ಆಗಸ್ಟಾ ವೆಸ್ಟ್‌ಲ್ಯಾಂಡ್ ಮತ್ತು ಸಿಗ್ನೋರಾ ಗಾಂಧಿ !

ಬ್ರಿಗೇಡಿಯರ್ ಹೇಮಂತ ಮಹಾಜನ್
ಫೆಬ್ರವರಿ ೨೦೧೦ ರಲ್ಲಿ ಭಾರತ ಸರಕಾರವು ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು ೩೬೦೦ ಕೋಟಿ ರೂಪಾಯಿಗಳಿಗೆ ಖರೀದಿಸುವುದಾಗಿ ಇಟಲಿಯ ಫಿನ್ ಮೆಕಾನಿಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ೨೦೧೨ ರಲ್ಲಿ ಇಟಲಿಯ ದಿನಪತ್ರಿಕೆಗಳಲ್ಲಿ ಈ ಹೆಲಿಕಾಪ್ಟರ್ ಖರೀದಿಯಲ್ಲಿ ಭಾರತೀಯರಿಗೆ ಲಂಚ ನೀಡಲಾಗಿದೆಯೆಂಬ ವಾರ್ತೆಗಳು ರಾರಾಜಿಸಿದವು. ಈ ವಾರ್ತೆಗಳು ಭಾರತದ ದಿನಪತ್ರಿಕೆಗಳಲ್ಲಿಯೂ ಪ್ರಮುಖ ಸುದ್ದಿಯಾಗಿ ಕಾಣಿಸಿದವು. ಮನಮೋಹನ ಸಿಂಗ್ ಸರಕಾರವು ಈ ಆರೋಪಗಳ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿ.ಬಿ.ಐ.)ದ ಮೂಲಕ ವಿಚಾರಣೆ ಆರಂಭಿಸಿತು. ಅದರಲ್ಲಿ ಸತ್ಯ ಹೊರಗೆ ಬಂತು. ೨೫ ಮಾರ್ಚ್ ೨೦೧೩ ರಂದು ಸಂಸತ್ತಿನಲ್ಲಿ ಅಂದಿನ ರಕ್ಷಣಾಮಂತ್ರಿ ಎ.ಕೆ. ಆ್ಯಂಟನಿಯವರು ಈ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆಯೆಂದು ಒಪ್ಪಿಕೊಂಡರು. ‘ಹೌದು, ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭ್ರಷ್ಟಾಚಾರವಾಗಿದೆ ಹಾಗೂ ಲಂಚವನ್ನೂ ನೀಡಲಾಗಿದೆ. ಸಿ.ಬಿ.ಐ. ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡುತ್ತಿದೆ’ ಎಂದು ಆ್ಯಂಟನಿಯವರು ಸಂಸತ್ತಿನಲ್ಲಿ ಹೇಳಿದರು. ಇದರಿಂದ ಗೊಂದಲ ಇನ್ನೂ ಹೆಚ್ಚಾಯಿತು.
 . . . . . . . . . . . . . . . . . . . . . . . . . . . . . . . . . . . .

೧. ಸಿಗ್ನೋರಾ ಗಾಂಧಿ ಅಂದರೆ ಸೋನಿಯಾ ಗಾಂಧಿ !
ಇಟಲಿಯ ನ್ಯಾಯಾಲಯವು ನೀಡಿದ ತೀರ್ಪಿನ ನಾಲ್ಕು ಸ್ಥಳಗಳಲ್ಲಿ ಸಿಗ್ನೋರಾ ಗಾಂಧಿ ಎಂಬ ಹೆಸರಿನ ಉಲ್ಲೇಖವಿದೆ. ಇದರಿಂದ ಭಾರತದಲ್ಲಿ ಕೋಲಾಹಲವೆದ್ದಿತು. ಅದು ಸಹಜವೇ ಆಗಿತ್ತು; ಏಕೆಂದರೆ ಖಟ್ಲೆ ಭಾರತದ ನ್ಯಾಯಾಲಯದಲ್ಲಿ ಅಲ್ಲ, ಇಟಲಿಯ ಉಚ್ಚ ನ್ಯಾಯಾಲಯದಲ್ಲಿ ನಡೆದಿತ್ತು. ಆದ್ದರಿಂದ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ಸಿನ ಮೇಲೆ ಹೌಹಾರಿತ್ತು. ಮೊದಲು ‘ಸಿಗ್ನೋರಾ ಗಾಂಧಿ ಯಾರು’, ಎಂಬ ನಮ್ಮ ಪ್ರಶ್ನೆಯನ್ನು