ಕಾರ್ಯಾಲಯದ ಉದ್ಘಾಟನೆಯನ್ನು ಹೇಗೆ ಮಾಡಬೇಕು ?

ಅಕ್ಷಯ ತೃತೀಯಾದಂದು ಕಾರ್ಯಾಲಯಗಳ ಉದ್ಘಾಟನೆ ಮಾಡುತ್ತಾರೆ. ಯಾವುದಾದರೊಂದು ಹೊಸ ಸ್ಥಳದಲ್ಲಿ ಕೆಲಸವನ್ನು ಆರಂಭಿಸುವ ಮೊದಲು ಅಥವಾ ಯಾವುದಾದರೊಂದು ಕಾರ್ಯಾಲಯವನ್ನು ಆರಂಭಿಸುವ ಮೊದಲು ಅಲ್ಲಿನ ವಿಶೇಷ ಸ್ಥಳಕ್ಕೆ ಅಥವಾ ಮುಖ್ಯದ್ವಾರಕ್ಕೆ ರಿಬ್ಬನ್ ಕಟ್ಟಿರುತ್ತಾರೆ ಮತ್ತು ಆ ರಿಬ್ಬನ್ ಕತ್ತರಿಸಿ ಉದ್ಘಾಟನೆಯನ್ನು ಮಾಡಲಾಗುತ್ತದೆ. ಆದರೆ ನಿಜವಾಗಿ ಉದ್ಘಾಟನೆಯನ್ನು ಹೇಗೆ ಮಾಡಬೇಕು ? ಎಂಬುದನ್ನು ನೋಡೋಣ.
ರಿಬ್ಬನ್ ಕತ್ತರಿಸಿ ಉದ್ಘಾಟನೆ ಏಕೆ ಮಾಡಬಾರದು ?
ರಿಬ್ಬನ್ ಕತ್ತರಿಸುವುದೆಂದರೆ ಅದರ ಅಖಂಡತ್ವಕ್ಕೆ ಭಂಗವನ್ನುಂಟು ಮಾಡುವುದು, ಅದನ್ನು ಲಯದೆಡೆಗೆ ಕೊಂಡೊಯ್ಯುವುದು. ಲಯದತ್ತ ಕೊಂಡೊಯ್ಯುವ ಕೃತಿಯು ಧರ್ಮಶಾಸ್ತ್ರಕ್ಕನುಸಾರ ತಾಮಸಿಕತೆಯ ಲಕ್ಷಣವಾಗಿದೆ. ಆದುದರಿಂದ ರಿಬ್ಬನ್ ಕತ್ತರಿಸಿ ಉದ್ಘಾಟನೆಯನ್ನು ಮಾಡುವುದು ತಮೋಗುಣದ ದರ್ಶಕವಾಗಿದೆ.
ರಿಬ್ಬನ್ ಕತ್ತರಿಸುವ ಕೃತಿಯ ಪರಿಣಾಮಗಳು
೧. ರಿಬ್ಬನ್ ಕತ್ತರಿಸುವ ತಾಮಸಿಕ ಕೃತಿಯಿಂದ ಉದ್ಘಾಟನೆ ಮಾಡಿದರೆ ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗುತ್ತವೆ.
೨. ತಾಮಸಿಕ ಸ್ಪಂದನಗಳು ಹೆಚ್ಚಾಗುವುದರಿಂದ ಮಂಗಲಕಾರಿ ಶಕ್ತಿಗಳು ಅಲ್ಲಿಗೆ ಬರಲು ಕಠಿಣವಾಗುತ್ತದೆ.
೩. ಕಾರ್ಯಸಿದ್ಧಿಯಲ್ಲಿ ಅಡಚಣೆಯುಂಟಾಗುತ್ತದೆ.
ಉದ್ಘಾಟನೆಯನ್ನು ಯಾರ ಕೈಯಿಂದ ಮಾಡಿಸಬೇಕು ?
