ಮೂರೂವರೆ ಮುಹೂರ್ತದಲ್ಲಿನ ‘ಅಕ್ಷಯ ತದಿಗೆ’ಯ ಮಹತ್ವ

ವೈಶಾಖ ಶುಕ್ಲ ಪಕ್ಷ ತೃತೀಯಾ - ಮೇ ೯
ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಆದ್ದರಿಂದ ಈ ದಿನದ ಮಹತ್ವವನ್ನು ಇಲ್ಲಿ ನೀಡುತ್ತಿದ್ದೇವೆ.
ಕೆಲವರ ಅಭಿಪ್ರಾಯದಂತೆ ಅಕ್ಷಯ ತದಿಗೆಯು ಸತ್ಯಯುಗ ಮತ್ತು ತ್ರೇತಾಯುಗದ ಆರಂಭದ ದಿನವಾದುದರಿಂದ ಇದಕ್ಕೆ ಮಹತ್ವ ಬಂದಿದೆ. ಪ್ರತಿಯೊಂದು ಕಾಲ ವಿಭಾಗದ ಮೊದಲ ದಿನವು ಭಾರತೀಯರಿಗೆ ಯಾವಾಗಲೂ ಪವಿತ್ರವಾಗಿದೆ. ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿ ಎಂದರೆ ಪವಿತ್ರ ತೀರ್ಥಸ್ನಾನ, ವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು ಮತ್ತು ಅದು ಸಾಧ್ಯವಿಲ್ಲದಿದ್ದರೆ ಕನಿಷ್ಟಪಕ್ಷ ಎಳ್ಳಿನ ತರ್ಪಣವನ್ನಾದರೂ ನೀಡಬೇಕು ಎಂದು ಹೇಳಲಾಗಿದೆ. ಈ ದಿನ ಬಿಸಿಲಿನಿಂದ ರಕ್ಷಿಸುವ ಛತ್ರಿ, ಪಾದರಕ್ಷೆ ಮುಂತಾದ ವಸ್ತುಗಳನ್ನೂ ದಾನ ಮಾಡುತ್ತಾರೆ.
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿರುವುದು
ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ವೈಶಾಖ ಶುಕ್ಲ ತದಿಗೆಗೆ ಅಕ್ಷಯ ತದಿಗೆ ಎಂದು ಹೆಸರು ಬರಲು ‘ಮದನರತ್ನ’ ಗ್ರಂಥದಲ್ಲಿ ನೀಡಲಾದ ಒಂದು ಶ್ಲೋಕದ ಭಾವಾರ್ಥವು ಮುಂದಿನಂತಿದೆ - (ಶ್ರೀಕೃಷ್ಣನು ಹೇಳುತ್ತಾನೆ) ಎಲೈ ಯುಧಿಷ್ಠಿರನೇ, ಈ ತಿಥಿಯ ದಿನ ಮಾಡಿದ ದಾನ ಮತ್ತು ಹವನಗಳು ಕ್ಷಯವಾಗುವುದಿಲ್ಲ; ಆದುದರಿಂದ ಋಷಿಗಳು ಇದಕ್ಕೆ ಅಕ್ಷಯ ತದಿಗೆ ಎಂದಿದ್ದಾರೆ. ಈ ತಿಥಿಯ ದಿನ ದೇವರು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳು ಅಕ್ಷಯವಾಗುತ್ತವೆ (ಕ್ಷಯವಾಗುವುದಿಲ್ಲ). (ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)
ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ ?
ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗ ಪ್ರಾಪ್ತಿಯಾಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿ ಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ. ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್ ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೇ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೇ ಉಚ್ಚಲೋಕಕ್ಕೆ ಹೋಗುತ್ತಾನೆ.
ಅಕ್ಷಯ ತದಿಗೆಯ ದಿನಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ ?
ಪೂರ್ವಜರಿಗೆ ಗತಿ ಸಿಗುವುದು
ಮಹತ್ವ : ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕದಲ್ಲಿರುವ ಹೆಚ್ಚಿನ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಮನುಷ್ಯನು ಈ ಋಣವನ್ನು ತೀರಿಸಲು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.
ಎಳ್ಳು ತರ್ಪಣೆ ಮಾಡುವ ಪದ್ಧತಿ : ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.
- ಕು. ಮಧುರಾ ಭೋಸಲೆ, ಸನಾತನ ಆಶ್ರಮ ರಾಮನಾಥಿ, ಗೋವಾ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮೂರೂವರೆ ಮುಹೂರ್ತದಲ್ಲಿನ ‘ಅಕ್ಷಯ ತದಿಗೆ’ಯ ಮಹತ್ವ