ವಾರ್ತಾವಾಹಿನಿಗಳಲ್ಲಿ ಕೇಳಲಾಗುತ್ತಿತ್ತು. ವಾಸ್ತವಿಕತೆಯನ್ನು ನೋಡುವಾಗ ರಾಜಕೀಯ ವಲಯದಲ್ಲಿ ಸಿಗ್ನೋರಾ ಗಾಂಧಿ ಯಾರೆಂದು ಅರಿವಾಗಿತ್ತು. ಏಕೆಂದರೆ ಇಟಲಿಯಲ್ಲಿ ಶ್ರೀಮತಿ ಸ್ಥಾನದಲ್ಲಿ ಸಿಗ್ನೋರಾ ಶಬ್ದವನ್ನು ಉಪಯೋಗಿಸಲಾಗುತ್ತದೆ. ಅಂದರೆ ಈ ಲಂಚ ಪ್ರಕರಣವು ಸಿಗ್ನೋರಾ ಗಾಂಧಿಯವರ ಮೇಲೆಯೇ ಸಂಪೂರ್ಣ ಕೇಂದ್ರೀಕೃತವಾಗಿತ್ತು. ಕೊನೆಗೆ ಸೋನಿಯಾ ಗಾಂಧಿ ನಾನೇ ಸಿಗ್ನೋರಾ ಗಾಂಧಿ ಆಗಿದ್ದೇನೆಂದು ಒಪ್ಪಿಕೊಂಡರು. ಆದರೆ ನಾನು ಯಾರಿಗೂ ಹೆದರುವುದಿಲ್ಲ, ಎಂದು ಹೇಳಿ ತಾತ್ಕಾಲಿಕ ತೆರೆ ಎಳೆದರು. ಆದರೆ ಸೋನಿಯಾ ಗಾಂಧಿಯ ರಾಜಕೀಯ ಸಲಹೆಗಾರ ಅಹಮ್ಮದ ಪಟೇಲ್ ಇವರ ಮುಖ ಬಾಡಿತ್ತು; ಏಕೆಂದರೆ ಎಲ್ಲ ಹಣ ಅಹಮ್ಮದ ಪಟೇಲರ ಹೆಸರಿನಲ್ಲಿಯೇ ಮಲೇಷ್ಯಾದಿಂದ ಭಾರತಕ್ಕೆ ಬಂದಿರುವ ಆರೋಪವಿದೆ. ಈಗ ಅದರ ಪುರಾವೆಯೂ ಲಭಿಸಿದೆ.
೨. ದಲ್ಲಾಳಿಗಳ ನೋಂದಣಿಯಲ್ಲಿ ಅಂದಿನ ವಾಯುದಳದ ಮುಖ್ಯಸ್ಥರಾಗಿದ್ದ ಎಸ್.ಪಿ. ತ್ಯಾಗಿ ಮತ್ತು
ಸೋನಿಯಾ ಗಾಂಧಿಯ ರಾಜಕೀಯ ಸಲಹೆಗಾರ ಅಹಮ್ಮದ ಪಟೇಲರ ಹೆಸರಿನ ಉಲ್ಲೇಖ !
ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕ್ಯಾಪ್ಟರ್ ಖರೀದಿ ಪ್ರಕರಣದಲ್ಲಿ ಭಾರತದ ಕೆಲವು ರಾಜಕೀಯ ನೇತಾರರಿಗೆ, ರಕ್ಷಣಾ ದಳದಲ್ಲಿನ ಕೆಲವು ಪ್ರಮುಖ ಹುದ್ದೆಯಲ್ಲಿನ ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ಲಂಚ ನೀಡಿರುವ ವಿಷಯದಲ್ಲಿ ಸಿಗ್ನೋರಾ ಗಾಂಧಿಯ ಹೆಸರು ಸಹ ಇದೆ. ಈ ತೀರ್ಪನ್ನು ನೀಡಿದಾಗ ಅದರಲ್ಲಿ ನಿಜವಾಗಿಯೂ ಏನು ಹೇಳಲಾಗಿದೆಯೆಂಬುದು ಸ್ಪಷ್ಟವಾಗಿರಲಿಲ್ಲ; ಆದರೆ ಭಾರತದ ಸಂಯುಕ್ತ ಮೈತ್ರಿಕೂಟ-೨ ರ ಆಡಳಿತದ ಕಾಲದಲ್ಲಿ ಕೆಲವು ಗಣ್ಯ ರಾಜಕೀಯ ನೇತಾರರಿಗೆ ದಲ್ಲಾಳಿಗಳ ಮೂಲಕ ಲಂಚ ನೀಡಲಾಗಿದೆ, ಎಂಬುದು ಸ್ಪಷ್ಟವಾಗಿತ್ತು. ಇದರಲ್ಲಿ ವಾಯುದಳದ ಮಾಜಿ ಮುಖ್ಯಸ್ಥರಾದ ಎಸ್.ಪಿ. ತ್ಯಾಗಿಯವರ ಮತ್ತು ಅವರ ಹತ್ತಿರದ ಸಂಬಂಧಿಕರ ಹೆಸರು ಮೊದಲಿನಿಂದಲೇ ಇರುವುದರಿಂದ ಈ ಪ್ರಕರಣವು ಆಗಲೇ ಮೇಲೆ ಬಂದಿತ್ತು. ಈಗ ಈ ತೀರ್ಪಿನ ಪ್ರತಿಗಳು ಎಲ್ಲಡೆ ಸಿಗುತ್ತಿದ್ದು ಕಾಂಗ್ರೆಸ್ ಪಕ್ಷವು ತನ್ನನ್ನು ರಕ್ಷಿಸಿಕೊಳ್ಳಲು ವ್ಯೆಹ ರಚಿಸುತ್ತಿದೆ ಹಾಗೂ ಭಾಜಪ ಆಕ್ರಮಕವಾಗಿದೆ.
