ನಮ್ಮ ದಿನಚರಿ ಹೇಗಿರಬೇಕು ?

ಧರ್ಮಶಿಕ್ಷಣ ನೀಡುವ ಹೊಸ ಮಾಲಿಕೆ !
‘ಬೇಗನೆ ಮಲಗಿ, ಬೇಗನೆ ಏಳುವವನಿಗೆ ಆಯುರಾರೋಗ್ಯವು ಲಭಿಸುತ್ತದೆ’ ಇಂತಹ ಬೋಧನೆಯನ್ನು ಮೊದಲು ಹಿರಿಯರು ಮಕ್ಕಳಿಗೆ ಮಾಡುತ್ತಿದ್ದರು. ಇಂದು ಮಕ್ಕಳು ತಡವಾಗಿ ಮಲಗುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳುತ್ತಾರೆ. ಹಿಂದಿನ ಕಾಲದ ದಿನಚರಿಯು ನಿಸರ್ಗದ ಮೇಲೆ ಆಧರಿಸಿತ್ತು, ಆದರೆ ಇಂದು ಅದು ಹಾಗಿಲ್ಲ. ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳ ಪಾಲನೆಯನ್ನು ಮಾಡುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆಯನ್ನು ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ತಮ್ಮ ಮಕ್ಕಳಲ್ಲಿಯೂ ಆ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲಿ ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ. (ಮುಂದುವರಿದ ಭಾಗ)
ಕರದರ್ಶನ : ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ, ಬೊಗಸೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ಮುಂದಿನ ಶ್ಲೋಕವನ್ನು ಹೇಳಬೇಕು.
ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಮ್ ॥
ಅರ್ಥ : ಕೈಗಳ ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯ ಭಾಗದಲ್ಲಿ ಸರಸ್ವತಿಯಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಆದುದರಿಂದ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು.
(ಅಪವಾದ : ಕೈಗಳ ಮೂಲಭಾಗದಲ್ಲಿ ಬ್ರಹ್ಮನಿದ್ದಾನೆ.)
ಶ್ಲೋಕದ ಭಾವಾರ್ಥ
ಭಾವಾರ್ಥ ೧
ಅ. ಕ್ಷ್ಮೀಯ ಮಹತ್ವ : ಕೈಗಳ ಅಗ್ರಭಾಗದಲ್ಲಿ (ಕರಾಗ್ರೆ) ಕ್ಷ್ಮೀ ಇದ್ದಾಳೆ, ಅಂದರೆ ಬಾಹ್ಯ ಭೌತಿಕ ಭಾಗವು ಕ್ಷ್ಮೀ ರೂಪದಲ್ಲಿ ವಿಲಾಸ ಮಾಡುತ್ತಿದೆ. ಅಂದರೆ ಭೌತಿಕ ವ್ಯವಹಾರಕ್ಕಾಗಿ ಕ್ಷ್ಮೀ (ಧನ ಮಾತ್ರವಲ್ಲ, ಪಂಚ ಮಹಾಭೂತಗಳು, ಅನ್ನ, ವಸ್ತ್ರ ಇತ್ಯಾದಿ) ಆವಶ್ಯಕತೆಯಿದೆ.
ಆ. ಸರಸ್ವತಿಯ ಮಹತ್ವ : ಧನ ಅಥವಾ ಲಕ್ಷ್ಮೀಯನ್ನು ಪ್ರಾಪ್ತಮಾಡಿಕೊಳ್ಳುವಾಗ ಜ್ಞಾನ ಮತ್ತು ವಿವೇಕವು ಇಲ್ಲದಿದ್ದರೆ ಲಕ್ಷ್ಮೀಯು ಅಲಕ್ಷ್ಮಿಯಾಗಿ ನಾಶಕ್ಕೆ ಕಾರಣವಾಗುತ್ತಾಳೆ. ಆದುದರಿಂದ ಸರಸ್ವತಿಯ ಆವಶ್ಯಕತೆ ಇದೆ.