ಸಾಮಾನ್ಯ ವ್ಯಕ್ತಿಯು ಹೆಚ್ಚಾಗಿ ರಾಜಸಿಕ ಮತ್ತು ತಾಮಸಿಕನಾಗಿರುತ್ತಾನೆ. ಅಷ್ಟೇ ಅಲ್ಲದೇ ಇತ್ತೀಚಿನ ನಟ ನಟಿಯರು ಮತ್ತು ರಾಜಕಾರಣಿಗಳಲ್ಲಂತೂ ರಾಜಸಿಕತೆ ಹಾಗೂ ತಾಮಸಿಕತೆಯು ಬಹಳ ಹೆಚ್ಚಿರುತ್ತದೆ. ಅವರಲ್ಲಿ ಅಹಂಭಾವವೂ ಹೆಚ್ಚಿರುತ್ತದೆ. ಅವರ ದೇಹದಿಂದ ಪ್ರಕ್ಷೇಪಿತವಾಗುವ ರಜ-ತಮ ಲಹರಿಗಳಿಂದಾಗಿ ಅವರ ಸುತ್ತಲಿನ ವಾಯುಮಂಡಲವು ದೂಷಿತವಾಗುತ್ತದೆ. ಸ್ವಾಭಾವಿಕವಾಗಿಯೇ ಮಂಗಲ ಶಕ್ತಿಯು ಆ ಸ್ಥಳಕ್ಕೆ ಆಗಮಿಸುವುದಿಲ್ಲ. ಆದುದರಿಂದ ನಟನಟಿಯರು, ರಾಜಕಾರಣಿಗಳಂತಹ ರಾಜಸಿಕ ಮತ್ತು ತಾಮಸಿಕ ವ್ಯಕ್ತಿಗಳಿಂದ ಉದ್ಘಾಟನೆಯನ್ನು ಮಾಡಿಸಬಾರದು. ಕೇವಲ ಸಂತರು ಅಥವಾ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರಾದ ವ್ಯಕ್ತಿಗಳು ಮಾತ್ರ ಸತ್ತ್ವಗುಣಿಯಾಗಿರುತ್ತಾರೆ. ಅವರಲ್ಲಿ ಅಹಂಭಾವವಿರುವುದಿಲ್ಲ. ಕೇವಲ ಸಂತರೇ ಯಾವುದೇ ಕೃತಿಯನ್ನು ಅಹಂರಹಿತರಾಗಿ ಮಾಡಬಲ್ಲರು. ಆದುದರಿಂದ ಸಂತರ ಹಸ್ತದಿಂದ ಉದ್ಘಾಟನೆ ಮಾಡುವುದು ಹೆಚ್ಚು ಲಾಭದಾಯಕವಾಗಿದೆ.
ಉದ್ಘಾಟನೆಯ ಕೃತಿಯನ್ನು ಯೋಗ್ಯ ರೀತಿಯಲ್ಲಿ ಮತ್ತು
ಶಾಸ್ತ್ರಕ್ಕನುಸಾರ ಹೇಗೆ ಮಾಡಬೇಕು ?
ಸಂಸ್ಥೆ, ಅಂಗಡಿ ಅಥವಾ ಕಾರ್ಯಾಲಯದ ಉದ್ಘಾಟನೆಯನ್ನು ಮಾಡುವಾಗ ತೆಂಗಿನಕಾಯಿ ಒಡೆಯುವುದು ಮತ್ತು ದೇವತೆಯ ಪೂಜೆ ಮಾಡುವ ಕೃತಿಗಳನ್ನು ಮಾಡಲಾಗುತ್ತದೆ.
ಅ. ತೆಂಗಿನಕಾಯಿ ಒಡೆಯುವುದು : ತೆಂಗಿನಕಾಯಿಯನ್ನು ಒಡೆಯುವುದರ ಹಿಂದಿನ ಪ್ರಮುಖ ಉದ್ದೇಶವೆಂದರೆ ಕಾರ್ಯಸ್ಥಳದ ಶುದ್ಧಿ. ಸಂಸ್ಥೆಯ ಉದ್ಘಾಟನೆಯನ್ನು ಮಾಡುವಾಗ ಮೊಟ್ಟ ಮೊದಲಿಗೆ ಮುಖ್ಯ ಅಥವಾ ಪ್ರವೇಶದ್ವಾರದ ಹೊರಗೆ ತೆಂಗಿನಕಾಯಿಯನ್ನು ಒಡೆಯುತ್ತಾರೆ. ತೆಂಗಿನಕಾಯಿಯನ್ನು ಒಡೆಯುವಾಗ ಸ್ಥಾನದೇವತೆಗೆ ಆವಾಹನೆ ಮಾಡಿ ಅವರಲ್ಲಿ ಪ್ರಾರ್ಥಿಸುತ್ತಾರೆ. ಯಾವುದಾದರೂ ಸ್ಥಾನದ ಅಧಿಷ್ಠಾನ/ಅಧಿಷ್ಠಾತ್ರಿ ದೇವತೆಗೆ ಸ್ಥಾನದೇವತೆ ಎನ್ನುತ್ತಾರೆ. ಪ್ರತಿಯೊಂದು ಸ್ಥಳದಲ್ಲಿ ಆ ಸ್ಥಾನದೇವತೆಯ ಆಧ್ಯಾತ್ಮಿಕ ಸ್ತರದ ಪ್ರಭಾವ ನಿಶ್ಚಿತವಾಗಿರುತ್ತದೆ. ಸ್ಥಾನದೇವತೆಗೆ ಪ್ರಾರ್ಥನೆ ಮಾಡಿ ತೆಂಗಿನಕಾಯಿ ಒಡೆಯುವುದೆಂದರೆ ಅನಿಷ್ಟ ಶಕ್ತಿಗಳ ಸಂಚಾರವನ್ನು ನಿರ್ಬಂಧಿಸುವುದು.