ಇದರಲ್ಲಿ ಗಮನಾರ್ಹ ವಿಷಯವೆಂದರೆ ಇಟಲಿಯ ಸತ್ರ ನ್ಯಾಯಾಲಯವು ಕೇವಲ ತ್ಯಾಗಿ ಇವರನ್ನು ಸಂಶಯಾತ್ಮಕ ಆಧಾರದಲ್ಲಿ ಮುಕ್ತಗೊಳಿಸಿದೆ. ಆ ನಿರ್ಣಯದ ವಿರುದ್ಧ ಸರಕಾರಿ ಪಕ್ಷವು ಅಪೀಲ್ ಮಾಡಿದ ನಂತರ ಈ ಪ್ರಕರಣವು ಉಚ್ಚ ನ್ಯಾಯಾಲಯದಲ್ಲಿ ನಡೆಯಿತು ಹಾಗೂ ಈಗ ಹೊಸ ತೀರ್ಪಿನಿಂದ ಎಲ್ಲ ಚಿತ್ರಣವೂ ಸ್ಪಷ್ಟವಾಗಿದೆ. ಈ ತೀರ್ಪುಪತ್ರದಲ್ಲಿ ಉಚ್ಚ ನ್ಯಾಯಾಲಯದಲ್ಲಿ ದಲ್ಲಾಳಿಗಳು ಸಲ್ಲಿಸಿದ ಲಿಖಿತ ನೋಂದಣಿಯಲ್ಲಿ ಎಸ್.ಪಿ, ಎಪಿ, ಎಂಬ ಉಲ್ಲೇಖವಿದೆ. ಎಸ್.ಪಿ, ಅಂದರೆ ಎಸ್.ಪಿ.ತ್ಯಾಗಿ ಹಾಗೂ ಎಪಿ, ಅಂದರೆ ಅಹಮ್ಮದ ಪಟೇಲ್. ಇನ್ನೂ ಅನೇಕ ನೋಂದಣಿಗಳಿವೆ. ಇವೆಲ್ಲ ಕಾಗದಪತ್ರಗಳೂ ಈಗ ಲಭ್ಯವಾಗಿವೆ.
೩. ಭಾರತದ ರಾಜಕೀಯ ನಾಯಕರಿಗೆ ಶೇ. ೫೨, ವಾಯುದಳಕ್ಕೆ ಶೇ. ೨೦ ಮತ್ತು
ನೌಕರವರ್ಗದವರಿಗೆ ಶೇ. ೨೮ ರಷ್ಟು ಲಂಚ !
ವಾಯುದಳ ಮಾಜಿ ಮುಖ್ಯಸ್ಥರಾದ ತ್ಯಾಗಿಯವರನ್ನೇ ಮೊದಲ ಬಾರಿ ವಿಚಾರಣೆಗಾಗಿ ಕರೆದಾಗ ಅವರು ಈ ಪ್ರಕರಣದಲ್ಲಿ ನಮ್ಮ ಸಂಬಂಧವು ಕೇವಲ ಆಡಳಿತದ ದೃಷ್ಟಿಯಿಂದಷ್ಟೇ ಸೀಮಿತವಾಗಿದೆಯೆಂದು ಹೇಳಿದ್ದರು. ನಂತರ ಮಾತ್ರ ‘ನಾವು ಇಟಲಿಯ ಫಿನ್‌ಮೆಕಾನಿಕಾ ಹಾಗೂ ವೆಸ್ಟ್‌ಲ್ಯಾಂಡ್ ಕಂಪನಿಯ ಅಧಿಕಾರಿಗಳನ್ನು ಭೇಟಿಯಾಗಿದ್ದೆವು. ಇಷ್ಟು ಮಾತ್ರವಲ್ಲ, ವಾಯುದಳ ಮುಖ್ಯಸ್ಥರ ಹುದ್ದೆಯನ್ನು ಸ್ವೀಕರಿಸುವ ಮೊದಲು ಸಹ ಭೇಟಿಯಾಗಿದ್ದೆವು’, ಎಂಬುದನ್ನೂ ತ್ಯಾಗಿಯವರು ಒಪ್ಪಿಕೊಂಡಿದ್ದಾರೆ. ಈ ಖಟ್ಲೆಯಲ್ಲಿ ಉಚ್ಚ ನ್ಯಾಯಾಲಯವು ಈ ಮುಂದಿನ ನಿಷ್ಕರ್ಷಕ್ಕೆ ಬಂದಿದೆ, ಭಾರತದ ರಾಜಕೀಯ ನೇತಾರರಿಗೆ ಶೇ. ೫೨, ವಾಯುದಳಕ್ಕೆ ಶೇ. ೨೦ ಹಾಗೂ ನೌಕರ ವರ್ಗದವರಿಗೆ ಶೇ. ೨೮ ರಷ್ಟು ಲಂಚ ನೀಡಲಾಗಿದೆ. ಇದರಿಂದ ಕಾಂಗ್ರೆಸ್ಸಿಗೆ ಈಗ ಎದೆ ನಡುಕ ಆರಂಭವಾಗಿದೆ.
