಾದರೆ, ಜ್ಞಾನವು ತಾನಾಗಿಯೇ ಪ್ರಕಟವಾಗುತ್ತದೆ. ಅಜ್ಞಾನದ ಶೋಧನೆಯಾಯಿತೆಂದರೆ ಅಹಂ ಉಳಿಯುವುದಿಲ್ಲ. ಈಶ್ವರನೊಂದಿಗೆ ಏಕರೂಪವಾಗುವುದರಿಂದ ಸರ್ವಜ್ಞತೆ ಬರುತ್ತದೆ. - (ಪೂ.) ಡಾ. ವಸಂತ ಬಾಳಾಜಿ ಆಠವಲೆ (೧೯೯೧)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೇಸಿಗೆ ರಜೆಯ ನಿಮಿತ್ತ ಪ್ರತಿವಾರ ಓದಿ ಬೋಧಕಥೆ