ಅ.೧. ಪ್ರತ್ಯಕ್ಷ ಕೃತಿಯನ್ನು ಹೇಗೆ ಮಾಡಬೇಕು
ಉದ್ಘಾಟನೆ ಮಾಡುವಾಗ ಯಾವ ವ್ಯಕ್ತಿಯ ಕೈಗಳಿಂದ ಉದ್ಘಾಟನೆ ಮಾಡಿಸುವುದಿದೆಯೋ ಆ ವ್ಯಕ್ತಿಯು ಪ್ರವೇಶದ್ವಾರದ ಹೊರಗೆ ಜುಟ್ಟಿರುವ ತೆಂಗಿನಕಾಯಿಯನ್ನು ಹಿಡಿದುಕೊಂಡು ನಿಲ್ಲಬೇಕು. ತೆಂಗಿನಕಾಯಿಯ ಜುಟ್ಟು ಸ್ಥಾನದೇವತೆಯೆಡೆಗೆ ಅಂದರೆ ಎದುರಿಗೆ ಇರಬೇಕು. ಆಗ ಕಾರ್ಯಸ್ಥಳದಲ್ಲಿ ಉಪಸ್ಥಿತರಿರುವವರು ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರದ ಮುದ್ರೆಯಲ್ಲಿ ನಿಲ್ಲಬೇಕು. ಈಗ ಎಲ್ಲರೂ ಒಟ್ಟಾಗಿ ಸ್ಥಾನದೇವತೆಯ ಆವಾಹನೆಯನ್ನು ಮಾಡಿ ಕಾರ್ಯಸ್ಥಳದಲ್ಲಿ ಸ್ಥಾನವನ್ನು ಗ್ರಹಿಸಲು ಮತ್ತು ಕಾರ್ಯಸ್ಥಳದಲ್ಲಿರುವ ತೊಂದರೆದಾಯಕ ಸ್ಪಂದನಗಳ ಸಂಚಾರಕ್ಕೆ ಅಂಕುಶ ಹಾಕಲು ಪ್ರಾರ್ಥಿಸಬೇಕು. ಅನಂತರ ತೆಂಗಿನಕಾಯಿಯನ್ನು ಒಡೆಯಬೇಕು. ತೆಂಗಿನಕಾಯಿಯಲ್ಲಿರುವ ನೀರು ಗೋಮೂತ್ರದಷ್ಟೇ ಪವಿತ್ರವಾಗಿರುತ್ತದೆ. ಆದುದರಿಂದ ಅದನ್ನು ಪ್ರವೇಶದ್ವಾರದ ಅಕ್ಕ-ಪಕ್ಕದಲ್ಲಿ ಸಿಂಪಡಿಸಬೇಕು.
ಅ.೨. ತೆಂಗಿನಕಾಯಿ ಒಡೆದಾಗ ಆಗುವ ಲಾಭಗಳು
ಒಡೆಯುವಾಗ ಸ್ಥಾನದೇವತೆಯಿಂದ ಆಶೀರ್ವಾದಾತ್ಮಕ ಶಕ್ತಿಯ ಲಹರಿಗಳು ಮತ್ತು ಚೈತನ್ಯದ ಪ್ರವಾಹವು ತೆಂಗಿನಕಾಯಿಯೆಡೆಗೆ ಪ್ರಕ್ಷೇಪಿತವಾಗುತ್ತದೆ. ಆ ಆಶೀರ್ವಾದಾತ್ಮಕ ಶಕ್ತಿಯ ಲಹರಿಗಳುಮತ್ತು ಚೈತನ್ಯದ ಪ್ರವಾಹವು ಇವೆರಡೂ ತೆಂಗಿನಕಾಯಿಯಲ್ಲಿ ಒಡೆದಾಗ ಅದರಲ್ಲಿ ಸಂಗ್ರಹವಾದ ಶಕ್ತಿಯ ಲಹರಿಗಳು ಮತ್ತು ಚೈತನ್ಯವು ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಉದ್ಘಾಟನೆಯ ಸಮಯದಲ್ಲಿ ತೆಂಗಿನ ಕಾಯಿಯನ್ನು ಒಡೆಯುವುದರಿಂದ ತೊಂದರೆದಾಯಕ ಸ್ಪಂದನಗಳ ವಿಘಟನೆಯಾಗುತ್ತದೆ ಹಾಗೂ ವಾಸ್ತುವಿನ ಸುತ್ತಲೂ ತೆಂಗಿನಕಾಯಿಯಿಂದ ಪ್ರಕ್ಷೇಪಿಸಲ್ಪಟ್ಟ ಶಕ್ತಿ ಮತ್ತು ಚೈತನ್ಯದ ರಕ್ಷಣಾ ಕವಚವು ನಿರ್ಮಾಣವಾಗುತ್ತದೆ.