ಈ ಪ್ರಕರಣದಲ್ಲಿ ರಾಹುಲ ಗಾಂಧಿಯ ಹೆಸರು ಸಹ ಬಂದಿದೆ. ರಾಹುಲ ಗಾಂಧಿಯ ಪಿ.ಎ. ಕನಿಷ್ಕ ಸಿಂಗ್ ಇವರ ಸಂಬಂಧವೂ ಪರೋಕ್ಷವಾಗಿ ಇರುವುದು ವಿಚಾರಣೆಯಲ್ಲಿ ಕಂಡುಬಂದಿದೆ.
೪. ರಾಜ್ಯಸಭೆಯಲ್ಲಿ ಅಹಮ್ಮದ ಪಟೇಲರ ಹಾವಭಾವ ಮತ್ತು 
ಮುಖಚರ್ಯೆಯೇ ಬಹಳಷ್ಟು ವಿಷಯಗಳನ್ನು ಹೇಳಿವೆ !
ರಾಜ್ಯಸಭೆಯಲ್ಲಿ ಈ ವಿಷಯದಲ್ಲಿ ಇತ್ತೀಚೆಗಷ್ಟೇ ಅಲ್ಪಾವಧಿಯ ಚರ್ಚೆಯ ಸಮಯದಲ್ಲಿ ಕಾಂಗ್ರೆಸ್ಸಿನ ಮಾಜಿ ರಕ್ಷಣಾಮಂತ್ರಿ ಎ.ಕೆ.ಆ್ಯಂಟನಿ, ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ, ಆನಂದ ಶರ್ಮಾ, ಅಹಮ್ಮದ ಪಟೇಲ ಮುಂತಾದವರು ಕಾಂಗ್ರೆಸ್ ಪರವಾಗಿ ಬ್ಯಾಟಿಂಗ್ ಮಾಡಿದರು. ಈ ಸಂದರ್ಭದಲ್ಲಿ ಸಿಂಘ್ವಿ ಇವರು ವಿಚಿತ್ರವಾದ ತರ್ಕ ಮಾಡಿದರು. ಎಪಿ ಅಂದರೆ ಗುಜರಾತಿನ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಹೀಗೆಯೂ ಆಗುತ್ತದೆ, ಎಂದರು. ಆಗ ಭಾಜಪದ ಸುಬ್ರಹ್ಮಣ್ಯಂ ಸ್ವಾಮಿ ಪ್ರತ್ಯುತ್ತರ ನೀಡುವಾಗ, ‘ಯಾವುದೇ ಹುದ್ದೆಯಲ್ಲಿಲ್ಲದ ಹಾಗೂ ವಿಷಯಕ್ಕೆ ಸಂಬಂಧಿಸದ ದೂರದ ವ್ಯಕ್ತಿಗೆ ಲಂಚ ಕೊಡುವಷ್ಟು ಇಟಲಿಯ ಜನರು ಮೂರ್ಖರಲ್ಲ’ ಎಂದು ಹೇಳಿದರು. ಎ.ಕೆ. ಆ್ಯಂಟನಿ ಮಾತ್ರ ಸ್ಪಷ್ಟವಾಗಿ, ‘ನಾವು ಈ ವಿಷಯದಲ್ಲಿ ಆಳವಾಗಿ ವಿಚಾರಣೆ ಮಾಡಬೇಕು ಹಾಗೂ ಯಾರೇ ಅಪರಾಧಿ ಇರಲಿ, ಅವರಿಗೆ ಶಿಕ್ಷೆ ವಿಧಿಸಬೇಕು’ ಎಂದರು.