ಇ. ಎಲ್ಲವೂ ಗೋವಿಂದನೇ ಆಗಿರುವುದು : ಗೋವಿಂದನೇ ಸರಸ್ವತಿಯ ರೂಪದಲ್ಲಿ ಮಧ್ಯ ಭಾಗದಲ್ಲಿ ಮತ್ತು ಲಕ್ಷ್ಮೀ ರೂಪದಲ್ಲಿ ಅಗ್ರಭಾಗದಲ್ಲಿದ್ದಾನೆ. ಸಂತ ಜ್ಞಾನೇಶ್ವರ ಮಹಾರಾಜರು ಅಮೃತಾನುಭವದ ಶಿವ-ಪಾರ್ವತಿ ಸ್ತವನದಲ್ಲಿ ಹೀಗೆ ಹೇಳುತ್ತಾರೆ, ‘ಮೂಲ, ಮಧ್ಯ ಮತ್ತು ಅಗ್ರ ಈ ಮೂರೂ ರೂಪಗಳು ಬೇರೆಬೇರೆಯಾಗಿ ಕಾಣಿಸುತ್ತಿದ್ದರೂ ಈ ಮೂರರಲ್ಲಿಯೂ ಗೋವಿಂದನೇ ಕಾರ್ಯವನ್ನು ಮಾಡುತ್ತಿದ್ದಾನೆ. ಹೆಚ್ಚುಕಡಿಮೆ ಎಲ್ಲ ಕಾರ್ಯಗಳು ಕೈಗಳ ಬೆರಳುಗಳ ಅಗ್ರಭಾಗಗಳ ಮೂಲಕವೇ ಆಗುತ್ತವೆ. ಆದುದರಿಂದ ಅಲ್ಲಿ ಲಕ್ಷ್ಮೀ ವಾಸ್ತವ್ಯವಿದೆ; ಆದರೆ ಆ ಕೈಗಳಿಗೆ ಮೂಲ ಸ್ರೋತದಿಂದ ಬರುವ ಅನುಭವೀ ಜ್ಞಾನದ ಪ್ರವಾಹವು ಹೋಗದೇ ಇದ್ದರೆ ಅವನು ಕಾರ್ಯವನ್ನು ಮಾಡಲಾರನು.’ - ಪ.ಪೂ. ಪರಶುರಾಮ ಪಾಂಡೆ ಮಹಾರಾಜರು
ಭಾವಾರ್ಥ ೨
ಅ. ಐಶ್ವರ್ಯಸಂಪನ್ನ ಮತ್ತು ಮೋಹಮಯೀ ವ್ಯಕ್ತ ಸ್ವರೂಪದಲ್ಲಿನ ಮಾಯೆ ಎಂದರೆ ಲಕ್ಷ್ಮೀ ಮತ್ತು ಮೂಲ ಅವ್ಯಕ್ತ ಸ್ವರೂಪದಲ್ಲಿರುವ ಗೋವಿಂದ ಇವರಿಬ್ಬರು ಬೇರೆ ಬೇರೆಯಾಗಿರದೇ ಒಂದೇ ಆಗಿದ್ದಾರೆ ಮತ್ತು ಇದರ ಜ್ಞಾನವನ್ನು ಮಾಡಿಕೊಡುವ ಕಲ್ಯಾಣಮಯೀ, ಜ್ಞಾನದಾಯಿ ದೇವಿ ಎಂದರೆ ಸರಸ್ವತಿ.
ಆ. ಲಕ್ಷ್ಮೀ ಎಂದರೆ ಕರ್ಮ, ಸರಸ್ವತಿ ಎಂದರೆ ಜ್ಞಾನ ಮತ್ತು ಗೋವಿಂದ ಎಂದರೆ ಭಕ್ತಿ. ಈ ಮೂವರನ್ನು (ಕರ್ಮ, ಜ್ಞಾನ ಮತ್ತು ಭಕ್ತಿಯನ್ನು) ಒಂದು ಮಾಡಿದಾಗಲೇ ಈಶ್ವರನೊಂದಿಗೆ ಒಂದಾಗಬಹುದು.
ಇ. ಜ್ಞಾನಸಹಿತ ಭಕ್ತಿಪೂರ್ಣ ಕರ್ಮಗಳನ್ನು ಮಾಡಿದರೆ ಮಾತ್ರ ಜೀವನದಲ್ಲಿನ ಪ್ರವೃತ್ತಿ ಮತ್ತು ನಿವೃತ್ತಿಗಳ ಸಮತೋಲನವನ್ನು ಕಾಪಾಡಲು ಸಾಧ್ಯ ವಾಗುತ್ತದೆ. ಇದರಿಂದ ಚಾತುರ್ವರ್ಣ್ಯದಂತೆ ಸರ್ವಾಂಗಸುಂದರ, ಪರಿಪೂರ್ಣ ಜೀವನವನ್ನು ಜೀವಿಸಬಹುದು ಮತ್ತು ಕೊನೆಗೆ ಈಶ್ವರನೊಂದಿಗೆ ಏಕರೂಪವಾಗಬಹುದು.
ಈ. ಇಂತಹ ಜೀವವು ನಿಷ್ಕಾಮ ಕರ್ಮಯೋಗಿ ಯಾಗುತ್ತದೆ.