ಆ. ದೇವರ ಪೂಜೆಯನ್ನು ಮಾಡುವುದು :
೧. ತೆಂಗಿನಕಾಯಿಯ ನೀರನ್ನು ಸಿಂಪಡಿಸಿದ ನಂತರ ಕಾರ್ಯಾಲಯವನ್ನು ಪ್ರವೇಶಿಸಬೇಕು.
೨. ನಂತರ ಉದ್ಘಾಟನೆ ಮಾಡಿದವನು ಕುಲದೇವತೆ ಅಥವಾ ಇಷ್ಟದೇವತೆಯ ಪ್ರತಿಮೆಯ/ಮೂರ್ತಿಯ ಪೂಜೆಗೆ ಕುಳಿತುಕೊಳ್ಳಬೇಕು. ಗುರುಪ್ರಾಪ್ತಿಯಾದವರು ಶ್ರೀಗುರುವಿನ ಛಾಯಾಚಿತ್ರವನ್ನಿಟ್ಟು ಯಥಾಶಕ್ತಿ ಪೂಜಿಸ ಬೇಕು.
೩. ಮೊದಲು ಪೂಜಾಸ್ಥಳದಲ್ಲಿಟ್ಟ ಕಾಲುದೀಪವನ್ನು ಪ್ರಜ್ವಲಿಸಬೇಕು.
೪. ಅನಂತರ ಪ್ರತಿಮೆಯ/ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸಬೇಕು.
೫. ನಂತರ ಚಂದನ ಮತ್ತು ಹೂವನ್ನು ಅರ್ಪಿಸಿ ಅಕ್ಷತೆಯನ್ನು ಅರ್ಪಿಸಬೇಕು.
೬. ಅನಂತರ ಊದುಬತ್ತಿಯಿಂದ ಬೆಳಗಬೇಕು.
೭. ತುಪ್ಪದ ದೀಪ ಬೆಳಗಬೇಕು.
೮. ನೈವೇದ್ಯಕ್ಕಾಗಿ ತಂದ ಸಿಹಿಯನ್ನು ದೇವತೆಗೆ ಅರ್ಪಿಸಬೇಕು.
೯. ಕಣ್ಣುಗಳನ್ನು ಮುಚ್ಚಿಕೊಂಡು, ಎರಡೂ ಕೈಗಳನ್ನು ಜೋಡಿಸಿ ದೇವರ ಕೃಪೆಗೆ ಪ್ರಾರ್ಥಿಸಬೇಕು.
ಉದ್ಘಾಟನೆಯನ್ನು ಮಾಡುವಾಗ ಒಡೆದ ತೆಂಗಿನಕಾಯಿಯನ್ನು ಏನು ಮಾಡಬೇಕು ?
ಒಡೆದಾಗ ಅದು ಸರಿಯಾಗಿ ಒಡೆದರೆ ಮಾತ್ರ ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು. ಕೆಲವೊಮ್ಮೆ ತೆಂಗಿನಕಾಯಿಯಲ್ಲಿ ಅನಿಷ್ಟ ಶಕ್ತಿಗಳು ಆಕರ್ಷಿತವಾಗುವುದರಿಂದ ಅದು ಯೋಗ್ಯ ರೀತಿಯಲ್ಲಿ ಒಡೆಯುವುದಿಲ್ಲ. ಅವು ತುಂಡುತುಂಡಾಗುತ್ತವೆ. ವಿಚಿತ್ರವಾಗಿ ಒಡೆಯುತ್ತದೆ. ಇಂತಹ ಸಮಯದಲ್ಲಿ ಅದನ್ನು ಪ್ರಸಾದವೆಂದು ಸ್ವೀಕರಿಸದೇ ವಿಸರ್ಜಿಸಬೇಕು. ಹೀಗಾದಲ್ಲಿ ಪೂಜೆಯಲ್ಲಿ ನೈವೇದ್ಯ ಅರ್ಪಿಸಿದ ಸಿಹಿಯನ್ನು ಪ್ರಸಾದವೆಂದು ಸ್ವೀಕರಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾರ್ಯಾಲಯದ ಉದ್ಘಾಟನೆಯನ್ನು ಹೇಗೆ ಮಾಡಬೇಕು ?