ಅಕ್ಷಯ ತೃತೀಯಾದಂದು ದೇವತೆ ಮತ್ತು ಪಿತೃಗಳಿಗಾಗಿ ಬ್ರಾಹ್ಮಣರಿಗೆ ಉದಕಕಲಶದ ದಾನ ಮಾಡುವ ಉದ್ದೇಶ

ಉದಕಕಲಶಕ್ಕೆ ‘ಸರ್ವಸಮಾವೇಶಕ ಸ್ತರದ ನಿರ್ಗುಣ ಪಾತ್ರೆ’ ಎಂದು ಸಂಬೋಧಿಸಲಾಗುತ್ತದೆ. ಪಿತೃಗಳಿಗೆ ಉದಕಕಲಶವನ್ನು ದಾನವಾಗಿ ಕೊಡುವುದರಿಂದ ಅವರು ನಮ್ಮ ವಾಸನೆಗಳನ್ನು ನಾಶ ಮಾಡುತ್ತಾರೆ, ಹಾಗೆಯೇ ದೇವತೆಗಳ ಕೃಪಾಶೀರ್ವಾದದಿಂದ ನಮ್ಮ ಕರ್ಮಗಳಿಂದ ಉತ್ಪನ್ನವಾದ ಪಾಪಗಳು ನಾಶವಾಗುತ್ತವೆ. ಆದ್ದರಿಂದ ದಾನದ ರೂಪದಲ್ಲಿ ನಮ್ಮ ಕರ್ಮಗಳಿಂದ ನಿರ್ಮಾಣವಾಗುವ ಸೂಕ್ಷ್ಮ ವಾಸನೆಗಳು ದೇವತೆಗಳ ಚರಣಗಳಲ್ಲಿ ಅರ್ಪಿತವಾಗುತ್ತವೆ. ಈ ರೀತಿ ಉದಕಕಲಶದ ದಾನ ನೀಡುವ ಅರ್ಥವೆಂದರೆ, ಕಲಶದಲ್ಲಿ ತುಂಬಿದ ಜಲವನ್ನು ಪವಿತ್ರವೆಂದು ಭಾವಿಸಿ ತಮ್ಮ ದೇಹ ಮತ್ತು ಕರ್ಮಕ್ಕೆ ಸಂಬಂಧಿಸಿದ ಎಲ್ಲ ರೀತಿಯ ವಾಸನೆಗಳನ್ನು ಅದರಲ್ಲಿ ವಿಸರ್ಜಿಸುವುದು. ಈ ರೀತಿ ತಮ್ಮ ದೇಹವನ್ನು ಆಸಕ್ತಿರಹಿತ ಕರ್ಮದಿಂದ ಶುದ್ಧಗೊಳಿಸಿದ ನಂತರ ಬ್ರಾಹ್ಮಣನನ್ನು ದೇವತೆ ಮತ್ತು ಪಿತೃಸ್ವರೂಪವೆಂದು ಭಾವಿಸಿ ಉದಕಕಲಶದಲ್ಲಿ ತಮ್ಮ ಎಲ್ಲ ವಾಸನೆಗಳನ್ನು ಅವರ ಚರಣಗಳಲ್ಲಿ ಅರ್ಪಿಸುವುದು.
ಉದಕಕುಂಭದ ದಾನ ಮಾಡುವ ವಿಧಿ
ದೇವತೆಗಳಿಗಾಗಿ ಇಟ್ಟ ಕಲಶದಲ್ಲಿ ಶ್ರೀವಿಷ್ಣುವಿನ ಮೂರ್ತಿಯನ್ನು ‘ವಸಂತ-ಮಾಧವ’ನ ಹೆಸರಿನಲ್ಲಿ ಸ್ಥಾಪಿಸಲಾಗುತ್ತದೆ ಮತ್ತು ಅದರ ಪೂಜೆ ಮಾಡಲಾಗುತ್ತದೆ ಹಾಗೂ ಪಿತೃಗಳಿಗಾಗಿ ಇಟ್ಟ ಕಲಶದಲ್ಲಿ ಎಲ್ಲ ಪಿತೃಗಳ ಆವಾಹನೆ ಮಾಡಿ ಅವರ ಪೂಜೆ ಮಾಡಲಾಗುತ್ತದೆ.
ಪೂಜಾವಿಧಿಗಾಗಿ ಸಾಮಗ್ರಿಗಳ ರಚನೆ ಮತ್ತು ಪ್ರತ್ಯಕ್ಷ ಪೂಜಾವಿಧಿ
ಎರಡು ಮಣೆಗಳನ್ನಿಡಬೇಕು. ಒಂದು ದೇವತೆಗಳಿಗೆ ಮತ್ತು ಇನ್ನೊಂದನ್ನು ಪಿತೃಗಳಿಗೆ ಇಡಿ. ಅವುಗಳ ಮೇಲೆ ಯಥಾಶಕ್ತಿ ಅಕ್ಕಿಯ ರಾಶಿಯ ಎರಡು ಹರಿವಾಣಗಳನ್ನಿಡಿ. ಅದರ ಮೇಲೆ ಕಲಶವನ್ನಿಡಿ. ಕಲಶದಲ್ಲಿ ನೀರು ತುಂಬಿಸಿ. ಕಲಶದ ಹತ್ತಿರ ತೆಂಗಿನಕಾಯಿ ಇಡಿ. ಎರಡು ವೀಳ್ಯದೆಲೆ ಇಡಿ. ಅದರ ಮೇಲೆ ಅಡಿಕೆ ಮತ್ತು ದಕ್ಷಿಣೆಯನ್ನಿಡಿ. ನೈವೇದ್ಯಕ್ಕಾಗಿ ಹಣ್ಣನ್ನು ಇಡಬೇಕು. ದೇವತೆಗಳಿಗಾಗಿ ಇಟ್ಟ ಕಲಶದಲ್ಲಿ ಜವೆ ಗೋದಿ, ಬಿಳಿ ಎಳ್ಳು ಮತ್ತು ಅಡಿಕೆ ಹಾಕಿರಿ. ಪಿತೃಗಳಿಗಾಗಿ ಇಟ್ಟ ಕಲಶದಲ್ಲಿ ಕಪ್ಪು ಎಳ್ಳಿನ ಜೊತೆಗೆ ಅಡಿಕೆ ಹಾಕಿರಿ.
ಕಲಶಪೂಜೆ ಪ್ರಾರಂಭಿಸುವ ಮೊದಲು ಆಚಮನ, ಪ್ರಾಣಾಯಾಮ ಮತ್ತು ದೇಶಕಾಲಕಥನ ಮಾಡಿ ಸಂಕಲ್ಪ ಮಾಡಿ.
ಕಲಶಕ್ಕೆ ಹೊಸ ವಸ್ತ್ರ ಹೊದಿಸಿರಿ. ಕಲಶದಲ್ಲಿ ವಸಂತ-ಮಾಧವನ ಆವಾಹನೆ ಮಾಡಿ ಅವನ ಪೂಜೆ ಮಾಡಿರಿ. ಇದೇ ರೀತಿ ಪಿತೃಗಳಿಗಾಗಿ ಇಟ್ಟ ಕಲಶದ ಪೂಜೆ ಮಾಡಿರಿ. ಕಲಶಪೂಜೆಯ ನಂತರ ಬ್ರಾಹ್ಮಣಪೂಜೆ ಮಾಡಿರಿ ಮತ್ತು ದೇವತೆಗಳಿಗಾಗಿ ಪೂಜೆ ಮಾಡಿದ ಕಲಶವನ್ನು ಬ್ರಾಹ್ಮಣನಿಗೆ ದಾನ ನೀಡಿ. ಎಲ್ಲರಿಗೂ ಶುಭವಾಗಲು ಪ್ರಾರ್ಥಿಸಿರಿ.
ಇದೇ ರೀತಿ ಪಿತೃಗಳಿಗಾಗಿಟ್ಟ ಕಲಶವನ್ನೂ ಬ್ರಾಹ್ಮಣನಿಗೆ ದಾನ ನೀಡಿರಿ. ಪಿತೃಗಳ ತೃಪ್ತಿಗಾಗಿ ಮತ್ತು ಅವರಿಗೆ ಗತಿ ದೊರಕುವುದಕ್ಕಾಗಿ ದೇವತೆಗಳಿಗೆ ಪ್ರಾರ್ಥಿಸಿ.
ಉದಕಕುಂಭದ ಪೂಜೆ ಮಾಡುವ ವ್ಯಕ್ತಿಯ ಮನಸ್ಸಿನಲ್ಲಿ ಪಿತೃಗಳ ಬಗ್ಗೆ ಕೃತಜ್ಞತಾ ಭಾವ ನಿರ್ಮಾಣವಾಗುತ್ತದೆ. ಪೂಜಿಸಿದ ಉದಕಕುಂಭದಲ್ಲಿ ದೇವತೆಗಳ ಚೈತನ್ಯವಿರುತ್ತದೆ. ಪಿತೃಲೋಕದಿಂದ ಪಿತೃ ತರಂಗಗಳು ಕುಂಭದಲ್ಲಿ ಆಕರ್ಷಿತವಾಗುತ್ತವೆ. ಅತೃಪ್ತ ಪಿತೃಗಳು ಲಿಂಗದೇಹದ ರೂಪದಲ್ಲಿ ವಾಸ ಮಾಡುತ್ತಾರೆ. ಕುಂಭದಲ್ಲಿ ಚೈತನ್ಯವಿರುವುದರಿಂದ ಈ ಲಿಂಗದೇಹಗಳ ಮೇಲಿರುವ ಕಪ್ಪು ಆವರಣವು ದೂರವಾಗುತ್ತದೆ. ಅವುಗಳಿಗೆ ಗತಿ ಪ್ರಾಪ್ತವಾಗಿ ಅವು ಮುಂದಿನ ಲೋಕಕ್ಕೆ ಹೋಗುತ್ತವೆ. ಪೂಜೆ ಮಾಡಿದ ವ್ಯಕ್ತಿಯತ್ತ ಪಿತೃಗಳ ಆಶೀರ್ವಾದದಿಂದ ಕೂಡಿದ ಚೈತನ್ಯದ ಪ್ರವಾಹವು ಆಕರ್ಷಿಸಲ್ಪಡುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಕ್ಷಯ ತೃತೀಯಾದಂದು ದೇವತೆ ಮತ್ತು ಪಿತೃಗಳಿಗಾಗಿ ಬ್ರಾಹ್ಮಣರಿಗೆ ಉದಕಕಲಶದ ದಾನ ಮಾಡುವ ಉದ್ದೇಶ