ಇಲ್ಲಿ ಒಂದು ವಿಷಯವನ್ನು ಮುಖ್ಯವಾಗಿ ಹೇಳಬೇಕೆನಿಸುತ್ತದೆ, ಒಂದೆಂದರೆ ಕಾಂಗ್ರೆಸ್‌ನಲ್ಲಿ ಎ.ಕೆ. ಆ್ಯಂಟನಿ ಮತ್ತು ಡಾ.ಮನಮೋಹನ ಸಿಂಗ್ ಇವರಿಬ್ಬರೂ ಸ್ವಚ್ಛ ಚರಿತ್ರೆಯುಳ್ಳವರಾಗಿದ್ದಾರೆ. ಆದರೆ ಅವರನ್ನು ಕಾಂಗ್ರೆಸ್ಸಿನ ನಾಯಕರು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿಯೂ ಡಾ. ಮನಮೋಹನ ಸಿಂಗ್ ಇವರು ಒಮ್ಮೆ ಬೇಸತ್ತು ಹೀಗೆಂದಿದ್ದರು, ‘ಸಹಿ ನನ್ನದಿದ್ದರೂ, ಅದನ್ನು ನಾನು ನನ್ನ ಇಚ್ಛೆಯಿಂದ ಮಾಡಿಲ್ಲ. ಕಡತಗಳು ನನ್ನ ಮೇಜಿನ ಮೇಲೆ ಬರುತ್ತಿದ್ದವು, ನಾನು ಅವುಗಳಿಗೆ ಸಹಿ ಮಾಡುತ್ತಿದ್ದೆ’. ಇದರ ಅರ್ಥ ಇವೆಲ್ಲ ಕಡತಗಳು ಅಹಮ್ಮದ ಪಟೇಲರಿಂದ ಬರುತ್ತಿವೆಯೆಂದು ಆ ಸಮಯದಲ್ಲಿಯೇ ಸ್ಪಷ್ಟವಾಗಿತ್ತು. ಈ ಪ್ರಕರಣದಲ್ಲಿಯೂ ಅಹಮ್ಮದ ಪಟೇಲರ ಹೆಸರು ಬಂದಿದೆ. ರಾಜ್ಯಸಭೆಯಲ್ಲಿ ಅವರ ಹಾವಭಾವ ಮತ್ತು ಮುಖಚರ್ಯೆಯೇ ಬಹಳಷ್ಟು ವಿಷಯಗಳನ್ನು ಹೇಳಿವೆ. ಎಲ್ಲ ನೇತಾರರಲ್ಲಿ ಅತೀ ಹೆಚ್ಚು ಭಯಗ್ರಸ್ತರಾಗಿದ್ದವರು ಅಹಮ್ಮದ ಪಟೇಲರೇ ಆಗಿದ್ದರು.
೫. ಸುಬ್ರಹ್ಮಣ್ಯಮ್ ಸ್ವಾಮಿಗೆ ಅಂಜುವ ಕಾಂಗ್ರೆಸ್ !
ರಕ್ಷಣಾಮಂತ್ರಿ ಮನೋಹರ ಪರೀಕರ್ ಇವರು ಸಹ ಕಾಂಗ್ರೆಸ್ಸಿನ ಪ್ರತಿಯೊಂದು ತರ್ಕಕ್ಕೆ ವಾಸ್ತವಿಕ ಉತ್ತರ ನೀಡಿದರು. ಅವರು ನಾನು ಯಾರ ಹೆಸರನ್ನೂ ಹೇಳಲಿಲ್ಲ, ಹೇಳುವುದೂ ಇಲ್ಲ, ಎಂದು ಹೇಳಿದರು. ‘ಆದ್ದರಿಂದ ಕಾಂಗ್ರೆಸ್ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನಾವು ಈ ಪ್ರಕರಣವನ್ನು ಉನ್ನತಮಟ್ಟದಲ್ಲಿ ವಿಚಾರಣೆ ಮಾಡೋಣ ಹಾಗೂ ಯಾವುದೇ ನಿಷ್ಕರ್ಷ ಬರುವುದೋ, ಅದರ ವಿರುದ್ಧ ಕ್ರಮ ತೆಗೆದುಕೊಳ್ಳೋಣ’. ಮೊದಲು ಕಾಂಗ್ರೆಸ್ಸಿನವರಿಗೆ ಈ ಚರ್ಚೆಯಲ್ಲಿ ಭಾಜಪದವರು ತಮ್ಮ ಮಾನ ಕಳೆಯುತ್ತಿದ್ದಾರೆ ಎಂದು ಅನಿಸುತ್ತಿತ್ತು. ಆದ್ದರಿಂದ ಅವರು ಗೊಂದಲವೆಬ್ಬಿಸುತ್ತಿದ್ದರು. ಆದರೆ ಪರೀಕರ್ ಇವರ ಹೇಳಿಕೆಯಿಂದ ಅವರು ಚರ್ಚೆಯಲ್ಲಿ ಪಾಲ್ಗೊಂಡರು. ಪರೀಕರರು ತಮ್ಮ ಮನವಿಪತ್ರವನ್ನು ಬರೆದು ತಂದಿದ್ದರು ಹಾಗೂ ಅದನ್ನು ಓದಿದರು. ಅದಕ್ಕೂ ಕಾಂಗ್ರೆಸ್ಸಿನ ಸದಸ್ಯರು ಆಕ್ಷೇಪವೆತ್ತಿದರು. ನಮ್ಮ ವಿಷಯಗಳಿಗೆ ಉತ್ತರಿಸಿ, ಎಂದು ಅವರು ವಿನಂತಿಸುತ್ತಿದ್ದರು. ಅವರಿಗೆ ಸರಕಾರ ಏನು ಮಾಡುತ್ತಿದೆಯೆಂದು ತಿಳಿದುಕೊಳ್ಳಲಿಕ್ಕಿತ್ತು ಹಾಗೂ ಪರೀಕರರ ಹೇಳಿಕೆಯನ್ನು ರೆಕಾರ್ಡ್ ಮಾಡಲಿಕ್ಕಿತ್ತು; ಆದರೆ ಪರೀಕರರು ಇವರ ಈ ಬೇಡಿಕೆಗೆ ಬಲಿಯಾಗದೆ ಲಿಖಿತ ಭಾಷಣವನ್ನೇ ಓದಿದರು. ಅನಂತರ ಸುಬ್ರಹ್ಮಣ್ಯಸ್ವಾಮಿಯವರೇ ಖಂಡ-ತುಂಡ ತರ್ಕ ಮಾಡಿದರು. ಸ್ವಾಮಿಯವರು ರಾಜ್ಯಸಭೆಗೆ ನೇಮಕವಾದ ನಂತರ ಕಾಂಗ್ರೆಸ್ ಅವರ ಹೆಸರಿಗೆ ಎಷ್ಟು ಅಂಜುತ್ತಿದೆಯೆಂದರೆ, ಸ್ವಾಮಿಯವರು ಕೇವಲ ಎದ್ದು ನಿಂತರೂ ಕಾಂಗ್ರೆಸ್ಸಿನವರು ಗೊಂದಲವೆಬ್ಬಿಸುತ್ತಾರೆ ! ಇದೆಂತಹ ಪ್ರಕರಣ !