‘ಗುರುಕೃಪಾಯೋಗಾನುಸಾರ ಸಾಧನೆ’ಯ ಸಾಧನಾ ಮಾರ್ಗದಲ್ಲಿ ಇದನ್ನೇ ಹೇಳಲಾಗಿದೆ. ಇತರ ಸಾಧನಾ ಮಾರ್ಗಗಳಿಂದ ಸಾಧನೆಯನ್ನು ಮಾಡುವ ಜೀವಗಳಿಗಿಂತ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವ ಜೀವಕ್ಕೆ ಕಡಿಮೆ ಕಾಲಾವಧಿಯಲ್ಲಿ ಜ್ಞಾನಪ್ರಾಪ್ತವಾಗುತ್ತದೆ. ಇಂತಹ ಜೀವಗಳ ಆಧ್ಯಾತ್ಮಿಕ ಉನ್ನತಿಯೂ ಶೀಘ್ರವಾಗಿ ಆಗುತ್ತದೆ. (ಸನಾತನ ಸಂಸ್ಥೆಯು ಗುರುಕೃಪಾಯೋಗಾನುಸಾರ ಸಾಧನೆಯನ್ನು ಕಲಿಸುತ್ತದೆ. ಈ ಸಾಧನೆಯ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಸನಾತನ ನಿರ್ಮಿತ ‘ಗುರುಕೃಪಾಯೋಗಾನುಸಾರ ಸಾಧನೆ’ ಈ ಗ್ರಂಥದಲ್ಲಿ ನೀಡಲಾಗಿದೆ.) - ಸೌ. ಅಂಜಲಿ ಕಣಗಲೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗುವುದು: ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ. ಆಕರ್ಷಿತಗೊಂಡ ದೇವತ್ವರೂಪಿ ಲಹರಿಗಳು ಬೊಗಸೆಯಲ್ಲಿಯೇ ಘನೀಕೃತವಾಗುತ್ತವೆ ಮತ್ತು ಬೊಗಸೆಯ ರೂಪದಲ್ಲಿ ತಯಾರಾದ ಟೊಳ್ಳಿನಲ್ಲಿ ಆಕಾಶದ ವ್ಯಾಪಕತ್ವವನ್ನು ಪಡೆದುಕೊಂಡು ಅಲ್ಲಿಯೇ ಸುತ್ತಾಡುತ್ತಿರುತ್ತವೆ. ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ತಯಾರಾಗಿ ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಸುಷುಮ್ನಾನಾಡಿಯು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿದೆ. ರಾತ್ರಿಯ ಸಮಯ ಮಾಡಿದ ತಮೋಗುಣೀ ನಿದ್ರೆಯಿಂದ ದೇಹದಲ್ಲಿ ತಮೋಗುಣವು ನಿರ್ಮಾಣವಾಗಿದ್ದರೆ ಸುಷುಮ್ನಾನಾಡಿಯ ಜಾಗೃತಿಯಿಂದ ಅದನ್ನು ಹೊರಹಾಕಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ)
ಇತರ ಅಂಶಗಳು
ಅ. ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುವುದು, ಈಶ್ವರನೊಂದಿಗೆ ಅವನ ಅನುಸಂಧಾನವಾಗುವುದು ಮತ್ತು ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗುವುದು : ರಾತ್ರಿಯ ನಿದ್ರೆಯಿಂದ ವ್ಯಕ್ತಿಯ ದೇಹದಲ್ಲಿ ತಮೋಗುಣಿ ಸ್ಪಂದನಗಳು ನಿರ್ಮಾಣವಾಗುತ್ತವೆ. ಇದರಿಂದ ಅವನ ಮೇಲೆ ತ್ರಾಸದಾಯಕ ಶಕ್ತಿಯ ದಪ್ಪ ಆವರಣ ಬರುತ್ತದೆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀ ...’ ಎಂಬ ಶ್ಲೋಕವನ್ನು ಪಠಿಸುವುದರಿಂದ ವ್ಯಕ್ತಿಯ ವೃತ್ತಿಯು ಅಂತರ್ಮುಖವಾಗುತ್ತದೆ. ಹಾಗೆಯೇ ಅವನ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ದೂರವಾಗಿ, ಈಶ್ವರನ ಅನುಸಂಧಾನ ಪ್ರಾರಂಭವಾಗುತ್ತದೆ ಮತ್ತು ಆ ವ್ಯಕ್ತಿಯು ದಿನವಿಡೀ ಅದೇ ಸ್ಥಿತಿಯಲ್ಲಿರಲು ಸಹಾಯವಾಗುತ್ತದೆ.
ಆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀ ...’ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು : ಹಿಂದೂ ಧರ್ಮದಲ್ಲಿ ‘ಅಯಮ್ ಆತ್ಮಾ ಬ್ರಹ್ಮ ’ ಅಂದರೆ ‘ಆತ್ಮವೇ ಬ್ರಹ್ಮ’ವಾಗಿದೆ ಎಂಬುದನ್ನು ಕಲಿಸಲಾಗುತ್ತದೆ. ‘ಕರಾಗ್ರೇ ವಸತೇ ಲಕ್ಷ್ಮೀ ...’ ಈ ಶ್ಲೋಕವು ಇದರ ಒಂದು ಉದಾಹರಣೆಯಾಗಿದೆ. ಆದುದರಿಂದ ಪ್ರಾತಃಕಾಲ ಎದ್ದ ಮೇಲೆ ಕರದರ್ಶನ ಪಡೆಯುತ್ತಾ ಈ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದಾಗಿದೆ. ಹಿಂದೂ ಧರ್ಮವು ಬಾಹ್ಯಶುದ್ಧಿಗಿಂತ ಅಂತರ್ಮನಸ್ಸಿನ ಶುದ್ಧಿಗೆ ಹೆಚ್ಚು ಮಹತ್ವವನ್ನು ಕೊಡುತ್ತದೆ.
- ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೬.೮.೨೦೧೦)
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮ ದಿನಚರಿ ಹೇಗಿರಬೇಕು ?