೬. ಈ ವ್ಯವಹಾರದ ದಲ್ಲಾಳಿ ಕ್ರಿಶ್ಚಿಯನ್ ಮಿಶೇಲ್‌ಗೆ ಭಾರತದಿಂದ
ಪಲಾಯನ ಮಾಡಲು ಅವಕಾಶ ನೀಡಿದ ಕಾಂಗ್ರೆಸ್ !
ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಕ್ಷಣಾಮಂತ್ರಿ, ಗೃಹಮಂತ್ರಿ, ವಿದೇಶದ ಅತಿಥಿಗಳು, ಹೀಗೆ ಅತೀ ಮಹತ್ವದ ವ್ಯಕ್ತಿ ಗಳಿಗಾಗಿ ಹೊಸ ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಡಾ. ಮನಮೋಹನ ಸಿಂಗ್ ಸರಕಾರವು ನಿರ್ಣಯಿಸಿತ್ತು. ಅದಕ್ಕನುಸಾರ ಜಾಗತಿಕ ಗುತ್ತಿಗೆ ಕರೆಯಲಾಯಿತು. ಫೆಬ್ರವರಿ ೨೦೧೦ ರಲ್ಲಿ ಭಾರತ ೧೨ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು ೩೬೦೦ ಕೋಟಿ ರೂಪಾಯಿಗಳಿಗೆ ಖರೀದಿಸುವ ಒಪ್ಪಂದವನ್ನು ಇಟಲಿಯ ಫಿನ್‌ಮೆಕಾನಿಕಾ ಕಂಪನಿಯೊಂದಿಗೆ ಮಾಡಿತು. ೨೦೧೨ ರಲ್ಲಿ ಇಟಲಿಯ ದಿನಪತ್ರಿಕೆಗಳಲ್ಲಿ ಈ ಹೆಲಿಕಾಪ್ಟರ್ ಖರೀದಿಯಲ್ಲಿ ಭಾರತೀಯರಿಗೆ ಲಂಚ ನೀಡಲಾಗಿದೆಯೆಂಬ ವಾರ್ತೆ ಪ್ರಸಿದ್ಧವಾಯಿತು. ಈ ವಾರ್ತೆಯು ಭಾರತದಲ್ಲಿನ ದಿನಪತ್ರಿಕೆ ಗಳಲ್ಲಿಯೂ ಪ್ರಮುಖ ಸುದ್ದಿಯಾಯಿತು. ಮನಮೋಹನ ಸಿಂಗ್ ಸರಕಾರವು ಈ ಆರೋಪಗಳ ವಿಚಾರಣೆಯನ್ನು ಆರಂಭಿಸಿತು. ಅದರಲ್ಲಿ ಸತ್ಯಸಂಗತಿ ಹೊರಗೆ ಬಂದಿತು ಹಾಗೂ ಇದರಿಂದ ಕೋಲಾಹಲವೆದ್ದಿತು. ಅದು ಹೇಗೆ ಭಾರತ ದಲ್ಲಿ ನಡೆಯಿತೋ, ಹಾಗೆಯೇ ಇಟಲಿಯಲ್ಲಿಯೂ ನಡೆಯಿತು. ಅಲ್ಲಿಯೂ ವಿಚಾರಣೆ ಆರಂಭವಾಯಿತು. ಇದರಲ್ಲಿ ಒಂದು ವಿಷಯ ಗಮನಾರ್ಹವಾಗಿದೆ. ಅದೇನೆಂದರೆ, ೧೨ ಫೆಬ್ರವರಿ ೨೦೧೩ ರಂದು ಯಾವಾಗ ಸಿ.ಬಿ.ಐ. ಪ್ರಾಥಮಿಕ ವಿಚಾರಣೆ ಆರಂಭಿಸಿಲು ನಿರ್ಧರಿಸಿತೋ ಆಗ ಈ ಖರೀದಿ ವ್ಯವಹಾರದಲ್ಲಿನ ದಲ್ಲಾಳಿ ಕ್ರಿಶ್ಚಿಯನ್ ಮಿಶೇಲ್ ಭಾರತ ದಿಂದ ಪಲಾಯನಗೊಂಡನು. ಇದು ಕೇವಲ ಯೋಗಾಯೋಗವಾಗಿತ್ತೇ, ಎಂಬುದನ್ನು ಈಗ ಸಿಬಿಐ ವಿಚಾರಣೆ ಮಾಡಲಿದೆ. ಏಕೆಂದರೆ ಬೋಫೋರ್ಸ್ ಪ್ರಕರಣದಲ್ಲಿಯೂ ದಲ್ಲಾಳಿ ಕ್ವಾತ್ರೋಚಿಯನ್ನು ಬಂಧಿಸುವ ಮೊದಲೇ ಅವನು ಭಾರತದಿಂದ ಪಲಾಯನಗೊಂಡಿದ್ದನು. ಕ್ವಾತ್ರೋಚಿ ಪ್ರಕರಣದಲ್ಲಿ ಸರಕಾರ ಬಹಿರಂಗವಾಗಿ ಸಹಾಯ ಮಾಡಿದೆಯೆಂದು ನ್ಯಾಯಾಲಯ ಆರೋಪಿಸಿತ್ತು. ಅಂದರೆ ಒಂದೆಡೆ ಇದರಲ್ಲಿ ಭ್ರಷ್ಟಾಚಾರವಾಯಿತೆಂದು ಸಂಸತ್ತಿನಲ್ಲಿ ಹೇಳುವುದು, ಲಂಚ ತೆಗೆದುಕೊಳ್ಳಲಾಯಿತು ಹಾಗೂ ಇನ್ನೊಂದೆಡೆ ಆರೋಪಿಗೆ ಅನುಕೂಲವಾಗುವ ಹಾಗೆ ಆಟವಾಡುವುದು. ಇಂತಹ ಇಬ್ಬಗೆಯ ಕುತಂತ್ರವು ಆ್ಯಂಟನಿಯವರ ಅಂದಿನ ಹಾಗೂ ಇಂದಿನ ಹೇಳಿಕೆಯಿಂದ ಸ್ಪಷ್ಟವಾಗಿದೆ. ಅದೇ ಸಮಯದಲ್ಲಿ ಮಿಶೇಲ್ ಬಂಧಿಸಲ್ಪಟ್ಟಿದ್ದರೆ, ಈ ಪ್ರಕರಣದ ವಿಚಾರಣೆಯು ಹೆಚ್ಚು ದಕ್ಷತೆಯಿಂದ ಆಗುತ್ತಿತ್ತು. ಏಕೆಂದರೆ ಮಿಶೇಲ್ ಮುಖ್ಯ ದಲ್ಲಾಳಿಯಾಗಿದ್ದನು ಹಾಗೂ ಲಂಚ ಕೊಡುವ ಪೂರ್ಣ ವ್ಯವಹಾರವು ಅವನೊಂದಿಗೆ ನಡೆದಿತ್ತು. ಹೀಗಿರು ವಾಗ ಮಿಶೆಲ್ ಪಲಾಯನಗೊಳ್ಳಲು ಸರಕಾರ ಹೇಗೆ ಅವಕಾಶ ನೀಡಿತು ?
೭. ಸಂಬಂಧಪಟ್ಟವರನ್ನು ವಿಚಾರಣೆ ಮಾಡದಿರುವ
ಕಾಂಗ್ರೆಸ್ ಪುರಸ್ಕೃತ ಮೈತ್ರಿ ಸರಕಾರ !
ಇದರಲ್ಲಿ ಭಾಜಪವು ಇನ್ನೊಂದು ವಿಷಯ ಎತ್ತಿ ಹಿಡಿದಿದೆ. ಮೈತ್ರಿ ಸರಕಾರದ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಮ್.ಕೆ. ನಾರಾಯಣನ್, ವಿಶೇಷ ಸುರಕ್ಷಾ ದಳದ ಪ್ರಮುಖ ಎಮ್.ಕೆ. ವಾಂಚೂ ಇವರಿಬ್ಬರನ್ನೂ ರಕ್ಷಿಸಲು ತಕ್ಷಣ ರಾಜ್ಯಪಾಲರ ಹುದ್ದೆಗೆ ನೇಮಿಸಲಾಗಿತ್ತು. ಈ ಬಗ್ಗೆ ಮೈತ್ರಿ ಸರಕಾರವು ಅವರಿಬ್ಬರ ವಿಚಾರಣೆ ಮಾಡದಂತೆ ಸಿಬಿಐಗೆ ಅಡ್ಡಿಪಡಿಸಿದ್ದೇಕೆ ? ೨೦೧೪ ರ ವರೆಗೆ ಸಿ.ಬಿ.ಐ.ಗೆ ಇವರಿಬ್ಬರ ವಿಚಾರಣೆ ಮಾಡಲು ಸಾಧ್ಯವಾಗಲಿಲ್ಲ. ಭಾಜಪ ಸರಕಾರ ಬಂದ ನಂತರವೇ ಇವರಿಬ್ಬರ ವಿಚಾರಣೆ ಮಾಡಲು ಸಾಧ್ಯವಾಯಿತು. ಈಗ ಕೇಂದ್ರ ಸರಕಾರವು ವಿಚಾರಣೆಯ ಒಂದು ತಂಡವನ್ನು ಇಟಲಿಗೆ ಕಳುಹಿಸಲಿದೆ. ಇದರಲ್ಲಿ ಸಿ.ಬಿ.ಐ. ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿರುತ್ತಾರೆ. ಸಿ.ಬಿ.ಐ.ಯ ಬೇಡಿಕೆಯಂತೆ ಮುಖ್ಯ ಸಂಶಯಿತ ಮತ್ತು ಲಂಚ ನೀಡಿದ ಕ್ರಿಶ್ಚಿಯನ್ ಮಿಶೆಲ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದೆ.
ಮಿಶೇಲ್‌ನ ವಿರುದ್ಧ ದೆಹಲಿ ನ್ಯಾಯಾಲಯವು ಎರಡು ತಿಂಗಳ ಹಿಂದೆಯೇ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಮಿಶೇಲ್ ವಿರುದ್ಧ ಕ್ರಿಮಿನಲ್ ಸ್ವರೂಪದ-ಸಂಚು, ಮೋಸಗಾರಿಕೆ, ಸರಕಾರಿ ನೌಕರರಿಗೆ ಲಂಚ ನೀಡಿ ೧೨ ಹೆಲಿಕಾಪ್ಟರ್‌ಗಳ ವ್ಯವಹಾರವನ್ನು ತನ್ನ ವಶಕ್ಕೆ ಮಾಡಿಕೊಳ್ಳುವುದು ಇತ್ಯಾದಿ ಆರೋಪವನ್ನು ಮಾಡಲಾಗಿದೆ. ಭಾರತದ ನ್ಯಾಯಾಲಯದಲ್ಲಿ ಹೆಲಿಕಾಪ್ಟರ್ ಕಂಪನಿ ಫಿನ್‌ಮೆಕಾನಿಕಾ, ಆಗಸ್ಟಾ ವೆಸ್ಟ್‌ಲ್ಯಾಂಡ್, ಭಾರತದ ಕಂಪನಿ ಐಡಿಎಸ್ ಇನ್ಫೋಟೆಕ್ ಲಿ. ಮತ್ತು ಎರೋಮೆಟ್ರಿಕ್ಸ್ ಇಂಡಿಯಾ ಮುಂತಾದವರ ವಿರುದ್ಧ ೨೦೧೩ ರಲ್ಲಿಯೇ ಅಪರಾಧವನ್ನು ದಾಖಲಿಸಲಾಗಿದೆ; ಆದರೆ ಅದರ ವಿಚಾರಣೆ ಮಾಡಲು ಮೈತ್ರಿ ಸರಕಾರ ಬಿಡಲಿಲ್ಲ. ಈಗ ಮೋದಿ ಸರಕಾರ ಈ ಸಂಪೂರ್ಣ ಪ್ರಕರಣದ ತನಿಖೆಯನ್ನು ಮಾಡಲಿದೆ. ಮುಂಬರುವ ಕಾಲದಲ್ಲಿ ಕಾಂಗ್ರೆಸ್ಸಿಗೆ ಈ ಪ್ರಕರಣವು ತಲೆ ನೋವಾಗುವ ಸಾಧ್ಯತೆ ಇದೆ. ಬೋಫೋರ್ಸ್‌ನಂತೆಯೇ ಈ ಪ್ರಕರಣವು ಸಹ ಕಾಂಗ್ರೆಸ್‌ಗೆ ಸಾಕೋ-ಬೇಕೋ ಎನ್ನುವ ಹಾಗೆ ಮಾಡುವುದು, ಎಂಬುದರಲ್ಲಿ ಸಂಶಯವಿಲ್ಲ; ಏಕೆಂದರೆ ಕೆಲವು ರಾಜ್ಯಗಳಲ್ಲಿ ವಿಧಾನಸಭೆಯ ಚುನಾವಣೆ ನಡೆಯುತ್ತಿದೆ, ಕೆಲವು ರಾಜ್ಯಗಳಲ್ಲಿ ಕೆಲವು ಹಂತ ಬಾಕಿ ಇದೆ. - ಬ್ರಿಗೇಡಿಯರ್ (ನಿವೃತ್ತ) ಹೇಮಂತ ಮಹಾಜನ, ಪುಣೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಗಸ್ಟಾ ವೆಸ್ಟ್‌ಲ್ಯಾಂಡ್ ಮತ್ತು ಸಿಗ್ನೋರಾ ಗಾಂಧಿ !